Monday, May 29, 2017

ಪ್ರಚಲಿತ ವಿದ್ಯಮಾನ : ಮೇ 2017 : ಜನರಿಂದ ಸರ್ಕಾರದ ಮೌಲ್ಯಮಾಪನಕ್ಕೆ ಮೋದಿ ಸಂತಸ

‘ಜನ್ ಕಿ ಬಾತ್’ ಮೂಲಕ ಜನತೆ ತಮ್ಮ ಸರ್ಕಾರದ ಬಗ್ಗೆ ಫೀಡ್​ಬ್ಯಾಕ್ ನೀಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ಜತೆಗೆ ‘ರಚನಾತ್ಮಕ ಟೀಕೆ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ’ ಎಂದಿದ್ದಾರೆ.

ಮೂರು ವರ್ಷದ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುತ್ತಿರುವ 20 ದಿನಗಳ ‘ಮೋದಿ’ ಉತ್ಸವಗಳ ಸಂದರ್ಭದಲ್ಲಿ ‘ಜನ್ ಕಿ ಬಾತ್’ ಮೂಲಕ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಜನರಿಂದ ಮಾಹಿತಿ ಪಡೆಯಲಾಗುತ್ತಿದೆ. ಜನರು ನಮ್ಮ ಕೆಲಸವನ್ನು ವಿಸ್ತಾರವಾಗಿ ಮೌಲ್ಯಮಾಪನ ಮಾಡುತ್ತಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ. ನಾನು ಇದನ್ನು ಸ್ವಾಗತಿಸುತ್ತೇನೆ. ‘ಮನ್ ಕಿ ಬಾತ್’ಗೆ(ಮನದಾಳದ ಮಾತು) ನಾನು ಒಂದು ಆಯಾಮವನ್ನು ನೀಡಿದ್ದೇನೆ. ನನ್ನ ಕೆಲ ಮಿತ್ರರು, ಈ ಮನದಾಳದ ಮಾತು ಪುಸ್ತಕ ರೂಪದಲ್ಲಿ ತರುವ ಪ್ರಸ್ತಾಪ ಇರಿಸಿದಾಗ ನಾನು ಚಕಿತನಾದೆ. ಅಬುದಾಬಿಯಲ್ಲಿರುವ ಅಕ್ಬರ್ ಸಾಹಬ್ ಎಂಬ ಕಲಾವಿದರು ಒಂದು ಪ್ರಸ್ತಾವನೆ ಇಟ್ಟರು. ‘ಮನ್ ಕಿ ಬಾತ್’ನಲ್ಲಿ ರ್ಚಚಿಸಲಾದ ವಿಷಯಗಳ ಬಗ್ಗೆ ಅವರು ಸುಂದರವಾದ ರೇಖಾಚಿತ್ರಗಳನ್ನು ತಯಾರಿಸಿಕೊಟ್ಟಿದ್ದಾರೆ ಅದೂ ಪುಡಿಗಾಸೂ ಪಡೆಯದೇ. ಮನದಾಳದ ಮಾತಿಗೆ ಕಲೆಯ ರೂಪವನ್ನು ನೀಡಿದ ಅಕ್ಬರ್ ಅವರಿಗೆ ನಾನು ಋಣಿ.

ಮೂರು ತಲೆಮಾರುಗಳು ಒಟ್ಟಿಗೆ ಯೋಗ ಮಾಡಬೇಕು
ಜೂನ್ 21 ಈಗ ವಿಶ್ವಕ್ಕೆ ಅತ್ಯಂತ ಚಿರಪರಿಚಿತ ದಿನ. ವಿಶ್ವ ಯೋಗ ದಿನವನ್ನು ಸಂಪೂರ್ಣ ವಿಶ್ವವೇ ಆಚರಿಸುತ್ತಿದೆ. ಯೋಗವು ಜಗತ್ತಿನ ಜನರನ್ನು ಪರಸ್ಪರ ಸಂರ್ಪಸುತ್ತಿದೆ. ಜನರನ್ನು ಒಗ್ಗೂಡಿಸುತ್ತಿದೆ. ವಿಶ್ವ ಯೋಗ ದಿನದಂದು ಕುಟುಂಬದ ಮೂರು ತಲೆಮಾರುಗಳು ಒಟ್ಟಾಗಿ ಯೋಗ ಮಾಡಬೇಕು.
ಸಾವರ್ಕರ್ ಸ್ಮರಣೆ
ನಮಗೆ ಸ್ವಾತಂತ್ರ್ಯ ಕೊಡಿಸಲು ಅಂದಿನ ಜನರು ಎಷ್ಟೆಲ್ಲ ಯಾತನೆ ಅನುಭವಿಸಿದರು, ಎಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದ್ದರು ಎಂಬುದನ್ನು ತಿಳಿಯಲು ಸಾವರ್ಕರ್ ಇದ್ದ ಸೆಲ್ಯುಲಾರ್ ಜೈಲಿಗೆ ಹೋಗಿಬನ್ನಿ. ಅಲ್ಲಿಗೆ ಹೋದರೆ ಕಾಲಾಪಾನಿ ಎಂದರೇನು? ಆ ಶಿಕ್ಷೆ ಎಷ್ಟು ಘೊರವಾಗಿತ್ತು? ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಪ್ರಧಾನಿ ಯುವಕರಿಗೆ ಸಲಹೆ ನೀಡಿದರು.

ರಂಜಾನ್ ಶುಭಾಶಯ…
ರಂಜಾನ್ ಹಬ್ಬದ ನಿಮಿತ್ತ ರಾಷ್ಟ್ರದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ, ಭಾರತದ ಎಲ್ಲ ಪ್ರಮುಖ ಧರ್ಮಗಳ ಜನರೂ ಸೌಹಾರ್ದದೊಂದಿಗೆ ಬಾಳುತ್ತಿರುವುದು ಸಂತಸದ ಸಂಗತಿ. ವೈವಿಧ್ಯತೆ ನಮ್ಮ ದೇಶದ ಶಕ್ತಿಯಾಗಿದೆ. ನಮ್ಮ ಹಿರಿಯರು ಇಂತಹ ಸಂಸ್ಕೃತಿಯನ್ನು ನಮಗೆ ಬಿಟ್ಟು ಹೋಗಿರುವುದಕ್ಕಾಗಿ ನಮಗೆ ಹೆಮ್ಮೆ ಇದೆ. ಎಲ್ಲ ಮತಧರ್ಮಗಳ ಜನರು ಭಾರತದಲ್ಲಿ ಸಾಮರಸ್ಯದೊಂದಿಗೆ ಬದುಕುತ್ತಿದ್ದಾರೆ ಎಂದರಲ್ಲದೆ, ‘ಮನ್ ಕಿ ಬಾತ್’ ಕಾರ್ಯಕ್ರಮವು ತಮಗೆ ಜನರನ್ನು ಸಂರ್ಪಸಲು ಅಪಾರವಾಗಿ ನೆರವಾಗಿದೆ ಎಂದರು. -ಏಜೆನ್ಸೀಸ್

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...