ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಕಟ್ಟಡ ಉರುಳಿ ಇಂದಿಗೆ 24 ವರ್ಷ. ಸುಪ್ರೀಂ ಕೋರ್ಟ್ ಆದೇಶದಂತೆ ಅಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ಆದರೆ, ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅಯೋಧ್ಯೆ ಮತ್ತೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕ ಯೋಜನೆಗಳನ್ನು ಪ್ರಕಟಿಸಿ, ಮತಬೇಟೆಗೆ ಹೊರಟಿವೆ.
ಅಂದು ಏನಾಯಿತು?
ಉತ್ತರಪ್ರದೇಶದಲ್ಲಿ 1991ರಲ್ಲಿ ಮುಲಾಯಂ ಸರ್ಕಾರ ಪತನವಾಗಿ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೇಂದ್ರದಲ್ಲೂ ಅದೇ ಅವಧಿಯಲ್ಲಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಎರಡನೇ ಬಾರಿಗೆ ಕರಸೇವೆ ಆಯೋಜಿಸಲಾಯಿತು. ಈ ಕರಸೇವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 4ರಂದೇ ಅಯೋಧ್ಯೆಯಲ್ಲಿ ಲಕ್ಷಾಂತರ ರಾಮಭಕ್ತರು ಜಮಾಯಿಸಿದ್ದರು. ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಡಿ.6ರಂದು ನಿಗದಿಯಂತೆ ಕರಸೇವೆ ನಡೆಯುತ್ತಿತ್ತು. ಅಂದು ಪೂರ್ವಾಹ್ನ 11 ಗಂಟೆಯವರೆಗೂ ಎಲ್ಲ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತಿದ್ದವು, ನಿಗದಿಯಂತೆ ವಿಹಿಂಪ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಷ್ಟೊತ್ತಿಗಾಗಲೇ ಕೆಲ ಯುವ ಕರಸೇವಕರು ವಿವಾದಿತ ಬಾಬ್ರಿ ಕಟ್ಟಡದ ಗುಮ್ಮಟವನ್ನು ಏರಿ ನೋಡುನೋಡುತ್ತಿದ್ದಂತೆ ಅದನ್ನು ಧ್ವಂಸಗೊಳಿಸಿದರು. ಇದರಿಂದ ಭಾವೋದ್ರೇಕಕ್ಕೆ ಒಳಗಾದ ಸಾವಿರಾರು ಕಾರ್ಯಕರ್ತರು ಕೆಲ ಹೊತ್ತಲ್ಲೇ ವಿವಾದಿತ ಕಟ್ಟಡವನ್ನು ಇಡಿಯಾಗಿ ನೆಲಸಮ ಮಾಡಿದ್ದರು. ಇತ್ತ ಲಾಲಕೃಷ್ಣ ಆಡ್ವಾಣಿ, ಸಾಧಿ್ವ ಉಮಾಭಾರತಿ ಸೂಚನೆ ನೀಡುತ್ತಿದ್ದರೂ ಕಿವಿಗೊಡದ ಕರಸೇವಕರ ಪಡೆ ಸಂಜೆ 7 ಗಂಟೆ ಹೊತ್ತಿಗೆ ಆ ಕಟ್ಟಡವನ್ನು ಧ್ವಂಸಗೊಳಿಸಿಯೇ ನಿರಾಳವಾಯಿತು. ಕರಸೇವೆ ಬಳಿಕ ನಡೆದ ಹಲವು ಸಂಘರ್ಷಗಳಲ್ಲಿ 50 ಕರಸೇವಕರು ಪ್ರಾಣ ಕಳೆದುಕೊಳ್ಳಬೇಕಾಯಿತು.
ಇಂದೇನು?: ಇತ್ತೀಚಿನ ವರ್ಷಗಳಲ್ಲಿ ಅಯೋಧ್ಯೆ ಶಾಂತವಾಗಿದೆ. ಜನರು ಮಂದಿರ-ಮಸೀದಿಗಿಂತ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ ಎಂದು ಹೇಳುತ್ತಿದ್ದಾರೆ. ಯುವಕರು ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದಾರೆ. ಮಾತ್ರವಲ್ಲ, ಚುನಾವಣೆ ಬಂದಾಗ ಮಾತ್ರ ರಾಜಕೀಯ ಪಕ್ಷಗಳು ಅಯೋಧ್ಯೆಯನ್ನು ನೆನಪಿಸಿಕೊಳ್ಳುತ್ತವೆ, ಆ ಬಳಿಕ ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಇಲ್ಲಿನ ಜನರ ಕಷ್ಟಕಾರ್ಪಣ್ಯಗಳನ್ನು ಕೇಳುವುದಿಲ್ಲ ಎಂದು ದೂರುತ್ತಿರುವ ಜನತೆ, ಇನ್ಮುಂದೆ ನಾವು ಮತಬ್ಯಾಂಕ್ ರಾಜಕೀಯಕ್ಕೆ ಬಲಿ ಆಗೋದಿಲ್ಲ ಎಂದು ಹೇಳಲು ಮರೆಯುವುದಿಲ್ಲ. ಹಾಗಾಗಿಯೇ, ಅಯೋಧ್ಯೆಯನ್ನು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿಸುವ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿವೆ. ರಾಮ ಜನ್ಮಭೂಮಿ ಪ್ರದೇಶದಿಂದ 15 ಕಿಲೋಮೀಟರ್ ದೂರದಲ್ಲಿ ರಾಮಾಯಣ ಸಂಗ್ರಹಾಲಯ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 25 ಎಕರೆಯಲ್ಲಿ ನಿರ್ವಣವಾಗಲಿರುವ ಈ ಮ್ಯೂಸಿಯಂ ಭಗವಾನ್ ಶ್ರೀರಾಮನ ಜೀವನ ಮತ್ತು ಮೌಲ್ಯಗಳನ್ನು ದರ್ಶಿಸಲಿದೆ. ರಾಮಾಯಣದ ಘಟನಾವಳಿಗಳು ಇಲ್ಲಿ ಬಿಂಬಿತವಾಗಲಿವೆ. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಇದನ್ನು ನಿರ್ವಿುಸುವ ಉದ್ದೇಶವಿದ್ದು, ರಾಮ ಹಾಗೂ ರಾಮಾಯಣ ಕುರಿತಾದ ಪ್ರತಿ ಮಾಹಿತಿ ಸಿಗಲಿದೆ. ಈ ಮ್ಯೂಸಿಯಂ ನಿರ್ವಣಕ್ಕಾಗಿ ಕೇಂದ್ರ ಸರ್ಕಾರ 150 ಕೋಟಿ ರೂಪಾಯಿ ಮಂಜೂರು ಮಾಡಲಿದೆ.
ಚುನಾವಣೆಯ ಕೇಂದ್ರಬಿಂದು
ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಮತ್ತೆ ರಾಜಕಾರಣದ ಕೇಂದ್ರಬಿಂದುವಾಗುತ್ತಿದೆ. ಆಡಳಿತಾರೂಢ ಸಮಾಜವಾದಿ ಪಕ್ಷ ಅಯೋಧ್ಯೆಯಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರೆ, ಕೇಂದ್ರ ಸರ್ಕಾರ ಅಯೋಧ್ಯೆಯನ್ನು ಸಾಂಸ್ಕೃತಿಕ ಲೋಕದ ವಿಶಿಷ್ಟ ಸ್ಥಾನವಾಗಿಸಲಾಗುವುದು ಎಂದು ಹೇಳುತ್ತಿದೆ. ಈ ಮಧ್ಯೆ, ರಾಮಮಂದಿರ ನಿರ್ವಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆ ಬಿಜೆಪಿಯೊಳಗಿನಿಂದಲೇ ಕೇಳಿಬರುತ್ತಿದ್ದು, ಸಂಘಪರಿವಾರ ಇದಕ್ಕೆ ದನಿಗೂಡಿಸಿದೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಮ ಮಂದಿರ ವಿಷಯದ ಬಗ್ಗೆ ಜಾಣಮರೆವು ತೋರುತ್ತಿದ್ದಾರೆ ಎಂದು ಬಿಜೆಪಿಯ ಕೆಲ ಹಿರಿತಲೆಗಳು ಅತೃಪ್ತಿ ಹೊರಹಾಕಿವೆ. ಮತ್ತೊಂದೆಡೆ, ಅಯೋಧ್ಯೆಯಲ್ಲಿ ಬಾಬ್ರಿ ಕಟ್ಟಡವಿದ್ದ ಜಾಗದಲ್ಲಿ ಮಸೀದಿ ನಿರ್ವಿುಸಬೇಕು ಎಂದು ಮುಸ್ಲಿಂ ಸಂಘಟನೆಗಳು ಆಗ್ರಹಿಸಿವೆ.
ಸ್ಥಳೀಯರು ಏನಂತಾರೆ?: ಅಯೋಧ್ಯೆ ಅಶಾಂತಿಯ, ಕೋಮುಗಲಭೆಯ ತಾಣವಾಗಿ ಅಲ್ಲ, ಅದು ದೇಶದ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬಿಂಬಿತವಾಗಬೇಕು. ಐತಿಹಾಸಿಕ ನಗರಿಯು ಪ್ರವಾಸಿಗರ ಭೇಟಿ, ಉತ್ತಮ ಕ್ಷಣಗಳಿಗೆ ಸಾಕ್ಷಿಯಾಗಬೇಕು. ಹಾಗಾಗಿ, ಅಯೋಧ್ಯೆಯನ್ನು ‘ವಿವಾದಿತ’ ಎಂದು ಬಿಂಬಿಸದೆ ಪ್ರೇಕ್ಷಣೀಯ ತಾಣವಾಗಿ ಬಿಂಬಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಮಾತ್ರವಲ್ಲ, ಸಾಕಷ್ಟು ಯುವಕರು ಪ್ರವಾಸಿಗರಿಗೆ ಗೈಡ್ ಆಗಿ ಕಾರ್ಯನಿರ್ವಹಿಸುತ್ತ, ಪ್ರವಾಸೋದ್ಯಮದಿಂದ ಆದಾಯ ಪಡೆದುಕೊಳ್ಳುತ್ತಿದ್ದಾರೆ.
ಜನರೇ ನಿರ್ಧರಿಸಬೇಕು: ಮಂದಿರ ನಿರ್ವಣವಾಗಬೇಕೆ? ಮಸೀದಿ ನಿರ್ವಣವಾಗಬೇಕೆ? ಎಂಬ ನಿರ್ಧಾರವನ್ನು ಅವಳಿ ನಗರಗಳ (ಅಯೋಧ್ಯೆ-ಫೈಜಾಬಾದ್) ಜನರಿಗೆ ಬಿಟ್ಟುಕೊಡಬೇಕು. ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದಾಗಿಯೇ ಈ ವಿವಾದ ಬಗೆಹರಿಯದೆ ಉಳಿದಿದೆ. ಆದ್ದರಿಂದ, ಸೌಹಾರ್ದಯುತ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ಥೀಮ್ ಪಾರ್ಕ್
ಸರಯೂ ನದೀತೀರದಲ್ಲಿ ರಾಮಲೀಲಾ ಥೀಮ್ ಪಾರ್ಕ್ ನಿರ್ಮಾಣ ಮಾಡಲು ನಿರ್ಧರಿಸಿರುವ ಉತ್ತರಪ್ರದೇಶ ಸರ್ಕಾರ ಈ ಸಂಬಂಧಿತ ಪ್ರಕ್ರಿಯೆಗಳಿಗೆ ವೇಗ ನೀಡಲು ನಿರ್ಧರಿಸಿದೆ. ಚುನಾವಣೆ ನೀತಿಸಂಹಿತೆ ಜಾರಿಯಾದರೆ ಹೊಸ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಅವಕಾಶ ದೊರೆಯುವುದಿಲ್ಲವಾದ್ದರಿಂದ ಆದಷ್ಟು ಬೇಗನೆ ಈ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಿರ್ಧರಿಸಿದ್ದಾರೆ.
ಲಿಬರ್ಹಾನ್ ಆಯೋಗ
ಘಟನೆಯ 10 ದಿನಗಳ ಬಳಿಕ ಅಂದರೆ ಡಿ.16ರಂದು ಕೇಂದ್ರ ಸರ್ಕಾರ ಪ್ರಕರಣದ ಸಮಗ್ರ ತನಿಖೆಗಾಗಿ ಲಿಬರ್ಹಾನ್ ಆಯೋಗ ರಚಿಸಿತು. ಈ ಆಯೋಗ 17 ವರ್ಷಗಳ ಬಳಿಕ 2009ರಲ್ಲಿ ವರದಿ ಸಲ್ಲಿಸಿತು. ಈ ಆಯೋಗ ಯಾವುದೇ ಸಂಘಟನೆ, ವ್ಯಕ್ತಿಯನ್ನು ಅಪರಾಧಿ ಎಂದು ಹೇಳದೆ ಹಲವು ಸಂಘಟನೆ, ವ್ಯಕ್ತಿಗಳದ್ದು ಸ್ವಲ್ಪ ಸ್ವಲ್ಪ ದೋಷವಿದೆ ಎಂದಿತು. ಆದರೆ, ಆಯೋಗ ಸಲ್ಲಿಸಿದ ವರದಿಯಲ್ಲಿ ಯಾವುದೇ ಹೊಸ ಮಾಹಿತಿಗಳಿರಲಿಲ್ಲ. 17 ವರ್ಷದ ಹಿಂದೆ ಎಲ್ಲರಿಗೂ ಗೊತ್ತಿದ್ದ ಮಾಹಿತಿಗಳನ್ನೇ ಆಯೋಗ ಮತ್ತೆ ಆಲಾಪಿಸಿತ್ತು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣದ ಕುರಿತಂತೆ ಯಾವುದೇ ರಾಜಕೀಯ ಪಕ್ಷಗಳು ಗಂಭೀರವಾಗಿಲ್ಲ. ಅವು ಬರೀ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಂಡಿವೆ. ವಾಸ್ತವದಲ್ಲಿ, ರಾಮ ಮಂದಿರ ನಿರ್ವಣದ ವಿಷಯವನ್ನು ರಾಜಕೀಯೀಕರಣಗೊಳಿಸಿದ್ದೇ ಬಿಜೆಪಿ. ಆದರೆ, ಮಂದಿರ ನಿರ್ವಿುಸುವ ಬಗ್ಗೆ ಅದಕ್ಕೆ ಯಾವುದೇ ಬದ್ಧತೆ ಇದ್ದಂತಿಲ್ಲ. ಜನಸಾಮಾನ್ಯರು ರಾಜಕೀಯ ಪಕ್ಷಗಳ ತಂತ್ರಗಾರಿಕೆಯನ್ನು ಅರಿಯದೆ ಹೋದರು. ಆದರೀಗ, ಅವರೂ ಜಾಗೃತರಾಗಿದ್ದು ಮೋಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕು.| ಮಹಂತ್ ರಾಮ್ಾಸ, ನಿಮೋಹಿ ಅಖಾಡಾ ಮುಖ್ಯಸ್ಥರು
ಜನರ ಧಾರ್ವಿುಕ ನಂಬಿಕೆಗಳನ್ನು ರಾಜಕೀಯಕ್ಕೆ ಬಳಸಬಾರದು. ಮುಖ್ಯವಾಗಿ, ಅಯೋಧ್ಯೆಯ ವಿಷಯದಲ್ಲಿ. ಧರ್ಮದಲ್ಲಿ ರಾಜಕೀಯ ಬೆರೆಸುವ ಎಲ್ಲ ಶಕ್ತಿ, ಪಕ್ಷಗಳನ್ನು ನಾನು ಖಂಡಿಸುತ್ತೇನೆ. ಮಂದಿರ-ಮಸೀದಿ ವಿವಾದದಲ್ಲಿ ಜನರನ್ನು, ಅವರ ಮನಸ್ಸುಗಳನ್ನು ವಿಭಜಿಸಬಾರದು. ಉದ್ಯೋಗಾವಕಾಶ, ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನ ಹರಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.| ಮೌಲಾನಾ ಯಾಸೂಬ್ ಅಬ್ಬಾಸಿ ಚಿಂತಕ
No comments:
Post a Comment