ನವದೆಹಲಿ: ಉತ್ತರ ಪ್ರದೇಶದ ಜನಜಂಗುಳಿ ರೈಲ್ವೆ ನಿಲ್ದಾಣಗಳಲ್ಲೊಂದಾದ ಮುಘಲ್ಸರಾಯ್ ನಿಲ್ದಾಣಕ್ಕೆ ಜನಸಂಘದ ನೇತಾರ ದೀನ್ದಯಾಳ ಉಪಾಧ್ಯಾಯರ ಹೆಸರಿಡಲು ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಸಚಿವ ಸಂಪುಟ ನಿರ್ಧರಿಸಿದೆ. ಇದರ ಜತೆಗೆ ಉಪಾಧ್ಯಾಯ ಹೆಸರಿನಲ್ಲಿ ಲೋಗೊ ಸಿದ್ಧಪಡಿಸಲಾಗುತ್ತಿದ್ದು, ಇದು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಚಿವರ ಲೆಟರ್ಹೆಡ್ನಲ್ಲಿ ಬಳಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ವರ್ಷ ದೀನದಯಾಳರ ಜನ್ಮಶತಾಬ್ದಿ ವರ್ಷಾಚರಣೆ ನಡೆಯುತ್ತಿರುವ ಹಿನ್ನೆಲೆ ಮುಘಲ್ಸರಾಯ್ ರೈಲ್ವೆ ನಿಲ್ದಾಣದ ಹೆಸರು ಬದಲಿಸುವುದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಶೀಘ್ರದಲ್ಲೇ ಪ್ರಸ್ತಾವ ಕಳುಹಿಸಲಾಗುವುದು ಎಂದು ಸಚಿವ ಸಿದ್ಧಾರ್ಥನಾಥ್ ಸಿಂಗ್ ತಿಳಿಸಿದ್ದಾರೆ. ಏಪ್ರಿಲ್ನಲ್ಲಿ ಆಗ್ರಾ ವಿಮಾನ ನಿಲ್ದಾಣಕ್ಕೆ ಉಪಾಧ್ಯಾಯ ಅವರ ಹೆಸರಿಡಲು ಆದಿತ್ಯನಾಥ ಸರ್ಕಾರ ತೀರ್ವನಿಸಿತ್ತು.
ಉಪಾಧ್ಯಾಯ ಅವರ ಜನ್ಮಸ್ಥಳವಾದ ಮಥುರಾದ ನಾಗ್ಲಾ ಚಂದ್ರಬನ್ ಅನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಇಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಉದ್ದೇಶಿಸಿದೆ. ಇದರ ಜತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 3 ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವವನ್ನು ಸ್ಮರಣೀಯವಾಗಿಸುವ ಯೋಜನೆ ಹಾಕಿಕೊಂಡಿದೆ.
ಮುಘಲ್ಸರಾಯ್ನಲ್ಲಿ ದೀನದಯಾಳರ ಶವ ದೊರೆತಿತ್ತು:
1968ರ ಫೆ. 11ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದೀನ್ದಯಾಳ ಉಪಾಧ್ಯಾಯರು, ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರ ಶವವು ಮುಘಲ್ಸರಾಯ್ಯಲ್ಲಿ ದೊರೆತಿದ್ದ ಕಾರಣದಿಂದಲೂ ಅವರ ಹೆಸರನ್ನು ಮುಘಲ್ಸರಾಯ್ ನಿಲ್ದಾಣಕ್ಕೆ ಇರಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.
-ಏಜೆನ್ಸೀಸ್
No comments:
Post a Comment