Showing posts with label UPSC Exam. Show all posts
Showing posts with label UPSC Exam. Show all posts

Tuesday, June 20, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ರಾಮ್​ ನಾಥ್ ಕೋವಿಂದ್ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ಬಿಹಾರ ರಾಜ್ಯಪಾಲರಾದ ರಾಮ್​ ನಾಥ್​ ಕೋವಿಂದ್​ ಅವರನ್ನು ಆಯ್ಕೆ ಮಾಡಲಾಗಿದೆ.

ಸೋಮವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ರಾಮ್​ ನಾಥ್​ ಕೋವಿಂದ್​ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯಕ್ಕೆ ರಾಷ್ಟ್ರಪತಿ ಅಭ್ಯರ್ಥಿ ಮಾತ್ರ ಆಯ್ಕೆ ಮಾಡಲಾಗಿದ್ದು, ಉಪರಾಷ್ಟ್ರಪತಿ ಅಭ್ಯರ್ಥಿ ಚರ್ಚೆ ಇನ್ನೂ ನಡೆದಿಲ್ಲವೆಂದು ಅಮಿತ್​ ಷಾ ಹೇಳಿದ್ದಾರೆ.

Congratulations to Shri Ramnath Kovind ji on being announced as the Presidential candidate of NDA (National Democratic Alliance).

— Amit Shah (@AmitShah) June 19, 2017

ಸೋಮವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಎಂ. ವೆಂಕಯ್ಯ ನಾಯ್ಡು, ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​, ನಿತಿನ್​ ಗಡ್ಕರಿ, ಅನಂತ್​ ಕುಮಾರ್​ ಪಾಲ್ಗೊಂಡಿದ್ದರು.

ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ರಾಮನಾಥ್‌ ಕೋವಿಂದ (1994-2000 ಮತ್ತು 2000-2006)
ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ (1998 – 2002)
ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರ
ಅಖಿಲ ಭಾರತ ಕೋಲಿ ಸಮಾಜದ ಮಾಜಿ ಅಧ್ಯಕ್ಷ
ಪ್ರಸ್ತುತ ಬಿಹಾರದ ರಾಜ್ಯಪಾಲರಾಗಿರುವ ಕೋವಿಂದ
ಉತ್ತರ ಪ್ರದೇಶದ ಕಾನ್ಪುರ ದೆಹತ್​ ಜಿಲ್ಲೆಯ ದೇರಾಪುರ ತಾಲೂಕಿನ ಪರೌಂಖ್​ ಗ್ರಾಮದಲ್ಲಿ 1945 ಅಕ್ಟೋಬರ್​ 1 ರಂದು ಜನನ

ಬಿಜೆಪಿ ಹಿರಿಯ ನಾಯಕರಾದ ಎಲ್​.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ರಾಮ್​ ನಾಥ್​ ಕೋವಿಂದ್​ ಅವರ ಆಯ್ಕೆಯ ಕುರಿತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾಹಿತಿ ನೀಡಿದ್ದರು.

ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್​ಎಸ್​ ಮುಖ್ಯಸ್ಥ ಕೆ. ಚಂದ್ರಶೇಖರ್​ ರಾವ್​ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್​ ಕೋವಿಂದ್​ ಅವರಿಗೆ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

ರಾಮ್​ ನಾಥ್​ ಕೋವಿಂದ್​ ಅವರಿಗೆ ಬೆಂಬಲ ಪಡೆಯುವ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಂ ಇ ಪಳನಿಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಸಾವಿರ ಸಂಭ್ರಮ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವದ ಯೋಜನೆಗಳಲ್ಲಿ ಒಂದಾದ ಮಂಗಳಯಾನ ಉಪಗ್ರಹ ಸೋಮವಾರ 1,000 ದಿನಗಳನ್ನು ಬಾಹ್ಯಾಕಾಶದಲ್ಲಿ ಪೂರೈಸಿದೆ. ಮಂಗಳಯಾನ ಉಪಗ್ರಹದ ಜೀವಿತಾವಧಿ ಆರು ತಿಂಗಳಾಗಿದ್ದರೂ, ಅದಕ್ಕಿಂತ ಐದು ಪಟ್ಟು ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ವಿಶ್ವದ ಗಮನ ಸೆಳೆದಿದೆ. ಸೌರದಿನದ ಪ್ರಕಾರ ಬಾಹ್ಯಾ ಕಾಶದಲ್ಲಿ ಮಾಮ್ 973.24 ದಿನ ಕಳೆದ್ದು, 388 ಬಾರಿ ಕಕ್ಷೆಯನ್ನು ಪರಿಭ್ರಮಿಸಿದೆ ಎಂದು ಇಸ್ರೋ ಹೇಳಿದೆ.
2014ರ ಸೆ. 24ರಂದು ಮಾಮ್ ಉಪಗ್ರಹವನ್ನು ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಯ ಪರಿಧಿಗೆ ಸೇರ್ಪಡೆಗೊಳಿಸುವಲ್ಲಿ ಭಾರತ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. -ಏಜೆನ್ಸೀಸ್

ಕಡಿಮೆ ವೆಚ್ಚ, ಹೆಚ್ಚು ಕೆಲಸ
ನಾಸಾ ಮತ್ತು ಯುರೋಪಿಯನ್ ಒಕ್ಕೂಟಗಳು ಉಪಗ್ರಹ ಯೋಜನೆಗೆ ಮಾಡುವ ವೆಚ್ಚದ ಮೂರನೇ ಒಂದರಷ್ಟು ವೆಚ್ಚದಲ್ಲಿ ಇಸ್ರೋ ಮಂಗಳಯಾನ ಕೈಗೊಂಡಿತ್ತು. 450 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳಯಾನ ಉಪಗ್ರಹ ಈಗ ಸಾವಿರ ದಿನ ಪೂರೈಸಿರುವುದು ಮತ್ತೊಂದು ಸಾಧನೆಯಾಗಿದೆ. ಮಂಗಳನಲ್ಲಿನ ವಾತಾವರಣ, ಮೀಥೇನ್ ಪ್ರಮಾಣ, ಅಲ್ಲಿರಬಹುದಾದ ಜೀವಸೆಲೆಗಳು, ಮೇಲ್ಮೈ ಸಹಿತ ವಿವಿಧ ಉದ್ದೇಶಗಳ ಅಧ್ಯಯನಕ್ಕೆ ಇಸ್ರೋ ಮಂಗಳಯಾನ ಕೈಗೊಂಡಿದೆ.

ಅವಧಿ ವಿಸ್ತರಣೆ
2013 ನವೆಂಬರ್ 5ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಇಸ್ರೋ ಪಿಎಸ್​ಎಲ್​ವಿ ರಾಕೆಟ್ ಮೂಲಕ ಯಶಸ್ವಿಯಾಗಿ ಉಪಗ್ರಹ ಉಡಾಯಿಸಿತ್ತು. 2013ರ ಡಿಸೆಂಬರ್ 1ರಂದು ಭೂಮಿಯ ಗುರುತ್ವಶಕ್ತಿಯನ್ನು ದಾಟಿ ಬಾಹ್ಯಾಕಾಶವನ್ನು ಪ್ರವೇಶಿಸಿತ್ತು. ಮೊದಲಿಗೆ ಆರು ತಿಂಗಳು ಮಾತ್ರ ಉಪಗ್ರಹ ಕಾರ್ಯನಿರ್ವಹಿಸಲು ಶಕ್ತ ಎಂದು ಹೇಳಿದ್ದ ಇಸ್ರೋ, 2015ರ ಮಾರ್ಚ್ ನಲ್ಲಿ ಹೇಳಿಕೆ ನೀಡಿ, ಮಾಮ್ ಉಪಗ್ರಹ ಜೀವಿತಾವಧಿ ವಿಸ್ತರಿಸಲಾಗಿದೆ ಎಂದು ಹೇಳಿತ್ತು.

ಉಪಗ್ರಹದಲ್ಲಿ ಏನೇನಿದೆ?
ಮಂಗಳಯಾನದ ಉಪಗ್ರಹದಲ್ಲಿ ಐದು ಪ್ರಮುಖ ವೈಜ್ಞಾನಿಕ ಉಪಕರಣ ಗಳನ್ನು ಅಳವಡಿಸಲಾಗಿದೆ. ಲೈಮನ್ ಅಲ್ಪಾ ಫೋಟೋಮೀಟರ್ (ಲ್ಯಾಪ್), ಮೀಥೇನ್ ಸೆನ್ಸರ್ ಫಾರ್ ಮಾರ್ಸ್ (ಎಂಎಸ್​ಎಂ), ಮಾರ್ಸ್ ಎಕ್ಸೋಫೆರಿಕ್ ನ್ಯೂಟ್ರಲ್ ಕಂಪೋಸಿಶನ್ ಅನಲೈಸರ್ (ಎಂಇಎನ್​ಸಿಎ), ಮಾರ್ಸ್ ಕಲರ್ ಕ್ಯಾಮರಾ (ಎಂಸಿಸಿ) ಮತ್ತು ಥರ್ಮಲ್ ಇನ್ಪ್ರಾರೆಡ್ ಇಮೇಜಿಂಗ್ ಸ್ಪ್ರೆಕ್ಟ್ರೋಮೀಟರ್ (ಟಿಐಎಸ್). ಮಾರ್ಸ್ ಕಲರ್ ಕ್ಯಾಮರಾ, ಮಾಮ್ಲ್ಲಿ ಅಳವಡಿಸಲಾದ ಪ್ರಮುಖ ಉಪಕರಣವಾಗಿದ್ದು, ಈವರೆಗೆ 715ಕ್ಕೂ ಅಧಿಕ ಅತ್ಯಂತ ಸ್ಪಷ್ಟ ಮತ್ತು ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಕಳುಹಿಸಿದೆ. 2015ರ ಜೂನ್ 2ರಿಂದ 2015ರ ಜುಲೈ 2ರವರೆಗೆ ಸೂರ್ಯ ಗ್ರಹಣದ ಅವಧಿಯಲ್ಲಿ ಮಾಮ್ ಸಂಪರ್ಕ ಕಳೆದುಕೊಂಡಿದ್ದು ಹೊರತುಪಡಿಸಿದರೆ, ಉಳಿದ ಎಲ್ಲ ದಿನಗಳನ್ನು ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದೆ. ಜತೆಗೆ 2016ರ ಮೇ 18ರಿಂದ ಮೇ 30ರವರೆಗೆ ಭೂಮಿಯು ಸೂರ್ಯ ಮತ್ತು ಮಂಗಳನ ಮಧ್ಯೆ ಇದ್ದುದ್ದರಿಂದ ಮಾಮ್ ಸಂವಹನಕ್ಕೆ ಅಡಚಣೆಯಾಗಿತ್ತು. ಮುಂದಿನ ವರ್ಷದ ನವೆಂಬರ್​ನಲ್ಲಿ ಮಂಗಳಯಾನ- 2 ಯೋಜನೆಗೆ ಭಾರತ ಸಿದ್ಧವಾಗುತ್ತಿರುವುದಾಗಿ ಇಸ್ರೋ ಘೊಷಿಸಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ತಿರುಪತಿ ಲಡ್ಡುಗೆ ಜಿಎಸ್​ಟಿಯಿಂದ ವಿನಾಯಿತಿ

ನವದೆಹಲಿ: ಐತಿಹಾಸಿಕ ತಿರುಪತಿ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡುಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯಿಂದ ವಿನಾಯಿತಿ ನೀಡಲು ಜಿಎಸ್​ಟಿ ಕೌನ್ಸಿಲ್ ಸಮ್ಮತಿಸಿದೆ. ತಿರುಪತಿಗೆ ಭಕ್ತರು ಸಮರ್ಪಿಸುವ ತಲೆಕೂದಲನ್ನು ಮಾರಾಟ ಮಾಡಲು ಹಾಗೂ 1,000 ರೂಪಾಯಿಗಿಂತ ಕಡಿಮೆ ಬಾಡಿಗೆ ಹೊಂದಿರುವ ಸ್ಥಳೀಯ ಅತಿಥಿ ಗೃಹಗಳಿಗೂ ತೆರಿಗೆಯಿಂದ ವಿನಾಯಿತಿ ನೀಡಲು ಅನುಮತಿ ನೀಡಲಾಗಿದೆ.
ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಡಳಿತ ಮಂಡಳಿ ಲಡ್ಡು, ದೇವಾಲಯದಲ್ಲಿ ಪೂಜೆಗೆ ಬಳಕೆ ಮಾಡುವ ವಸ್ತುಗಳು, ಅತಿಥಿ ಗೃಹ, ಹರಕೆ ಕೂದಲು ಸಹಿತ ಇತರ ಆದಾಯ ಮೂಲಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರದಂತೆ ಕೇಳಿಕೊಂಡಿದ್ದರು. ಈ ಮನವಿಯನ್ನು ಆಂಧ್ರಪ್ರದೇಶ ಹಣಕಾಸು ಸಚಿವ ಯಾನಮಾಲಾ ರಾಧಾಕೃಷ್ಣುಡು ಜಿಎಸ್​ಟಿ ಕೌನ್ಸಿಲ್ ಮುಂದೆ ಇರಿಸಿದ್ದರು. ಒಂದೊಮ್ಮೆ ತಿರುಪತಿ ದೇವಾಲಯಕ್ಕೆ ಈ ವಿನಾಯಿತಿ ನೀಡಿದಲ್ಲಿ ಇತರ ದೇವಾಲಯಗಳು ಇದೇ ರೀತಿ ಪ್ರಸ್ತಾಪನೆ ಸಲ್ಲಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಿಂದೇಟು ಹಾಕಿದ್ದರು. ಆದರೆ ಜೂನ್ 17ರಂದು ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ತಿರುಪತಿ ಲಡ್ಡು ಸಹಿತ ಇತರ ಉತ್ಪನ್ನಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. -ಏಜೆನ್ಸೀಸ್

ಲಡ್ಡು ತಯಾರಿಕೆಗೆ -ರೂ; 160 ಕೋಟಿ
ತಿರುಪತಿಯಲ್ಲಿ ಪ್ರತಿ ವರ್ಷ ಲಡ್ಡು ತಯಾರಿಕೆಗೆ ಆಡಳಿತ ಮಂಡಳಿ 160 ಕೋಟಿ ರೂ. ವ್ಯಯಿಸುತ್ತಿದೆ. ದರುಶನಕ್ಕೆ 300 ರೂ. ಟಿಕೆಟ್ ಕಾಯ್ದಿರಿಸಿದ ಪ್ರತಿ ಭಕ್ತರಿಗೆ ಎರಡು ಲಾಡು ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚಿನ ಲಡ್ಡು ಬೇಕಾದಲ್ಲಿ 25 ರೂ. ನೀಡಿ ಇನ್ನೆರಡು ಲಡ್ಡು ಖರೀದಿಸಬಹುದಾಗಿದೆ. ಇದಕ್ಕಿಂತ ಹೆಚ್ಚು ಲಡ್ಡು ಪಡೆದುಕೊಳ್ಳಲು ಅವಕಾಶವಿಲ್ಲ. 2009ರಲ್ಲಿ ಈ ಲಡ್ಡುವಿಗೆ ಪೇಟೆಂಟನ್ನೂ ನೀಡಲಾಗಿದೆ. 2016-17ರ ಆರ್ಥಿಕ ವರ್ಷದಲ್ಲಿ 10.46 ಕೋಟಿ ಲಡ್ಡುಗಳು ಮಾರಾಟವಾಗಿವೆ. ಲಡ್ಡು ಮಾರಾಟದಿಂದ ವಾರ್ಷಿಕವಾಗಿ 160 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೊಂಡಿತ್ತು.

Friday, June 16, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ”ಸಾರ್ವಜನಿಕ ಹಿತಾಸಕ್ತಿ”ಯ ಜಸ್ಟೀಸ್ ಭಗವತಿ ಇನ್ನಿಲ್ಲ

ನವದೆಹಲಿ: ”ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ”ಯನ್ನು ಚಾಲ್ತಿಗೆ ತರುವ ಮೂಲಕ ಜ್ಯುಡಿಷಿಯಲ್ ಆ್ಯಕ್ಟಿವಿಸಂಗೆ ನಾಂದಿ ಹಾಡಿದ್ದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ನಿವೃತ್ತ) ಪಿ ಎನ್ ಭಗವತಿ ಅವರು ಗುರುವಾರ ನಿಧನರಾಗಿದ್ದಾರೆ.

95 ವರ್ಷದ ಭಗವತಿ ಅವರು ಪತ್ನಿ ಪ್ರಭಾವತಿ ಮತ್ತು ಮೂವರು ಪತ್ರಿಯರನ್ನು ಅಗಲಿದ್ದಾರೆ. ಜಸ್ಟೀಸ್ ಭಗವತಿ ಅವರ ಅಂತ್ಯಕ್ರಿಯೆ ಶನಿವಾರ ನೆರವೇರಲಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಭಗವತಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಭಾರತದ 17 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಭಗವತಿ ಅವರು PIL ಭಗವತಿ ಎಂದೇ ಜನಮಾನಸದಲ್ಲಿ ಚಾಲ್ತಿಯಲ್ಲಿದ್ದರು. ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಮೂಲಭೂತ ಹಕ್ಕನ್ನಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾರಿಗೆ ತಂದಿದ್ದೇ ಅವರು. ಕೈದಿಗಳೂ ಸಾಮಾನ್ಯ ಪ್ರಜೆಗಳಂತೆ ಮೂಲಭೂತ ಹಕ್ಕುಗಳನ್ನು ಚಲಾಯಿಸಬಹುದು ಎಂಬುದನ್ನು ಪ್ರತಿಪಾದಿಸಿದವರು ಜಸ್ಟೀಸ್ ಭಗವತಿ.

ಪ್ರಚಲಿತ ವಿದ್ಯಮಾನ : ಜೂನ್ 2017 : 1993 ಮುಂಬೈ ಸರಣಿ ಸ್ಫೋಟ: ಜೂನ್​ 19ಕ್ಕೆ ಶಿಕ್ಷೆ ಪ್ರಕಟ

ಮುಂಬೈ: 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಅಬು ಸಲೇಂ ಹಾಗೂ ಮುಸ್ತಾಫಾ ದೋಸ್ಸಾನನ್ನು ಅಪರಾಧಿ ಎಂದು ಪರಿಗಣಿಸಿ ಮುಂಬೈ ಟಾಡಾ ವಿಶೇಷ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಜೂನ್​ 19ರಂದು ಪ್ರಕಟಿಸಲಿದೆ.

ಮುಂಬೈ ಸರಣಿ ಸ್ಫೋಟಕ್ಕೆ ಉಗ್ರ ಅಬು ಸಲೇಂ ಹಾಗೂ ಮುಸ್ತಫಾ ಸಂಚು ರೂಪಿಸಿದ್ದ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಫಿರೋಜ್​ ರಷೀದ್​ ಖಾನ್​ ಹಾಗೂ ತಾಹೀರ್ ಮರ್ಚೆಂಟ್​ ಹಾಗೂ ಮುಸ್ತಫಾ ಸಹೋದರ ಮೊಹಮ್ಮದ್​ ದೋಸ್ಸಾ ಅವರನ್ನು ಕೂಡ ಅಪರಾಧಿ ಎಂದು ಪರಿಗಣಿಸಲಾಗಿದೆ.

ಅಪರಾಧಿ ಮುಸ್ತಫಾ ದೋಸ್ಸಾ ಉಗ್ರರಿಗೆ ತರಬೇತಿ ನೀಡಿದ್ದ. ಮುಂಬೈ ಮೇಲೆ ದಾಳಿ ನಡೆಸಲು ಫಿರೋಜ್​ ರಷೀದ್​ ಖಾನ್​ ಎಂಬ ಅಪರಾಧಿ ಶಸ್ತ್ರಾಸ್ತ್ರ ಪೂರೈಸಿದ್ದ. ಈ ಪ್ರಕರಣದ ಮೊದಲ ಹಂತದ ವಿಚಾರಣೆ 2007 ರಲ್ಲಿ ಮುಕ್ತಾಯವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 129 ಜನರ ಪೈಕಿ 100 ಮಂದಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟದಲ್ಲಿ 257 ಜನರು ಮೃತಪಟ್ಟಿದ್ದರು. ಅಲ್ಲದೆ 700ಕ್ಕೂ ಅಧಿಕ ಮಂದಿ ಬಾಂಬ್​ ಸ್ಫೋಟದಲ್ಲಿ ಗಾಯಗೊಂಡಿದ್ದರು.

Tuesday, June 13, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಆಹಾರದ ಆಯ್ಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಬಂಧವಿಲ್ಲ: ರಾಜ್‌ನಾಥ್‌ ಸಿಂಗ್‌ ಭರವಸೆ

ಐಜ್ವಾಲಾ: ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ ರೂಪಿಸಿದ್ದ ಕಾನೂನನ್ನು ವಿರೋಧಿಸಿ ಹೋರಾಟಗಳು ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಜನರ ಆಹಾರದ ಆಯ್ಕೆಯ ವಿಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ನಗರದಲ್ಲಿ ಸ್ಥಳೀಯ ಸಂಘಟನೆಗಳು ತಮ್ಮ ಆಹಾರದ ಆಯ್ಕೆಯ ಸ್ವಾತಂತ್ರದ ಮೇಲೆ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಹೇರುತ್ತಿದೆ ಎಂದು ಆರೋಪಿಸಿ ‘ಗೋಮಾಂಸ ನಿಷೇಧದ ಭೋಜನಕೂಟ’ವನ್ನು ಆಯೋಜಿಸಿದ್ದವು.

ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಕಿರಣ್‌ ರಿಜಿಜು ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಟಿ ನಡೆಸಿದ ರಾಜ್‌ನಾಥ್‌ ಸಿಂಗ್‌, ‘ಕೇಂದ್ರ ಸರ್ಕಾರ ದೇಶದ ಯಾವೊಬ್ಬ ವ್ಯಕ್ತಿಯ ಆಹಾರದ ಆಯ್ಕೆಯ ಮೇಲೆ ನಿರ್ಬಂಧ ವಿಧಿಸುವುದಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಂತಹದೇ ಭರವಸೆ ನೀಡಿದ್ದರು.

ಕೇಂದ್ರ ಸರ್ಕಾರ ಕಾನೂನಿನ ಮೂಲಕ ಆಹಾರದ ಆಯ್ಕೆಯ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ರಾಷ್ಟ್ರದಾದ್ಯಂತ ಕೇಳಿಬಂದಿತ್ತು. ಗೋಮಾಂಸ ಈಶಾನ್ಯ ಭಾರತ ರಾಜ್ಯಗಳ ಪ್ರಧಾನ ಆಹಾರವಾಗಿದ್ದು, ಈ ಭಾಗದಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ.

ಸೋಮವಾರ ಈಶಾನ್ಯ ಭಾರತದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ರಾಜ್‌ನಾಥ್‌ ಸಿಂಗ್‌, ಕೇಂದ್ರ ಸರ್ಕಾರದ ವತಿಯಿಂದ ಮಿಜೋರಾಂನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸದ್ಯ ಒದಗಿಸಲಾಗುತ್ತಿರುವ ಭದ್ರತಾ ಸೌಲಭ್ಯಗಳನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

Monday, June 12, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಪ್ರೆಸಿಡೆಂಟ್ಸ್‌ ಕಪ್ ಬಾಕ್ಸಿಂಗ್‌: ಗೌರವ್‌ಗೆ ಬೆಳ್ಳಿ

ನವದೆಹಲಿ: ಭಾರತದ ಗೌರವ್ ಚೌಹಾಣ್ ಕಜಕಸ್ತಾನದಲ್ಲಿ ನಡೆದ ಪ್ರೆಸಿಡೆಂಟ್ಸ್‌ ಕಪ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಪುರುಷರ 91 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಗೌರವ್ ಕಜಕಸ್ತಾನದ ವೆಸಿಲೆ ಲೆವಿತ್ ಎದರು ಸೋಲು ಕಂಡರು.

ಪ್ರಚಲಿತ ವಿದ್ಯಮಾನ : ಜೂನ್ 2017 : ನಡಾಲ್ ಮುಡಿಯೇರಿದ ದಾಖಲೆ ಕಿರೀಟ

ಪ್ಯಾರಿಸ್‌: ಗೆಲ್ಲುವ ಕುದುರೆಗೆ ಕಡಿವಾಣ ಹಾಕಲು ಎದುರಾಳಿಗೆ ಸಾಧ್ಯವಾಗಲಿಲ್ಲ. ಸ್ವಿಟ್ಜರ್‌ಲೆಂಡ್‌ನ ಸ್ಟಾನಿ ಸ್ಲಾನ್ ವಾವ್ರಿಂಕಾ ಅವರ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಸ್ಪೇನ್‌ನ ರಫೆಲ್ ನಡಾಲ್‌ ಫ್ರೆಂಚ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ದಾಖಲೆಯ ಪ್ರಶಸ್ತಿ ಮುಡಿಗೇರಿಸಿಕೊಂಡರು.
ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು 6–2, 6–3, 6–1ರಿಂದ ಜಯ ಸಾಧಿಸಿದರು. ಈ ಮೂಲಕ ಟೂರ್ನಿಯಲ್ಲಿ ಹತ್ತು ಬಾರಿ ಪ್ರಶಸ್ತಿಗಳನ್ನು ಗೆದ್ದ ದಾಖಲೆ ತಮ್ಮದಾಗಿಸಿಕೊಂಡರು. 15 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆಯೂ ಅವರದಾಯಿತು.

ಮೊಣಕಾಲಿನ ಗಾಯದಿಂದ 2012 ಮತ್ತು 2013ರ ಅವಧಿಯಲ್ಲಿ ಏಳು ತಿಂಗಳು ಅಂಗಳಕ್ಕೆ ಇಳಿಯಲು ಸಾಧ್ಯವಾಗದ ನಡಾಲ್‌ 2014ರಲ್ಲಿ ಕೊನೆಯದಾಗಿ ಫ್ರೆಂಚ್‌ ಓಪನ್‌ ಟೂರ್ನಿಯ ಪ್ರಶಸ್ತಿ ಗೆದ್ದಿದ್ದರು. ಈ ಬಾರಿಯ ಟೂರ್ನಿಯ ಉದ್ದಕ್ಕೂ ಒಂದೇ ಒಂದು ಸೆಟ್‌ ಕೂಡ ಸೋಲದೆ ಫೈನಲ್‌ ಪ್ರವೇಶಿಸಿದ ಅವರು ಅಂತಿಮ ಹಣಾಹಣಿಯಲ್ಲೂ ಪಾರಮ್ಯ ಮೆರೆದರು.

ಪ್ರಚಲಿತ ವಿದ್ಯಮಾನ : ಜೂನ್ 2017 : ಜಾನುವಾರು ನಿಯಮ ತಿದ್ದುಪಡಿಗೆ ಒತ್ತಾಯಿಸಲು ಕರೆ

ನವದೆಹಲಿ: ಜಾನುವಾರುಗಳ ಹತ್ಯೆ ಮೇಲೆ ನಿರ್ಬಂಧ ವಿಧಿಸುವ ವಿವಾದಾತ್ಮಕ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ, ರಾಜ್ಯಗಳು ಮತ್ತು ಇತರ ಸಂಘ ಸಂಸ್ಥೆಗಳಿಂದ ಇನ್ನಷ್ಟು ಅಹವಾಲು ನಿರೀಕ್ಷಿಸುತ್ತಿರುವುದಾಗಿ ಕೇಂದ್ರ ಪರಿಸರ ಸಚಿವ ಹರ್ಷವರ್ಧನ ಸೋಮವಾರ ಹೇಳಿದ್ದಾರೆ.

ಕೇಂದ್ರದ ಆದೇಶದ ವಿರುದ್ಧ ಮೇಘಾಲಯ ವಿಧಾನಸಭೆ ನಿರ್ಣಯ ಅಂಗೀಕರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇನ್ನಷ್ಟು ಅಹವಾಲುಗಳನ್ನು ಸಲ್ಲಿ ಸುವಂತೆ ಸಂಬಂಧಿಸಿದವರಿಗೆ ಆಹ್ವಾನ ನೀಡಿದ್ದೇನೆ’ ಎಂದು ಹೇಳಿದ್ದಾರೆ.

Tuesday, June 6, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಸೀಮೆಎಣ್ಣೆಗೆ ಸಬ್ಸಿಡಿ, ಅಟಲ್‌ ಪಿಂಚಣಿ ಯೋಜನೆಗೆ ಆಧಾರ್‌ ಕಡ್ಡಾಯ

ನವದೆಹಲಿ: ಸೀಮೆಎಣ್ಣೆ ಖರೀದಿಗೆ ಸಹಾಯಧನ ಹಾಗೂ ಅಟಲ್‌ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ.

ಸೀಮೆಎಣ್ಣೆ ಸಹಾಯಧನ ಪಡೆಯುತ್ತಿರುವವರು ಅಥವಾ ಅಟಲ್‌ ಪಿಂಚಣಿ ಯೋಜನೆ ಸೌಲಭ್ಯ ಹೊಂದಿರುವವರು ಆಧಾರ್‌ ಸಂಖ್ಯೆ ನೀಡಬೇಕು.

ಇಲ್ಲವಾದಲ್ಲಿ ಈ ಸೌಲಭ್ಯಗಳನ್ನು ಪಡೆಯುವುದನ್ನು ಮುಂದುವರಿಸಲು ಆಧಾರ್‌ ಸಂಖ್ಯೆ ಪಡೆಯಲು ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಅಟಲ್‌ ಪಿಂಚಣಿ ಯೋಜನೆಗೆ ಹಾಗೂ ಸೀಮೆಎಣ್ಣೆ ಸಹಾಯಧನಕ್ಕೆ ಆಧಾರ್‌್ ನೀಡಲು ಕ್ರಮವಾಗಿ  ಜೂನ್‌ 15  ಹಾಗೂ ಸೆಪ್ಟೆಂಬರ್‌ 30 ಕೊನೆಯ ದಿನವಾಗಿದೆ.

ಆದರೆ ಆಧಾರ್‌ ಸಂಖ್ಯೆ ನೀಡುವ ತನಕ ಸೌಲಭ್ಯ ಪಡೆಯುವ ಸಲುವಾಗಿ ಪಡಿತರ ಚೀಟಿ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಭಾವಚಿತ್ರ ಇರುವ ಕಿಸಾನ್‌ ಪಾಸ್‌ಬುಕ್‌, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ನೀಡಲಾದ ಉದ್ಯೋಗ ಚೀಟಿ, ಗೆಜೆಟೆಡ್‌ ಅಧಿಕಾರಿ ಅಥವಾ  ತಹಶೀಲ್ದಾರ್‌ ನೀಡಿರುವ ಪ್ರಮಾಣಪತ್ರವನ್ನು ಗುರುತಿನ ಚೀಟಿ ಎಂದು ಪರಿಗಣಿಸಲಾಗುತ್ತದೆ.

ಸಹಾಯಧನ ವಿತರಿಸಲು ಪಡಿತರ ಚೀಟಿಯೊಂದಿಗೆ ಅಥವಾ ಬ್ಯಾಂಕ್‌್ ಖಾತೆ ಜತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

Thursday, June 1, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಸೂರ್ಯನ ಮುಟ್ಟಲಿದೆ ನಾಸಾದ ಪಾರ್ಕರ್‌ ನೌಕೆ

ಸೂರ್ಯ ತನ್ನ ಮೇಲ್ಭಾಕ್ಕಿಂತಲೂ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.

ವಾಷಿಂಗ್ಟನ್‌: ಖಗೋಳ ಶಾಸ್ತ್ರಜ್ಞರಲ್ಲಿ ಇಂದಿಗೂ ಕುತೂಹಲದ ಕೇಂದ್ರವಾಗಿರುವ ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿದೆ.

ಸೂರ್ಯಮಂಡಲದ ರಹಸ್ಯ ತಿಳಿಯಲು ಹತ್ತಾರು ವರ್ಷಾಗಳಿಂದ ವಿಜ್ಞಾನಿಗಳು ಹಲವು ರೀತಿಯಲ್ಲಿ ಶೋಧನಾ ಕಾರ್ಯ ನಡೆಸಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೀಗ ನಾಸಾ ನಕ್ಷತ್ರ ಸೂರ್ಯ ಅಧ್ಯಯನಕ್ಕಾಗಿ ಜಗತ್ತಿನ ಮಿಷನ್‌ ಸಿದ್ಧಪಡಿಸಿ ರವಾನಿಸುತ್ತಿದೆ.

60 ವರ್ಷಗಳ ಹಿಂದೆಯೇ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್‌ ಪಾರ್ಕರ್‌ ಅವರ ಗೌರವಾರ್ಥ ‘ಪಾರ್ಕರ್‌ ಸೌರ ಶೋಧನಾನೌಕೆ’ ಎಂದು ಹೆಸರಿಸಿರುವುದಾಗಿ ನಾಸಾ ತಿಳಿಸಿದೆ.

2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಈವರೆಗೂ ಕಾಣದ ವಲಯದಲ್ಲಿ ನೌಕೆ ಶೋಧನಾ ಕಾರ್ಯ ನಡೆಸಲಿದೆ ಎಂದು ಪ್ರೊ.ಪಾರ್ಕರ್‌ ತಿಳಿಸಿದ್ದಾರೆ.

ಸೂರ್ಯ ತನ್ನ ಮೇಲ್ಭಾಕ್ಕಿಂತಲೂ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.


4.5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್‌ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.

Monday, May 29, 2017

ಪ್ರಚಲಿತ ವಿದ್ಯಮಾನ : ಮೇ 2017 : ಜಿಪಿಎಸ್​ಗೆ ಟಾಟಾ ಇನ್ನು ಭಾರತದಲ್ಲಿ ಶುರು ನಾವಿಕ ಯುಗ

ಅರಬ್ಬಿ ಸಮುದ್ರ ಹಾಗೂ ನಮ್ಮ ದೇಶದೊಳಗೆ ಎಲ್ಲೇ ಹೋಗುವುದಾದರೂ ಇನ್ನು ಮುಂದೆ ದಾರಿ ತಪ್ಪೀತೆಂಬ ಆತಂಕ ಬೇಕಿಲ್ಲ. ಹೌದು, ಸ್ವದೇಶಿ ನಿರ್ವಿುತ ಜಾಗತಿಕ ಸ್ಥಳಗುರುತಿಸುವಿಕೆ ವ್ಯವಸ್ಥೆ(ಜಿಪಿಎಸ್) ‘ನಾವಿಕ್’ನ ನೆರವು ಬರುವ ವರ್ಷವೇ ಭಾರತೀಯರಿಗೆ ಸಿಗಲಿದೆ. ಈಗಾಗಲೇ ಅಸ್ವದೇಶಿ ಜಿಪಿಎಸ್ ಕಾರ್ಯಾರಂಭಿಸಿದ್ದು, 2018ರ ಆರಂಭದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

ಏನಿದು ಯೋಜನೆ?
ಐಆರ್​ಎನ್​ಎಸ್​ಎಸ್​ನ ಮಹತ್ವದ ಘಟ್ಟ ಕಳೆದ ವರ್ಷ ಏ.28ರಂದು ಪೂರ್ಣಗೊಂಡಿದ್ದು, ಏಳು ಉಪಗ್ರಹಗಳನ್ನು ಹಂತ ಹಂತವಾಗಿ ನಿಗದಿತ ಕಕ್ಷೆ ಸೇರಿಸುವ ಗುರಿಯೂ ಯಶಸ್ವಿಯಾಗಿದೆ. ಇಸ್ರೋ ಈ ಕೆಲಸವನ್ನು ಐಆರ್​ಎನ್​ಎಸ್​ಎಸ್-1ಜಿ ಮೂಲಕ ಯಶಸ್ವಿಯಾಗಿ ನೆರವೇರಿಸಿದೆ. ಆ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನಾವಿಕ್(ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್​ಸ್ಟೆಲೇಷನ್) ಹೆಸರನ್ನು ಇಟ್ಟಿದ್ದರು.

ತಪ್ಪಲಿದೆ ಅವಲಂಬನೆ
ಅಮೆರಿಕ ಜಿಪಿಎಸ್ ಪ್ರಾಜೆಕ್ಟನ್ನು 1973ರಲ್ಲಿ ಅಭಿವೃದ್ಧಿ ಪಡಿಸಿದ ಬಳಿಕ ದಶಕಗಳಿಂದ ಭಾರತ ಜಿಪಿಎಸ್​ಗಾಗಿ ಅಮೆರಿಕವನ್ನೇ ಅವಲಂಬಿಸಿದೆ. ಆದಾಗ್ಯೂ, 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಅಮೆರಿಕ ಜಿಪಿಎಸ್ ನೆರವನ್ನು ನೀಡಲು ನಿರಾಕರಿಸಿತ್ತು. ಈ ನಿರಾಕರಣೆಯೇ ಸ್ವದೇಶಿ ಜಿಪಿಎಸ್ ಅಗತ್ಯವನ್ನು ಮನಗಾಣಿಸಿತು. ಇದರ ಪರಿಣಾಮವೇ ನಾವಿಕ್ ಉದಯವಾಗಿದೆ.

ಅಮೆರಿಕ ಡ/ಠ ಭಾರತ
ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳಿವೆ. ಇದು ಇಡೀ ಜಗತ್ತನ್ನೇ ವ್ಯಾಪಿಸುತ್ತದೆ. ಆದರೆ, ಭಾರತದ ನಾವಿಕ್ ಎಂಬ ಜಿಪಿಎಸ್ ವ್ಯವಸ್ಥೆ ಭಾರತ ಹಾಗೂ ಅರಬ್ಬಿ ಸಮುದ್ರದ ವ್ಯಾಪ್ತಿಗಷ್ಟೇ ಸೀಮಿತವಾಗಿದ್ದರೂ ಅಮೆರಿಕದ ವ್ಯವಸ್ಥೆಗಿಂತಲೂ ಹೆಚ್ಚು ನಿಖರವಾದುದಾಗಿದೆ. ನಾವಿಕ್ ಸ್ಥಳ ಸ್ಥಿರೀಕರಿಸುವಲ್ಲಿ 5 ಮೀಟರ್​ನ ನಿಖರತೆ ತೋರಿದರೆ, ಜಿಪಿಎಸ್ 20-30 ಮೀಟರ್ ನಿಖರತೆ ತೋರುತ್ತದೆ.

ಜಿಪಿಎಸ್ ಅಗತ್ಯ/ವ್ಯಾಪ್ತಿ
ರಸ್ತೆ, ವಾಯು ಮತ್ತು ನೌಕಾಯಾನದ ಸಂದರ್ಭದಲ್ಲಿ ಮಾರ್ಗದರ್ಶನ ಪಡೆಯಲು ಸದ್ಯ ಅಮೆರಿಕದ ಜಿಪಿಎಸ್ ಸೌಲಭ್ಯವನ್ನು ಬಳಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇಸ್ರೊ ಯೋಜನೆ ಕೈಗೆತ್ತಿಕೊಂಡಿದೆ. ಉಪಗ್ರಹಗಳ ಸಂಕೇತಗಳು ಭಾರತಕ್ಕೆ ಮಾತ್ರವಲ್ಲ, ಸುತ್ತಲಿನ 1,500 ಕಿ.ಮೀ. ಪರಿಧಿಯಲ್ಲಿರುವ ಸಮೀಪದ ದೇಶಗಳಿಗೂ ಲಭ್ಯವಾಗಲಿವೆ.
ಯಾವ ದೇಶದ್ದು ಯಾವ ವ್ಯವಸ್ಥೆ
  •  ಅಮೆರಿಕ-ಜಿಪಿಎಸ್
  •  ರಷ್ಯಾ -ಜಿಎಲ್​ಒಎನ್​ಎಎಸ್​ಎಸ್
  •  ಐರೋಪ್ಯ ಒಕ್ಕೂಟ – ಗೆಲಿಲಿಯೋ
  •  ಚೀನಾ – ಬೈಡೋ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್​ಅಭಿವೃದ್ಧಿ ಹಂತದಲ್ಲಿದೆ)
ಎರಡು ಸೇವೆ ಲಭ್ಯ
ಜಿಪಿಎಸ್ ಕಾರ್ಯಾರಂಭ ಮಾಡಿದ ಬಳಿಕ ಎರಡು ರೀತಿಯ- ಎಸ್​ಪಿಎಸ್ ( ಸ್ಟ್ಯಾಂಡರ್ಡ್ ಪೊಜಿಷನಿಂಗ್ ಸರ್ವೀಸ್) ಹಾಗೂ ನಿರ್ಬಂಧಿತ ಸೇವೆ (ಆರ್​ಎಸ್) ಸೇವೆ ಲಭ್ಯವಾಗಲಿದೆ. ಮೊದಲ ಸೇವೆಯು ಎಲ್ಲರಿಗೂ ಸಿಕ್ಕರೆ, ಎರಡನೆಯದು ಸರ್ಕಾರಕ್ಕೆ ಮಾತ್ರ.

ಪ್ರಚಲಿತ ವಿದ್ಯಮಾನ : ಮೇ 2017 : ಜಿಎಸ್​ಎಲ್​ವಿಎಂಕೆ 3 ಪರೀಕ್ಷಾ ಉಡಾವಣೆ ಜೂನ್ 5ಕ್ಕೆ

ನವದೆಹಲಿ: ಭಾರತೀಯರನ್ನು ಬಾಹ್ಯಾಕಾಶಕ್ಕೆ ಭಾರತ ದಿಂದಲೇ ಕಳುಹಿಸುವ ಸಾಮರ್ಥ್ಯದ ಇನ್ನೂರು ಆನೆ ತೂಕದ ಸ್ವದೇಶ ನಿರ್ವಿುತ ಜಿಎಸ್​ಎಲ್​ವಿಎಂಕೆ 3ರ ಪರೀಕ್ಷಾರ್ಥ ಉಡಾವಣೆ ಜೂನ್ 5ಕ್ಕೆ ನಿಗದಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಈಗಾಗಲೇ ಈ ರಾಕೆಟನ್ನು ಉಡಾವಣೆಗೆ ಸಜ್ಜುಗೊಳಿಸ ಲಾಗಿದೆ. ಭಾರತದಲ್ಲೇ ತಯಾರಿಸಲಾದ ಇದುವರೆಗಿನ ಅತಿತೂಕದ ರಾಕೆಟ್ ಇದಾಗಿದೆ. ಇದುವರೆಗಿನ ಅತಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದೆ. ಈ ಉಡಾವಣೆ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಹೊಸದೊಂದು ದಾಖಲೆ ಬರೆಯಲಿದ್ದು, ಭವಿಷ್ಯದಲ್ಲಿ 2-3 ಗಗನಯಾನಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ಯಬಲ್ಲದು. ‘300 ಕೋಟಿ ರೂ. ವೆಚ್ಚದ ಸಂಪೂರ್ಣ ಸ್ವದೇಶಿ ನಿರ್ವಿುತ ಜಿಎಸ್​ಎಲ್​ವಿಎಂಕೆ3 ಯಶಸ್ವಿಯಾಗಿ ಉಡಾವಣೆ ಮಾಡುವುದಕ್ಕೆ ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ’ ಎಂದು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್​ಕುಮಾರ್ ಹೇಳಿದ್ದಾರೆ.

-ಏಜೆನ್ಸೀಸ್

Tuesday, May 23, 2017

ಪ್ರಚಲಿತ ವಿದ್ಯಮಾನ : 23 ಮೇ 2017 : ವಿಶ್ವಕಪ್​ನಲ್ಲಿ ಭಾರತಕ್ಕೆ ಸ್ವರ್ಣ

ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಮೊದಲ ಚಿನ್ನ

ಶಾಂಘೈ: ಆರ್ಚರಿ ವಿಶ್ವಕಪ್ ಚರಣವನ್ನು ಭಾರತ ತಂಡ ಸ್ವರ್ಣ ಪದಕ ಗೆಲ್ಲುವ ಮೂಲಕ ಆರಂಭಿಸಿದೆ. ಪುರುಷರ ಕಾಂಪೌಂಡ್ ಆರ್ಚರಿ ತಂಡ ಶನಿವಾರ ನಡೆದ ವಿಶ್ವಕಪ್ ಮೊದಲ ಚರಣದ ಫೈನಲ್​ನಲ್ಲಿ ಕೊಲಂಬಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಜಯಿಸಿತು.

ಇದು ವಿಶ್ವಕಪ್​ನ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದೆ. ವಿಜೇತ ತಂಡದ ಅಭಿಷೇಕ್ ವರ್ಮ, ಚಿನ್ನ ರಾಜು ಶ್ರೀಧರ್ ಹಾಗೂ ಅಮನ್​ಜೀತ್ ಸಿಂಗ್ 226-221ರಿಂದ ಕೊಲಂಬಿಯಾದ ಕ್ಯಾಮಿಲೊ ಆಂಡ್ರೆಸ್ ಕಾರ್ಡೆನಾ, ಜೋಸ್ ಕಾಲೋಸ್ ಒಸ್ಪಿನಾ ಹಾಗೂ ಡೇನಿಯಲ್ ಮುನೊಜ್​ರನ್ನು ಸೋಲಿಸಿದರು. ಭಾರತೀಯರು ಮೊದಲ ಸೆಟ್​ನಲ್ಲಿ 58-57ರ ಭರ್ಜರಿ ಮುನ್ನಡೆಯೊಂದಿಗೆ ಮೇಲುಗೈ ಕಂಡರು. ವರ್ಮ ಎರಡು ಬಾರಿ ಪೂರ್ಣ 10 ಅಂಕ ಸಂಪಾದಿಸುವ ಮೂಲಕ ಭಾರತಕ್ಕೆ 116-113ರ ಮುನ್ನಡೆ ಒದಗಿಸಿದರು. 3ನೇ ಸೆಟ್​ನಲ್ಲಿ ಕೊಲಂಬಿಯಾ 52-52ರ ಸಮಬಲದ ಹೋರಾಟದೊಂದಿಗೆ ಪ್ರತಿರೋಧ ನೀಡಿದರೂ 4 ಹಾಗೂ ನಿರ್ಣಾಯಕ ಸೆಟ್​ನಲ್ಲಿ ಭಾರತ 58-56 ಮುನ್ನಡೆಯೊಂದಿಗೆ ಗೆಲುವಿನ ಸಂಭ್ರಮಾಚರಿಸಿತು. ಅಭಿಷೇಕ್ ವರ್ಮ 2015ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್​ನ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ಪೋಲೆಂಡ್​ನಲ್ಲಿ ನಡೆದ ವಿಶ್ವಕಪ್​ನ ಅದೇ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಮಿಶ್ರ ತಂಡ ವಿಭಾಗದಲ್ಲಿ ವರ್ಮ ಕಂಚು ಪದಕ ಗೆಲ್ಲುವಲ್ಲಿ ವಿಫಲಗೊಂಡರು. ಪ್ಲೇ ಆಫ್ ಪಂದ್ಯದಲ್ಲಿ ವರ್ಮ ಮತ್ತು ಜ್ಯೋತಿ ಸುರೇಖಾ ಜೋಡಿ 151-153ರಿಂದ ಅಮೆರಿಕದ ಜೋಡಿಗೆ ಶರಣಾಯಿತು.

ಪ್ರಚಲಿತ ವಿದ್ಯಮಾನ : 23 ಮೇ 2017 : ಲಂಡನ್​ನಲ್ಲಿ ಕನ್ನಡಿಗ ನೀರಜ್ ಚುನಾವಣಾ ಪ್ರಚಾರ ಆರಂಭ

ಲಂಡನ್: ಇಂಗ್ಲೆಂಡಿನ ಸಂಸದೀಯ ಚುನಾವಣೆಯಲ್ಲಿ ಲೇಬರ್ ಪಾರ್ಟಿಯಿಂದ ಲಂಡನ್​ನ ಪುಟ್ನೀ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕರ್ನಾಟಕ ಮೂಲದ ಎನ್​ಆರ್​ಐ ಡಾ. ನೀರಜ್ ಪಾಟೀಲ್ ಅವರ ಚುನಾವಣಾ ಪ್ರಚಾರಕ್ಕೆ ಕ್ರಿಯೊಡಾನ್ ಉತ್ತರ ಕ್ಷೇತ್ರದ ಸಂಸದ ಮತ್ತು ಶ್ಯಾಡೋ ಸ್ಥಳೀಯ ಸರ್ಕಾರದ ಸಚಿವ ಸ್ಟೀವ್ ರೀಡ್ ಅಲ್ಲಿನ ಬೆಂಗಳೂರು ಸ್ಟ್ರೀಟ್ ಪ್ರದೇಶದಿಂದ ಚಾಲನೆ ನೀಡಿದ್ದಾರೆ.

ಡಾ. ನೀರಜ್ ಪಾಟೀಲ್ ಅವರು ಅಪಘಾತ ಮತ್ತು ತುರ್ತು ಚಿಕಿತ್ಸಾ ವೈದ್ಯರಾಗಿದ್ದು, ಲ್ಯಾಂಬೆತ್​ನ ಮಾಜಿ ಮೇಯರ್ ಕೂಡ ಆಗಿದ್ದಾರೆ. ಜೂನ್ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿ, ಬ್ರಿಟನ್ ಶಿಕ್ಷಣ ಸಚಿವ ಜಸ್ಟಿನ್ ಗ್ರೀನಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.

ಪುಟ್ನೀ, ಬಟ್ಟರ್​ಸೀ ಮತ್ತು ಟೂಟಿಂಗ್ ಎಂಬ ಮೂರು ಸಂಸದೀಯ ಕ್ಷೇತ್ರಗಳಿರುವ ಲಂಡನ್ ಬೋರೋಗ್ ಆಫ್ ವಾಂಡ್ಸ್​ವರ್ತ್​ನಲ್ಲಿ ಬೆಂಗಳೂರು ಸ್ಟ್ರೀಟ್ ಪ್ರದೇಶವಿದೆ. 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತು ಆಡಳಿತದ ಸಮಯದಲ್ಲಿ ಬೆಂಗಳೂರು ರೆಜಿಮೆಂಟ್​ಗೆ ಅಲ್ಲಿನ ಕೇಂದ್ರದಲ್ಲಿ ನೇಮಕಾತಿ ನಡೆಸುತ್ತಿದ್ದರಿಂದ ಆ ಪ್ರದೇಶಕ್ಕೆ ಬೆಂಗಳೂರು ಸ್ಟ್ರೀಟ್ ಎಂಬ ಹೆಸರು ಬಂದಿದೆ. -ಏಜೆನ್ಸೀಸ್

ಪ್ರಚಲಿತ ವಿದ್ಯಮಾನ : 23 ಮೇ 2017 : ಹಳಿ ಮೇಲಿನ ವಿಮಾನ!

ಮುಂಬೈ: ದೇಶದ ಮೊದಲ ಐಷಾರಾಮಿ ರೈಲು ತೇಜಸ್ ಎಕ್ಸ್​ಪ್ರೆಸ್​ಗೆ ಮುಂಬೈನಲ್ಲಿ ಸೋಮವಾರ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದರು. ಈ ರೈಲು ಮುಂಬೈ-ಗೋವಾ ನಡುವೆ ತ್ವರಿತ ಸಂಪರ್ಕ ಸಾಧನವಾಗಿ ಕಾರ್ಯನಿರ್ವಹಿಸಲಿದೆ.
ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ತೇಜಸ್ ಎಕ್ಸ್​ಪ್ರೆಸ್ ಪ್ರಥಮ ಐಷಾರಾಮಿ ರೈಲಾಗಿದೆ. ಇದರಲ್ಲಿ ಮಾಹಿತಿ, ಮನರಂಜನೆಯ ಜತೆಗೆ ವೈಫೈ, ಸಿಸಿ ಕ್ಯಾಮರಾ, ಅಗ್ನಿ ಹಾಗೂ ಹೊಗೆ ಪತ್ತೆ ವ್ಯವಸ್ಥೆ, ಟೀ, ಕಾಫಿ ಪೂರೈಸುವ ಯಂತ್ರಗಳು ಸೇರಿ ಹಲವು ಆಧುನಿಕ ಸೌಲಭ್ಯ ಲಭ್ಯವಿವೆ.
ಸಾಮರ್ಥ್ಯವೇನು?
ತೇಜಸ್ ಎಕ್ಸ್​ಪ್ರೆಸ್​ನಲ್ಲಿ 56 ಸೀಟುಗಳ ಒಂದು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಹಾಗೂ ತಲಾ 78 ಸೀಟು ಸಾಮರ್ಥ್ಯವುಳ್ಳ 12 ಎಸಿ ಬೋಗಿಗಳಿವೆ. ಎಕ್ಸಿಕ್ಯೂಟಿವ್ ಕ್ಲಾಸ್​ಗೆ ಆಹಾರ ಸಹಿತ 2,680 ರೂ. ಹಾಗೂ ಆಹಾರರಹಿತ 2,525 ರೂ. ದರ ನಿಗದಿಪಡಿಸಲಾಗಿದೆ. ಎಸಿ ಬೋಗಿಗೆ ಆಹಾರ ಸಮೇತ 1,280 ರೂ. ಹಾಗೂ ಆಹಾರರಹಿತ ಟಿಕೆಟ್​ಗೆ 1,155 ರೂ. ದರ ನಿಗದಿಯಾಗಿದೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ಆಹಾರ ನಿರಾಕರಿಸಿದವರೂ ನಂತರ, ರೈಲಿನಲ್ಲಿ 50 ರೂ. ಪಾವತಿಸಿ ಆಹಾರ ಸೇವೆ ಪಡೆಯಬಹುದಾಗಿದೆ.

ಪ್ರಚಲಿತ ವಿದ್ಯಮಾನ : 23 ಮೇ 2017 : ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ಪರ ಮೋದಿ ಬ್ಯಾಟಿಂಗ್

ಅಹಮದಾಬಾದ್: ಏಷ್ಯಾದಲ್ಲಿ ಚೀನಾದ ಪ್ರಭುತ್ವಕ್ಕೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ಸಂಬಂಧ ಬೆಸೆಯಲು ‘ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್’ ಯೋಜನೆಯನ್ನು ಅನುಷ್ಠಾನಗೊಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್​ನ 52ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ‘ಒನ್ ಬೆಲ್ಟ್, ಒನ್ ರೋಡ್’ ಆರ್ಥಿಕ ಕಾರಿಡಾರ್ ರೂಪಿಸಲು ಚೀನಾ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ನಾನು ಜಪಾನ್​ಗೆ ತೆರಳಿದ್ದ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಶೀಂಜೋ ಅಬೆ ಅವರೊಂದಿಗೆ ಏಷ್ಯಾ ಮತ್ತು ಆಫ್ರಿಕಾ ನಡುವೆ ಅಭಿವೃದ್ಧಿ ಕಾರಿಡಾರ್ ರೂಪಿಸುವ ಮಹತ್ವದ ಕುರಿತು ಚರ್ಚೆ ನಡೆಸಿದ್ದೆ. ಭಾರತ ಮತ್ತು ಜಪಾನ್ ಸಂಶೋಧನಾ ಸಂಸ್ಥೆಗಳು ಈಗಾಗಲೇ ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ರೂಪಿಸುವ ಸಂಬಂಧ ವರದಿ ಸಿದ್ದಪಡಿಸಿದ್ದು, ಶೀಘ್ರ ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಪ್ರಾರಂಭಿಸಲಾಗುವುದು. ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ರಾಷ್ಟ್ರಗಳು ಕೌಶಲ್ಯ ವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ, ಉತ್ಪಾದನೆ ಮತ್ತು ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಆಫ್ರಿಕಾ ರಾಷ್ಟ್ರಗಳಿಗೆ ನೆರವು ನೀಡಲಿದೆ ಎಂದು ಮೋದಿ ತಿಳಿಸಿದರು.

ಕಳೆದ 20 ವರ್ಷಗಳಲ್ಲಿ ಆಫ್ರಿಕಾ ರಾಷ್ಟ್ರಗಳಲ್ಲಿ ಭಾರತ ಸುಮಾರು 54 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. 2014ರಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಫ್ರಿಕಾ ದೇಶಗಳೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಆರ್ಥಿಕ ಸಂಬಂಧವನ್ನು ವೃದ್ಧಿಗೊಳಿಸಲು ಒತ್ತು ನೀಡಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.

Tuesday, May 16, 2017

ಪ್ರಚಲಿತ ವಿದ್ಯಮಾನ : 16 ಮೇ 2017 : ಪ್ಯಾಲೆಸ್ಟೀನ್‌ ಅಧ್ಯಕ್ಷರ ಜತೆ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ

ಈ ಮಾತುಕತೆಯು ಪರಸ್ಪರ ಸ್ನೇಹತ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಒಕ್ಕೂಟದ ಪ್ರತೀಕವಾಗಿರಲಿದೆ. ನರೇಂದ್ರ ಮೋದಿಯವರು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ರನ್ನು ನವದೆಹಲಿಯಲ್ಲಿರುವ ಹೈದರಾಬಾದ್‌ ಹೊಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ.

ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಸಂಬಂಧ, ಪ್ರಾದೇಶಿಕ ವಿಚಾರ ಮತ್ತು ಅಂತರರಾಷ್ಟ್ರೀಯ ಶಾಂತಿ ಕುರಿತು ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ ಮಾತುಕತೆ ನಡೆಸಿದ್ದಾರೆ.

ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವುದು ಮಾತುಕತೆಯ ಪ್ರಮುಖ ಉದ್ದೇಶವಾಗಿತ್ತು ಎನ್ನಲಾಗಿದೆ.

‘ಈ ಮಾತುಕತೆಯು ಪರಸ್ಪರ ಸ್ನೇಹದ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಒಕ್ಕೂಟದ ಪ್ರತೀಕವಾಗಿರಲಿದೆ. ನರೇಂದ್ರ ಮೋದಿಯವರು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ರನ್ನು ನವದೆಹಲಿಯಲ್ಲಿರುವ ಹೈದರಾಬಾದ್‌ ಹೊಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಗೋಪಾಲ್‌ ಬಗ್ಲೇ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅಬ್ಬಾಸ್‌ ಅವರನ್ನು ಉದ್ದೇಶಿಸಿ, ‘ಪ್ಯಾಲೆಸ್ಟೀನ್‌ ವಿಚಾರಗಳಲ್ಲಿ ಭಾರತದ ಸಹಕಾರ ಯಾವಾಗಲು ಇರಲಿದೆ’ ಎಂದು ಹೇಳಿದ್ದರು.

ನಾಲ್ಕುದಿನದ ಭಾರತ ಭೇಟಿಗಾಗಿ ಭಾನುವಾರವೇ ಭಾರತಕ್ಕೆ ಆಗಮಿಸಿರುವ ಅಬ್ಬಾಸ್‌ರನ್ನು ಮಂಗಳವಾರ ಬೆಳಿಗ್ಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹಾಗೂ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದರು.

ಜುಲೈನಲ್ಲಿ ಮೋದಿ ಅವರು ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ಅಬ್ಬಾಸ್‌ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ಭಾರತ ತನ್ನ ರಾಜಕೀಯ ಬೆಂಬಲ ಸದಾ ಪ್ಯಾಲೆಸ್ಟೀನ್‌ ಗೆ ಇರಲಿದೆ ಎಂದು ಹೇಳಿದೆ.

ಪ್ರಚಲಿತ ವಿದ್ಯಮಾನ : 16 ಮೇ 2017 : ಬ್ರಿಟನ್​ನ ಸಿರಿವಂತರ ಪಟ್ಟಿಯಲ್ಲಿ ಭಾರತೀಯರದ್ದೇ ಪ್ರಾಬಲ್ಯ!

ಲಂಡನ್: ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದಿದ್ದರೂ ಸಹ ಬ್ರಿಟನ್​ನಲ್ಲಿ ಶ್ರೀಮಂತರ ಸಂಪತ್ತು ಮತ್ತಷ್ಟು ಹೆಚ್ಚುತ್ತಿದೆ. 2017ನೇ ಸಾಲಿನ ಬ್ರಿಟನ್​ನ ಸಿರಿವಂತರ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ಮೂಲದ ಉದ್ಯಮಿಗಳಾದ ಸಿರಿಚಂದ್ ಮತ್ತು ಗೋಪಿಚಂದ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಸಂಡೆ ಟೈಮ್್ಸ ಪತ್ರಿಕೆ 1000 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಸಂಜಾತ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಪಟ್ಟಿಯಲ್ಲಿ 134 ಬಿಲೇನಿಯರ್​ಗಳಿದ್ದು, 16.2 ಬಿಲಿಯನ್ ಪೌಂಡ್ ಸಂಪತ್ತು ಹೊಂದಿರುವ ಹಿಂದೂಜಾ ಗ್ರೂಪ್​ನ ಸಿರಿಚಂದ್ ಮತ್ತು ಗೋಪಿಚಂದ್ ಅಗ್ರ ಸ್ಥಾನ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಉಕ್ರೇನ್ ಮೂಲದ ಉದ್ಯಮಿ ಲೆನ್ ಬ್ಲಾವತಿಂಕ್ ಇದ್ದರೆ, ಮುಂಬೈನಲ್ಲಿ ಜನಿಸಿದ ಡೇವಿಡ್ ಮತ್ತು ಸೀಮನ್ 14 ಬಿಲಿಯನ್ ಸಂಪತ್ತಿನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 13.2 ಬಿಲಿಯನ್ ಪೌಂಡ್ ಸಂಪತ್ತು ಹೊಂದಿರುವ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಕುಟುಂಬ 4ನೇ ಸ್ಥಾನ ಪಡೆದಿದೆ. ಮಿತ್ತಲ್ ಕುಟುಂಬ ಕಳೆದ ಒಂದು ವರ್ಷದಲ್ಲಿ 6.1 ಬಿಲಿನ್ ಪೌಂಡ್ ಸಂಪತ್ತನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ಲಕ್ಷ್ಮೀ ಮಿತ್ತಲ್ 66ನೇ ಸ್ಥಾನ ಪಡೆದಿದ್ದಾರೆ. ಅಗ್ರ 4 ಸ್ಥಾನಗಳಲ್ಲಿ ಬ್ರಿಟನ್​ನ ಓರ್ವ ಉದ್ಯಮಿ ಸಹ ಸ್ಥಾನ ಪಡೆದಿಲ್ಲ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.



ಬ್ರಿಟನ್ ಯೂರೋಪಿನ್ ಒಕ್ಕೂಟದಿಂದ ಹೊರಬಂದಿದ್ದರೂ ಸಹ ದೇಶದ ಶ್ರೀಮಂತರ ಗಳಿಕೆಗೆ ಯಾವುದೇ ಧಕ್ಕೆಯಾಗಿಲ್ಲ. ಕಳೆದ ವರ್ಷ ದೇಶದ ಅಗ್ರ 1000 ಸಿರಿವಂತರ ಒಟ್ಟು ಸಂಪತ್ತಿನ ಮೌಲ್ಯ ಸುಮಾರು 575 ಬಿಲಿಯನ್ ಪೌಂಡ್ ಇದ್ದರೆ, ಈ ವರ್ಷ ಅಗ್ರ 1000 ಶ್ರೀಮಂತರ ಒಟ್ಟು ಸಂಪತ್ತಿನ ಮೌಲ್ಯ ಶೇ. 14 ರಷ್ಟು ಏರಿಕೆಯಾಗಿ 658 ಬಿಲಿಯನ್ ಪೌಂಡ್ಸ್​ಗೆ ತಲುಪಿದೆ ಎಂದು ಪತ್ರಿಕೆ ತಿಳಿಸಿದೆ.

Monday, May 15, 2017

ಪ್ರಚಲಿತ ವಿದ್ಯಮಾನ : 16 ಮೇ 2017 : ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್: ಭಾರತಕ್ಕೆ 3 ಬೆಳ್ಳಿ, 1 ಕಂಚು

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನ ಮಹಿಳೆಯರ ವಿಭಾಗದಲ್ಲಿ ಶುಕ್ರವಾರ ಭಾರತದ ಸಾಕ್ಷಿ ಮಲಿಕ್, ವಿನೇಶ್ ಪೋಗತ್ ಮತ್ತು ದಿವ್ಯಾ ಕಕ್ರನ್ ಬೆಳ್ಳಿ ಪದಕ ಜಯಿಸಿದರೆ, ರೀತು ಪೋಗತ್ ಕಂಚಿನ ಪದಕ ಜಯಿಸಿದ್ದಾರೆ.

ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು 60 ಕೆ.ಜಿ. ವಿಭಾಗದ ಫೈನಲ್​ನಲ್ಲಿ ಜಪಾನ್​ನ ರಿಸಾಕೋ ಕವಾಯಿ ಅವರ ವಿರುದ್ಧ 0-10 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ರಿಯೋ ಒಲಿಂಪಿಕ್ಸ್​ನಲ್ಲಿ ಕಾಲಿಗಾಗಿದ್ದ ಗಾಯದಿಂದ ಚೇತರಿಸಿಕೊಂಡು ಮತ್ತೆ ಕುಸ್ತಿ ಅಖಾಡಕ್ಕಿಳಿದಿರುವ ವಿನೇಶ್ ಪೋಗತ್ ಅವರು 55 ಕೆ.ಜಿ. ವಿಭಾಗದ ಫೈನಲ್​ನಲ್ಲಿ ಜಪಾನ್​ನ ಸೇ ನಂಜೋ ಅವರ ವಿರುದ್ಧ 4-8 ಅಂಕಗಳ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.

69 ಕೆ.ಜಿ. ವಿಭಾಗದಲ್ಲಿ ಭಾರತದ ದಿವ್ಯ ಕಕ್ರನ್ ಅವರು ಜಪಾನ್​ನ ಸಾರಾ ದೋಶೋ ಅವರ ವಿರುದ್ಧ 0-8 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ರೀತು ಪೋಗತ್ 48 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಯಾವುದೇ ಸ್ಪರ್ಧೆಯಲ್ಲಿದೆ ಕಂಚಿನ ಪದಕ ಜಯಿಸಿದರು. ರೀತು ಪೋಗತ್ ಎದುರಾಳಿ ಚೀನಾ ಸುನ್ ಯನಾನ್ ಅವರು ಗಾಯಗೊಂಡು ನಿವೃತ್ತಿ ಘೊಷಿಸಿದ್ದರಿಂದ ರೀತುಗೆ ಕಂಚಿನ ಪದಕ ಒಲಿಯಿತು.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...