Wednesday, June 7, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಉನ್ನತ ಶಿಕ್ಷಣಕ್ಕೆ ಹೀರಾ

Higher Education EmpowermentRegulation Agency (HEERA))

ನವದೆಹಲಿ: ಯೋಜನಾ ಆಯೋಗ ರದ್ದು ಮಾಡಿ ನೀತಿ ಆಯೋಗ ರಚಿಸಿದ ಮತ್ತು ಇತ್ತೀಚೆಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಶೈಕ್ಷಣಿಕ ವಲಯದಲ್ಲೂ ಭಾರಿ ಬದಲಾವಣೆಯ ಸುಳಿವನ್ನು ನೀಡಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ)ಗಳನ್ನು ರದ್ದುಗೊಳಿಸಿ ಆ ಎರಡೂ ಸಂಸ್ಥೆಗಳ ಸ್ಥಾನವನ್ನು ತುಂಬಬಲ್ಲ ಒಂದೇ ಉನ್ನತ ಶಿಕ್ಷಣ ನಿಯಂತ್ರಣ ಸಂಸ್ಥೆಯನ್ನು ರಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಸಂಸ್ಥೆ (Higher Education EmpowermentRegulation Agency (HEERA))ಎಂಬ ಹೆಸರನ್ನು ತಾತ್ಕಾಲಿಕವಾಗಿ ನೀಡಲಾಗಿದೆ.
ಮಹತ್ವದ ನಿರ್ಧಾರ:  ಶೈಕ್ಷಣಿಕ ಕ್ಷೇತ್ರದ ಮಟ್ಟಿಗೆ ಇದು ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಶಿಕ್ಷಣ ತಜ್ಞರ ಬಹುಕಾಲದ ಶಿಫಾರಸು ಇದಾಗಿದ್ದು, ನನೆಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ ಆರಂಭದಲ್ಲಿ ನಡೆದ ಶಿಕ್ಷಣಕ್ಕೆ ಸಂಬಂಧಿಸಿದ ಸಭೆಯಲ್ಲಿ ತಜ್ಞರ ಈ ಶಿಫಾರಸನ್ನು ಚರ್ಚೆಗೆತ್ತಿ ಕೊಂಡರಲ್ಲದೆ, ಅನುಷ್ಠಾನದ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಯಾಕೆ ಒಂದೇ ಸಂಸ್ಥೆ ಬೇಕು?
ಹಲವು ನಿಯಂತ್ರಣ ಸಂಸ್ಥೆಗಳಿದ್ದಾಗ ಒಂದರ ಕಾರ್ಯವ್ಯಾಪ್ತಿ ಇನ್ನೊಂದರ ಕಾರ್ಯವ್ಯಾಪ್ತಿಯೊಂದಿಗೆ ಸೇರಿರಬಹುದು. ಇದು ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವುದಲ್ಲದೆ, ಶಿಕ್ಷಣದ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವಂಥದ್ದು.
ನಿಯಂತ್ರಣ ಸಂಸ್ಥೆಗಳು ಹೆಚ್ಚಾದಷ್ಟೂ ಹಾಗೂ ನಿಯಮಗಳು ಕಠಿಣವಾದಷ್ಟೂ ಸಾಂಸ್ಥಿಕ ಸ್ವಾಯತ್ತೆ ಕಡಿಮೆಯಾಗುತ್ತದೆ.
ನಿಯಂತ್ರಣ ಮತ್ತು ಅನುದಾನದ ವಿಚಾರಕ್ಕೆ ಬಂದರೆ ನಿಧಿ ಹಂಚಿಕೆ ಮತ್ತು ಆಯಾ ಸಂಸ್ಥೆಗಳ ಪಾತ್ರ ಸಮನ್ವಯಕ್ಕಿಂತಲೂ ಒಂದಕ್ಕೊಂದು ಸಂಘರ್ಷ ಉಂಟುಮಾಡುವಂತಿರುತ್ತದೆ.
ಹೀರಾ ನೀಲಿನಕ್ಷೆ:ಹೀರಾ ಕುರಿತ ಕರಡು ಕಾನೂನು ರಚನೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾ ಲಯ ಮತ್ತು ನೀತಿ ಆಯೋಗ ಈ ವಿಷಯದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್, ಉನ್ನತ ಶಿಕ್ಷಣ ಕಾರ್ಯದರ್ಶಿ ಕೆ.ಕೆ.ಶರ್ವ ಅವರನ್ನೊಳಗೊಂಡ ಸಮಿತಿಯನ್ನೂ ರಚಿಸಲಾಗಿದೆ.
ಹೇಗಿರಲಿದೆ ಹೊಸ ಸಂಸ್ಥೆ:ಹೀರಾ ರಚನೆಯಾದರೆ ಯುಜಿಸಿ, ಎಐಸಿಟಿಇ ಕಾಲದ ಇನ್​ಸ್ಪೆಕ್ಟರ್ ರಾಜ್​ಗೆ ಕಡಿವಾಣ ಬೀಳಲಿದೆ. ಶೋಷಣೆಯೂ ಕಡಿಮೆಯಾಗಲಿದೆ. ಹೊಸ ನಿಯಂತ್ರಣ ಶಾಸನವೂ ಸರಳವಾಗಿದ್ದು, ಕನಿಷ್ಠ ಮಾನದಂಡಗಳೊಂದಿಗೆ ಗರಿಷ್ಠ ಗುಣಮಟ್ಟದ ಫಲಿತಾಂಶ ಹೊರ ಹೊಮ್ಮಿಸುವಂಥದ್ದಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಯಾವಕಾಶ ಬೇಕು: ಎಐಸಿಟಿಇ ಹಾಗೂ ಯುಜಿಸಿ ಕಾಯ್ದೆಗಳನ್ನು ಹಿಂಪಡೆದು ಹೊಸ ಕಾನೂನು ಜಾರಿಗೊಳಿಸುವುದಕ್ಕೆ ಸಾಕಷ್ಟು ಸಮಯಾವಕಾಶ ಬೇಕು. ಮಧ್ಯಂತರ ಕ್ರಮವಾಗಿ ಹಳೆಯ ಕಾನೂನುಗಳಿಗೆ ತಿದ್ದುಪಡಿ ತಂದು ಒಂದಷ್ಟು ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಬಹುದು.

ಹೊಸ ಚಿಂತನೆ ಅಲ್ಲ : ಬಹು ಸಂಖ್ಯೆಯ ನಿಯಂತ್ರಣ ಸಂಸ್ಥೆಗಳ ಬದಲು ಒಂದೇ ನಿಯಂತ್ರಣ ಸಂಸ್ಥೆ ಇರಬೇಕೆಂಬ ಚಿಂತನೆ ಇದೇ ಹೊಸದಲ್ಲ. ಯಶ್​ಪಾಲ್ ಸಮಿತಿ, ರಾಷ್ಟ್ರೀಯ ಜ್ಞಾನ ಆಯೋಗಗಳು ಇಂಥದ್ದೇ ಶಿಫಾರಸನ್ನು ಯುಪಿಎ ಸರ್ಕಾರಕ್ಕೆ ನೀಡಿದ್ದವು. ಹರಿ ಗೌತಮ್ ಸಮಿತಿಯೂ ಇದೇ ಶಿಫಾರಸನ್ನು ಮಾಡಿತ್ತು. ಆದರೆ ಅವ್ಯಾವುದೂ ಅನುಷ್ಠಾನಕ್ಕೆ ಬರಲಿಲ್ಲ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...