Showing posts with label Current Affairs. Show all posts
Showing posts with label Current Affairs. Show all posts

Tuesday, June 20, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ರಾಮ್​ ನಾಥ್ ಕೋವಿಂದ್ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ಬಿಹಾರ ರಾಜ್ಯಪಾಲರಾದ ರಾಮ್​ ನಾಥ್​ ಕೋವಿಂದ್​ ಅವರನ್ನು ಆಯ್ಕೆ ಮಾಡಲಾಗಿದೆ.

ಸೋಮವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ರಾಮ್​ ನಾಥ್​ ಕೋವಿಂದ್​ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯಕ್ಕೆ ರಾಷ್ಟ್ರಪತಿ ಅಭ್ಯರ್ಥಿ ಮಾತ್ರ ಆಯ್ಕೆ ಮಾಡಲಾಗಿದ್ದು, ಉಪರಾಷ್ಟ್ರಪತಿ ಅಭ್ಯರ್ಥಿ ಚರ್ಚೆ ಇನ್ನೂ ನಡೆದಿಲ್ಲವೆಂದು ಅಮಿತ್​ ಷಾ ಹೇಳಿದ್ದಾರೆ.

Congratulations to Shri Ramnath Kovind ji on being announced as the Presidential candidate of NDA (National Democratic Alliance).

— Amit Shah (@AmitShah) June 19, 2017

ಸೋಮವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಎಂ. ವೆಂಕಯ್ಯ ನಾಯ್ಡು, ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​, ನಿತಿನ್​ ಗಡ್ಕರಿ, ಅನಂತ್​ ಕುಮಾರ್​ ಪಾಲ್ಗೊಂಡಿದ್ದರು.

ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ರಾಮನಾಥ್‌ ಕೋವಿಂದ (1994-2000 ಮತ್ತು 2000-2006)
ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ (1998 – 2002)
ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರ
ಅಖಿಲ ಭಾರತ ಕೋಲಿ ಸಮಾಜದ ಮಾಜಿ ಅಧ್ಯಕ್ಷ
ಪ್ರಸ್ತುತ ಬಿಹಾರದ ರಾಜ್ಯಪಾಲರಾಗಿರುವ ಕೋವಿಂದ
ಉತ್ತರ ಪ್ರದೇಶದ ಕಾನ್ಪುರ ದೆಹತ್​ ಜಿಲ್ಲೆಯ ದೇರಾಪುರ ತಾಲೂಕಿನ ಪರೌಂಖ್​ ಗ್ರಾಮದಲ್ಲಿ 1945 ಅಕ್ಟೋಬರ್​ 1 ರಂದು ಜನನ

ಬಿಜೆಪಿ ಹಿರಿಯ ನಾಯಕರಾದ ಎಲ್​.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ರಾಮ್​ ನಾಥ್​ ಕೋವಿಂದ್​ ಅವರ ಆಯ್ಕೆಯ ಕುರಿತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾಹಿತಿ ನೀಡಿದ್ದರು.

ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್​ಎಸ್​ ಮುಖ್ಯಸ್ಥ ಕೆ. ಚಂದ್ರಶೇಖರ್​ ರಾವ್​ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್​ ಕೋವಿಂದ್​ ಅವರಿಗೆ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

ರಾಮ್​ ನಾಥ್​ ಕೋವಿಂದ್​ ಅವರಿಗೆ ಬೆಂಬಲ ಪಡೆಯುವ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಂ ಇ ಪಳನಿಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಸಾವಿರ ಸಂಭ್ರಮ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವದ ಯೋಜನೆಗಳಲ್ಲಿ ಒಂದಾದ ಮಂಗಳಯಾನ ಉಪಗ್ರಹ ಸೋಮವಾರ 1,000 ದಿನಗಳನ್ನು ಬಾಹ್ಯಾಕಾಶದಲ್ಲಿ ಪೂರೈಸಿದೆ. ಮಂಗಳಯಾನ ಉಪಗ್ರಹದ ಜೀವಿತಾವಧಿ ಆರು ತಿಂಗಳಾಗಿದ್ದರೂ, ಅದಕ್ಕಿಂತ ಐದು ಪಟ್ಟು ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ವಿಶ್ವದ ಗಮನ ಸೆಳೆದಿದೆ. ಸೌರದಿನದ ಪ್ರಕಾರ ಬಾಹ್ಯಾ ಕಾಶದಲ್ಲಿ ಮಾಮ್ 973.24 ದಿನ ಕಳೆದ್ದು, 388 ಬಾರಿ ಕಕ್ಷೆಯನ್ನು ಪರಿಭ್ರಮಿಸಿದೆ ಎಂದು ಇಸ್ರೋ ಹೇಳಿದೆ.
2014ರ ಸೆ. 24ರಂದು ಮಾಮ್ ಉಪಗ್ರಹವನ್ನು ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಯ ಪರಿಧಿಗೆ ಸೇರ್ಪಡೆಗೊಳಿಸುವಲ್ಲಿ ಭಾರತ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. -ಏಜೆನ್ಸೀಸ್

ಕಡಿಮೆ ವೆಚ್ಚ, ಹೆಚ್ಚು ಕೆಲಸ
ನಾಸಾ ಮತ್ತು ಯುರೋಪಿಯನ್ ಒಕ್ಕೂಟಗಳು ಉಪಗ್ರಹ ಯೋಜನೆಗೆ ಮಾಡುವ ವೆಚ್ಚದ ಮೂರನೇ ಒಂದರಷ್ಟು ವೆಚ್ಚದಲ್ಲಿ ಇಸ್ರೋ ಮಂಗಳಯಾನ ಕೈಗೊಂಡಿತ್ತು. 450 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳಯಾನ ಉಪಗ್ರಹ ಈಗ ಸಾವಿರ ದಿನ ಪೂರೈಸಿರುವುದು ಮತ್ತೊಂದು ಸಾಧನೆಯಾಗಿದೆ. ಮಂಗಳನಲ್ಲಿನ ವಾತಾವರಣ, ಮೀಥೇನ್ ಪ್ರಮಾಣ, ಅಲ್ಲಿರಬಹುದಾದ ಜೀವಸೆಲೆಗಳು, ಮೇಲ್ಮೈ ಸಹಿತ ವಿವಿಧ ಉದ್ದೇಶಗಳ ಅಧ್ಯಯನಕ್ಕೆ ಇಸ್ರೋ ಮಂಗಳಯಾನ ಕೈಗೊಂಡಿದೆ.

ಅವಧಿ ವಿಸ್ತರಣೆ
2013 ನವೆಂಬರ್ 5ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಇಸ್ರೋ ಪಿಎಸ್​ಎಲ್​ವಿ ರಾಕೆಟ್ ಮೂಲಕ ಯಶಸ್ವಿಯಾಗಿ ಉಪಗ್ರಹ ಉಡಾಯಿಸಿತ್ತು. 2013ರ ಡಿಸೆಂಬರ್ 1ರಂದು ಭೂಮಿಯ ಗುರುತ್ವಶಕ್ತಿಯನ್ನು ದಾಟಿ ಬಾಹ್ಯಾಕಾಶವನ್ನು ಪ್ರವೇಶಿಸಿತ್ತು. ಮೊದಲಿಗೆ ಆರು ತಿಂಗಳು ಮಾತ್ರ ಉಪಗ್ರಹ ಕಾರ್ಯನಿರ್ವಹಿಸಲು ಶಕ್ತ ಎಂದು ಹೇಳಿದ್ದ ಇಸ್ರೋ, 2015ರ ಮಾರ್ಚ್ ನಲ್ಲಿ ಹೇಳಿಕೆ ನೀಡಿ, ಮಾಮ್ ಉಪಗ್ರಹ ಜೀವಿತಾವಧಿ ವಿಸ್ತರಿಸಲಾಗಿದೆ ಎಂದು ಹೇಳಿತ್ತು.

ಉಪಗ್ರಹದಲ್ಲಿ ಏನೇನಿದೆ?
ಮಂಗಳಯಾನದ ಉಪಗ್ರಹದಲ್ಲಿ ಐದು ಪ್ರಮುಖ ವೈಜ್ಞಾನಿಕ ಉಪಕರಣ ಗಳನ್ನು ಅಳವಡಿಸಲಾಗಿದೆ. ಲೈಮನ್ ಅಲ್ಪಾ ಫೋಟೋಮೀಟರ್ (ಲ್ಯಾಪ್), ಮೀಥೇನ್ ಸೆನ್ಸರ್ ಫಾರ್ ಮಾರ್ಸ್ (ಎಂಎಸ್​ಎಂ), ಮಾರ್ಸ್ ಎಕ್ಸೋಫೆರಿಕ್ ನ್ಯೂಟ್ರಲ್ ಕಂಪೋಸಿಶನ್ ಅನಲೈಸರ್ (ಎಂಇಎನ್​ಸಿಎ), ಮಾರ್ಸ್ ಕಲರ್ ಕ್ಯಾಮರಾ (ಎಂಸಿಸಿ) ಮತ್ತು ಥರ್ಮಲ್ ಇನ್ಪ್ರಾರೆಡ್ ಇಮೇಜಿಂಗ್ ಸ್ಪ್ರೆಕ್ಟ್ರೋಮೀಟರ್ (ಟಿಐಎಸ್). ಮಾರ್ಸ್ ಕಲರ್ ಕ್ಯಾಮರಾ, ಮಾಮ್ಲ್ಲಿ ಅಳವಡಿಸಲಾದ ಪ್ರಮುಖ ಉಪಕರಣವಾಗಿದ್ದು, ಈವರೆಗೆ 715ಕ್ಕೂ ಅಧಿಕ ಅತ್ಯಂತ ಸ್ಪಷ್ಟ ಮತ್ತು ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಕಳುಹಿಸಿದೆ. 2015ರ ಜೂನ್ 2ರಿಂದ 2015ರ ಜುಲೈ 2ರವರೆಗೆ ಸೂರ್ಯ ಗ್ರಹಣದ ಅವಧಿಯಲ್ಲಿ ಮಾಮ್ ಸಂಪರ್ಕ ಕಳೆದುಕೊಂಡಿದ್ದು ಹೊರತುಪಡಿಸಿದರೆ, ಉಳಿದ ಎಲ್ಲ ದಿನಗಳನ್ನು ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದೆ. ಜತೆಗೆ 2016ರ ಮೇ 18ರಿಂದ ಮೇ 30ರವರೆಗೆ ಭೂಮಿಯು ಸೂರ್ಯ ಮತ್ತು ಮಂಗಳನ ಮಧ್ಯೆ ಇದ್ದುದ್ದರಿಂದ ಮಾಮ್ ಸಂವಹನಕ್ಕೆ ಅಡಚಣೆಯಾಗಿತ್ತು. ಮುಂದಿನ ವರ್ಷದ ನವೆಂಬರ್​ನಲ್ಲಿ ಮಂಗಳಯಾನ- 2 ಯೋಜನೆಗೆ ಭಾರತ ಸಿದ್ಧವಾಗುತ್ತಿರುವುದಾಗಿ ಇಸ್ರೋ ಘೊಷಿಸಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ತಿರುಪತಿ ಲಡ್ಡುಗೆ ಜಿಎಸ್​ಟಿಯಿಂದ ವಿನಾಯಿತಿ

ನವದೆಹಲಿ: ಐತಿಹಾಸಿಕ ತಿರುಪತಿ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡುಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯಿಂದ ವಿನಾಯಿತಿ ನೀಡಲು ಜಿಎಸ್​ಟಿ ಕೌನ್ಸಿಲ್ ಸಮ್ಮತಿಸಿದೆ. ತಿರುಪತಿಗೆ ಭಕ್ತರು ಸಮರ್ಪಿಸುವ ತಲೆಕೂದಲನ್ನು ಮಾರಾಟ ಮಾಡಲು ಹಾಗೂ 1,000 ರೂಪಾಯಿಗಿಂತ ಕಡಿಮೆ ಬಾಡಿಗೆ ಹೊಂದಿರುವ ಸ್ಥಳೀಯ ಅತಿಥಿ ಗೃಹಗಳಿಗೂ ತೆರಿಗೆಯಿಂದ ವಿನಾಯಿತಿ ನೀಡಲು ಅನುಮತಿ ನೀಡಲಾಗಿದೆ.
ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಡಳಿತ ಮಂಡಳಿ ಲಡ್ಡು, ದೇವಾಲಯದಲ್ಲಿ ಪೂಜೆಗೆ ಬಳಕೆ ಮಾಡುವ ವಸ್ತುಗಳು, ಅತಿಥಿ ಗೃಹ, ಹರಕೆ ಕೂದಲು ಸಹಿತ ಇತರ ಆದಾಯ ಮೂಲಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರದಂತೆ ಕೇಳಿಕೊಂಡಿದ್ದರು. ಈ ಮನವಿಯನ್ನು ಆಂಧ್ರಪ್ರದೇಶ ಹಣಕಾಸು ಸಚಿವ ಯಾನಮಾಲಾ ರಾಧಾಕೃಷ್ಣುಡು ಜಿಎಸ್​ಟಿ ಕೌನ್ಸಿಲ್ ಮುಂದೆ ಇರಿಸಿದ್ದರು. ಒಂದೊಮ್ಮೆ ತಿರುಪತಿ ದೇವಾಲಯಕ್ಕೆ ಈ ವಿನಾಯಿತಿ ನೀಡಿದಲ್ಲಿ ಇತರ ದೇವಾಲಯಗಳು ಇದೇ ರೀತಿ ಪ್ರಸ್ತಾಪನೆ ಸಲ್ಲಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಿಂದೇಟು ಹಾಕಿದ್ದರು. ಆದರೆ ಜೂನ್ 17ರಂದು ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ತಿರುಪತಿ ಲಡ್ಡು ಸಹಿತ ಇತರ ಉತ್ಪನ್ನಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. -ಏಜೆನ್ಸೀಸ್

ಲಡ್ಡು ತಯಾರಿಕೆಗೆ -ರೂ; 160 ಕೋಟಿ
ತಿರುಪತಿಯಲ್ಲಿ ಪ್ರತಿ ವರ್ಷ ಲಡ್ಡು ತಯಾರಿಕೆಗೆ ಆಡಳಿತ ಮಂಡಳಿ 160 ಕೋಟಿ ರೂ. ವ್ಯಯಿಸುತ್ತಿದೆ. ದರುಶನಕ್ಕೆ 300 ರೂ. ಟಿಕೆಟ್ ಕಾಯ್ದಿರಿಸಿದ ಪ್ರತಿ ಭಕ್ತರಿಗೆ ಎರಡು ಲಾಡು ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚಿನ ಲಡ್ಡು ಬೇಕಾದಲ್ಲಿ 25 ರೂ. ನೀಡಿ ಇನ್ನೆರಡು ಲಡ್ಡು ಖರೀದಿಸಬಹುದಾಗಿದೆ. ಇದಕ್ಕಿಂತ ಹೆಚ್ಚು ಲಡ್ಡು ಪಡೆದುಕೊಳ್ಳಲು ಅವಕಾಶವಿಲ್ಲ. 2009ರಲ್ಲಿ ಈ ಲಡ್ಡುವಿಗೆ ಪೇಟೆಂಟನ್ನೂ ನೀಡಲಾಗಿದೆ. 2016-17ರ ಆರ್ಥಿಕ ವರ್ಷದಲ್ಲಿ 10.46 ಕೋಟಿ ಲಡ್ಡುಗಳು ಮಾರಾಟವಾಗಿವೆ. ಲಡ್ಡು ಮಾರಾಟದಿಂದ ವಾರ್ಷಿಕವಾಗಿ 160 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೊಂಡಿತ್ತು.

ಪ್ರಚಲಿತ ವಿದ್ಯಮಾನ : ಜೂನ್ 2017 : ಯುದ್ಧ ವಿಮಾನ ಕೊರತೆ

ನವದೆಹಲಿ: ಪಾಕಿಸ್ತಾನದ ಗಡಿ ನಿಯಂತ್ರಣಾ ರೇಖೆಯಲ್ಲಿ ಉಗ್ರರ ದಾಳಿ ಹಾಗೂ ಈಶಾನ್ಯ ಗಡಿಯಲ್ಲಿ ಚೀನಾದ ತಂಟೆಯಿಂದ ಭಾರತಕ್ಕೆ ಭದ್ರತಾ ಆತಂಕ ಎದುರಾಗಿರುವ ಬೆನ್ನಲ್ಲೇ ಭಾರತೀಯ ವಾಯುಪಡೆಗಳಿಗೆ ಯುದ್ಧವಿಮಾನಗಳ ಕೊರತೆ ಕಾಡುತ್ತಿದೆ ಎಂದು ವಾಯುಪಡೆಯ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ. ಯುದ್ಧ ವಿಮಾನಗಳ ಸಂಖ್ಯೆಯನ್ನು ಕ್ರಿಕೆಟ್ ತಂಡಕ್ಕೆ ಹೋಲಿಸಿರುವ ಅವರು , 11 ಜನರಿರುವ ತಂಡದಲ್ಲಿ ಕೇವಲ ಏಳು ಜನರು ಆಟವಾಡಿದಂತೆ ಎಂದಿದ್ದಾರೆ.
ನೆರೆಯ ರಾಷ್ಟ್ರಗಳ ಉಗ್ರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ವಾಯುಪಡೆ ಸಜ್ಜಾಗಿದೆ. ನಕ್ಸಲರು, ಮಾವೋವಾದಿಗಳ ಮೇಲೆ ವೈಮಾನಿಕ ದಾಳಿ ನಡೆಸುವುದು ಸರಿಯಲ್ಲ. ಆದರೆ, ಕೇಂದ್ರ ಸರ್ಕಾರ ಆದೇಶ ನೀಡಿದಲ್ಲಿ ಮಾವೋವಾದಿಗಳ ವಿರುದ್ಧ ವೈಮಾನಿಕ ದಾಳಿ ನಡೆಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.
ಪರಿಸ್ಥಿತಿ ಎದುರಿಸಲು ಸಿದ್ಧ: ಭಯೋ ತ್ಪಾದನೆ, ಕಾಶ್ಮೀರದಲ್ಲಿನ ಉದ್ವಿಗ್ನತೆ, ಛತ್ತೀಸ್​ಗಢ ಸಹಿತ ಹಲವು ರಾಜ್ಯಗಳಲ್ಲಿ ನಕ್ಸಲರ ದಾಳಿ ಮತ್ತಿತರ ಭದ್ರತಾ ಆತಂಕಗಳನ್ನು ಎದುರಿಸಲು ಸೇನೆ ಸನ್ನದ್ಧವಾಗಿದೆ.

Friday, June 16, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಕಾಪ್ಟರ್ ಡೀಲ್ ರದ್ದು

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ, ಅಮೆರಿಕದೊಂದಿಗಿನ 16 ಬಹೂಪಯೋಗಿ ಹೆಲಿಕಾಪ್ಟರ್ ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಿದೆ. ಹೆಲಿಕಾಪ್ಟರ್ ದರಕ್ಕೆ ಸಂಬಂಧಿಸಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ರಕ್ಷಣಾ ಸಚಿವಾಲಯ ಈ ನಿರ್ಧಾರ ಪ್ರಕಟಿಸಿರುವುದು ಕುತೂಹಲ ಕೆರಳಿಸಿದೆ.
ಒಪ್ಪಂದದ ಹಿನ್ನೆಲೆ: ಅಮೆರಿಕದ ವಿಮಾನ ಉತ್ಪಾದಕ ಕಂಪನಿ ಸಿಕೋರ್​ಸ್ಕಿ ಏರ್​ಕ್ರಾಫ್ಟ್ ನಿಂದ ಭಾರತದ ನೌಕಾಪಡೆಗೆ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿತ್ತು. ನೌಕಾಪಡೆಯ ಬೇಡಿಕೆಯಂತೆ 16 ಬಹೂಪಯೋಗಿ ಹೆಲಿಕಾಪ್ಟರ್​ಗಳನ್ನು ಯುದ್ಧ ನೌಕೆಗೆ ಸೇರ್ಪಡೆಗೊಳಿಸುವುದಕ್ಕಾಗಿ ರಕ್ಷಣಾ ಇಲಾಖೆ ಈ ಕುರಿತು ಸಿಕೋರ್​ಸ್ಕಿ ಕಂಪನಿ ಜತೆಗೆ 2009ರಲ್ಲೆ ಮಾತುಕತೆ ಆರಂಭಿಸಿತ್ತು. ಆದರೆ, ಹೆಲಿಕಾಪ್ಟರ್ ದರಕ್ಕೆ ಸಂಬಂಧಿಸಿ ಹೊಂದಾಣಿಕೆ ಬಾರದ ಕಾರಣ 2015ರಲ್ಲಿ ಇದು ನನೆಗುದಿಗೆ ಬಿದ್ದಿತ್ತು. ಅಷ್ಟರಲ್ಲಾಗಲೇ ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರ ಹೋಗಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಂಡಿತ್ತು. ಪ್ರಧಾನಿ ಮೋದಿಯವರೂ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡತೊಡಗಿದ್ದರಿಂದಾಗಿ ರಕ್ಷಣಾ ಸಚಿವಾಲಯ ಸಿಕೋರ್​ಸ್ಕಿ ಜತೆಗಿನ ಮಾತುಕತೆ ಮುರಿಯಲು ತೀರ್ವನಿಸಿತು. ಇದು 6,500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವಾಗಿತ್ತು. -ಏಜೆನ್ಸೀಸ್

26ಕ್ಕೆ ಮೋದಿ ಅಮೆರಿಕ ಭೇಟಿ
ಪ್ರಧಾನಿ ಮೋದಿ ಜೂನ್ 26ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಟ್ರಂಪ್ ಅಧ್ಯಕ್ಷರಾದ ನಂತರ ಇದು ಮೋದಿ ಅವರ ಪ್ರಥಮ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮಾತುಕತೆ ನಡೆಯಲಿದೆ. ವೀಸಾ ನೀತಿ ತಿದ್ದುಪಡಿಗೆ ಸಂಬಂಧಿಸಿದಂತೆ ಕೂಡ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಸ್ವದೇಶಿ ಯುದ್ಧೋಪಕರಣಕ್ಕೆ ಆದ್ಯತೆ
ಭಾರತದ ವಾಯುಪಡೆ ಸ್ವದೇಶಿ ಉಪಕರಣಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ. ಅಮೆರಿಕದ ಎಫ್-16 ಹಾಗೂ ಸ್ವೀಡನ್​ನ ಫೈಟರ್ ಏರ್​ಕ್ರಾಫ್ಟ್​ಗಳ ಪ್ರಾಯೋಗಿಕ ಹಾರಾಟ ಪರೀಕ್ಷಿಸಲಿದೆ. ನಂತರ ಇವುಗಳಲ್ಲಿ ಒಂದು ಏರ್​ಕ್ರಾಫ್ಟನ್ನು ಆಯ್ಕೆ ಮಾಡಿ 120 ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಈ ಯೋಜನೆಗೆ 1.3 ಲಕ್ಷ ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.

ಮೇಕ್ ಇನ್ ಇಂಡಿಯಾ ಮೂಲಕ 140 ಕಾಪ್ಟರ್!
ರಕ್ಷಣಾ ಸಚಿವಾಲಯ ಇದೀಗ ರದ್ದುಗೊಳಿಸಿರುವ ಒಪ್ಪಂದ ಪ್ರಕಾರ ಖರೀದಿಸಬೇಕಾಗಿದ್ದ 16 ಹೆಲಿಕಾಪ್ಟರ್​ಗಳ ಬದಲು ಮೇಕ್ ಇನ್ ಇಂಡಿಯಾ ಯೋಜನೆ ಪ್ರಕಾರವೇ ಭಾರತದಲ್ಲೇ ನೌಕಾಪಡೆಯ 140 ಬಹೂಪಯೋಗಿ ಕಾಪ್ಟರ್ ನಿರ್ವಣಕ್ಕೆ ಯೋಜನೆ ಸಿದ್ಧವಾಗಿದೆ. ಅಮೆರಿಕನ್ ಕಂಪನಿ ಇದಕ್ಕೆ ನೆರವನ್ನೂ ನೀಡಲಿದೆ. ರಕ್ಷಣಾ ಇಲಾಖೆ ಈಗಾಗಲೇ ಸೇನಾ ವಿಭಾಗದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಉಪಕರಣಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ಭವಿಷ್ಯದಲ್ಲಿ ವಿದೇಶಿ ಉಪಕರಣ ಗಳ ಮೇಲೆ ಅವಲಂಬನೆ ಕಡಿಮೆಗೊಳಿಸಲು ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ”ಸಾರ್ವಜನಿಕ ಹಿತಾಸಕ್ತಿ”ಯ ಜಸ್ಟೀಸ್ ಭಗವತಿ ಇನ್ನಿಲ್ಲ

ನವದೆಹಲಿ: ”ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ”ಯನ್ನು ಚಾಲ್ತಿಗೆ ತರುವ ಮೂಲಕ ಜ್ಯುಡಿಷಿಯಲ್ ಆ್ಯಕ್ಟಿವಿಸಂಗೆ ನಾಂದಿ ಹಾಡಿದ್ದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ನಿವೃತ್ತ) ಪಿ ಎನ್ ಭಗವತಿ ಅವರು ಗುರುವಾರ ನಿಧನರಾಗಿದ್ದಾರೆ.

95 ವರ್ಷದ ಭಗವತಿ ಅವರು ಪತ್ನಿ ಪ್ರಭಾವತಿ ಮತ್ತು ಮೂವರು ಪತ್ರಿಯರನ್ನು ಅಗಲಿದ್ದಾರೆ. ಜಸ್ಟೀಸ್ ಭಗವತಿ ಅವರ ಅಂತ್ಯಕ್ರಿಯೆ ಶನಿವಾರ ನೆರವೇರಲಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಭಗವತಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಭಾರತದ 17 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಭಗವತಿ ಅವರು PIL ಭಗವತಿ ಎಂದೇ ಜನಮಾನಸದಲ್ಲಿ ಚಾಲ್ತಿಯಲ್ಲಿದ್ದರು. ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಮೂಲಭೂತ ಹಕ್ಕನ್ನಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾರಿಗೆ ತಂದಿದ್ದೇ ಅವರು. ಕೈದಿಗಳೂ ಸಾಮಾನ್ಯ ಪ್ರಜೆಗಳಂತೆ ಮೂಲಭೂತ ಹಕ್ಕುಗಳನ್ನು ಚಲಾಯಿಸಬಹುದು ಎಂಬುದನ್ನು ಪ್ರತಿಪಾದಿಸಿದವರು ಜಸ್ಟೀಸ್ ಭಗವತಿ.

ಪ್ರಚಲಿತ ವಿದ್ಯಮಾನ : ಜೂನ್ 2017 : ಮೋದಿ ಸರ್ಕಾರಕ್ಕೆ ದೊಡ್ಡ ಜಯ:​ ಕಪ್ಪು ಖಾತೆ ವಿವರಕ್ಕೆ ಸೈ ಎಂದ ಸ್ವಿಸ್​

ಬರ್ನ್​/ನವದೆಹಲಿ: ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಜಯ ದೊರೆತಿದ್ದು, ಸ್ವಿಸ್​ ಬ್ಯಾಂಕ್​ಗಳ ಖಾತೆದಾರರ ಮಾಹಿತಿ ನೀಡಲು ಸ್ವಿಜರ್​ಲೆಂಡ್​ ಒಪ್ಪಿಗೆ ಸೂಚಿಸಿದೆ.

ಸ್ವಿಸ್​ ಬ್ಯಾಂಕ್​ಗಳನ್ನು ಖಾತೆ ಹೊಂದಿರುವವರ ಮಾಹಿತಿ ಒದಗಿಸುವಂತೆ ಭಾರತ ಸಲ್ಲಿಸಿದ್ದ ಮನವಿಗೆ ಸ್ವಿಸ್​ ಫೆಡರ್​ ಕೌನ್ಸಿಲ್​ ಶುಕ್ರವಾರ ನಡೆದ ಸಭೆಯಲ್ಲಿ ಅನುಮೋದಿಸಿದೆ. ಭಾರತ ಸೇರಿದಂತೆ ಇತರ 40 ದೇಶಗಳಿಗೆ ಸ್ವಯಂ ಚಾಲಿತ ಮಾಹಿತಿ ವಿನಿಮಯ (AEOI) ವ್ಯವಸ್ಥೆಯಡಿ ಬ್ಯಾಂಕ್​ ಖಾತೆದಾರರ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿದೆ.

2018ನೇ ಸಾಲಿನಿಂದ ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರನ್ವಯ 2019ರಲ್ಲಿ ಮೊದಲ ಹಂತದಲ್ಲಿ ಮಾಹಿತಿಯನ್ನು ಭಾರತ ಮತ್ತು ಇತರ ರಾಷ್ಟ್ರಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದು. 2019ರಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ದಿನಾಂಕದ ಕುರಿತು ಸ್ವಿಜರ್​ಲೆಂಡ್​ ಶೀಘ್ರದಲ್ಲೇ ಭಾರತ ಸರ್ಕಾರಕ್ಕೆ ಮಾಹಿತಿ ಒದಗಿಸಲಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಬ್ಯಾಂಕ್​ ಖಾತೆ ತೆರೆಯಲು ಇನ್ಮುಂದೆ ಆಧಾರೇ ಆಧಾರ

ನವದೆಹಲಿ: ಹೊಸದಾಗಿ ಬ್ಯಾಂಕ್​ ಖಾತೆ ತೆರೆಯಲು ಮತ್ತು 50 ಸಾವಿರ ಹಾಗೂ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಆಧಾರ್​ ನಂಬರ್​ ನೀಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸ್ತುತ ಖಾತೆ ಹೊಂದಿರುವ ಗ್ರಾಹಕರು ಈ ವರ್ಷದ ಡಿಸೆಂಬರ್​ 31ರೊಳಗೆ ಬ್ಯಾಂಕ್​ ಖಾತೆಯೊಂದಿಗೆ ಆಧಾರ್​ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಕಂದಾಯ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳು, 2005 ಕ್ಕೆ ತಿದ್ದುಪಡಿ ಮಾಡಿ ಹೊಸ ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್​ ಸಂಖ್ಯೆ ಜೋಡಣೆಯಾಗದ ಖಾತೆಗಳು ಡಿಸೆಂಬರ್​ ಬಳಿಕ ರದ್ದಾಗಲಿವೆ.
ಕಳೆದ ವಾರವಷ್ಟೇ, ಪ್ಯಾನ್​ ಕಾರ್ಡ್​ ಪಡೆಯಲು ಆಧಾರ್​ ಕಡ್ಡಾಯ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ಸಮ್ಮತಿ ಸೂಚಿಸಿತ್ತು. ಆಧಾರ್​ ಕಾರ್ಡ್ ಹೊಂದಿರುವವರು ಪ್ಯಾನ್​ನೊಂದಿಗೆ ಆಧಾರ್​ ಲಿಂಕ್​ ಮಾಡಬೇಕು ಎಂದು ತಿಳಿಸಿತ್ತು.
ದೇಶದಲ್ಲಿ ಅಕ್ರಮ ಹಣ ಸಂಗ್ರಹಣೆ ಮತ್ತು ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳಿಗೆ ಆಧಾರ್​ ಕಡ್ಡಾಯ ಮಾಡಲು, ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Tuesday, June 13, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಮೋದಿಯವರ ನವ ಭಾರತ ಪರಿಕಲ್ಪನೆಯಿಂದ ಅಮೆರಿಕದಲ್ಲೂ ಉದ್ಯೋಗ ಸೃಷ್ಟಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ‘ನವ ಭಾರತ’ ಪರಿಕಲ್ಪನೆಯು ಅಮೆರಿಕದಲ್ಲೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರು ಜೂನ್ 26ರಂದು ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸ್ಪೈಸ್ ಅವರು ಈ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಅವರ ‘ಅಮೆರಿಕದವರು ತಯಾರಿಸಿದ್ದನ್ನೇ ಖರೀದಿಸಿ, ಅಮೆರಿಕದವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ’ ಎಂಬ ನೀತಿಯಿಂದ ಭಾರತೀಯರಲ್ಲಿ ಆತಂಕ ಮನೆ ಮಾಡಿರುವ ಮಧ್ಯೆಯೇ ಎರಡೂ ರಾಷ್ಟ್ರಗಳ ನಡುವಣ ಹಿತಾಸಕ್ತಿಗಳ ಬಗ್ಗೆ ಸ್ಪೈಸರ್ ಮಾತನಾಡಿದ್ದಾರೆ. ನೈಸರ್ಗಿಕ ಅನಿಲವೂ ಸೇರಿ ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯಾಗಲು ಮೋದಿ ಅವರ ‘ನವ ಭಾರತ’ ಪರಿಕಲ್ಪನೆಯೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

‘ಅಮೆರಿಕ–ಭಾರತ ನಡುವಣ ವಹಿವಾಟು 2000ನೇ ಇಸವಿಯಿಂದ 2016ರ ಅವಧಿಯಲ್ಲಿ ಆರು ಪಟ್ಟು ಹೆಚ್ಚಾಗಿದೆ. 2000ನೇ ಇಸವಿಯಲ್ಲಿ ₹ 1.2 ಲಕ್ಷ ಕೋಟಿ ಇದ್ದ ವಹಿವಾಟು 2016ರಲ್ಲಿ ₹ 7.4 ಲಕ್ಷ ಕೋಟಿ ತಲುಪಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ‘ಸ್ವಯಂ’ ಯೋಜನೆ: 2 ಸಾವಿರ ಆನ್‌ಲೈನ್‌ ಕೋರ್ಸ್‌ಗಳಿಗೆ ಅವಕಾಶ

ನವದೆಹಲಿ: ‘ಸ್ವಯಂ’ ಯೋಜನೆ ಅಡಿಯಲ್ಲಿ 2 ಸಾವಿರ ಆನ್‌ಲೈನ್‌ ಕೋರ್ಸ್‌ಗಳ ಕಲಿಕೆಗೆ  ಅವಕಾಶ ನೀಡುವ ಗುರಿ ಇದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ನವದೆಹಲಿಯ ಐಐಟಿಯಲ್ಲಿ ನಡೆದ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತವೇ ಅಭಿವೃದ್ಧಿಪಡಿಸಿರುವ ವ್ಯವಸ್ಥೆ ಅಡಿಯಲ್ಲಿ ಈಗ 380 ಆನ್‌ಲೈನ್‌ ಕೋರ್ಸ್‌ಗಳನ್ನು ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ.  ಮುಂದಿನ ಒಂದು ವರ್ಷದ ಒಳಗಾಗಿ ಇದನ್ನು 2 ಸಾವಿರ ಕೋರ್ಸ್‌ಗಳಿಗೆ  ವಿಸ್ತರಿಸಲಾಗುವುದು’ ಎಂದರು.

ಕಳೆದ ವರ್ಷ ಆರಂಭಿಸಿದ ಈ ಅನುಕೂಲಕರ ವ್ಯವಸ್ಥೆಯಿಂದ ಈಗಾಗಲೇ 60 ಸಾವಿರ ವಿದ್ಯಾರ್ಥಿಗಳು ಕೋರ್ಸ್‌ ಮುಗಿಸಿದ್ದಾರೆ. ಇದರಿಂದ ಯಾವುದೇ ಸ್ಥಳದಲ್ಲಿ ಕೂತು ಜ್ಞಾನವನ್ನು ಪಡೆಯಬಹುದು.

9ರಿಂದ 12ರ ತನಕ ಶಾಲಾ ಹಂತ, ಪದವಿ ಪೂರ್ವ ಹಾಗೂ ಸ್ನಾತಕೋತರ ಹಂತದಲ್ಲಿ ಉನ್ನತ ಮಟ್ಟದ ಕೋರ್ಸ್‌ಗಳನ್ನು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಪ್ರಚಲಿತ ವಿದ್ಯಮಾನ : ಜೂನ್ 2017 : ‘ನ್ಯಾಷನಲ್ ಹೆರಾಲ್ಡ್‌’ಗೆ ಮರು ಚಾಲನೆ

ಬೆಂಗಳೂರು: ಬಹು ದಿನಗಳಿಂದ ಸ್ಥಗಿತವಾಗಿದ್ದ ಐತಿಹಾಸಿಕ ಪತ್ರಿಕೆ ಹಾಗೂ ಕಾಂಗ್ರೆಸ್‌ನ ಮುಖವಾಣಿ ‘ನ್ಯಾಷನಲ್ ಹೆರಾಲ್ಡ್‌’ ಪತ್ರಿಕೆಯನ್ನು ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಇಲ್ಲಿ ಮರು ಬಿಡುಗಡೆ ಮಾಡಿದರು.
ನಗರದಲ್ಲಿ ಪತ್ರಿಕೆಗೆ ಮರು ಚಾಲನೆ ನೀಡಿದ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ ಅವರು, ರಾಜಕೀಯ ಕಾರಣಗಳಿಂದ ಪತ್ರಿಕೆ ಪ್ರಕಟಣೆ ನಿಂತಿತ್ತು. ಈಗ ಪುನರ್‌ ಆರಂಭವಾಗಿದೆ. ಕೇಂದ್ರ ಸರ್ಕಾರ ಸತ್ಯದ ಪರ ನಿಲ್ಲುವವರನ್ನು ಅಧಿಕಾರಯುತವಾಗಿ ತುಳಿಯುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಹೆಚ್ಚು ಶಕ್ತಿಯುತವಾಗಿದ್ದು, ಪತ್ರಿಕೆಯ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಚಲಿತ ವಿದ್ಯಮಾನ : ಜೂನ್ 2017 : ಆಹಾರದ ಆಯ್ಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಬಂಧವಿಲ್ಲ: ರಾಜ್‌ನಾಥ್‌ ಸಿಂಗ್‌ ಭರವಸೆ

ಐಜ್ವಾಲಾ: ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ ರೂಪಿಸಿದ್ದ ಕಾನೂನನ್ನು ವಿರೋಧಿಸಿ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಜನರ ಆಹಾರದ ಆಯ್ಕೆಯ ವಿಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ನಗರದಲ್ಲಿ ಸ್ಥಳೀಯ ಸಂಘಟನೆಗಳು ತಮ್ಮ ಆಹಾರದ ಆಯ್ಕೆಯ ಸ್ವಾತಂತ್ರದ ಮೇಲೆ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಆರೋಪಿಸಿ ‘ಗೋಮಾಂಸ ನಿಷೇಧದ ಭೋಜನಕೂಟ’ವನ್ನು ಆಯೋಜಿಸಿದ್ದವು.

ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಕಿರಣ್‌ ರಿಜಿಜು ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಟಿ ನಡೆಸಿದ ರಾಜ್‌ನಾಥ್‌ ಸಿಂಗ್‌, ‘ಕೇಂದ್ರ ಸರ್ಕಾರ ದೇಶದ ಯಾವೊಬ್ಬ ವ್ಯಕ್ತಿಯ ಆಹಾರದ ಆಯ್ಕೆಯ ಮೇಲೆ ನಿರ್ಬಂಧ ವಿಧಿಸುವುದಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಂತಹದೇ ಭರವಸೆ ನೀಡಿದ್ದರು.

ಕೇಂದ್ರ ಸರ್ಕಾರ ಕಾನೂನಿನ ಮೂಲಕ ಆಹಾರದ ಆಯ್ಕೆಯ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ರಾಷ್ಟ್ರದಾದ್ಯಂತ ಕೇಳಿಬಂದಿತ್ತು. ಗೋಮಾಂಸ ಈಶಾನ್ಯ ಭಾರತ ರಾಜ್ಯಗಳ ಪ್ರಧಾನ ಆಹಾರವಾಗಿದ್ದು, ಈ ಭಾಗದಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ.

ಸೋಮವಾರ ಈಶಾನ್ಯ ಭಾರತದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ರಾಜ್‌ನಾಥ್‌ ಸಿಂಗ್‌, ಕೇಂದ್ರ ಸರ್ಕಾರದ ವತಿಯಿಂದ ಮಿಜೋರಾಂನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸದ್ಯ ಒದಗಿಸಲಾಗುತ್ತಿರುವ ಭದ್ರತಾ ಸೌಲಭ್ಯಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

Monday, June 12, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಪ್ರೆಸಿಡೆಂಟ್ಸ್‌ ಕಪ್ ಬಾಕ್ಸಿಂಗ್‌: ಗೌರವ್‌ಗೆ ಬೆಳ್ಳಿ

ನವದೆಹಲಿ: ಭಾರತದ ಗೌರವ್ ಚೌಹಾಣ್ ಕಜಕಸ್ತಾನದಲ್ಲಿ ನಡೆದ ಪ್ರೆಸಿಡೆಂಟ್ಸ್‌ ಕಪ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಪುರುಷರ 91 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಗೌರವ್ ಕಜಕಸ್ತಾನದ ವೆಸಿಲೆ ಲೆವಿತ್ ಎದರು ಸೋಲು ಕಂಡರು.

ಪ್ರಚಲಿತ ವಿದ್ಯಮಾನ : ಜೂನ್ 2017 : ಈಸಿಕಾರ್ಟ್‌ : ರುಹಾನ್‌ಗೆ ಜಯ

ಲೊನಾಟೊ, ಇಟಲಿ : ಅಮೋಘ ಚಾಲನಾ ಕೌಶಲ ಮೆರೆದ ಕರ್ನಾಟಕದ ರುಹಾನ್‌ ಆಳ್ವಾ ಅವರು  ಇಟಾಲಿಯನ್‌ ಈಸಿಕಾರ್ಟ್‌ ಚಾಂಪಿ ಯನ್‌ಷಿಪ್‌ನ ನಾಲ್ಕನೇ ರೇಸ್‌ನಲ್ಲಿ ಗೆಲುವು ಗಳಿಸಿದ್ದಾರೆ.

ಭಾನುವಾರ ನಡೆದ ಸ್ಪರ್ಧೆಯಲ್ಲಿ 10 ವರ್ಷದ ಬೆಂಗಳೂರಿನ ರುಹಾನ್‌ ಅವರು ಮಿಂಚಿನ ವೇಗದಲ್ಲಿ ಕಾರ್ಟ್ ಚಲಾಯಿಸಿದರು.  ಇಟಲಿಯ ಬಿರೆಲ್‌ ಆರ್ಟ್‌ ಸಂಸ್ಥೆಯ ಪ್ರಾಯೋಜಕತ್ವ ಪಡೆದಿ ರುವ ರುಹಾನ್‌ ಅವರು ನಾಲ್ಕನೇ ರೇಸ್‌ ನಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಐದನೇ ರೇಸ್‌ನಲ್ಲಿ  ಅವರು ಮೂರನೇ ಯವರಾಗಿ ನಿಗದಿತ ದೂರ ಕ್ರಮಿಸಿದರು.

ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು 90ಕ್ಕೆ ಹೆಚ್ಚಿಸಿಕೊಂಡಿರುವ ಅವರು ಒಟ್ಟಾರೆ ಎರಡನೇ ಸ್ಥಾನದಲ್ಲಿದ್ದಾರೆ. ಎಂಎಲ್‌ಜಿ ರೇಸಿಂಗ್‌ ತಂಡದ ಪ್ಯಾಟ್ರೀಸ್‌ ಲೊರೆಂಜೊ ಅವರು ಅಗ್ರಸ್ಥಾನ ಹೊಂದಿದ್ದಾರೆ.

‘ಚಾಂಪಿಯನ್‌ಷಿಪ್‌ನಲ್ಲಿ ಬಲಿಷ್ಠ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಹೀಗಾಗಿ ಪ್ರತಿ ಹಂತದಲ್ಲೂ ಕಠಿಣ ಪೈಪೋಟಿ ಎದುರಾಗುತ್ತಿದೆ. ಇದರ ನಡುವೆಯೂ ನಾಲ್ಕು ಸುತ್ತುಗಳಲ್ಲೂ ಉತ್ತಮ ಸಾಮರ್ಥ್ಯ ತೋರಿರುವುದು ಖುಷಿ ನೀಡಿದೆ’ ಎಂದು ರುಹಾನ್‌ ಖುಷಿ ವ್ಯಕ್ತಪಡಿಸಿದ್ದಾರೆ.

ಚಾಂಪಿಯನ್‌ಷಿಪ್‌ನ ಆರು ಮತ್ತು ಏಳನೇ ಸುತ್ತಿನ ಸ್ಪರ್ಧೆಗಳು ಜುಲೈ 1 ಮತ್ತು 2ರಂದು ಇಟಲಿಯ ಕ್ಯಾಸ್ಟೆಲ್ಲೆಟ್ಟೊದಲ್ಲಿ ನಡೆಯಲಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಜಾನುವಾರು ನಿಯಮ ತಿದ್ದುಪಡಿಗೆ ಒತ್ತಾಯಿಸಲು ಕರೆ

ನವದೆಹಲಿ: ಜಾನುವಾರುಗಳ ಹತ್ಯೆ ಮೇಲೆ ನಿರ್ಬಂಧ ವಿಧಿಸುವ ವಿವಾದಾತ್ಮಕ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ, ರಾಜ್ಯಗಳು ಮತ್ತು ಇತರ ಸಂಘ ಸಂಸ್ಥೆಗಳಿಂದ ಇನ್ನಷ್ಟು ಅಹವಾಲು ನಿರೀಕ್ಷಿಸುತ್ತಿರುವುದಾಗಿ ಕೇಂದ್ರ ಪರಿಸರ ಸಚಿವ ಹರ್ಷವರ್ಧನ ಸೋಮವಾರ ಹೇಳಿದ್ದಾರೆ.

ಕೇಂದ್ರದ ಆದೇಶದ ವಿರುದ್ಧ ಮೇಘಾಲಯ ವಿಧಾನಸಭೆ ನಿರ್ಣಯ ಅಂಗೀಕರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇನ್ನಷ್ಟು ಅಹವಾಲುಗಳನ್ನು ಸಲ್ಲಿ ಸುವಂತೆ ಸಂಬಂಧಿಸಿದವರಿಗೆ ಆಹ್ವಾನ ನೀಡಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ತೆಲುಗು ಕವಿ ನಾರಾಯಣ ರೆಡ್ಡಿ ನಿಧನ

ಹೈದರಾಬಾದ್‌: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ತೆಲುಗು ಕವಿ ಸಿ. ನಾರಾಯಣ ರೆಡ್ಡಿ (80) ಸೋಮವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

1931 ಜುಲೈ 29ರಂದು ಕರೀಂನಗರ ಜಿಲ್ಲೆಯಲ್ಲಿ  ಜನಿಸಿದ್ದ ಅವರು, ಕವಿತೆ, ಗೀತೆ, ನಾಟಕ, ಪ್ರಬಂಧ, ಗಜಲ್‌, ಪ್ರವಾಸ ಕಥನ, ಸಾಹಿತ್ಯ ವಿಮರ್ಶೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ನಾರಾಯಣ ರೆಡ್ಡಿ ಅವರ ‘ವಿಶ್ವಂಭರ’ ಕೃತಿಗೆ 1988ರಲ್ಲಿ ಜ್ಞಾನಪೀಠ ಪ್ರಶಸ್ತಿ  ಲಭಿಸಿದೆ. 1977ರಲ್ಲಿ ಪದ್ಮಶ್ರೀ, 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

ಆಂಧ್ರ ವಿಶ್ವವಿದ್ಯಾಲಯವು ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಆಧುನಿಕ ತೆಲುಗು ಕವಿತೆಗಳ ಬಗ್ಗೆ ರೆಡ್ಡಿ ಅವರು ರಚಿಸಿರುವ ಸಂಶೋಧನಾ ಕೃತಿ 1967ರಲ್ಲಿ ಪ್ರಕಟಗೊಂಡಿತ್ತು.

ಪ್ರಸಿದ್ಧ ಗೀತರಚನೆಕಾರರಾಗಿದ್ದ ರೆಡ್ಡಿ ಅವರು ಚಲನಚಿತ್ರಗಳಿಗೆ 3,000ಕ್ಕೂ ಹೆಚ್ಚು ಹಾಡುಗಳನ್ನು  ಬರೆದಿದ್ದಾರೆ. ರಾಜ್ಯ ಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ  ಅವರು ತೆಲಂಗಾಣ ಸಾರಸ್ವತ ಪರಿಷತ್‌ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಕೇಂದ್ರ ಬಿಡಿಗಾಸೂ ಕೊಡಲ್ಲ

ನವದೆಹಲಿ: ‘ಕೃಷಿಸಾಲ ಮನ್ನಾ  ಮಾಡುವ ರಾಜ್ಯಗಳಿಗೆ ಆ ಹೊರೆ ಭರಿಸಲು ಯಾವುದೇ ರೀತಿಯ ನೆರವು ನೀಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಸೋಮವಾರ ಕಡ್ಡಿಮುರಿದಂತೆ ಹೇಳಿದೆ.

ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ₹ 30 ಸಾವಿರ ಕೋಟಿ ಮೊತ್ತದ ಸಾಲ ಮನ್ನಾ ನಿರ್ಧಾರ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತಾಳಿರುವ ಈ ದೃಢ ನಿಲುವು ಭಾರಿ ಮಹತ್ವ ಪಡೆದುಕೊಂಡಿದೆ. 

‘ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಮೊದಲೇ ಸ್ಪಷ್ಟಪಡಿಸಿದೆ. ಅದನ್ನು ಬಿಟ್ಟು ಹೊಸದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ರೈತರ ಸಾಲಮನ್ನಾದ ಹೊರೆ ಭರಿಸಲು ಕೇಂದ್ರವು ರಾಜ್ಯಗಳಿಗೆ ಬಿಡಿಗಾಸನ್ನೂ ನೀಡದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರು ನಡೆಸಿರುವ  ಹೋರಾಟದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿದೆಯೇ  ಪ್ರಶ್ನೆಗೆ ಜೇಟ್ಲಿ ಈ ರೀತಿ ಉತ್ತರಿಸಿದರು.
ಭಾನುವಾರ ಮಹಾರಾಷ್ಟ್ರ ಸರ್ಕಾರದ ರೈತರ ಸಾಲ ಮನ್ನಾ ಘೋಷಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ಬೊಕ್ಕಸದಿಂದ ಒಂದು ಪೈಸೆಯ ನೆರವೂ ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಾರ್ಷಿಕ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ರೈತರ ಸಾಲ ಮನ್ನಾ ಮಾಡದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೂಡ ಸರ್ಕಾರಗಳಿಗೆ ಕಿವಿಮಾತು ಹೇಳಿತ್ತು.

‘ರಾಜ್ಯ ಸರ್ಕಾರಗಳ ಸಾಲಮನ್ನಾ ಮಾಡುವ ಪ್ರವೃತ್ತಿ ಇದೇ ರೀತಿ ಮುಂದುವರಿದರೆ ದೇಶದ ಆರ್ಥಿಕ ಸ್ಥಿತಿ ಕೈತಪ್ಪಿ ಹೋಗಲಿದೆ’ ಎಂದು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್ ಇತ್ತೀಚೆಗೆ  ಎಚ್ಚರಿಕೆ ನೀಡಿದ್ದರು.

ಇಂತಹ ಯೋಜನೆಗಳನ್ನು ಘೋಷಿಸುವ ಮುನ್ನ ಸರ್ಕಾರಗಳು ನೂರು ಬಾರಿ ಯೋಚಿಸಬೇಕು. ಇಂತಹ ನಿರ್ಧಾರಗಳಿಂದ ಹಿಂದೆ ಸರಿಯುವುದು ಒಳಿತು ಎಂದೂ ಅವರು ಸಲಹೆ ಮಾಡಿದ್ದರು.

ನಾಂದಿ ಹಾಡಿದ ಯೋಗಿ
ಮಹಾರಾಷ್ಟ್ರಕ್ಕೂ ಮೊದಲು ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೈತರ ₹36,359 ಕೋಟಿಯಷ್ಟು  ಸಾಲ ಮನ್ನಾ ಮಾಡುವ ಮೂಲಕ ಕೃಷಿಸಾಲ ಮನ್ನಾ ಪ್ರವೃತ್ತಿಗೆ ನಾಂದಿ ಹಾಡಿತ್ತು.
ಮಧ್ಯಪ್ರದೇಶದಲ್ಲಿ ಗೋಲಿಬಾರ್‌
ಕಳೆದ ಕೆಲವು ದಿನಗಳಿಂದ ಸಾಲ ಮನ್ನಾಕ್ಕೆ ಒತ್ತಾಯಿಸಿ  ರೈತರು ನಡೆಸಿರುವ ಹೋರಾಟದಿಂದ ಮಧ್ಯ ಪ್ರದೇಶ ಹೊತ್ತಿ ಉರಿದಿತ್ತು.  ಗೋಲಿಬಾರ್‌ಗೆ ಐವರು ರೈತರು ಬಲಿಯಾಗಿದ್ದರು.

ಪ್ಯಾಕೇಜ್‌ಗೆ ತಮಿಳುನಾಡು ಒತ್ತಾಯ
₹ 40,000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ತಮಿಳುನಾಡಿನ ಬರ ಪೀಡಿತ ಪ್ರದೇಶದ ರೈತರು  ದೆಹಲಿಯಲ್ಲಿ ಒಂದು ತಿಂಗಳು ಹಲವು ಬಗೆಯ ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆದಿದ್ದರು.  ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ₹1,712 ಕೋಟಿ ಹಣ ಬಿಡುಗಡೆ ಮಾಡಿತ್ತು.

ಮಹಾರಾಷ್ಟ್ರ: ಸಿರಿವಂತರಿಗಿಲ್ಲ ಮನ್ನಾ ಲಾಭ
ಮುಂಬೈ (ಪಿಟಿಐ):
 ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಕೃಷಿ ಸಾಲ ಮನ್ನಾ ಯೋಜನೆಯಿಂದ ಶ್ರೀಮಂತ ರೈತರನ್ನು ಹೊರಗಿಡುವ ಸಾಧ್ಯತೆಯ ಸುಳಿವನ್ನು ಕಂದಾಯ ಸಚಿವ ಚಂದ್ರಕಾಂತ್‌ ಪಾಟೀಲ್‌ ನೀಡಿದ್ದಾರೆ.
ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಿದೆ. ಸಾಲ ಮನ್ನಾ ಮಾಡಲು ಅನುಸರಿಸ ಬೇಕಾದ ಮಾನದಂಡಗಳ ಬಗ್ಗೆ ಈ ಸಮಿತಿ ನಿರ್ಧಾರ ಕೈಗೊಳ್ಳಲಿದೆ. 

‘ಈ ಹಿಂದೆ, 2007–08ರಲ್ಲಿ ಘೋಷಿಸಲಾಗಿದ್ದ ಸಾಲ ಮನ್ನಾ ಯೋಜನೆಯಿಂದ ಶ್ರೀಮಂತ ರೈತರೂ ಲಾಭ ಪಡೆದುಕೊಂಡಿದ್ದರು. ಈ ಬಾರಿ ಹಾಗಾಗದು. ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಸಿರಿವಂತ ರೈತರನ್ನು ಕೈಬಿಡಲು  ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ’  ಎಂದು ಅವರು ಹೇಳಿದ್ದಾರೆ.
*
ಸಾಲ ಮನ್ನಾದಂತಹ ಯೋಜನೆಗಳ ವೆಚ್ಚ ಭರಿಸಲು ರಾಜ್ಯ ಸರ್ಕಾರಗಳು ಸ್ವಂತ ಸಂಪನ್ಮೂಲ ಹುಡುಕಿಕೊಳ್ಳಬೇಕು. ಕೇಂದ್ರದ ಮೇಲೆ ಅವಲಂಬಿತವಾಗಬಾರದು.
ಅರುಣ್‌ ಜೇಟ್ಲಿ,
ಕೇಂದ್ರ ಹಣಕಾಸು ಸಚಿವ

ಪ್ರಚಲಿತ ವಿದ್ಯಮಾನ : ಜೂನ್ 2017 : ಬ್ರಿಟನ್‌ ಚುನಾವಣೆ: ಮೊದಲ ಸಿಖ್‌ ಸಂಸದೆಯಾಗಿ ಆಯ್ಕೆಯಾದ ಪ್ರೀತ್‌ಕೌರ್‌ ಗಿಲ್‌

ಲಂಡನ್‌: 2017ರ ಬ್ರಿಟನ್‌ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರೀತ್‌ಕೌರ್‌ ಗಿಲ್‌ ಅವರು ಬ್ರಿಟನ್‌ ಸಂಸತ್‌ಗೆ ಆಯ್ಕೆಯಾದ ಮೊದಲ ಸಿಖ್‌ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

ಸದ್ಯ ಸ್ಯಾಂಡ್‌ವಿಲ್ಲೆಯ ಕೌನ್ಸಿಲರ್‌ ಆಗಿ ಸಾರ್ವಜನಿಕ ಆರೋಗ್ಯ ಹಾಗೂ ರಕ್ಷಣೆ ಖಾತೆಯನ್ನು ನಿರ್ವಹಿಸುತ್ತಿರುವ ಅವರು ಎಡ್ಜ್‌ಬಾಸ್ಟನ್‌ನಲ್ಲಿ ಸಂಸದರಾಗಿದ್ದ ಗಿಸೆಲಾ ಸ್ಟುವರ್ಟ್‌ರ ಬದಲು ಲೇಬರ್‌ ಪಕ್ಷದಿಂದ ಸ್ಪರ್ಧಿಸಿದ್ದರು.

ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಕ್ಯಾರೋಲಿನ್ ಸ್ಕ್ವೈರ್ ಅವರನ್ನು 6,917 ಮತಗಳ ಅಂತರದಿಂದ ಮಣಿಸಿದ್ದಾರೆ. ಸಿಖ್‌ ಒಕ್ಕೂಟಗಳು ಚುನಾವಣಾ ಪ್ರಚಾರ ವೇಳೆ ಗಿಲ್‌ ಪರ ಪ್ರಚಾರ ಮಾಡಿದ್ದವು. ಹಾಗಾಗಿ ಗಿಲ್‌ ಅವರು ಸಿಖ್‌ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುವ ನಿರೀಕ್ಷೆಯಿದೆ.

‘ಎಡ್ಜ್‌ಬಾಸ್ಟನ್‌ ಸಂಸದೆಯಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಯಾವಾಗಲು ಇಲ್ಲಿನ ಜನರ ಜತೆಯಿರಲು ಬಯಸುತ್ತೇನೆ. ಜನರಿಗಾಗಿ ಕೆಲಸಮಾಡುವ ಆಶಯ ಹೊಂದಿದ್ದು ಎಲ್ಲರೂ ಒಟ್ಟಾಗಿ ಮಹತ್ತರವಾದ ಕೆಲಸಗಳನ್ನು ಮಾಡೋಣ’ ಎಂದು ಗಿಲ್‌ ಕರೆ ನೀಡಿದ್ದಾರೆ.

‌2012ರಲ್ಲಿ ಲೇಬರ್‌ ಪಕ್ಷದಿಂದ ಸ್ಪರ್ಧಿಸಿ ಸ್ಯಾಂಡ್‌ವೇಲ್ಸ್‌ನಿಂದ ಕೌನ್ಸಿಲರ್‌ ಆಗಿ ಗಿಲ್‌ ಆಯ್ಕೆಯಾಗಿದ್ದರು. ಒಟ್ಟು 72 ಕೌನ್ಸಿಲರ್‌ಗಳ ಪೈಕಿ ಇದ್ದ ಏಕೈಕ ಸಿಖ್‌ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರವಾಗಿದ್ದರು.

ಬ್ರಿಟನ್‌ನಲ್ಲಿ ‌ಜೂನ್‌ 8ರಂದು ಚುನಾವಣೆ ನಡೆದಿತ್ತು.

Friday, June 9, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಭಾರತದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ದ್ವಿಗುಣ

ನವದೆಹಲಿ: ಭಾರತದ ಅಂತರ್ಜಾಲ ಬಳಕೆದಾರರ ಸಂಖ್ಯೆ 2021ರ ವೇಳೆಗೆ ಈಗಿರುವುದಕ್ಕಿಂತ ದ್ವಿಗುಣಗೊಳ್ಳಲಿದೆ ಎಂದು ಜಾಗತಿಕ ನೆಟ್‌ವರ್ಕಿಂಗ್ ಕಂಪೆನಿ ಸಿಸ್ಕೊದ ‘ವಿಶುವಲ್ ನೆಟ್‌ವರ್ಕಿಂಗ್ ಇಂಡೆಕ್ಸ್, ಕಂಪ್ಲೀಟ್ ಫಾರ್‌ಕಾಸ್ಟ್’ ಎಂಬ ವರದಿ ಹೇಳಿದೆ.
2016ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 37.3 ಕೋಟಿ (ದೇಶದ ಒಟ್ಟು ಜನಸಂಖ್ಯೆಯ 28%) ಅಂತರ್ಜಾಲ ಬಳಕೆದಾರರಿದ್ದಾರೆ. 2021ರ ವೇಳೆಗೆ ಇದು 82.9 ಕೋಟಿ (ದೇಶದ ಒಟ್ಟು ಜನಸಂಖ್ಯೆಯ 59%) ಆಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಭಾರತದಲ್ಲಿ ಮೊಬೈಲ್ ಸಂಪರ್ಕ, ಸಂಪರ್ಕ ಸಾಧನಗಳು ಮತ್ತು ಜನರ ಕಂಪ್ಯೂಟಿಂಗ್ ಸಾಮರ್ಥ್ಯ ಮಾತ್ರ ಹೆಚ್ಚುತ್ತಿರುವುದಲ್ಲ. ಜತೆಗೆ 3ಜಿ, 4ಜಿ, ಎಲ್‌ಟಿಇ ಅಂತರ್ಜಾಲ ಸಂಪರ್ಕವೂ ದೊರೆಯಲಾರಂಭವಾಗಿದೆ. ಇದು ಅಂತರ್ಜಾಲ ಬಳಕೆ ಹೆಚ್ಚಳಕ್ಕೆ ನೆರವಾಗಲಿದೆ.’ ಎಂದು ಸಿಸ್ಕೊದ ಭಾರತ ಘಟಕದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೌಲ್ ಹೇಳಿದ್ದಾರೆ.

Thursday, June 8, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಫ್ರೆಂಚ್​ ಓಪನ್​ ಮಿಶ್ರ ಡಬಲ್ಸ್​: ಬೋಪಣ್ಣ ಜೋಡಿಗೆ ಪ್ರಶಸ್ತಿ

ಪ್ಯಾರಿಸ್​: ಭಾರತದ ಅಗ್ರ ಕ್ರಮಾಂಕದ ಟೆನಿಸ್​ ಆಟಗಾರ ರೋಹನ್​ ಬೋಪಣ್ಣ ಮತ್ತು ಕೆನಡಾದ ಗ್ಯಾಬ್ರೆಲ್ಲಾ ದಬ್ರೋವಸ್ಕಿ ಜೋಡಿ ಫ್ರೆಂಚ್​ ಓಪನ್​ ಟೂರ್ನಿಯ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಬೋಪಣ್ಣ ತಮ್ಮ ವೃತ್ತಿ ಜೀವನ ಮೊದಲ ಗ್ರಾಂಡ್​ ಸ್ಲಾಂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಗುರುವಾರ ನಡೆದ ಫೈನಲ್​ ಪಂದ್ಯದಲ್ಲಿ ಬೋಪಣ್ಣ-ದಬ್ರೋವಸ್ಕಿ ಜೋಡಿ ಜರ್ಮನಿಯ ಅನ್ನಾ ಲೀನಾ ಗ್ರೋನಿಫೋಲ್ಡ್​ ಮತ್ತು ಕೊಲಂಬಿಯಾದ ರಾಬರ್ಟ್ ಫರಾತ್ ಜೋಡಿಯ ವಿರುದ್ಧ 2-6 , 6-2 , 12-10 ಸೆಟ್​ಗಳಿಂದ ಜಯ ಗಳಿಸಿದರು.

2010ರಲ್ಲಿ ಬೋಪಣ್ಣ ಅಮೆರಿಕ ಓಪನ್​ ಟೂರ್ನಿಯ ಡಬಲ್ಸ್​ ಫೈನಲ್​ ಪ್ರವೇಶಿಸಿದ್ದರು. ಆದರೆ ಫೈನಲ್​ನಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದರು. 7 ವರ್ಷಗಳ ಬಳಿಕ ಈ ಸಲ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ ಪ್ರವೇಶಿಸಿದ್ದ ಬೋಪಣ್ಣ ಪ್ರಶಸ್ತಿ ಜಯಿಸಿದ್ದಾರೆ.

ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲ್ಲುವ ಮೂಲಕ ಬೋಪಣ್ಣ ಈ ಸಾಧನೆ ಮಾಡಿದ 4ನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಈ ಮೊದಲು ಲಿಯಾಂಡರ್​ ಪೇಸ್​, ಮಹೇಶ್​ ಭೂಪತಿ ಮತ್ತು ಸಾನಿಯಾ ಮಿರ್ಜಾ ಮಾತ್ರ ಗ್ರಾಂಡ್​ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...