ವಾಷಿಂಗ್ಟನ್: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂಚೂಣಿ ಯಲ್ಲಿರುವ ಅಮೆರಿಕದ ನಾಸಾ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. 2018ರಲ್ಲಿ ಸೋಲಾರ್ ಪ್ರೋಬ್ ಪ್ಲಸ್ ಹೆಸರಿನ ಅಂತರಿಕ್ಷನೌಕೆಯನ್ನು ಸೂರ್ಯನ ಸಮೀಪಕ್ಕೆ ಕಳುಹಿಸಲಿದೆ. ಈ ಯೋಜನೆ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಾಸಾ ಮೇ 31ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸೂರ್ಯನ ಹೊರ ವಾತಾವರಣ ಕರೋನಾ, ಸೂರ್ಯನ ಮೇಲ್ಮೈ (ಫೋಟೋಸ್ಪಿಯರ್)ಗಿಂತ ನೂರು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಈ ವೈಚಿತ್ರ್ಯ ಹಿಂದಿನ ಕಾರಣ ಹುಡುಕುವುದು ಈ ಯೋಜನೆಯ ಪ್ರಮುಖ ಉದ್ದೇಶ ಗಳಲ್ಲೊಂದಾಗಿದೆ. ಸೋಲಾರ್ ಪ್ರೋಬ್ ಪ್ಲಸ್ ಸೂರ್ಯನಿಗೆ 64 ಲಕ್ಷ ಕಿ.ಮೀ ಅಂತರದಲ್ಲಿ ಸಂಚರಿಸಲಿದೆ. ಈ ಮೂಲಕ ಸೂರ್ಯನಿಗೆ ಸಮೀಪದಲ್ಲಿರುವ ಬುಧಗ್ರಹಕ್ಕಿಂತಲೂ ನೌಕೆ 8 ಪಟ್ಟು ಹೆಚ್ಚು ಹತ್ತಿರ ತೆರಳಿದಂತಾಗಲಿದೆ. ಇದರಿಂದ ಸೂರ್ಯನ ಬಗ್ಗೆ ಈವರೆಗೆ ಬಹಿರಂಗಗೊಳ್ಳದ ಮಾಹಿತಿಗಳು ಲಭ್ಯವಾಗಲಿದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಆಸ್ಟ್ರೋ ಫಿಸಿಕ್ಸ್ ಮತ್ತು ಪ್ಲಾನೆಟರಿ ಸೈನ್ಸ್ ಕೇಂದ್ರದ ನಿರ್ದೇಶಕ ಜೋನಾಥನ್ ಲೂನಿನ್ ಹೇಳಿದ್ದಾರೆ. -ಏಜೆನ್ಸೀಸ್
ಯಾವ ಮಾಹಿತಿಗಳು ಲಭ್ಯ?
ವಿಶ್ವದ ಸಕಲ ಜೀವಿಗಳಿಗೆ ಆಧಾರವಾಗಿರುವ ಸೂರ್ಯನ ಬಗ್ಗೆ ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ಅಧ್ಯಯನ ಸಹಕಾರಿಯಾಗಲಿದೆ. ಸೂರ್ಯನಿಂದ ಬಿಸಿಕಣಗಳು ಗಂಟೆಗೆ 10 ಲಕ್ಷ ಮೈಲು ವೇಗದಲ್ಲಿ ಎಲ್ಲ ದಿಕ್ಕುಗಳಿಗೂ ಚಲಿಸುತ್ತವೆ. ಆದರೆ ಇದು ತನ್ನ ವೇಗವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತದೆ ಎಂಬುದು ಪ್ರಶ್ನೆಯಾಗೇ ಉಳಿದಿದ್ದು ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ. ಸೂರ್ಯನಿಂದ ಹೊರ ಚಿಮ್ಮುವ ಇಲೆಕ್ಟ್ರಾನ್ ಹಾಗೂ ಪ್ರೋಟಾನುಗಳ ಧಾರೆ ಭೂಮಿಯ ಮೇಲೆ ಭೂಕಾಂತೀಯ ಮಾರುತ ಹಾಗೂ ಅರೋರಾದಂಥ ಘಟನೆಗೆ ಕಾರಣವಾಗುತ್ತದೆ. ಧೂಮಕೇತುಗಳ ಬಾಲ ಸದಾಕಾಲ ಸೂರ್ಯನ ವಿರುದ್ಧ ದಿಕ್ಕಿಗೇ ತೋರುವುದಕ್ಕೂ ಸೌರಮಾರುತಗಳೇ ಕಾರಣ. ಸೂರ್ಯ ಹಾಗೂ ಭೂಮಿ ನಡುವಣ ಸಂಬಂಧ, ಜೀವ ವೈವಿಧ್ಯದ ಮೇಲೆ ಸೂರ್ಯನ ಪ್ರಭಾವದ ಬಗೆಗಿನ ಮಾಹಿತಿ ಈ ನೌಕೆಯಿಂದ ಲಭ್ಯವಾಗಲಿದೆ.
ನೌಕೆಗೆ ವಿಶೇಷ ರಕ್ಷಣೆ
ಸೂರ್ಯನ ವಾತಾವರಣ ವಿಪರೀತ ಬಿಸಿ ಇರುವುದರಿಂದ ಅಂತರಿಕ್ಷ ವಾಹನ ಅದನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಶಾಖ ತಾಳಲಾರದೆ ಸುಟ್ಟು ಹೋಗುತ್ತದೆ. ಆದರೆ ಈ ಅಂತರಿಕ್ಷ ನೌಕೆಗೆ ಹಿಂದೆಂದೂ ಬಳಕೆ ಮಾಡಿರದ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಈ ನೌಕೆಯನ್ನು ಶಾಖದಿಂದ ರಕ್ಷಿಸಲು 11.4 ಸೆಂಟಿ ಮೀಟರ್ನ ಕಾರ್ಬನ್ ಕಾಂಪೋಸಿಟ್ ಹೀಟ್ ಶೀಲ್ಡ್ ಸುರಕ್ಷತಾ ಕವಚ ಸಿದ್ಧಪಡಿಸಲಾಗಿದೆ. ಇದು 1,370 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಡೆದುಕೊಳ್ಳಲಿದೆ. ಜತೆಗೆ ವಿಕಿರಣಗಳನ್ನು ಸಹಿಸಬಲ್ಲದಾಗಿದೆ.
ಉಡಾವಣೆ ದಿನಾಂಕ 2018ರ ಜುಲೈ 31- ಆಗಸ್ಟ್ 19 ನಡುವೆ
ಸೂರ್ಯನ ಸಮೀಪಕ್ಕೆ ತಲುಪುವ ನಿರೀಕ್ಷಿತ ದಿನಾಂಕ 2024 ಡಿಸೆಂಬರ್ 19
24 ಸುತ್ತು ಈ ನೌಕೆ ಸೂರ್ಯ ಸುತ್ತ 24 ಬಾರಿ ಸುತ್ತಲಿದೆ. ಪ್ರತಿ ಸುತ್ತಿನ ನಂತರವೂ ನೌಕೆ ಸೂರ್ಯನಿಗೆ ಹತ್ತಿರವಾಗುತ್ತಾ ಹೋಗುತ್ತದೆ.
No comments:
Post a Comment