ಭೋಪಾಲ್: ಶಾಲೆ ಆವರಣದಲ್ಲಿ ಪತ್ತೆಯಾದ ಬಾಂಬ್ ಅನ್ನು ಕಾನ್‌ಸ್ಟೇಬಲ್ ಒಂದು ಕಿ.ಮೀವರೆಗೆ ಹೆಗಲ ಮೇಲೆ ಹೊತ್ತೊಯ್ದ 400 ಮಕ್ಕಳ ಜೀವ ಉಳಿಸಿದ ಘಟನೆ ಮಧ್ಯಪ್ರದೇಶದ ಚಿತೋರಾ ಎಂಬ ಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಮಕ್ಕಳ ಜೀವ ಉಳಿಸಿದ ಕಾನ್‌ಸ್ಟೇಬಲ್ ಹೆಸರು ಅಭಿಷೇಕ್ ಪಟೇಲ್. 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಪಡೆ ನಿಷ್ಕ್ರಿಯಗೊಳಿಸಲು ಹಿಂದೇಟು ಹಾಕಿದೆ. ಆಗ ಪಟೇಲ್ ಈ ಸಾಹಸ ಮೆರೆದಿದ್ದಾರೆ.
ಚಿತೋರಾ ಎಂಬ ಹಳ್ಳಿಯ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿದೆ. ಆಗ ಶಾಲಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಪಟೇಲ್ ಸಿಬ್ಬಂದಿ ಜತೆ ಬಂದಿದ್ದರು.
‘100 ಸಂಖ್ಯೆಗೆ ಕರೆ ಬಂದಾಗ ಶಾಲೆ ಬಳಿ ಬಂದೆವು. ನಮ್ಮ ಉದ್ದೇಶ ಬಾಂಬ್ ಅನ್ನು ಶಾಲೆಯಿಂದ ದೂರ ತೆಗೆದುಕೊಂಡು ಹೋಗುವುದಾಗಿತ್ತು. ಬಾಂಬ್ ಸಿಡಿದರೆ ಸುಮಾರು 500 ಮೀಟರ್‌ನಷ್ಟು ಪ್ರದೇಶ ಹಾನಿಗೊಳಗಾಗುತ್ತದೆ ಎಂದು ತರಬೇತಿ ಸಮಯದಲ್ಲಿ ತಿಳಿಸಿದ್ದರು. ಹಾಗಾಗಿ ನಾನು ಬಾಂಬ್ ಅನ್ನು ಒಂದು ಕಿ.ಮೀ ದೂರದವರೆಗೆ ತೆಗೆದುಕೊಂಡು ಹೋದೆ’ ಎಂದು ಪಟೇಲ್ ಘಟನೆ ಬಗ್ಗೆ ವಿವರಿಸಿದ್ದಾರೆ.
ಸಮಯಪ್ರಜ್ಞೆ ಮೆರೆದು 400 ಶಾಲೆ ಮಕ್ಕಳ ಪ್ರಾಣ ಉಳಿಸಿದ ಪಟೇಲ್ ಅವರನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.
ಶಾಲೆಯ ಬಳಿ ಬಾಂಬ್ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಸಕ್ಸೇನಾ ತಿಳಿಸಿದ್ದಾರೆ.
No comments:
Post a Comment