Showing posts with label June GK. Show all posts
Showing posts with label June GK. Show all posts

Tuesday, June 20, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ರಾಮ್​ ನಾಥ್ ಕೋವಿಂದ್ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ಬಿಹಾರ ರಾಜ್ಯಪಾಲರಾದ ರಾಮ್​ ನಾಥ್​ ಕೋವಿಂದ್​ ಅವರನ್ನು ಆಯ್ಕೆ ಮಾಡಲಾಗಿದೆ.

ಸೋಮವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಅಭ್ಯರ್ಥಿಯಾಗಿ ರಾಮ್​ ನಾಥ್​ ಕೋವಿಂದ್​ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದ್ಯಕ್ಕೆ ರಾಷ್ಟ್ರಪತಿ ಅಭ್ಯರ್ಥಿ ಮಾತ್ರ ಆಯ್ಕೆ ಮಾಡಲಾಗಿದ್ದು, ಉಪರಾಷ್ಟ್ರಪತಿ ಅಭ್ಯರ್ಥಿ ಚರ್ಚೆ ಇನ್ನೂ ನಡೆದಿಲ್ಲವೆಂದು ಅಮಿತ್​ ಷಾ ಹೇಳಿದ್ದಾರೆ.

Congratulations to Shri Ramnath Kovind ji on being announced as the Presidential candidate of NDA (National Democratic Alliance).

— Amit Shah (@AmitShah) June 19, 2017

ಸೋಮವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ್​ ಸಿಂಗ್​, ಎಂ. ವೆಂಕಯ್ಯ ನಾಯ್ಡು, ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​, ನಿತಿನ್​ ಗಡ್ಕರಿ, ಅನಂತ್​ ಕುಮಾರ್​ ಪಾಲ್ಗೊಂಡಿದ್ದರು.

ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದ ರಾಮನಾಥ್‌ ಕೋವಿಂದ (1994-2000 ಮತ್ತು 2000-2006)
ಬಿಜೆಪಿ ದಲಿತ ಮೋರ್ಚಾದ ಮಾಜಿ ಅಧ್ಯಕ್ಷ (1998 – 2002)
ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರ
ಅಖಿಲ ಭಾರತ ಕೋಲಿ ಸಮಾಜದ ಮಾಜಿ ಅಧ್ಯಕ್ಷ
ಪ್ರಸ್ತುತ ಬಿಹಾರದ ರಾಜ್ಯಪಾಲರಾಗಿರುವ ಕೋವಿಂದ
ಉತ್ತರ ಪ್ರದೇಶದ ಕಾನ್ಪುರ ದೆಹತ್​ ಜಿಲ್ಲೆಯ ದೇರಾಪುರ ತಾಲೂಕಿನ ಪರೌಂಖ್​ ಗ್ರಾಮದಲ್ಲಿ 1945 ಅಕ್ಟೋಬರ್​ 1 ರಂದು ಜನನ

ಬಿಜೆಪಿ ಹಿರಿಯ ನಾಯಕರಾದ ಎಲ್​.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ ರಾಮ್​ ನಾಥ್​ ಕೋವಿಂದ್​ ಅವರ ಆಯ್ಕೆಯ ಕುರಿತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾಹಿತಿ ನೀಡಿದ್ದರು.

ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್​ಎಸ್​ ಮುಖ್ಯಸ್ಥ ಕೆ. ಚಂದ್ರಶೇಖರ್​ ರಾವ್​ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್​ನಾಥ್​ ಕೋವಿಂದ್​ ಅವರಿಗೆ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

ರಾಮ್​ ನಾಥ್​ ಕೋವಿಂದ್​ ಅವರಿಗೆ ಬೆಂಬಲ ಪಡೆಯುವ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಂ ಇ ಪಳನಿಸ್ವಾಮಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಸಾವಿರ ಸಂಭ್ರಮ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವದ ಯೋಜನೆಗಳಲ್ಲಿ ಒಂದಾದ ಮಂಗಳಯಾನ ಉಪಗ್ರಹ ಸೋಮವಾರ 1,000 ದಿನಗಳನ್ನು ಬಾಹ್ಯಾಕಾಶದಲ್ಲಿ ಪೂರೈಸಿದೆ. ಮಂಗಳಯಾನ ಉಪಗ್ರಹದ ಜೀವಿತಾವಧಿ ಆರು ತಿಂಗಳಾಗಿದ್ದರೂ, ಅದಕ್ಕಿಂತ ಐದು ಪಟ್ಟು ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆಯುವ ಮೂಲಕ ವಿಶ್ವದ ಗಮನ ಸೆಳೆದಿದೆ. ಸೌರದಿನದ ಪ್ರಕಾರ ಬಾಹ್ಯಾ ಕಾಶದಲ್ಲಿ ಮಾಮ್ 973.24 ದಿನ ಕಳೆದ್ದು, 388 ಬಾರಿ ಕಕ್ಷೆಯನ್ನು ಪರಿಭ್ರಮಿಸಿದೆ ಎಂದು ಇಸ್ರೋ ಹೇಳಿದೆ.
2014ರ ಸೆ. 24ರಂದು ಮಾಮ್ ಉಪಗ್ರಹವನ್ನು ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಯ ಪರಿಧಿಗೆ ಸೇರ್ಪಡೆಗೊಳಿಸುವಲ್ಲಿ ಭಾರತ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾಗಿದೆ. -ಏಜೆನ್ಸೀಸ್

ಕಡಿಮೆ ವೆಚ್ಚ, ಹೆಚ್ಚು ಕೆಲಸ
ನಾಸಾ ಮತ್ತು ಯುರೋಪಿಯನ್ ಒಕ್ಕೂಟಗಳು ಉಪಗ್ರಹ ಯೋಜನೆಗೆ ಮಾಡುವ ವೆಚ್ಚದ ಮೂರನೇ ಒಂದರಷ್ಟು ವೆಚ್ಚದಲ್ಲಿ ಇಸ್ರೋ ಮಂಗಳಯಾನ ಕೈಗೊಂಡಿತ್ತು. 450 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಗಳಯಾನ ಉಪಗ್ರಹ ಈಗ ಸಾವಿರ ದಿನ ಪೂರೈಸಿರುವುದು ಮತ್ತೊಂದು ಸಾಧನೆಯಾಗಿದೆ. ಮಂಗಳನಲ್ಲಿನ ವಾತಾವರಣ, ಮೀಥೇನ್ ಪ್ರಮಾಣ, ಅಲ್ಲಿರಬಹುದಾದ ಜೀವಸೆಲೆಗಳು, ಮೇಲ್ಮೈ ಸಹಿತ ವಿವಿಧ ಉದ್ದೇಶಗಳ ಅಧ್ಯಯನಕ್ಕೆ ಇಸ್ರೋ ಮಂಗಳಯಾನ ಕೈಗೊಂಡಿದೆ.

ಅವಧಿ ವಿಸ್ತರಣೆ
2013 ನವೆಂಬರ್ 5ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಇಸ್ರೋ ಪಿಎಸ್​ಎಲ್​ವಿ ರಾಕೆಟ್ ಮೂಲಕ ಯಶಸ್ವಿಯಾಗಿ ಉಪಗ್ರಹ ಉಡಾಯಿಸಿತ್ತು. 2013ರ ಡಿಸೆಂಬರ್ 1ರಂದು ಭೂಮಿಯ ಗುರುತ್ವಶಕ್ತಿಯನ್ನು ದಾಟಿ ಬಾಹ್ಯಾಕಾಶವನ್ನು ಪ್ರವೇಶಿಸಿತ್ತು. ಮೊದಲಿಗೆ ಆರು ತಿಂಗಳು ಮಾತ್ರ ಉಪಗ್ರಹ ಕಾರ್ಯನಿರ್ವಹಿಸಲು ಶಕ್ತ ಎಂದು ಹೇಳಿದ್ದ ಇಸ್ರೋ, 2015ರ ಮಾರ್ಚ್ ನಲ್ಲಿ ಹೇಳಿಕೆ ನೀಡಿ, ಮಾಮ್ ಉಪಗ್ರಹ ಜೀವಿತಾವಧಿ ವಿಸ್ತರಿಸಲಾಗಿದೆ ಎಂದು ಹೇಳಿತ್ತು.

ಉಪಗ್ರಹದಲ್ಲಿ ಏನೇನಿದೆ?
ಮಂಗಳಯಾನದ ಉಪಗ್ರಹದಲ್ಲಿ ಐದು ಪ್ರಮುಖ ವೈಜ್ಞಾನಿಕ ಉಪಕರಣ ಗಳನ್ನು ಅಳವಡಿಸಲಾಗಿದೆ. ಲೈಮನ್ ಅಲ್ಪಾ ಫೋಟೋಮೀಟರ್ (ಲ್ಯಾಪ್), ಮೀಥೇನ್ ಸೆನ್ಸರ್ ಫಾರ್ ಮಾರ್ಸ್ (ಎಂಎಸ್​ಎಂ), ಮಾರ್ಸ್ ಎಕ್ಸೋಫೆರಿಕ್ ನ್ಯೂಟ್ರಲ್ ಕಂಪೋಸಿಶನ್ ಅನಲೈಸರ್ (ಎಂಇಎನ್​ಸಿಎ), ಮಾರ್ಸ್ ಕಲರ್ ಕ್ಯಾಮರಾ (ಎಂಸಿಸಿ) ಮತ್ತು ಥರ್ಮಲ್ ಇನ್ಪ್ರಾರೆಡ್ ಇಮೇಜಿಂಗ್ ಸ್ಪ್ರೆಕ್ಟ್ರೋಮೀಟರ್ (ಟಿಐಎಸ್). ಮಾರ್ಸ್ ಕಲರ್ ಕ್ಯಾಮರಾ, ಮಾಮ್ಲ್ಲಿ ಅಳವಡಿಸಲಾದ ಪ್ರಮುಖ ಉಪಕರಣವಾಗಿದ್ದು, ಈವರೆಗೆ 715ಕ್ಕೂ ಅಧಿಕ ಅತ್ಯಂತ ಸ್ಪಷ್ಟ ಮತ್ತು ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಕಳುಹಿಸಿದೆ. 2015ರ ಜೂನ್ 2ರಿಂದ 2015ರ ಜುಲೈ 2ರವರೆಗೆ ಸೂರ್ಯ ಗ್ರಹಣದ ಅವಧಿಯಲ್ಲಿ ಮಾಮ್ ಸಂಪರ್ಕ ಕಳೆದುಕೊಂಡಿದ್ದು ಹೊರತುಪಡಿಸಿದರೆ, ಉಳಿದ ಎಲ್ಲ ದಿನಗಳನ್ನು ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದೆ. ಜತೆಗೆ 2016ರ ಮೇ 18ರಿಂದ ಮೇ 30ರವರೆಗೆ ಭೂಮಿಯು ಸೂರ್ಯ ಮತ್ತು ಮಂಗಳನ ಮಧ್ಯೆ ಇದ್ದುದ್ದರಿಂದ ಮಾಮ್ ಸಂವಹನಕ್ಕೆ ಅಡಚಣೆಯಾಗಿತ್ತು. ಮುಂದಿನ ವರ್ಷದ ನವೆಂಬರ್​ನಲ್ಲಿ ಮಂಗಳಯಾನ- 2 ಯೋಜನೆಗೆ ಭಾರತ ಸಿದ್ಧವಾಗುತ್ತಿರುವುದಾಗಿ ಇಸ್ರೋ ಘೊಷಿಸಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ತಿರುಪತಿ ಲಡ್ಡುಗೆ ಜಿಎಸ್​ಟಿಯಿಂದ ವಿನಾಯಿತಿ

ನವದೆಹಲಿ: ಐತಿಹಾಸಿಕ ತಿರುಪತಿ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡುಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ)ಯಿಂದ ವಿನಾಯಿತಿ ನೀಡಲು ಜಿಎಸ್​ಟಿ ಕೌನ್ಸಿಲ್ ಸಮ್ಮತಿಸಿದೆ. ತಿರುಪತಿಗೆ ಭಕ್ತರು ಸಮರ್ಪಿಸುವ ತಲೆಕೂದಲನ್ನು ಮಾರಾಟ ಮಾಡಲು ಹಾಗೂ 1,000 ರೂಪಾಯಿಗಿಂತ ಕಡಿಮೆ ಬಾಡಿಗೆ ಹೊಂದಿರುವ ಸ್ಥಳೀಯ ಅತಿಥಿ ಗೃಹಗಳಿಗೂ ತೆರಿಗೆಯಿಂದ ವಿನಾಯಿತಿ ನೀಡಲು ಅನುಮತಿ ನೀಡಲಾಗಿದೆ.
ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಡಳಿತ ಮಂಡಳಿ ಲಡ್ಡು, ದೇವಾಲಯದಲ್ಲಿ ಪೂಜೆಗೆ ಬಳಕೆ ಮಾಡುವ ವಸ್ತುಗಳು, ಅತಿಥಿ ಗೃಹ, ಹರಕೆ ಕೂದಲು ಸಹಿತ ಇತರ ಆದಾಯ ಮೂಲಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರದಂತೆ ಕೇಳಿಕೊಂಡಿದ್ದರು. ಈ ಮನವಿಯನ್ನು ಆಂಧ್ರಪ್ರದೇಶ ಹಣಕಾಸು ಸಚಿವ ಯಾನಮಾಲಾ ರಾಧಾಕೃಷ್ಣುಡು ಜಿಎಸ್​ಟಿ ಕೌನ್ಸಿಲ್ ಮುಂದೆ ಇರಿಸಿದ್ದರು. ಒಂದೊಮ್ಮೆ ತಿರುಪತಿ ದೇವಾಲಯಕ್ಕೆ ಈ ವಿನಾಯಿತಿ ನೀಡಿದಲ್ಲಿ ಇತರ ದೇವಾಲಯಗಳು ಇದೇ ರೀತಿ ಪ್ರಸ್ತಾಪನೆ ಸಲ್ಲಿಸುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಿಂದೇಟು ಹಾಕಿದ್ದರು. ಆದರೆ ಜೂನ್ 17ರಂದು ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ತಿರುಪತಿ ಲಡ್ಡು ಸಹಿತ ಇತರ ಉತ್ಪನ್ನಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. -ಏಜೆನ್ಸೀಸ್

ಲಡ್ಡು ತಯಾರಿಕೆಗೆ -ರೂ; 160 ಕೋಟಿ
ತಿರುಪತಿಯಲ್ಲಿ ಪ್ರತಿ ವರ್ಷ ಲಡ್ಡು ತಯಾರಿಕೆಗೆ ಆಡಳಿತ ಮಂಡಳಿ 160 ಕೋಟಿ ರೂ. ವ್ಯಯಿಸುತ್ತಿದೆ. ದರುಶನಕ್ಕೆ 300 ರೂ. ಟಿಕೆಟ್ ಕಾಯ್ದಿರಿಸಿದ ಪ್ರತಿ ಭಕ್ತರಿಗೆ ಎರಡು ಲಾಡು ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚಿನ ಲಡ್ಡು ಬೇಕಾದಲ್ಲಿ 25 ರೂ. ನೀಡಿ ಇನ್ನೆರಡು ಲಡ್ಡು ಖರೀದಿಸಬಹುದಾಗಿದೆ. ಇದಕ್ಕಿಂತ ಹೆಚ್ಚು ಲಡ್ಡು ಪಡೆದುಕೊಳ್ಳಲು ಅವಕಾಶವಿಲ್ಲ. 2009ರಲ್ಲಿ ಈ ಲಡ್ಡುವಿಗೆ ಪೇಟೆಂಟನ್ನೂ ನೀಡಲಾಗಿದೆ. 2016-17ರ ಆರ್ಥಿಕ ವರ್ಷದಲ್ಲಿ 10.46 ಕೋಟಿ ಲಡ್ಡುಗಳು ಮಾರಾಟವಾಗಿವೆ. ಲಡ್ಡು ಮಾರಾಟದಿಂದ ವಾರ್ಷಿಕವಾಗಿ 160 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೊಂಡಿತ್ತು.

ಪ್ರಚಲಿತ ವಿದ್ಯಮಾನ : ಜೂನ್ 2017 : ಯುದ್ಧ ವಿಮಾನ ಕೊರತೆ

ನವದೆಹಲಿ: ಪಾಕಿಸ್ತಾನದ ಗಡಿ ನಿಯಂತ್ರಣಾ ರೇಖೆಯಲ್ಲಿ ಉಗ್ರರ ದಾಳಿ ಹಾಗೂ ಈಶಾನ್ಯ ಗಡಿಯಲ್ಲಿ ಚೀನಾದ ತಂಟೆಯಿಂದ ಭಾರತಕ್ಕೆ ಭದ್ರತಾ ಆತಂಕ ಎದುರಾಗಿರುವ ಬೆನ್ನಲ್ಲೇ ಭಾರತೀಯ ವಾಯುಪಡೆಗಳಿಗೆ ಯುದ್ಧವಿಮಾನಗಳ ಕೊರತೆ ಕಾಡುತ್ತಿದೆ ಎಂದು ವಾಯುಪಡೆಯ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ. ಯುದ್ಧ ವಿಮಾನಗಳ ಸಂಖ್ಯೆಯನ್ನು ಕ್ರಿಕೆಟ್ ತಂಡಕ್ಕೆ ಹೋಲಿಸಿರುವ ಅವರು , 11 ಜನರಿರುವ ತಂಡದಲ್ಲಿ ಕೇವಲ ಏಳು ಜನರು ಆಟವಾಡಿದಂತೆ ಎಂದಿದ್ದಾರೆ.
ನೆರೆಯ ರಾಷ್ಟ್ರಗಳ ಉಗ್ರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ವಾಯುಪಡೆ ಸಜ್ಜಾಗಿದೆ. ನಕ್ಸಲರು, ಮಾವೋವಾದಿಗಳ ಮೇಲೆ ವೈಮಾನಿಕ ದಾಳಿ ನಡೆಸುವುದು ಸರಿಯಲ್ಲ. ಆದರೆ, ಕೇಂದ್ರ ಸರ್ಕಾರ ಆದೇಶ ನೀಡಿದಲ್ಲಿ ಮಾವೋವಾದಿಗಳ ವಿರುದ್ಧ ವೈಮಾನಿಕ ದಾಳಿ ನಡೆಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.
ಪರಿಸ್ಥಿತಿ ಎದುರಿಸಲು ಸಿದ್ಧ: ಭಯೋ ತ್ಪಾದನೆ, ಕಾಶ್ಮೀರದಲ್ಲಿನ ಉದ್ವಿಗ್ನತೆ, ಛತ್ತೀಸ್​ಗಢ ಸಹಿತ ಹಲವು ರಾಜ್ಯಗಳಲ್ಲಿ ನಕ್ಸಲರ ದಾಳಿ ಮತ್ತಿತರ ಭದ್ರತಾ ಆತಂಕಗಳನ್ನು ಎದುರಿಸಲು ಸೇನೆ ಸನ್ನದ್ಧವಾಗಿದೆ.

Friday, June 16, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಕಾಪ್ಟರ್ ಡೀಲ್ ರದ್ದು

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ, ಅಮೆರಿಕದೊಂದಿಗಿನ 16 ಬಹೂಪಯೋಗಿ ಹೆಲಿಕಾಪ್ಟರ್ ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಿದೆ. ಹೆಲಿಕಾಪ್ಟರ್ ದರಕ್ಕೆ ಸಂಬಂಧಿಸಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ರಕ್ಷಣಾ ಸಚಿವಾಲಯ ಈ ನಿರ್ಧಾರ ಪ್ರಕಟಿಸಿರುವುದು ಕುತೂಹಲ ಕೆರಳಿಸಿದೆ.
ಒಪ್ಪಂದದ ಹಿನ್ನೆಲೆ: ಅಮೆರಿಕದ ವಿಮಾನ ಉತ್ಪಾದಕ ಕಂಪನಿ ಸಿಕೋರ್​ಸ್ಕಿ ಏರ್​ಕ್ರಾಫ್ಟ್ ನಿಂದ ಭಾರತದ ನೌಕಾಪಡೆಗೆ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿತ್ತು. ನೌಕಾಪಡೆಯ ಬೇಡಿಕೆಯಂತೆ 16 ಬಹೂಪಯೋಗಿ ಹೆಲಿಕಾಪ್ಟರ್​ಗಳನ್ನು ಯುದ್ಧ ನೌಕೆಗೆ ಸೇರ್ಪಡೆಗೊಳಿಸುವುದಕ್ಕಾಗಿ ರಕ್ಷಣಾ ಇಲಾಖೆ ಈ ಕುರಿತು ಸಿಕೋರ್​ಸ್ಕಿ ಕಂಪನಿ ಜತೆಗೆ 2009ರಲ್ಲೆ ಮಾತುಕತೆ ಆರಂಭಿಸಿತ್ತು. ಆದರೆ, ಹೆಲಿಕಾಪ್ಟರ್ ದರಕ್ಕೆ ಸಂಬಂಧಿಸಿ ಹೊಂದಾಣಿಕೆ ಬಾರದ ಕಾರಣ 2015ರಲ್ಲಿ ಇದು ನನೆಗುದಿಗೆ ಬಿದ್ದಿತ್ತು. ಅಷ್ಟರಲ್ಲಾಗಲೇ ಕೇಂದ್ರದಲ್ಲಿ ಯುಪಿಎ ನೇತೃತ್ವದ ಸರ್ಕಾರ ಹೋಗಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಂಡಿತ್ತು. ಪ್ರಧಾನಿ ಮೋದಿಯವರೂ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡತೊಡಗಿದ್ದರಿಂದಾಗಿ ರಕ್ಷಣಾ ಸಚಿವಾಲಯ ಸಿಕೋರ್​ಸ್ಕಿ ಜತೆಗಿನ ಮಾತುಕತೆ ಮುರಿಯಲು ತೀರ್ವನಿಸಿತು. ಇದು 6,500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದವಾಗಿತ್ತು. -ಏಜೆನ್ಸೀಸ್

26ಕ್ಕೆ ಮೋದಿ ಅಮೆರಿಕ ಭೇಟಿ
ಪ್ರಧಾನಿ ಮೋದಿ ಜೂನ್ 26ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ. ಟ್ರಂಪ್ ಅಧ್ಯಕ್ಷರಾದ ನಂತರ ಇದು ಮೋದಿ ಅವರ ಪ್ರಥಮ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಮಾತುಕತೆ ನಡೆಯಲಿದೆ. ವೀಸಾ ನೀತಿ ತಿದ್ದುಪಡಿಗೆ ಸಂಬಂಧಿಸಿದಂತೆ ಕೂಡ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಸ್ವದೇಶಿ ಯುದ್ಧೋಪಕರಣಕ್ಕೆ ಆದ್ಯತೆ
ಭಾರತದ ವಾಯುಪಡೆ ಸ್ವದೇಶಿ ಉಪಕರಣಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ. ಅಮೆರಿಕದ ಎಫ್-16 ಹಾಗೂ ಸ್ವೀಡನ್​ನ ಫೈಟರ್ ಏರ್​ಕ್ರಾಫ್ಟ್​ಗಳ ಪ್ರಾಯೋಗಿಕ ಹಾರಾಟ ಪರೀಕ್ಷಿಸಲಿದೆ. ನಂತರ ಇವುಗಳಲ್ಲಿ ಒಂದು ಏರ್​ಕ್ರಾಫ್ಟನ್ನು ಆಯ್ಕೆ ಮಾಡಿ 120 ಯುದ್ಧ ವಿಮಾನ ಅಭಿವೃದ್ಧಿ ಪಡಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಈ ಯೋಜನೆಗೆ 1.3 ಲಕ್ಷ ಕೋಟಿ ರೂಪಾಯಿ ವೆಚ್ಚವನ್ನು ಅಂದಾಜಿಸಲಾಗಿದೆ.

ಮೇಕ್ ಇನ್ ಇಂಡಿಯಾ ಮೂಲಕ 140 ಕಾಪ್ಟರ್!
ರಕ್ಷಣಾ ಸಚಿವಾಲಯ ಇದೀಗ ರದ್ದುಗೊಳಿಸಿರುವ ಒಪ್ಪಂದ ಪ್ರಕಾರ ಖರೀದಿಸಬೇಕಾಗಿದ್ದ 16 ಹೆಲಿಕಾಪ್ಟರ್​ಗಳ ಬದಲು ಮೇಕ್ ಇನ್ ಇಂಡಿಯಾ ಯೋಜನೆ ಪ್ರಕಾರವೇ ಭಾರತದಲ್ಲೇ ನೌಕಾಪಡೆಯ 140 ಬಹೂಪಯೋಗಿ ಕಾಪ್ಟರ್ ನಿರ್ವಣಕ್ಕೆ ಯೋಜನೆ ಸಿದ್ಧವಾಗಿದೆ. ಅಮೆರಿಕನ್ ಕಂಪನಿ ಇದಕ್ಕೆ ನೆರವನ್ನೂ ನೀಡಲಿದೆ. ರಕ್ಷಣಾ ಇಲಾಖೆ ಈಗಾಗಲೇ ಸೇನಾ ವಿಭಾಗದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಉಪಕರಣಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದು, ಭವಿಷ್ಯದಲ್ಲಿ ವಿದೇಶಿ ಉಪಕರಣ ಗಳ ಮೇಲೆ ಅವಲಂಬನೆ ಕಡಿಮೆಗೊಳಿಸಲು ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ”ಸಾರ್ವಜನಿಕ ಹಿತಾಸಕ್ತಿ”ಯ ಜಸ್ಟೀಸ್ ಭಗವತಿ ಇನ್ನಿಲ್ಲ

ನವದೆಹಲಿ: ”ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ”ಯನ್ನು ಚಾಲ್ತಿಗೆ ತರುವ ಮೂಲಕ ಜ್ಯುಡಿಷಿಯಲ್ ಆ್ಯಕ್ಟಿವಿಸಂಗೆ ನಾಂದಿ ಹಾಡಿದ್ದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ನಿವೃತ್ತ) ಪಿ ಎನ್ ಭಗವತಿ ಅವರು ಗುರುವಾರ ನಿಧನರಾಗಿದ್ದಾರೆ.

95 ವರ್ಷದ ಭಗವತಿ ಅವರು ಪತ್ನಿ ಪ್ರಭಾವತಿ ಮತ್ತು ಮೂವರು ಪತ್ರಿಯರನ್ನು ಅಗಲಿದ್ದಾರೆ. ಜಸ್ಟೀಸ್ ಭಗವತಿ ಅವರ ಅಂತ್ಯಕ್ರಿಯೆ ಶನಿವಾರ ನೆರವೇರಲಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಭಗವತಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಭಾರತದ 17 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಭಗವತಿ ಅವರು PIL ಭಗವತಿ ಎಂದೇ ಜನಮಾನಸದಲ್ಲಿ ಚಾಲ್ತಿಯಲ್ಲಿದ್ದರು. ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಮೂಲಭೂತ ಹಕ್ಕನ್ನಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾರಿಗೆ ತಂದಿದ್ದೇ ಅವರು. ಕೈದಿಗಳೂ ಸಾಮಾನ್ಯ ಪ್ರಜೆಗಳಂತೆ ಮೂಲಭೂತ ಹಕ್ಕುಗಳನ್ನು ಚಲಾಯಿಸಬಹುದು ಎಂಬುದನ್ನು ಪ್ರತಿಪಾದಿಸಿದವರು ಜಸ್ಟೀಸ್ ಭಗವತಿ.

ಪ್ರಚಲಿತ ವಿದ್ಯಮಾನ : ಜೂನ್ 2017 : ಬ್ಯಾಂಕ್​ ಖಾತೆ ತೆರೆಯಲು ಇನ್ಮುಂದೆ ಆಧಾರೇ ಆಧಾರ

ನವದೆಹಲಿ: ಹೊಸದಾಗಿ ಬ್ಯಾಂಕ್​ ಖಾತೆ ತೆರೆಯಲು ಮತ್ತು 50 ಸಾವಿರ ಹಾಗೂ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಆಧಾರ್​ ನಂಬರ್​ ನೀಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸ್ತುತ ಖಾತೆ ಹೊಂದಿರುವ ಗ್ರಾಹಕರು ಈ ವರ್ಷದ ಡಿಸೆಂಬರ್​ 31ರೊಳಗೆ ಬ್ಯಾಂಕ್​ ಖಾತೆಯೊಂದಿಗೆ ಆಧಾರ್​ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಕಂದಾಯ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳು, 2005 ಕ್ಕೆ ತಿದ್ದುಪಡಿ ಮಾಡಿ ಹೊಸ ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್​ ಸಂಖ್ಯೆ ಜೋಡಣೆಯಾಗದ ಖಾತೆಗಳು ಡಿಸೆಂಬರ್​ ಬಳಿಕ ರದ್ದಾಗಲಿವೆ.
ಕಳೆದ ವಾರವಷ್ಟೇ, ಪ್ಯಾನ್​ ಕಾರ್ಡ್​ ಪಡೆಯಲು ಆಧಾರ್​ ಕಡ್ಡಾಯ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ಸಮ್ಮತಿ ಸೂಚಿಸಿತ್ತು. ಆಧಾರ್​ ಕಾರ್ಡ್ ಹೊಂದಿರುವವರು ಪ್ಯಾನ್​ನೊಂದಿಗೆ ಆಧಾರ್​ ಲಿಂಕ್​ ಮಾಡಬೇಕು ಎಂದು ತಿಳಿಸಿತ್ತು.
ದೇಶದಲ್ಲಿ ಅಕ್ರಮ ಹಣ ಸಂಗ್ರಹಣೆ ಮತ್ತು ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳಿಗೆ ಆಧಾರ್​ ಕಡ್ಡಾಯ ಮಾಡಲು, ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Tuesday, June 13, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಮೋದಿಯವರ ನವ ಭಾರತ ಪರಿಕಲ್ಪನೆಯಿಂದ ಅಮೆರಿಕದಲ್ಲೂ ಉದ್ಯೋಗ ಸೃಷ್ಟಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ‘ನವ ಭಾರತ’ ಪರಿಕಲ್ಪನೆಯು ಅಮೆರಿಕದಲ್ಲೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರು ಜೂನ್ 26ರಂದು ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸ್ಪೈಸ್ ಅವರು ಈ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಅವರ ‘ಅಮೆರಿಕದವರು ತಯಾರಿಸಿದ್ದನ್ನೇ ಖರೀದಿಸಿ, ಅಮೆರಿಕದವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ’ ಎಂಬ ನೀತಿಯಿಂದ ಭಾರತೀಯರಲ್ಲಿ ಆತಂಕ ಮನೆ ಮಾಡಿರುವ ಮಧ್ಯೆಯೇ ಎರಡೂ ರಾಷ್ಟ್ರಗಳ ನಡುವಣ ಹಿತಾಸಕ್ತಿಗಳ ಬಗ್ಗೆ ಸ್ಪೈಸರ್ ಮಾತನಾಡಿದ್ದಾರೆ. ನೈಸರ್ಗಿಕ ಅನಿಲವೂ ಸೇರಿ ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯಾಗಲು ಮೋದಿ ಅವರ ‘ನವ ಭಾರತ’ ಪರಿಕಲ್ಪನೆಯೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

‘ಅಮೆರಿಕ–ಭಾರತ ನಡುವಣ ವಹಿವಾಟು 2000ನೇ ಇಸವಿಯಿಂದ 2016ರ ಅವಧಿಯಲ್ಲಿ ಆರು ಪಟ್ಟು ಹೆಚ್ಚಾಗಿದೆ. 2000ನೇ ಇಸವಿಯಲ್ಲಿ ₹ 1.2 ಲಕ್ಷ ಕೋಟಿ ಇದ್ದ ವಹಿವಾಟು 2016ರಲ್ಲಿ ₹ 7.4 ಲಕ್ಷ ಕೋಟಿ ತಲುಪಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ‘ನ್ಯಾಷನಲ್ ಹೆರಾಲ್ಡ್‌’ಗೆ ಮರು ಚಾಲನೆ

ಬೆಂಗಳೂರು: ಬಹು ದಿನಗಳಿಂದ ಸ್ಥಗಿತವಾಗಿದ್ದ ಐತಿಹಾಸಿಕ ಪತ್ರಿಕೆ ಹಾಗೂ ಕಾಂಗ್ರೆಸ್‌ನ ಮುಖವಾಣಿ ‘ನ್ಯಾಷನಲ್ ಹೆರಾಲ್ಡ್‌’ ಪತ್ರಿಕೆಯನ್ನು ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಇಲ್ಲಿ ಮರು ಬಿಡುಗಡೆ ಮಾಡಿದರು.
ನಗರದಲ್ಲಿ ಪತ್ರಿಕೆಗೆ ಮರು ಚಾಲನೆ ನೀಡಿದ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ ಅವರು, ರಾಜಕೀಯ ಕಾರಣಗಳಿಂದ ಪತ್ರಿಕೆ ಪ್ರಕಟಣೆ ನಿಂತಿತ್ತು. ಈಗ ಪುನರ್‌ ಆರಂಭವಾಗಿದೆ. ಕೇಂದ್ರ ಸರ್ಕಾರ ಸತ್ಯದ ಪರ ನಿಲ್ಲುವವರನ್ನು ಅಧಿಕಾರಯುತವಾಗಿ ತುಳಿಯುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಹೆಚ್ಚು ಶಕ್ತಿಯುತವಾಗಿದ್ದು, ಪತ್ರಿಕೆಯ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Monday, June 12, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ತೆಲುಗು ಕವಿ ನಾರಾಯಣ ರೆಡ್ಡಿ ನಿಧನ

ಹೈದರಾಬಾದ್‌: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ತೆಲುಗು ಕವಿ ಸಿ. ನಾರಾಯಣ ರೆಡ್ಡಿ (80) ಸೋಮವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

1931 ಜುಲೈ 29ರಂದು ಕರೀಂನಗರ ಜಿಲ್ಲೆಯಲ್ಲಿ  ಜನಿಸಿದ್ದ ಅವರು, ಕವಿತೆ, ಗೀತೆ, ನಾಟಕ, ಪ್ರಬಂಧ, ಗಜಲ್‌, ಪ್ರವಾಸ ಕಥನ, ಸಾಹಿತ್ಯ ವಿಮರ್ಶೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ನಾರಾಯಣ ರೆಡ್ಡಿ ಅವರ ‘ವಿಶ್ವಂಭರ’ ಕೃತಿಗೆ 1988ರಲ್ಲಿ ಜ್ಞಾನಪೀಠ ಪ್ರಶಸ್ತಿ  ಲಭಿಸಿದೆ. 1977ರಲ್ಲಿ ಪದ್ಮಶ್ರೀ, 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

ಆಂಧ್ರ ವಿಶ್ವವಿದ್ಯಾಲಯವು ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಆಧುನಿಕ ತೆಲುಗು ಕವಿತೆಗಳ ಬಗ್ಗೆ ರೆಡ್ಡಿ ಅವರು ರಚಿಸಿರುವ ಸಂಶೋಧನಾ ಕೃತಿ 1967ರಲ್ಲಿ ಪ್ರಕಟಗೊಂಡಿತ್ತು.

ಪ್ರಸಿದ್ಧ ಗೀತರಚನೆಕಾರರಾಗಿದ್ದ ರೆಡ್ಡಿ ಅವರು ಚಲನಚಿತ್ರಗಳಿಗೆ 3,000ಕ್ಕೂ ಹೆಚ್ಚು ಹಾಡುಗಳನ್ನು  ಬರೆದಿದ್ದಾರೆ. ರಾಜ್ಯ ಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ  ಅವರು ತೆಲಂಗಾಣ ಸಾರಸ್ವತ ಪರಿಷತ್‌ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದಾರೆ.

Thursday, June 8, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಫ್ರೆಂಚ್​ ಓಪನ್​ ಮಿಶ್ರ ಡಬಲ್ಸ್​: ಬೋಪಣ್ಣ ಜೋಡಿಗೆ ಪ್ರಶಸ್ತಿ

ಪ್ಯಾರಿಸ್​: ಭಾರತದ ಅಗ್ರ ಕ್ರಮಾಂಕದ ಟೆನಿಸ್​ ಆಟಗಾರ ರೋಹನ್​ ಬೋಪಣ್ಣ ಮತ್ತು ಕೆನಡಾದ ಗ್ಯಾಬ್ರೆಲ್ಲಾ ದಬ್ರೋವಸ್ಕಿ ಜೋಡಿ ಫ್ರೆಂಚ್​ ಓಪನ್​ ಟೂರ್ನಿಯ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಬೋಪಣ್ಣ ತಮ್ಮ ವೃತ್ತಿ ಜೀವನ ಮೊದಲ ಗ್ರಾಂಡ್​ ಸ್ಲಾಂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಗುರುವಾರ ನಡೆದ ಫೈನಲ್​ ಪಂದ್ಯದಲ್ಲಿ ಬೋಪಣ್ಣ-ದಬ್ರೋವಸ್ಕಿ ಜೋಡಿ ಜರ್ಮನಿಯ ಅನ್ನಾ ಲೀನಾ ಗ್ರೋನಿಫೋಲ್ಡ್​ ಮತ್ತು ಕೊಲಂಬಿಯಾದ ರಾಬರ್ಟ್ ಫರಾತ್ ಜೋಡಿಯ ವಿರುದ್ಧ 2-6 , 6-2 , 12-10 ಸೆಟ್​ಗಳಿಂದ ಜಯ ಗಳಿಸಿದರು.

2010ರಲ್ಲಿ ಬೋಪಣ್ಣ ಅಮೆರಿಕ ಓಪನ್​ ಟೂರ್ನಿಯ ಡಬಲ್ಸ್​ ಫೈನಲ್​ ಪ್ರವೇಶಿಸಿದ್ದರು. ಆದರೆ ಫೈನಲ್​ನಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದ್ದರು. 7 ವರ್ಷಗಳ ಬಳಿಕ ಈ ಸಲ ಗ್ರಾಂಡ್​ ಸ್ಲಾಂ ಟೂರ್ನಿಯ ಫೈನಲ್​ ಪ್ರವೇಶಿಸಿದ್ದ ಬೋಪಣ್ಣ ಪ್ರಶಸ್ತಿ ಜಯಿಸಿದ್ದಾರೆ.

ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲ್ಲುವ ಮೂಲಕ ಬೋಪಣ್ಣ ಈ ಸಾಧನೆ ಮಾಡಿದ 4ನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು. ಈ ಮೊದಲು ಲಿಯಾಂಡರ್​ ಪೇಸ್​, ಮಹೇಶ್​ ಭೂಪತಿ ಮತ್ತು ಸಾನಿಯಾ ಮಿರ್ಜಾ ಮಾತ್ರ ಗ್ರಾಂಡ್​ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಮುಘಲ್​ಸರಾಯ್ ರೈಲು ನಿಲ್ದಾಣಕ್ಕೆ ಉಪಾಧ್ಯಾಯ ಹೆಸರು

ನವದೆಹಲಿ: ಉತ್ತರ ಪ್ರದೇಶದ ಜನಜಂಗುಳಿ ರೈಲ್ವೆ ನಿಲ್ದಾಣಗಳಲ್ಲೊಂದಾದ ಮುಘಲ್​ಸರಾಯ್ ನಿಲ್ದಾಣಕ್ಕೆ ಜನಸಂಘದ ನೇತಾರ ದೀನ್​ದಯಾಳ ಉಪಾಧ್ಯಾಯರ ಹೆಸರಿಡಲು ಸಿಎಂ ಯೋಗಿ ಆದಿತ್ಯನಾಥ ನೇತೃತ್ವದ ಸಚಿವ ಸಂಪುಟ ನಿರ್ಧರಿಸಿದೆ. ಇದರ ಜತೆಗೆ ಉಪಾಧ್ಯಾಯ ಹೆಸರಿನಲ್ಲಿ ಲೋಗೊ ಸಿದ್ಧಪಡಿಸಲಾಗುತ್ತಿದ್ದು, ಇದು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಚಿವರ ಲೆಟರ್​ಹೆಡ್​ನಲ್ಲಿ ಬಳಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.
ಈ ವರ್ಷ ದೀನದಯಾಳರ ಜನ್ಮಶತಾಬ್ದಿ ವರ್ಷಾಚರಣೆ ನಡೆಯುತ್ತಿರುವ ಹಿನ್ನೆಲೆ ಮುಘಲ್​ಸರಾಯ್ ರೈಲ್ವೆ ನಿಲ್ದಾಣದ ಹೆಸರು ಬದಲಿಸುವುದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಶೀಘ್ರದಲ್ಲೇ ಪ್ರಸ್ತಾವ ಕಳುಹಿಸಲಾಗುವುದು ಎಂದು ಸಚಿವ ಸಿದ್ಧಾರ್ಥನಾಥ್ ಸಿಂಗ್ ತಿಳಿಸಿದ್ದಾರೆ. ಏಪ್ರಿಲ್​ನಲ್ಲಿ ಆಗ್ರಾ ವಿಮಾನ ನಿಲ್ದಾಣಕ್ಕೆ ಉಪಾಧ್ಯಾಯ ಅವರ ಹೆಸರಿಡಲು ಆದಿತ್ಯನಾಥ ಸರ್ಕಾರ ತೀರ್ವನಿಸಿತ್ತು.
ಉಪಾಧ್ಯಾಯ ಅವರ ಜನ್ಮಸ್ಥಳವಾದ ಮಥುರಾದ ನಾಗ್ಲಾ ಚಂದ್ರಬನ್ ಅನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು, ಇಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಉದ್ದೇಶಿಸಿದೆ. ಇದರ ಜತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 3 ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವವನ್ನು ಸ್ಮರಣೀಯವಾಗಿಸುವ ಯೋಜನೆ ಹಾಕಿಕೊಂಡಿದೆ.
ಮುಘಲ್​ಸರಾಯ್ನಲ್ಲಿ ದೀನದಯಾಳರ ಶವ ದೊರೆತಿತ್ತು:
1968ರ ಫೆ. 11ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದೀನ್​ದಯಾಳ ಉಪಾಧ್ಯಾಯರು, ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರ ಶವವು ಮುಘಲ್​ಸರಾಯ್ಯಲ್ಲಿ ದೊರೆತಿದ್ದ ಕಾರಣದಿಂದಲೂ ಅವರ ಹೆಸರನ್ನು ಮುಘಲ್​ಸರಾಯ್ ನಿಲ್ದಾಣಕ್ಕೆ ಇರಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ.
 -ಏಜೆನ್ಸೀಸ್

Wednesday, June 7, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಪ್ರಣೀತ್​ಗೆ ಥಾಯ್ಲೆಂಡ್ ಜಿಪಿ ಗೋಲ್ಡ್ ಗರಿ

ಬ್ಯಾಂಕಾಕ್: ಭಾರತದ ಷಟ್ಲರ್ ಬಿ. ಸಾಯಿ ಪ್ರಣೀತ್ ವೃತ್ತಿಜೀವನದ ಚೊಚ್ಚಲ ಗ್ರ್ಯಾನ್ ಪ್ರೀ ಗೋಲ್ಡ್ ಪ್ರಶಸ್ತಿ ಜಯಿಸಿದ್ದಾರೆ. ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟೀ ವಿರುದ್ಧ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದರು. 3ನೇ ಶ್ರೇಯಾಂಕಿತ ಪ್ರಣೀತ್ ಭಾನುವಾರ ನಡೆದ ಪ್ರಶಸ್ತಿ ಫೈಟ್​ನಲ್ಲಿ 17-21, 21-18, 21-19 ಗೇಮ್ಳಿಂದ 4ನೇ ಶ್ರೇಯಾಂಕಿತ ಕ್ರಿಸ್ಟೀ ಅವರನ್ನು ಸೋಲಿಸಿದರು. ವಿಶ್ವ ನಂ.24 ಪ್ರಣೀತ್​ಗೆ ಇತ್ತೀಚೆಗಿನ ಸತತ 2ನೇ ಪ್ರಶಸ್ತಿ ಇದಾಗಿದೆ. ಕಳೆದ ಏಪ್ರಿಲ್​ನಲ್ಲಿ ಸಿಂಗಾಪುರ ಓಪನ್ ಸೂಪರ್ ಸಿರೀಸ್​ನಲ್ಲಿ ಅವರು ಚಾಂಪಿಯನ್ ಆಗಿದ್ದರು. ಅದಕ್ಕಿಂತ ಹಿಂದಿನ ಸಯ್ಯದ್ ಮೋದಿ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಫೈನಲ್​ನಲ್ಲಿ ಸೋತಿದ್ದರು.

ಪ್ರಚಲಿತ ವಿದ್ಯಮಾನ : ಜೂನ್ 2017 : ಇಟಿಎಫ್ ಹೂಡಿಕೆ ಶೇ.15 ಹೆಚ್ಚಳ

ನವದೆಹಲಿ: ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್(ಇಟಿಎಫ್)ನಲ್ಲಿ ಈ ವಿತ್ತ ವರ್ಷ ನೌಕರರ ಪಿಂಚಣಿ ನಿಧಿ ಸಂಘಟನೆ(ಇಪಿಎಫ್​ಒ)ಶೇ. 15 ಹಣವನ್ನು ಹೂಡಿಕೆ ಮಾಡುವುದಕ್ಕೆ ಕೇಂದ್ರೀಯ ವಿಶ್ವಸ್ಥರ ಮಂಡಳಿ(ಸಿಬಿಟಿ) ಅನುಮತಿ ನೀಡಿದೆ.

ಕಳೆದ ಹಣಕಾಸು ವರ್ಷ ಶೇ. 10ರಷ್ಟು ಹಣವನ್ನು ಹೂಡಿಕೆ ಮಾಡಿದ್ದ ಇಪಿಎಫ್​ಒ, ಈ ವರ್ಷ ಶೇ.15 ಠೇವಣಿ ಹಣವನ್ನು ಇಟಿಎಫ್​ನಲ್ಲಿ ಹೂಡಿಕೆ ಮಾಡಲಿದೆ. ಅಂದರೆ ಪ್ರಸ್ತುತ ಇಪಿಎಫ್​ಒ ಖಾತೆಯಲ್ಲಿರುವ ಠೇವಣಿ ಮೊತ್ತ 1.5 ಲಕ್ಷ ಕೋಟಿ ರೂಪಾಯಿ ಪೈಕಿ 22,500 ಕೋಟಿ ರೂಪಾಯಿಯನ್ನು ಇಟಿಎಫ್​ಗೆ ಹೂಡಿಕೆ ಮಾಡಲಿದೆ. ಈ ಹೂಡಿಕೆಯಿಂದ ವಾರ್ಷಿಕ 13.72 ಲಾಭವಾಗುತ್ತಿದೆ. ಈ ಹಿನ್ನೆಲೆಯಲ್ಲೇ ಹೂಡಿಕೆ ಪ್ರಮಾಣವನ್ನು ಶೇ. 15ರಷ್ಟು ಏರಿಸಲು ಪುಣೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ವನಿಸಲಾಯಿತು ಎಂದು ಕೇಂದ್ರೀಯ ಪಿಂಚಣಿ ನಿಧಿ ಆಯುಕ್ತ ವಿ.ಪಿ.ಜಾಯ್ ಹೇಳಿದ್ದಾರೆ.

ಇಟಿಎಫ್ ಲಾಭದಾಯಕ: ಇಪಿಎಫ್​ಒ 2015ರ ಆಗಸ್ಟ್ ನಲ್ಲಿ ಶೇ. 5ರಷ್ಟು ಹಣವನ್ನು ಇಟಿಎಫ್​ನಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದು, ಕಳೆದ ವರ್ಷವಷ್ಟೇ ಹೂಡಿಕೆ ಪ್ರಮಾಣವನ್ನು ಶೇ.10ಕ್ಕೆ ಏರಿಸಿತ್ತು. ಇದುವರೆಗೆ 22,800 ಕೋಟಿ ರೂ. ಹೂಡಿಕೆ ಮಾಡಿದೆ. ಇದರಿಂದ ಡಿವಿಡೆಂಡ್ ರೂಪದಲ್ಲಿ 234 ಕೋಟಿ ರೂಪಾಯಿ ಪಡೆದುಕೊಂಡಿದೆ. ಇದು ಎಸ್​ಬಿಐ ಮ್ಯೂಚುವಲ್ ಫಂಡ್ ಮೂಲಕವೇ ಲಭ್ಯವಾಗಿದೆ. ಆ ಖಾತೆಯಲ್ಲಿ 18,000 ಕೋಟಿ ರೂಪಾಯಿ ಹಣವಿದೆ. ಉಳಿದ ಮೊತ್ತ ಯುಟಿಐ ಮ್ಯೂಚುವಲ್ ಫಂಡ್​ನಲ್ಲಿದೆ.

ಐಐಎಂ-ಬೆಂಗಳೂರಿಗೆ ನೀತಿ ನಿರೂಪಣೆ ಹೊಣೆ: ಇಟಿಎಫ್, ಮ್ಯೂಚುವಲ್ ಫಂಡ್ ಡಿವಿಡೆಂಡ್ ಮೂಲಕ ಲಭ್ಯವಾಗುವ ಲಾಭಾಂಶವನ್ನು ಯಾವ ರೀತಿ ಹಂಚ ಬೇಕು ಎಂಬ ಬಗ್ಗೆ ಇಪಿಎಫ್ ಇನ್ನೂ ನೀತಿ ರೂಪಿಸಿಕೊಂಡಿಲ್ಲ. ಇದರ ಹೊಣೆಗಾರಿಕೆಯನ್ನು ಬೆಂಗಳೂರಿನ ಐಐಎಂಗೆ ವಹಿಸಲಾಗಿದೆ ಎಂದು ಜಾಯ್ ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಚೀನಾ ಪಾಲಾಗಲಿದೆಯೇ ಗಿಲ್ಗಿಟ್-ಬಾಲ್ಟಿಸ್ತಾನ?

ನವದೆಹಲಿ: ವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶವನ್ನು ಪಾಕಿಸ್ತಾನ ಇದೀಗ ಚೀನಾ ವಶಕ್ಕೆ ನೀಡಲು ಮುಂದಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸಹಯೋಗದಲ್ಲಿ ಕಾರಿಡಾರ್ ನಿರ್ವಿುಸಲು ಮುಂದಾಗಿರುವ ಪಾಕ್, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನದ ಜನರಿಂದ ಒತ್ತಾಯ ಪೂರ್ವಕವಾಗಿ ಜಮೀನನ್ನು ವಶಕ್ಕೆ ಪಡೆದು, ಚೀನಿ ಕಂಪನಿಗಳು ಹಾಗೂ ಅಲ್ಲಿನ ಸೇನೆಗೆ ನೀಡುತ್ತಿದೆ ಎನ್ನಲಾಗಿದೆ.

ಅಪಾರ ಪ್ರಮಾಣದಲ್ಲಿ ಜಮೀನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಸ್ಥಳೀಯರು ಪಾಕಿಸ್ತಾನಿ ಆಡಳಿತ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗಾಗಿ ರೈತರು ಹಾಗೂ ಸ್ಥಳೀಯರ ಭೂಮಿಯನ್ನು ಪಾಕ್ ಸೇನೆ ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆದುಕೊಳ್ಳುತ್ತಿದೆ. ಇದನ್ನು ವಿರೋಧಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಗುತ್ತದೆ ಅಥವಾ ಯಾವುದೇ ವಿಚಾರಣೆ ಇಲ್ಲದೇ ಜೈಲಿಗೆ ಹಾಕಲಾಗುತ್ತದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಉನ್ನತ ಶಿಕ್ಷಣಕ್ಕೆ ಹೀರಾ

Higher Education EmpowermentRegulation Agency (HEERA))

ನವದೆಹಲಿ: ಯೋಜನಾ ಆಯೋಗ ರದ್ದು ಮಾಡಿ ನೀತಿ ಆಯೋಗ ರಚಿಸಿದ ಮತ್ತು ಇತ್ತೀಚೆಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ಶೈಕ್ಷಣಿಕ ವಲಯದಲ್ಲೂ ಭಾರಿ ಬದಲಾವಣೆಯ ಸುಳಿವನ್ನು ನೀಡಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ)ಗಳನ್ನು ರದ್ದುಗೊಳಿಸಿ ಆ ಎರಡೂ ಸಂಸ್ಥೆಗಳ ಸ್ಥಾನವನ್ನು ತುಂಬಬಲ್ಲ ಒಂದೇ ಉನ್ನತ ಶಿಕ್ಷಣ ನಿಯಂತ್ರಣ ಸಂಸ್ಥೆಯನ್ನು ರಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಸಂಸ್ಥೆ (Higher Education EmpowermentRegulation Agency (HEERA))ಎಂಬ ಹೆಸರನ್ನು ತಾತ್ಕಾಲಿಕವಾಗಿ ನೀಡಲಾಗಿದೆ.
ಮಹತ್ವದ ನಿರ್ಧಾರ:  ಶೈಕ್ಷಣಿಕ ಕ್ಷೇತ್ರದ ಮಟ್ಟಿಗೆ ಇದು ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಶಿಕ್ಷಣ ತಜ್ಞರ ಬಹುಕಾಲದ ಶಿಫಾರಸು ಇದಾಗಿದ್ದು, ನನೆಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ ಆರಂಭದಲ್ಲಿ ನಡೆದ ಶಿಕ್ಷಣಕ್ಕೆ ಸಂಬಂಧಿಸಿದ ಸಭೆಯಲ್ಲಿ ತಜ್ಞರ ಈ ಶಿಫಾರಸನ್ನು ಚರ್ಚೆಗೆತ್ತಿ ಕೊಂಡರಲ್ಲದೆ, ಅನುಷ್ಠಾನದ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಯಾಕೆ ಒಂದೇ ಸಂಸ್ಥೆ ಬೇಕು?
ಹಲವು ನಿಯಂತ್ರಣ ಸಂಸ್ಥೆಗಳಿದ್ದಾಗ ಒಂದರ ಕಾರ್ಯವ್ಯಾಪ್ತಿ ಇನ್ನೊಂದರ ಕಾರ್ಯವ್ಯಾಪ್ತಿಯೊಂದಿಗೆ ಸೇರಿರಬಹುದು. ಇದು ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವುದಲ್ಲದೆ, ಶಿಕ್ಷಣದ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವಂಥದ್ದು.
ನಿಯಂತ್ರಣ ಸಂಸ್ಥೆಗಳು ಹೆಚ್ಚಾದಷ್ಟೂ ಹಾಗೂ ನಿಯಮಗಳು ಕಠಿಣವಾದಷ್ಟೂ ಸಾಂಸ್ಥಿಕ ಸ್ವಾಯತ್ತೆ ಕಡಿಮೆಯಾಗುತ್ತದೆ.
ನಿಯಂತ್ರಣ ಮತ್ತು ಅನುದಾನದ ವಿಚಾರಕ್ಕೆ ಬಂದರೆ ನಿಧಿ ಹಂಚಿಕೆ ಮತ್ತು ಆಯಾ ಸಂಸ್ಥೆಗಳ ಪಾತ್ರ ಸಮನ್ವಯಕ್ಕಿಂತಲೂ ಒಂದಕ್ಕೊಂದು ಸಂಘರ್ಷ ಉಂಟುಮಾಡುವಂತಿರುತ್ತದೆ.
ಹೀರಾ ನೀಲಿನಕ್ಷೆ:ಹೀರಾ ಕುರಿತ ಕರಡು ಕಾನೂನು ರಚನೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾ ಲಯ ಮತ್ತು ನೀತಿ ಆಯೋಗ ಈ ವಿಷಯದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್, ಉನ್ನತ ಶಿಕ್ಷಣ ಕಾರ್ಯದರ್ಶಿ ಕೆ.ಕೆ.ಶರ್ವ ಅವರನ್ನೊಳಗೊಂಡ ಸಮಿತಿಯನ್ನೂ ರಚಿಸಲಾಗಿದೆ.
ಹೇಗಿರಲಿದೆ ಹೊಸ ಸಂಸ್ಥೆ:ಹೀರಾ ರಚನೆಯಾದರೆ ಯುಜಿಸಿ, ಎಐಸಿಟಿಇ ಕಾಲದ ಇನ್​ಸ್ಪೆಕ್ಟರ್ ರಾಜ್​ಗೆ ಕಡಿವಾಣ ಬೀಳಲಿದೆ. ಶೋಷಣೆಯೂ ಕಡಿಮೆಯಾಗಲಿದೆ. ಹೊಸ ನಿಯಂತ್ರಣ ಶಾಸನವೂ ಸರಳವಾಗಿದ್ದು, ಕನಿಷ್ಠ ಮಾನದಂಡಗಳೊಂದಿಗೆ ಗರಿಷ್ಠ ಗುಣಮಟ್ಟದ ಫಲಿತಾಂಶ ಹೊರ ಹೊಮ್ಮಿಸುವಂಥದ್ದಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಯಾವಕಾಶ ಬೇಕು: ಎಐಸಿಟಿಇ ಹಾಗೂ ಯುಜಿಸಿ ಕಾಯ್ದೆಗಳನ್ನು ಹಿಂಪಡೆದು ಹೊಸ ಕಾನೂನು ಜಾರಿಗೊಳಿಸುವುದಕ್ಕೆ ಸಾಕಷ್ಟು ಸಮಯಾವಕಾಶ ಬೇಕು. ಮಧ್ಯಂತರ ಕ್ರಮವಾಗಿ ಹಳೆಯ ಕಾನೂನುಗಳಿಗೆ ತಿದ್ದುಪಡಿ ತಂದು ಒಂದಷ್ಟು ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಬಹುದು.

ಹೊಸ ಚಿಂತನೆ ಅಲ್ಲ : ಬಹು ಸಂಖ್ಯೆಯ ನಿಯಂತ್ರಣ ಸಂಸ್ಥೆಗಳ ಬದಲು ಒಂದೇ ನಿಯಂತ್ರಣ ಸಂಸ್ಥೆ ಇರಬೇಕೆಂಬ ಚಿಂತನೆ ಇದೇ ಹೊಸದಲ್ಲ. ಯಶ್​ಪಾಲ್ ಸಮಿತಿ, ರಾಷ್ಟ್ರೀಯ ಜ್ಞಾನ ಆಯೋಗಗಳು ಇಂಥದ್ದೇ ಶಿಫಾರಸನ್ನು ಯುಪಿಎ ಸರ್ಕಾರಕ್ಕೆ ನೀಡಿದ್ದವು. ಹರಿ ಗೌತಮ್ ಸಮಿತಿಯೂ ಇದೇ ಶಿಫಾರಸನ್ನು ಮಾಡಿತ್ತು. ಆದರೆ ಅವ್ಯಾವುದೂ ಅನುಷ್ಠಾನಕ್ಕೆ ಬರಲಿಲ್ಲ.

ಪ್ರಚಲಿತ ವಿದ್ಯಮಾನ : ಜೂನ್ 2017 : ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ - ಹಬೀಬ್​ಗಂಜ್

ಭೋಪಾಲ್: ಎಲ್ಲವೂ ಅಂದು ಕೊಂಡಂತೆಯೇ ನಡೆದರೆ, ಇನ್ನು ಮೂರು ವರ್ಷಗಳ ಅವಧಿಯಲ್ಲಿ ಭೋಪಾಲದ ಹಬೀಬ್​ಗಂಜ್ ಉಪನಗರ ರೈಲ್ವೆ ನಿಲ್ದಾಣ ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣವಾಗಲಿದೆ.
ಪಿಪಿಪಿ (ಸಾರ್ವಜನಿಕ- ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಇದರ ಮರು ಅಭಿವೃದ್ಧಿ ಕೆಲಸಗಳಿಗೆ ಜೂನ್ 9ರಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಚಾಲನೆ ನೀಡಲಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ಹಬೀಬ್ ಗಂಜ್ ರೈಲ್ವೆ ನಿಲ್ದಾಣದಲ್ಲಿ ಅಂಗಡಿಗಳು, ಕಚೇರಿಗಳು ಹಾಗೂ ಹೋಟೆಲ್​ಗಳು ನಿರ್ವಣವಾಗಲಿದ್ದು, ಪೂರ್ಣ ಪ್ರಮಾಣದಲ್ಲಿ ವಾಣಜ್ಯ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಲಿದೆ.
ಏನಿದರ ಉದ್ದೇಶ: ಹಬೀಬ್​ಗಂಜ್ ರೈಲ್ವೆ ನಿಲ್ದಾಣ ಮರುಅಭಿವೃದ್ಧಿ ಯೋಜನೆ ಹಿಂದೆ, ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ.
 ರೈಲ್ವೆ ಸ್ಟೇಷನ್ ಸ್ಪೆಷಲ್
ಭೋಪಾಲ್​ನ ಕೇಂದ್ರಿತವಾದ ಬನ್ಸಾಲ್ ಗ್ರೂಪ್​ಗೆ ಈ ನಿಲ್ದಾಣದ ಮರು ಅಭಿವೃದ್ಧಿ ಹೊಣೆಗಾರಿಕೆ ವಹಿಸಲಾಗಿದೆ. ಅಲ್ಲದೆ, 8 ವರ್ಷಗಳ ನಿರ್ವಹಣೆಯ ಹೊಣೆಯೂ ಇದೇ ಕಂಪನಿಯದ್ದು.
ಕಂಪನಿಗೆ ಜಮೀನನ್ನು 45 ವರ್ಷಗಳ ಅವಧಿಗೆ ಭೋಗ್ಯಕ್ಕೆ ಒದಗಿಸಲಾಗಿದೆ. ನಿಲ್ದಾಣದ ಅಭಿವೃದ್ಧಿಗಾಗಿ ಈ ಕಂಪನಿ 100 ಕೋಟಿ ರೂ., 17,245 ಚ.ಮೀ. ಜಮೀನು ಅಭಿವೃದ್ಧಿಗಾಗಿ 350 ಕೋಟಿ ರೂ. ಹೂಡಿಕೆ ಮಾಡಲಿದೆ.
ಪರಿಸರ ಸ್ನೇಹಿ ನಿಲ್ದಾಣ ದಲ್ಲಿ ಸೌರ ವಿದ್ಯುತ್ ಅಳವಡಿಕೆ, ವಿಕಲಚೇತನರ ಸ್ನೇಹಿ ಸೌಲಭ್ಯ, ಶಾಪಿಂಗ್ ಕಾಂಪ್ಲೆಕ್ಸ್, ರ್ಪಾಂಗ್, ವಿಶ್ವದರ್ಜೆಯ ರೆಸ್ಟೋರೆಂಟ್​ಗಳು, ವಿದೇಶ ವಿನಿಮಯ ಕೇಂದ್ರಗಳನ್ನು ಒಳಗೊಂಡ ವಾಣಿಜ್ಯ ಹಬ್ ಈ ನಿಲ್ದಾಣದ ಆಕರ್ಷಣೆಯಾಗಲಿದೆ.

Tuesday, June 6, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಬಾಹ್ಯಾಕಾಶಕ್ಕೆ ಮಹಿಳಾ ಗಗನಯಾತ್ರಿ ಕಳಿಸಲು ಇಸ್ರೊ ಒಲವು

ನವದೆಹಲಿ: ಭಾರತದಿಂದ ಬಾಹ್ಯಾಕಾಶಕ್ಕೆ ಹೊರಡುವ ಮೊದಲ ಗಗನಯಾತ್ರಿ ಪುರುಷರೋ, ಮಹಿಳೆಯೋ ಎಂಬ ಕುತೂಹಲ ಹಲವರಲ್ಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ಕುತೂಹಲಕ್ಕೆ ತೆರೆ ಎಳೆಯುವ ಹಂತದಲ್ಲಿದೆ.
ಬಾಹ್ಯಾಕಾಶ ಸಂಶೋಧನೆಗೆ ಮಹಿಳಾ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳಿಸಲು ಇಸ್ರೊ ಸಿದ್ಧತೆ ನಡೆಸಿದೆ. ಬಾಹ್ಯಾಕಾಶಕ್ಕೆ ಗಗನಯಾತ್ರಿ ಕಳಿಸುವ ಈ ಯೋಜನೆಗೆ ₹12,500 ಕೋಟಿ ಬಿಡುಗಡೆ ಮಾಡುವಂತೆ ಇಸ್ರೊ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಈ ಯೋಜನೆ ಸಾಕಾರವಾದರೆ ಭಾರತವು ಬಾಹ್ಯಾಕಾಶಕ್ಕೆ ಗಗನಯಾತ್ರಿ ಕಳಿಸಿದ ನಾಲ್ಕನೇ ರಾಷ್ಟ್ರವಾಗಲಿದೆ. ರಷ್ಯಾ, ಅಮೆರಿಕ ಮತ್ತು ಚೀನಾ ಈಗಾಗಲೇ ಬಾಹ್ಯಾಕಾಶಕ್ಕೆ ತಮ್ಮ ಗಗನಯಾತ್ರಿಗಳನ್ನು ಕಳಿಸಿವೆ.
640 ಟನ್‌ ಭಾರೀ ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯದ ಉಡಾವಣಾ ವಾಹಕವಾಗಿ ಜಿಎಸ್‌ಎಲ್‌ವಿಯನ್ನು ಅಭಿವೃದ್ಧಿ ಪಡಿಸಿರುವ ಇಸ್ರೊ ಮುಂದೊಂದು ದಿನ ಇದೇ ವಾಹಕದ ಮೂಲಕ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳಿಸುವ ಕನಸುಹೊಂದಿದೆ.
ಮುಂದಿನ 7 ವರ್ಷಗಳಲ್ಲಿ ದೇಶೀಯವಾಗಿ ನಿರ್ಮಿಸಿದ ಉಡಾವಣಾ ವಾಹಕದ ಮೂಲಕ ಗಗನಯಾತ್ರೆ ಯೋಜನೆಯನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಇಸ್ರೊ ವಿಜ್ಞಾನಿಗಳಿದ್ದಾರೆ.

ಫೆಬ್ರುವರಿ ತಿಂಗಳಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ್ದ ಇಸ್ರೊ ಗುರು ಮತ್ತು ಶುಕ್ರ ಗ್ರಹಗಳ ಸಂಶೋಧನೆಗಾಗಿ ಹೊಸ ಯೋಜನೆ ರೂಪಿಸುತ್ತಿದೆ.
ಭಾರೀ ವೇಗದ ಮತ್ತು ಉಪಗ್ರಹ ಆಧರಿತ ಅಂತರ್ಜಾಲ ಸಂಪರ್ಕ ಸೇವೆಯನ್ನು ಆರಂಭಿಸಲು ಎರಡು ದೈತ್ಯ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಸೇರಿಸಲು ಇಸ್ರೊ ಮುಂದಾಗಿದೆ. ಜಿಸ್ಯಾಟ್–19 ಉಪಗ್ರಹವನ್ನು ಹೊತ್ತು, ಭಾರತದ ಅತ್ಯಂತ ದೈತ್ಯ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್ 3 ಸೋಮವಾರ ಸಂಜೆ 5.28ಕ್ಕೆ ಬಾಹ್ಯಾಕಾಶದತ್ತ ಜಿಗಿಯಲಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ‘ಕಾಶ್ಮೀರ ವಿವಾದ: ಐಸಿಜೆಗೆ ದೂರು ನೀಡಲು ಅವಕಾಶವಿಲ್ಲ’

ದ್ವಿಪಕ್ಷೀಯ ಮಾತುಕತೆಯಿಂದಲೇ ಪರಿಹಾರ

‘ಕಾಶ್ಮೀರ ವಿವಾದ: ಐಸಿಜೆಗೆ ದೂರು ನೀಡಲು ಅವಕಾಶವಿಲ್ಲ’


ನವದೆಹಲಿ: ಕಾಶ್ಮೀರ ವಿವಾದವನ್ನು ಪಾಕಿಸ್ತಾನವು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಒಯ್ಯುವುದಕ್ಕೆ ಸಾಧ್ಯವೇ ಇಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದರು.
ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು. ಇದು 1972ರ ಶಿಮ್ಲಾ  ಒಪ್ಪಂದ ಮತ್ತು 1999ರ ಲಾಹೋರ್‌ ಒಪ್ಪಂದದ ಪ್ರಕಾರವೇ ಬಗೆಹರಿಯಬೇಕು ಎಂದು ಅವರು ತಿಳಿಸಿದರು. ವಿದೇಶಾಂಗ ನೀತಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಕಳೆದ ಮೂರು ವರ್ಷಗಳ ಸಾಧನೆಯನ್ನು ವಿವರಿಸಲು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿರುವುದನ್ನು ಪ್ರಶ್ನಿಸಿ ಐಸಿಜೆಗೆ ಭಾರತ ದೂರು ನೀಡಿತ್ತು. ಅದೇ ರೀತಿಯಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನ ದೂರು ನೀಡಲು ಸಾಧ್ಯವಿಲ್ಲ ಎಂದು ಸುಷ್ಮಾ ಸ್ಪಷ್ಟಪಡಿಸಿದರು.
‘ಡೊನಾಲ್ಡ್‌ ಟ್ರಂಪ್‌ ಆರೋಪದಲ್ಲಿ ಹುರುಳಿಲ್ಲ’
ತಾಪಮಾನ ಏರಿಕೆ ತಡೆಯುವುದಕ್ಕಾಗಿ ಮಾಡಿಕೊಂಡ ಪ್ಯಾರಿಸ್‌ ಒಪ್ಪಂದದಿಂದ ಭಾರತಕ್ಕೆ ಲಕ್ಷಾಂತರ ಡಾಲರ್‌ ಲಾಭ ಇದೆ ಎಂದು  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಾಡಿರುವ ಆರೋಪವನ್ನು ಸುಷ್ಮಾ ಸ್ವರಾಜ್‌ ಅಲ್ಲಗಳೆದರು. ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸುವ ಸಂದರ್ಭದಲ್ಲಿ ಟ್ರಂಪ್‌ ಈ ಆರೋಪ ಮಾಡಿದ್ದರು.
ಅಮೆರಿಕವು ಒಪ್ಪಂದದಲ್ಲಿ ಮುಂದುವರಿದರೂ ಇಲ್ಲದಿದ್ದರೂ ಭಾರತದ ಬದ್ಧತೆ ಬದಲಾಗದು ಎಂದು ಅವರು ಹೇಳಿದರು.

ಪ್ರಚಲಿತ ವಿದ್ಯಮಾನ : ಜೂನ್ 2017 : ಶೇಕಡ 9ರ ಆರ್ಥಿಕ ಬೆಳವಣಿಗೆ ದರ ಸಾಧಿಸಲು ಜಿಎಸ್‌ಟಿ ನೆರವು

ನವದೆಹಲಿ: ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದೇ ಪರಿಗಣಿಸಲಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನವು ಶೇಕಡ 9ರ ಆರ್ಥಿಕ ಬೆಳವಣಿಗೆ ದರ ಸಾಧಿಸಲು ನೆರವಾಗಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಮಿತಾಭ್ ಕಾಂತ್ ಹೇಳಿದ್ದಾರೆ.

ಜಿಎಸ್‌ಟಿಯು ದೇಶದ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲಿದೆ. ತೆರಿಗೆ ವಂಚನೆ ತಡೆಯಲು ನೆರವಾಗಲಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ಕ್ರಾಂತಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಜಿಡಿಪಿಯಲ್ಲಿ ಶೇಕಡ 1ರಿಂದ 2ರಷ್ಟು ಹೆಚ್ಚಳವಾಗಲು ಜಿಎಸ್‌ಟಿ ನೆರವಾಗಬಹುದು. ಜಿಎಸ್‌ಟಿಯಿಂದಾಗಿ ಹಣದುಬ್ಬರದಲ್ಲಿ ಶೇಕಡ 2ರಷ್ಟು ಇಳಿಕೆಯಾಗಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವೇಗದಲ್ಲಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ದೇಶ ಎಂಬ ಬಿರುದು ಚೀನಾ ಪಾಲಾಗುತ್ತಿರುವ ಬೆನ್ನಲ್ಲೇ ಕಾಂತ್‌ ಅವರು ಈ ಹೇಳಿಕೆ ನೀಡಿದ್ದಾರೆ. ಜನವರಿ–ಮಾರ್ಚ್‌ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇಕಡ 6.1ಕ್ಕೆ ಕುಸಿದಿದ್ದರೆ, ಚೀನಾದ ಜಿಡಿಪಿ ದಾಖಲೆಯ ಶೇಕಡ 6.9ಕ್ಕೆ ಏರಿಕೆಯಾಗಿದೆ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...