ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ನಿರ್ಮಾಣ ವಾಗಿರುವ ಉದ್ವಿಗ್ನ ಸ್ಥಿತಿ ಬೆನ್ನಲ್ಲೇ, ಸೇನೆಗೆ ಅಗತ್ಯವಾಗಿರುವ ರಕ್ಷಣಾ ಸಾಮಗ್ರಿಗಳನ್ನು ದೇಶದಲ್ಲೇ ತಯಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಖಾಸಗಿ ಕಂಪನಿಗಳು ಜಾಗತಿಕ ಕಂಪನಿಗಳ ಪಾಲುದಾರಿಕೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ವ್ಯೂಹಾತ್ಮಕ ಪಾಲುದಾರಿಕೆ (ಎಸ್ಪಿ) ಪ್ರಸ್ತಾವನೆಗೆ ಹಣಕಾಸು ಹಾಗೂ ರಕ್ಷಣಾ ಸಚಿವ ಅರುಣ್ ಜೇಟ್ಲಿ ನೇತೃತ್ವದ ರಕ್ಷಣಾ ಸಾಧನ ಸಂಗ್ರಹ ಮಂಡಳಿ(ಡಿಎಸಿ) ಒಪ್ಪಿಗೆ ನೀಡಿದೆ. ಈ ಹಿಂದೆ ರಕ್ಷಣಾ ರಂಗದಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಪ್ರಮುಖ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲೂ ಖಾಸಗಿ ವಲಯಕ್ಕೆ ಬಾಗಿಲು ತೆರೆದಂತಾಗಿದೆ. ಮೊದಲ ಹಂತವಾಗಿ ಸೇನೆಗೆ ಅತಿ ಅಗತ್ಯವಿರುವ ಯುದ್ಧವಿಮಾನಗಳು, ಹೆಲಿಕಾಪ್ಟರ್ಗಳು, ಜಲಾಂತರ್ಗಾಮಿ ಹಾಗೂ ಯುದ್ಧ ಟ್ಯಾಂಕ್ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದಿಸಲು ಸಮಿತಿ ಅನುಮೋದನೆ ನೀಡಿದೆ. ವಾಯುಪಡೆಯ ಹಲವು ವರ್ಷಗಳ ಬೇಡಿಕೆಯಾಗಿರುವ 39 ಹೆಲಿಕಾಪ್ಟರ್ಗಳ ತಯಾರಿಕೆಗೂ ಒಪ್ಪಿಗೆ ನೀಡಲಾಗಿದೆ. ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಪರಿಶೀಲನೆಯ ಬಳಿಕ ಈ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡಿಆರ್ಡಿಒಗೆ ಎಚ್ಚರಿಕೆ ಗಂಟೆ: ಭದ್ರತಾ ಸಾಮಗ್ರಿಗಳ ಉತ್ಪಾದನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಸಹಿತ ಕೇಂದ್ರ ಸರ್ಕಾರದ ನಾಲ್ಕು ಸಂಸ್ಥೆಗಳಿವೆ. 50 ಪ್ರಯೋಗಾಲಯಗಳು, 41 ಫ್ಯಾಕ್ಟರಿಗಳು, 4 ಶಿಪ್ಯಾರ್ಡ್
ಗಳಿವೆ. ಹಲವು ದಶಕಗಳಿಂದ ಇವು ಕಾರ್ಯನಿರ್ವಹಿಸುತ್ತಿದ್ದರೂ ಭಾರತದ ಭದ್ರತಾ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಲು ವಿಫಲವಾಗಿವೆ. ಕೇಂದ್ರ ಸರ್ಕಾರದ ಹೊಸ ನೀತಿ ಇವುಗಳಿಗೆ ಎಚ್ಚರಿಕೆ ಗಂಟೆಯೆಂದೇ ವಿಶ್ಲೇಷಿಸಲಾಗುತ್ತಿದೆ. ಡಿಆರ್ಡಿಒ ಮತ್ತಿತರ ಸಂಸ್ಥೆಗಳು ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಿ ಉತ್ತಮ ರಕ್ಷಣಾ ಸಾಮಗ್ರಿ ತಯಾರಿಸಲು ವಿಫಲವಾದಲ್ಲಿ ಇವುಗಳಿಗೆ ನೀಡಲಾಗುವ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಕಡಿತವಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಅರ್ಹತೆ ಆಧಾರದಲ್ಲಿ ಕಂಪನಿ ಆಯ್ಕೆ
ಪ್ರಸ್ತುತ ನಾಲ್ಕು ಪ್ರಮುಖ ರಕ್ಷಣಾ ಸಾಧನ ಉತ್ಪಾದನೆಗೆ ಖಾಸಗಿ ಸಹಭಾಗಿತ್ವ ಹೊಂದಲು ಸಮಿತಿ ಒಪ್ಪಿಗೆ ನೀಡಿದೆ. ಒಂದು ಸಾಮಗ್ರಿ ಉತ್ಪಾದನೆಗೆ ಒಂದು ಸಂಸ್ಥೆಯನ್ನು ಮಾತ್ರ ಪಾಲುದಾರನನ್ನಾಗಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪಾರದರ್ಶಕತೆ ಹಾಗೂ ಸ್ಪರ್ಧಾತ್ಮಕತೆ ಆಧಾರದಲ್ಲಿ ಪಾಲುದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಂಪನಿಯ ಆರ್ಥಿಕತೆ, ವಾರ್ಷಿಕ ಉತ್ಪಾದನೆ, ತಂತ್ರಜ್ಞಾನ, ಅನುಭವ, ಈಗ ಲಭ್ಯವಿರುವ ಮೂಲಸೌಕರ್ಯ ಮತ್ತಿತರ ಅಂಶಗಳ ಮೇಲೆ ಈ ಆಯ್ಕೆ ನಡೆಯಲಿದೆ.
ಭಾರತಕ್ಕೇನು ಲಾಭ?
- ಜಾಗತಿಕ ಕಂಪನಿಗಳ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಯುದ್ಧೋಪಕರಣಗಳನ್ನು ದೇಶದಲ್ಲೇ ತಯಾರಿಸಬಹುದು
- ಹತ್ತಾರು ಸಾವಿರ ಕೋಟಿ ರೂ. ನೀಡಿ ವಿದೇಶದಿಂದ ಆಮದು ಮಾಡಿಕೊಳ್ಳುವುದು ತಪ್ಪಲಿದೆ
- ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲೇ ಶಸ್ತ್ರಾಸ್ತ್ರ ತಯಾರಿಕೆ ಘಟಕ ಸ್ಥಾಪನೆಯಾಗುವ ಕಾರಣ ಅಪಾರ ಉದ್ಯೋಗ ಸೃಷ್ಟಿ
- ತ್ವರಿತಗತಿಯಲ್ಲಿ ಶಸ್ತ್ರಾಸ್ತ್ರ ತಯಾರಿಸಬಹುದು. ಯುದ್ಧ ಸಂದರ್ಭದಲ್ಲಿ ಇದು ಅನುಕೂಲ
- ತುರ್ತ ಸಂದರ್ಭಗಳಲ್ಲಿ ವಿದೇಶದಿಂದ ಶಸ್ತ್ರಾಸ್ತ್ರ ಆಮದು ಅಸಾಧ್ಯವಾಗಬಹುದು ಅಥವಾ ವಿಳಂಬ ಆಗಬಹುದು. ದೇಶದಲ್ಲೇ ಉತ್ಪಾದನೆಯಾದರೆ ಈ ಸಮಸ್ಯೆ ಇರುವುದಿಲ್ಲ
ಅಪಾಯವೇನು?
- ಭಾರತದ ರಕ್ಷಣಾ ರಹಸ್ಯಗಳು ಸೋರಿಕೆ ಆಗುವ ಆತಂಕ
- ದೇಶದಲ್ಲಿನ ಶಸ್ತ್ರಾಸ್ತ್ರ ಸಂಗ್ರಹ, ತಂತ್ರಜ್ಞಾನಗಳ ಮಾಹಿತಿ ಯನ್ನು ಶತ್ರುರಾಷ್ಟ್ರಕ್ಕೆ ರವಾನಿಸಿದರೆ ಅನಾಹುತ ಸಾಧ್ಯತೆ
- ಯುದ್ಧ ಸಂದರ್ಭದಲ್ಲಿ ರಕ್ಷಣಾ ವಿವರ ಎದುರಾಳಿಗಳಿಗೆ ಸಿಕ್ಕರೆ ಪ್ರತಿತಂತ್ರ ರೂಪಿಸುವುದು ಅವರಿಗೆ ಸುಲಭ
- ಅತ್ಯಂತ ರಹಸ್ಯವಾಗಿರಬೇಕಾದ ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಪ್ರವೇಶ ಸರಿಯೇ ಎಂಬ ಜಿಜ್ಞಾಸೆ
ಭಾರತೀಯ ಸೇನೆಯ ಅಗತ್ಯತೆಗಳು ಯುದ್ಧ ಟ್ಯಾಂಕ್
4 ಎರಡು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಯುದ್ಧ ಟ್ಯಾಂಕ್ ತಯಾರಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿ
ಇಸ್ರೇಲ್, ಅಮೆರಿಕ, ಭಾರತ ಜಂಟಿಯಾಗಿ ಟ್ಯಾಂಕ್ಗಳನ್ನು ತಯಾರಿಸುವ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ
ಹೆಲಿಕಾಪ್ಟರ್
ಜಲಾಂತರ್ಗಾಮಿ ಹೊಡೆದುರುಳಿಸುವ 147 ಬಹೂಪಯೋಗಿ ಹೆಲಿಕಾಪ್ಟರ್ಗಳು (ಎಂಆರ್ಎಚ್) ನೌಕಾಪಡೆಗೆ ಬೇಕು
ಆಧುನಿಕ ತಂತ್ರಜ್ಞಾನ ಹೊಂದಿರದ 4-5 ಯುದ್ಧ ನೌಕೆಗಳನ್ನು ನೌಕಾಪಡೆ ಪ್ರತಿವರ್ಷ ಸೇರಿಸಿಕೊಳ್ಳುತ್ತಿದೆ
ದ್ವಿ ಎಂಜಿನ್ನ 110 ಲಘು ಹೆಲಿಕಾಫ್ಟರ್ ಖರೀದಿಗೆ ನಿರ್ಧಾರ
ಯುದ್ಧ ವಿಮಾನ
ಅಮೆರಿಕದ ಎಫ್ 16, ಸ್ವೀಡನ್ ಗ್ರೖೆಪೆನ್-ಇ ಜೆಟ್ ಖರೀದಿಗೆ ಕೇಂದ್ರ ಸರ್ಕಾರದಿಂದ ಚಿಂತನೆ
ನೌಕಾಪಡೆ 33 ಯುದ್ಧ ಸ್ಕಾ್ವಡ್ರನ್ ಹೊಂದಿದ್ದು, 44 ಸ್ಕಾ್ವಡ್ರನ್ಗಳ ಅಗತ್ಯವಿದೆ
2020-2026ರ ವೇಳೆಗೆ 100 ಸುಧಾರಿತ ತೇಜಸ್ ಮಾರ್ಕ್-1ಎ ವಿಮಾನ ಸೇರ್ಪಡೆ ನಿರೀಕ್ಷೆ
ಜಲಾಂತರ್ಗಾಮಿಗಳು
ನೌಕಾಪಡೆ ಬಳಿ 13 ಸಾಂಪ್ರದಾಯಿಕ ಜಲಾಂತರ್ಗಾಮಿಗಳಿವೆ
2017-2021ರ ವೇಳೆಗೆ ಆರು ಸ್ಕಾರ್ಪೀನ್
ಜಲಾಂತರ್ಗಾಮಿ ಸೇರ್ಪಡೆ ನಿರೀಕ್ಷೆ
2007ರ ನವೆಂಬರ್ನಲ್ಲಿ 70 ಸಾವಿರ ಕೋಟಿ ರೂ. ವೆಚ್ಚದ ಸಬ್ವುರಿನ್ ನಿರ್ಮಾಣ ಯೋಜನೆಗೆ ಒಪ್ಪಿಗೆ
ಇದುವರೆಗೂ ಪಾಲುದಾರರ ಆಯ್ಕೆ ಆಗಿಲ್ಲ
No comments:
Post a Comment