ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ, ಅಮೆರಿಕದೊಂದಿಗಿನ 16 ಬಹೂಪಯೋಗಿ ಹೆಲಿಕಾಪ್ಟರ್ ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಿದೆ. ಹೆಲಿಕಾಪ್ಟರ್ ದರಕ್ಕೆ ಸಂಬಂಧಿಸಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ರಕ್ಷಣಾ ಸಚಿವಾಲಯ ಈ ನಿರ್ಧಾರ ಪ್ರಕಟಿಸಿರುವುದು ಕುತೂಹಲ ಕೆರಳಿಸಿದೆ.
ಒಪ್ಪಂದದ ಹಿನ್ನೆಲೆ: ಅಮೆರಿಕದ ವಿಮಾನ ಉತ್ಪಾದಕ ಕಂಪನಿ ಸಿಕೋರ್ಸ್ಕಿ ಏರ್ಕ್ರಾಫ್ಟ್ ನಿಂದ ಭಾರತದ ನೌಕಾಪಡೆಗೆ ಹೆಲಿಕಾಪ್ಟರ್ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿತ್ತು. ನೌಕಾಪಡೆಯ ಬೇಡಿಕೆಯಂತೆ 16 ಬಹೂಪಯೋಗಿ ಹೆಲಿಕಾಪ್ಟರ್ಗಳನ್ನು ಯುದ್ಧ ನೌಕೆಗೆ ಸೇರ್ಪಡೆಗೊಳಿಸುವುದಕ್ಕಾಗಿ ರಕ್ಷಣಾ ಇಲಾಖೆ ಈ ಕುರಿತು ಸಿಕೋರ್ಸ್ಕಿ ಕಂಪನಿ ಜತೆಗೆ 2009ರಲ್ಲೆ ಮಾತುಕತೆ ಆರಂಭಿಸಿತ್ತು. ಆದರೆ, ಹೆಲಿಕಾಪ್ಟರ್ ದರಕ್ಕೆ ಸಂಬಂಧಿಸಿ ಹೊಂದಾಣಿಕೆ ಬಾರದ ಕಾರಣ 2015ರಲ್ಲಿ ಇದು ನನೆಗುದಿಗೆ ಬಿದ್ದಿತ್ತು. ಅಷ್ಟರಲ್ಲಾಗಲೇ ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರ ಹೋಗಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಂಡಿತ್ತು. ಪ್ರಧಾನಿ ಮೋದಿಯವರೂ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡತೊಡಗಿದ್ದರಿಂದಾಗಿ ರಕ್ಷಣಾ ಸಚಿವಾಲಯ ಸಿಕೋರ್ಸ್ಕಿ ಜತೆಗಿನ ಮಾತುಕತೆ ಮುರಿಯಲು ತೀರ್ವನಿಸಿತು. ಇದು 6,500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವಾಗಿತ್ತು. -ಏಜೆನ್ಸೀಸ್
26ಕ್ಕೆ ಮೋದಿ ಅಮೆರಿಕ ಭೇಟಿ
ಪ್ರಧಾನಿ ಮೋದಿ ಜೂನ್ 26ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಟ್ರಂಪ್ ಅಧ್ಯಕ್ಷರಾದ ನಂತರ ಇದು ಮೋದಿ ಅವರ ಪ್ರಥಮ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮಾತುಕತೆ ನಡೆಯಲಿದೆ. ವೀಸಾ ನೀತಿ ತಿದ್ದುಪಡಿಗೆ ಸಂಬಂಧಿಸಿದಂತೆ ಕೂಡ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಸ್ವದೇಶಿ ಯುದ್ಧೋಪಕರಣಕ್ಕೆ ಆದ್ಯತೆ
ಭಾರತದ ವಾಯುಪಡೆ ಸ್ವದೇಶಿ ಉಪಕರಣಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ. ಅಮೆರಿಕದ ಎಫ್-16 ಹಾಗೂ ಸ್ವೀಡನ್ನ ಫೈಟರ್ ಏರ್ಕ್ರಾಫ್ಟ್ಗಳ ಪ್ರಾಯೋಗಿಕ ಹಾರಾಟ ಪರೀಕ್ಷಿಸಲಿದೆ. ನಂತರ ಇವುಗಳಲ್ಲಿ ಒಂದು ಏರ್ಕ್ರಾಫ್ಟನ್ನು ಆಯ್ಕೆ ಮಾಡಿ 120 ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಈ ಯೋಜನೆಗೆ 1.3 ಲಕ್ಷ ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.
ಮೇಕ್ ಇನ್ ಇಂಡಿಯಾ ಮೂಲಕ 140 ಕಾಪ್ಟರ್!
ರಕ್ಷಣಾ ಸಚಿವಾಲಯ ಇದೀಗ ರದ್ದುಗೊಳಿಸಿರುವ ಒಪ್ಪಂದ ಪ್ರಕಾರ ಖರೀದಿಸಬೇಕಾಗಿದ್ದ 16 ಹೆಲಿಕಾಪ್ಟರ್ಗಳ ಬದಲು ಮೇಕ್ ಇನ್ ಇಂಡಿಯಾ ಯೋಜನೆ ಪ್ರಕಾರವೇ ಭಾರತದಲ್ಲೇ ನೌಕಾಪಡೆಯ 140 ಬಹೂಪಯೋಗಿ ಕಾಪ್ಟರ್ ನಿರ್ವಣಕ್ಕೆ ಯೋಜನೆ ಸಿದ್ಧವಾಗಿದೆ. ಅಮೆರಿಕನ್ ಕಂಪನಿ ಇದಕ್ಕೆ ನೆರವನ್ನೂ ನೀಡಲಿದೆ. ರಕ್ಷಣಾ ಇಲಾಖೆ ಈಗಾಗಲೇ ಸೇನಾ ವಿಭಾಗದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಉಪಕರಣಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ಭವಿಷ್ಯದಲ್ಲಿ ವಿದೇಶಿ ಉಪಕರಣ ಗಳ ಮೇಲೆ ಅವಲಂಬನೆ ಕಡಿಮೆಗೊಳಿಸಲು ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
No comments:
Post a Comment