Showing posts with label June Current Affairs. Show all posts
Showing posts with label June Current Affairs. Show all posts

Friday, June 16, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ”ಸಾರ್ವಜನಿಕ ಹಿತಾಸಕ್ತಿ”ಯ ಜಸ್ಟೀಸ್ ಭಗವತಿ ಇನ್ನಿಲ್ಲ

ನವದೆಹಲಿ: ”ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ”ಯನ್ನು ಚಾಲ್ತಿಗೆ ತರುವ ಮೂಲಕ ಜ್ಯುಡಿಷಿಯಲ್ ಆ್ಯಕ್ಟಿವಿಸಂಗೆ ನಾಂದಿ ಹಾಡಿದ್ದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ನಿವೃತ್ತ) ಪಿ ಎನ್ ಭಗವತಿ ಅವರು ಗುರುವಾರ ನಿಧನರಾಗಿದ್ದಾರೆ.

95 ವರ್ಷದ ಭಗವತಿ ಅವರು ಪತ್ನಿ ಪ್ರಭಾವತಿ ಮತ್ತು ಮೂವರು ಪತ್ರಿಯರನ್ನು ಅಗಲಿದ್ದಾರೆ. ಜಸ್ಟೀಸ್ ಭಗವತಿ ಅವರ ಅಂತ್ಯಕ್ರಿಯೆ ಶನಿವಾರ ನೆರವೇರಲಿದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಭಗವತಿ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಭಾರತದ 17 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಭಗವತಿ ಅವರು PIL ಭಗವತಿ ಎಂದೇ ಜನಮಾನಸದಲ್ಲಿ ಚಾಲ್ತಿಯಲ್ಲಿದ್ದರು. ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಮೂಲಭೂತ ಹಕ್ಕನ್ನಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾರಿಗೆ ತಂದಿದ್ದೇ ಅವರು. ಕೈದಿಗಳೂ ಸಾಮಾನ್ಯ ಪ್ರಜೆಗಳಂತೆ ಮೂಲಭೂತ ಹಕ್ಕುಗಳನ್ನು ಚಲಾಯಿಸಬಹುದು ಎಂಬುದನ್ನು ಪ್ರತಿಪಾದಿಸಿದವರು ಜಸ್ಟೀಸ್ ಭಗವತಿ.

ಪ್ರಚಲಿತ ವಿದ್ಯಮಾನ : ಜೂನ್ 2017 : ಮೋದಿ ಸರ್ಕಾರಕ್ಕೆ ದೊಡ್ಡ ಜಯ:​ ಕಪ್ಪು ಖಾತೆ ವಿವರಕ್ಕೆ ಸೈ ಎಂದ ಸ್ವಿಸ್​

ಬರ್ನ್​/ನವದೆಹಲಿ: ಕಪ್ಪು ಹಣದ ವಿರುದ್ಧ ಹೋರಾಟ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಜಯ ದೊರೆತಿದ್ದು, ಸ್ವಿಸ್​ ಬ್ಯಾಂಕ್​ಗಳ ಖಾತೆದಾರರ ಮಾಹಿತಿ ನೀಡಲು ಸ್ವಿಜರ್​ಲೆಂಡ್​ ಒಪ್ಪಿಗೆ ಸೂಚಿಸಿದೆ.

ಸ್ವಿಸ್​ ಬ್ಯಾಂಕ್​ಗಳನ್ನು ಖಾತೆ ಹೊಂದಿರುವವರ ಮಾಹಿತಿ ಒದಗಿಸುವಂತೆ ಭಾರತ ಸಲ್ಲಿಸಿದ್ದ ಮನವಿಗೆ ಸ್ವಿಸ್​ ಫೆಡರ್​ ಕೌನ್ಸಿಲ್​ ಶುಕ್ರವಾರ ನಡೆದ ಸಭೆಯಲ್ಲಿ ಅನುಮೋದಿಸಿದೆ. ಭಾರತ ಸೇರಿದಂತೆ ಇತರ 40 ದೇಶಗಳಿಗೆ ಸ್ವಯಂ ಚಾಲಿತ ಮಾಹಿತಿ ವಿನಿಮಯ (AEOI) ವ್ಯವಸ್ಥೆಯಡಿ ಬ್ಯಾಂಕ್​ ಖಾತೆದಾರರ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿದೆ.

2018ನೇ ಸಾಲಿನಿಂದ ಮಾಹಿತಿ ವಿನಿಮಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರನ್ವಯ 2019ರಲ್ಲಿ ಮೊದಲ ಹಂತದಲ್ಲಿ ಮಾಹಿತಿಯನ್ನು ಭಾರತ ಮತ್ತು ಇತರ ರಾಷ್ಟ್ರಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗುವುದು. 2019ರಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ದಿನಾಂಕದ ಕುರಿತು ಸ್ವಿಜರ್​ಲೆಂಡ್​ ಶೀಘ್ರದಲ್ಲೇ ಭಾರತ ಸರ್ಕಾರಕ್ಕೆ ಮಾಹಿತಿ ಒದಗಿಸಲಿದೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಬ್ಯಾಂಕ್​ ಖಾತೆ ತೆರೆಯಲು ಇನ್ಮುಂದೆ ಆಧಾರೇ ಆಧಾರ

ನವದೆಹಲಿ: ಹೊಸದಾಗಿ ಬ್ಯಾಂಕ್​ ಖಾತೆ ತೆರೆಯಲು ಮತ್ತು 50 ಸಾವಿರ ಹಾಗೂ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಆಧಾರ್​ ನಂಬರ್​ ನೀಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪ್ರಸ್ತುತ ಖಾತೆ ಹೊಂದಿರುವ ಗ್ರಾಹಕರು ಈ ವರ್ಷದ ಡಿಸೆಂಬರ್​ 31ರೊಳಗೆ ಬ್ಯಾಂಕ್​ ಖಾತೆಯೊಂದಿಗೆ ಆಧಾರ್​ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಕಂದಾಯ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳು, 2005 ಕ್ಕೆ ತಿದ್ದುಪಡಿ ಮಾಡಿ ಹೊಸ ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್​ ಸಂಖ್ಯೆ ಜೋಡಣೆಯಾಗದ ಖಾತೆಗಳು ಡಿಸೆಂಬರ್​ ಬಳಿಕ ರದ್ದಾಗಲಿವೆ.
ಕಳೆದ ವಾರವಷ್ಟೇ, ಪ್ಯಾನ್​ ಕಾರ್ಡ್​ ಪಡೆಯಲು ಆಧಾರ್​ ಕಡ್ಡಾಯ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್​ ಸಮ್ಮತಿ ಸೂಚಿಸಿತ್ತು. ಆಧಾರ್​ ಕಾರ್ಡ್ ಹೊಂದಿರುವವರು ಪ್ಯಾನ್​ನೊಂದಿಗೆ ಆಧಾರ್​ ಲಿಂಕ್​ ಮಾಡಬೇಕು ಎಂದು ತಿಳಿಸಿತ್ತು.
ದೇಶದಲ್ಲಿ ಅಕ್ರಮ ಹಣ ಸಂಗ್ರಹಣೆ ಮತ್ತು ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳಿಗೆ ಆಧಾರ್​ ಕಡ್ಡಾಯ ಮಾಡಲು, ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Tuesday, June 13, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಮೋದಿಯವರ ನವ ಭಾರತ ಪರಿಕಲ್ಪನೆಯಿಂದ ಅಮೆರಿಕದಲ್ಲೂ ಉದ್ಯೋಗ ಸೃಷ್ಟಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ‘ನವ ಭಾರತ’ ಪರಿಕಲ್ಪನೆಯು ಅಮೆರಿಕದಲ್ಲೂ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರು ಜೂನ್ 26ರಂದು ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸ್ಪೈಸ್ ಅವರು ಈ ಹೇಳಿಕೆ ನೀಡಿದ್ದಾರೆ.

ಟ್ರಂಪ್ ಅವರ ‘ಅಮೆರಿಕದವರು ತಯಾರಿಸಿದ್ದನ್ನೇ ಖರೀದಿಸಿ, ಅಮೆರಿಕದವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ’ ಎಂಬ ನೀತಿಯಿಂದ ಭಾರತೀಯರಲ್ಲಿ ಆತಂಕ ಮನೆ ಮಾಡಿರುವ ಮಧ್ಯೆಯೇ ಎರಡೂ ರಾಷ್ಟ್ರಗಳ ನಡುವಣ ಹಿತಾಸಕ್ತಿಗಳ ಬಗ್ಗೆ ಸ್ಪೈಸರ್ ಮಾತನಾಡಿದ್ದಾರೆ. ನೈಸರ್ಗಿಕ ಅನಿಲವೂ ಸೇರಿ ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಯಾಗಲು ಮೋದಿ ಅವರ ‘ನವ ಭಾರತ’ ಪರಿಕಲ್ಪನೆಯೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

‘ಅಮೆರಿಕ–ಭಾರತ ನಡುವಣ ವಹಿವಾಟು 2000ನೇ ಇಸವಿಯಿಂದ 2016ರ ಅವಧಿಯಲ್ಲಿ ಆರು ಪಟ್ಟು ಹೆಚ್ಚಾಗಿದೆ. 2000ನೇ ಇಸವಿಯಲ್ಲಿ ₹ 1.2 ಲಕ್ಷ ಕೋಟಿ ಇದ್ದ ವಹಿವಾಟು 2016ರಲ್ಲಿ ₹ 7.4 ಲಕ್ಷ ಕೋಟಿ ತಲುಪಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜೂನ್ 2017 : ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ₹500ರ ನೋಟು ಚಲಾವಣೆಗೆ: ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಶೀಘ್ರವೇ ಅಲ್ಪ ಬದಲಾವಣೆಯೊಂದಿಗೆ ಹೊಸ ₹500ರ ನೋಟನ್ನು ಬಿಡುಗಡೆ ಮಾಡುವುದಾಗಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
₹500 ಮುಖಬೆಲೆ ನೋಟಿನ ಮುಂಭಾಗದಲ್ಲಿ ‘ಎ’ ಸಂಖ್ಯೆಯ ಸರಣಿಯನ್ನು ಒಳಗೊಂಡಿರಲಿದ್ದು, ಹೊಸ ನೋಟು ಹಾಗೂ ಹಳೆಯ ನೋಟಿನ ನಡುವೆ ಸಾಮಾನ್ಯ ಹೋಲಿಕೆ ಇರಲಿದೆ ಎಂದು ಆರ್‌ಬಿಐ ತಿಳಿಸಿದೆ.
2016ರ ನವೆಂಬರ್‌ 8ರಂದು ಆರ್‌ಬಿಐ ₹ 500, ₹ 1000 ಮುಖಬೆಲೆ ನೋಟುಗಳನ್ನು ರದ್ದು ಮಾಡಿ. ಹೊಸ ₹ 500 ಹಾಗೂ ₹ 2000 ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿತ್ತು.
ಭ್ರಷ್ಟಚಾರ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮವನ್ನು ಕೈಗೊಂಡಿತ್ತು.
ಪ್ರಸುತ್ತ ಚಾಲ್ತಿಯಲ್ಲಿರುವ ₹ 500ರ ನೋಟಿನ ಚಲಾವಣೆಯ ಬಗ್ಗೆ ಗೊಂದಲ ಬೇಡ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಹೊಸ ₹500 ನೋಟಿನ ಲಕ್ಷಣಗಳು: ಮಹಾತ್ಮ ಗಾಂಧಿಯ ಭಾವಚಿತ್ರ, ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರ ಸಹಿ, ಪ್ರಸಕ್ತ ವರ್ಷ 2017, ಹಾಗೂ ಎರಡೂ ಬದಿ ನೋಟಿನ ಸಂಖ್ಯೆಯ ಆರಂಭದಲ್ಲಿ ‘ಎ’ ಅಕ್ಷರದಿಂದ ಪ್ರಾರಂಭವಾಗುವ ಅಂಶಗಳನ್ನು ಒಳಗೊಂಡ ನೋಟುಗಳನ್ನು ಮುದ್ರಿಸಲಾಗಿರುತ್ತದೆ ಎಂದು ಆರ್‌ಬಿಐ ಹೇಳಿದೆ.

Monday, June 12, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ತೆಲುಗು ಕವಿ ನಾರಾಯಣ ರೆಡ್ಡಿ ನಿಧನ

ಹೈದರಾಬಾದ್‌: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ತೆಲುಗು ಕವಿ ಸಿ. ನಾರಾಯಣ ರೆಡ್ಡಿ (80) ಸೋಮವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

1931 ಜುಲೈ 29ರಂದು ಕರೀಂನಗರ ಜಿಲ್ಲೆಯಲ್ಲಿ  ಜನಿಸಿದ್ದ ಅವರು, ಕವಿತೆ, ಗೀತೆ, ನಾಟಕ, ಪ್ರಬಂಧ, ಗಜಲ್‌, ಪ್ರವಾಸ ಕಥನ, ಸಾಹಿತ್ಯ ವಿಮರ್ಶೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ನಾರಾಯಣ ರೆಡ್ಡಿ ಅವರ ‘ವಿಶ್ವಂಭರ’ ಕೃತಿಗೆ 1988ರಲ್ಲಿ ಜ್ಞಾನಪೀಠ ಪ್ರಶಸ್ತಿ  ಲಭಿಸಿದೆ. 1977ರಲ್ಲಿ ಪದ್ಮಶ್ರೀ, 1992 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

ಆಂಧ್ರ ವಿಶ್ವವಿದ್ಯಾಲಯವು ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಆಧುನಿಕ ತೆಲುಗು ಕವಿತೆಗಳ ಬಗ್ಗೆ ರೆಡ್ಡಿ ಅವರು ರಚಿಸಿರುವ ಸಂಶೋಧನಾ ಕೃತಿ 1967ರಲ್ಲಿ ಪ್ರಕಟಗೊಂಡಿತ್ತು.

ಪ್ರಸಿದ್ಧ ಗೀತರಚನೆಕಾರರಾಗಿದ್ದ ರೆಡ್ಡಿ ಅವರು ಚಲನಚಿತ್ರಗಳಿಗೆ 3,000ಕ್ಕೂ ಹೆಚ್ಚು ಹಾಡುಗಳನ್ನು  ಬರೆದಿದ್ದಾರೆ. ರಾಜ್ಯ ಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ  ಅವರು ತೆಲಂಗಾಣ ಸಾರಸ್ವತ ಪರಿಷತ್‌ ಅಧ್ಯಕ್ಷರಾಗಿಯೂ  ಕಾರ್ಯ ನಿರ್ವಹಿಸಿದ್ದಾರೆ.

Thursday, June 1, 2017

ಪ್ರಚಲಿತ ವಿದ್ಯಮಾನ : ಜೂನ್ 2017 : ಸೂರ್ಯನ ಮುಟ್ಟಲಿದೆ ನಾಸಾದ ಪಾರ್ಕರ್‌ ನೌಕೆ

ಸೂರ್ಯ ತನ್ನ ಮೇಲ್ಭಾಕ್ಕಿಂತಲೂ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.

ವಾಷಿಂಗ್ಟನ್‌: ಖಗೋಳ ಶಾಸ್ತ್ರಜ್ಞರಲ್ಲಿ ಇಂದಿಗೂ ಕುತೂಹಲದ ಕೇಂದ್ರವಾಗಿರುವ ಸೂರ್ಯನ ರಹಸ್ಯ ಭೇದಿಸಲು ನಾಸಾ ಹೊಸ ಯೋಜನೆ ರೂಪಿಸಿದೆ.

ಸೂರ್ಯಮಂಡಲದ ರಹಸ್ಯ ತಿಳಿಯಲು ಹತ್ತಾರು ವರ್ಷಾಗಳಿಂದ ವಿಜ್ಞಾನಿಗಳು ಹಲವು ರೀತಿಯಲ್ಲಿ ಶೋಧನಾ ಕಾರ್ಯ ನಡೆಸಿದ್ದು, ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದೀಗ ನಾಸಾ ನಕ್ಷತ್ರ ಸೂರ್ಯ ಅಧ್ಯಯನಕ್ಕಾಗಿ ಜಗತ್ತಿನ ಮಿಷನ್‌ ಸಿದ್ಧಪಡಿಸಿ ರವಾನಿಸುತ್ತಿದೆ.

60 ವರ್ಷಗಳ ಹಿಂದೆಯೇ ಸೌರ ಮಾರುತದ ಇರುವಿಕೆಯನ್ನು ಸೂಚಿಸಿದ್ದ ಖಗೋಳಶಾಸ್ತ್ರಜ್ಞ ಯುಗೀನ್‌ ಪಾರ್ಕರ್‌ ಅವರ ಗೌರವಾರ್ಥ ‘ಪಾರ್ಕರ್‌ ಸೌರ ಶೋಧನಾನೌಕೆ’ ಎಂದು ಹೆಸರಿಸಿರುವುದಾಗಿ ನಾಸಾ ತಿಳಿಸಿದೆ.

2018ರ ಜುಲೈ 31ರಂದು ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಈವರೆಗೂ ಕಾಣದ ವಲಯದಲ್ಲಿ ನೌಕೆ ಶೋಧನಾ ಕಾರ್ಯ ನಡೆಸಲಿದೆ ಎಂದು ಪ್ರೊ.ಪಾರ್ಕರ್‌ ತಿಳಿಸಿದ್ದಾರೆ.

ಸೂರ್ಯ ತನ್ನ ಮೇಲ್ಭಾಕ್ಕಿಂತಲೂ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.


4.5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್‌ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...