ನವದೆಹಲಿ: ಅಸ್ಸಾಂನ ಧೊಲಾ-ಸದಿಯಾ ನಡುವೆ ಸಂಪರ್ಕ ಕಲ್ಪಿಸುವ ದೇಶದಲ್ಲಿಯೇ ಅತಿ ಉದ್ದದ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸೇತುವೆ ಚೀನಾ ಗಡಿಯ ಅತಿ ಸಮೀಪದಲ್ಲಿರುವ ಕಾರಣ ರಕ್ಷಣಾ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. 60 ಟನ್ ತೂಕದ ಯುದ್ಧ ಟ್ಯಾಂಕ್ಗಳು ಈ ಸೇತುವೆ ಮೇಲೆ ಸಾಗಬಹುದು. ಗಡಿ ಭಾಗಕ್ಕೆ ರಕ್ಷಣಾ ಸಾಮಗ್ರಿಗಳನ್ನು ಸಾಗಿಸಲು ಈ ಸೇತುವೆ ಅತ್ಯಂತ ಮಹತ್ವದ್ದಾಗಿದೆ. ನಿರಂತರವಾಗಿ ಗಡಿಯಲ್ಲಿ ತಂಟೆ ನಡೆಸುತ್ತಿರುವ ಚೀನಾಕ್ಕೂ ಇದು ಸೂಕ್ಷ್ಮ ಎಚ್ಚರಿಕೆಯಾಗಿದೆ.
ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ 26ಕ್ಕೆ ಮೂರು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೇ ದಿನ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಳ್ಳುತ್ತದೆ. ಸಂಭ್ರಮಾಚರಣೆ ಅಂಗವಾಗಿ ಪ್ರಧಾನಿ ಮೋದಿ ಅಂದು ಸೇತುವೆ ಉದ್ಘಾಟಿಸಲಿದ್ದಾರೆ. – ಏಜೆನ್ಸೀಸ್
ಏನೇನು ಪ್ರಯೋಜನ?
- ಅಸ್ಸಾಂನ ತೇಜ್ಪುರ ಬಿಟ್ಟರೆ ಬ್ರಹ್ಮಪುತ್ರ ನದಿಗೆ ಯಾವುದೇ ಸೇತುವೆ ಇಲ್ಲ. ಜನರು ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳಲು ಜಲಮಾರ್ಗವನ್ನೇ ಅವಲಂಬಿಸಿದ್ದಾರೆ. ಈ ಸೇತುವೆ ನಿರ್ವಣದಿಂದ ಸಂಪರ್ಕ ಅತ್ಯಂತ ಸುಲಭವಾಗುತ್ತದೆ
- ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ನಡುವೆ ಸಂಪರ್ಕ ಬೆಸೆಯುವಲ್ಲಿ ಸೇತುವೆ ಮಹತ್ವದ ಪಾತ್ರ ವಹಿಸಿದೆ. ಅಸ್ಸಾಂ-ಅರುಣಾಚಲ ರಸ್ತೆ ಮಾರ್ಗದ ಪ್ರಯಾಣ ಅವಧಿಯಲ್ಲಿ ಸುಮಾರು ನಾಲ್ಕು ತಾಸು ಕಡಿಮೆಯಾಗಲಿದೆ.
- ಅರುಣಾಚಲ ಪ್ರದೇಶಕ್ಕೆ ರೈಲ್ವೆ ಸಂಪರ್ಕವಿಲ್ಲ. ಈ ಸೇತುವೆ ಮೂಲಕ ಅಸ್ಸಾಂನ ತಿನ್ಸುಖಿಯಾ ರೈಲ್ವೆ ನಿಲ್ದಾಣ ತಲುಪಬಹುದು. ದಿಬ್ರುಗಢ ವಿಮಾನ ನಿಲ್ದಾಣಕ್ಕೂ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
- ಅರುಣಾಚಲ ಪ್ರದೇಶದ ಗಡಿಗೆ ತ್ವರಿತವಾಗಿ ಸಾಮಗ್ರಿ, ಯುದ್ಧ ಟ್ಯಾಂಕ್ಗಳನ್ನು ರವಾನಿಸಲು ಸಹಕಾರಿ
ಸೇತುವೆ ಉದ್ಘಾಟನೆ 2 ವರ್ಷ ವಿಳಂಬ
ಹಿಂದಿನ ಯುಪಿಎ ಆಡಳಿತದಲ್ಲೇ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ನಿಗದಿಯಂತೆ 2015ರಲ್ಲಿ ಸೇತುವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕಿತ್ತು. ಆದರೆ ಕಾಮಗಾರಿ ವಿಳಂಬವಾಗಿತ್ತು. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿಗೆ ಚುರುಕು ನೀಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮಾಹಿತಿ ನೀಡಿದ್ದಾರೆ. -ಏಜೆನ್ಸೀಸ್
ಸೇತುವೆ ವಿಶೇಷತೆ
- ಬ್ರಹ್ಮಪುತ್ರ ಉಪನದಿ ಲೋಹಿತ್ ನದಿಯಲ್ಲಿ ಈ ಸೇತುವೆ ನಿರ್ವಿುಸಲಾಗಿದೆ
- ಒಟ್ಟು ಉದ್ದ: 19.15 ಕಿ.ಮೀ.
- 2011 ರಲ್ಲಿ ಆರಂಭ
- 2017 ಮೇನಲ್ಲಿ ಪೂರ್ಣ
- ಕಾಮಗಾರಿ ಒಟ್ಟು ವೆಚ್ಚ 950 ಕೋಟಿ ರೂ.
- 60 ಟನ್ ತೂಕ ಯುದ್ಧ ಟ್ಯಾಂಕ್ಗಳ ಸಂಚಾರದ ಸಾಮರ್ಥ್ಯ
- 3.35 ಕಿ.ಮೀ. ಬಾಂದ್ರಾ-ವರ್ಲಿ ಸೇತುವೆ ಗಿಂತ ಉದ್ದದ ಬ್ರಿಡ್ಜ್
No comments:
Post a Comment