ನವದೆಹಲಿ: ಐತಿಹಾಸಿಕ ತಿರುಪತಿ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡುಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಿಂದ ವಿನಾಯಿತಿ ನೀಡಲು ಜಿಎಸ್ಟಿ ಕೌನ್ಸಿಲ್ ಸಮ್ಮತಿಸಿದೆ. ತಿರುಪತಿಗೆ ಭಕ್ತರು ಸಮರ್ಪಿಸುವ ತಲೆಕೂದಲನ್ನು ಮಾರಾಟ ಮಾಡಲು ಹಾಗೂ 1,000 ರೂಪಾಯಿಗಿಂತ ಕಡಿಮೆ ಬಾಡಿಗೆ ಹೊಂದಿರುವ ಸ್ಥಳೀಯ ಅತಿಥಿ ಗೃಹಗಳಿಗೂ ತೆರಿಗೆಯಿಂದ ವಿನಾಯಿತಿ ನೀಡಲು ಅನುಮತಿ ನೀಡಲಾಗಿದೆ.
ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಡಳಿತ ಮಂಡಳಿ ಲಡ್ಡು, ದೇವಾಲಯದಲ್ಲಿ ಪೂಜೆಗೆ ಬಳಕೆ ಮಾಡುವ ವಸ್ತುಗಳು, ಅತಿಥಿ ಗೃಹ, ಹರಕೆ ಕೂದಲು ಸಹಿತ ಇತರ ಆದಾಯ ಮೂಲಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರದಂತೆ ಕೇಳಿಕೊಂಡಿದ್ದರು. ಈ ಮನವಿಯನ್ನು ಆಂಧ್ರಪ್ರದೇಶ ಹಣಕಾಸು ಸಚಿವ ಯಾನಮಾಲಾ ರಾಧಾಕೃಷ್ಣುಡು ಜಿಎಸ್ಟಿ ಕೌನ್ಸಿಲ್ ಮುಂದೆ ಇರಿಸಿದ್ದರು. ಒಂದೊಮ್ಮೆ ತಿರುಪತಿ ದೇವಾಲಯಕ್ಕೆ ಈ ವಿನಾಯಿತಿ ನೀಡಿದಲ್ಲಿ ಇತರ ದೇವಾಲಯಗಳು ಇದೇ ರೀತಿ ಪ್ರಸ್ತಾಪನೆ ಸಲ್ಲಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಿಂದೇಟು ಹಾಕಿದ್ದರು. ಆದರೆ ಜೂನ್ 17ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತಿರುಪತಿ ಲಡ್ಡು ಸಹಿತ ಇತರ ಉತ್ಪನ್ನಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. -ಏಜೆನ್ಸೀಸ್
ಲಡ್ಡು ತಯಾರಿಕೆಗೆ -ರೂ; 160 ಕೋಟಿ
ತಿರುಪತಿಯಲ್ಲಿ ಪ್ರತಿ ವರ್ಷ ಲಡ್ಡು ತಯಾರಿಕೆಗೆ ಆಡಳಿತ ಮಂಡಳಿ 160 ಕೋಟಿ ರೂ. ವ್ಯಯಿಸುತ್ತಿದೆ. ದರುಶನಕ್ಕೆ 300 ರೂ. ಟಿಕೆಟ್ ಕಾಯ್ದಿರಿಸಿದ ಪ್ರತಿ ಭಕ್ತರಿಗೆ ಎರಡು ಲಾಡು ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚಿನ ಲಡ್ಡು ಬೇಕಾದಲ್ಲಿ 25 ರೂ. ನೀಡಿ ಇನ್ನೆರಡು ಲಡ್ಡು ಖರೀದಿಸಬಹುದಾಗಿದೆ. ಇದಕ್ಕಿಂತ ಹೆಚ್ಚು ಲಡ್ಡು ಪಡೆದುಕೊಳ್ಳಲು ಅವಕಾಶವಿಲ್ಲ. 2009ರಲ್ಲಿ ಈ ಲಡ್ಡುವಿಗೆ ಪೇಟೆಂಟನ್ನೂ ನೀಡಲಾಗಿದೆ. 2016-17ರ ಆರ್ಥಿಕ ವರ್ಷದಲ್ಲಿ 10.46 ಕೋಟಿ ಲಡ್ಡುಗಳು ಮಾರಾಟವಾಗಿವೆ. ಲಡ್ಡು ಮಾರಾಟದಿಂದ ವಾರ್ಷಿಕವಾಗಿ 160 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೊಂಡಿತ್ತು.
No comments:
Post a Comment