Tuesday, May 30, 2017

ಪ್ರಚಲಿತ ವಿದ್ಯಮಾನ : ಮೇ 2017 : ರಾಷ್ಟ್ರಮಟ್ಟದಲ್ಲಿ ಹೊಸ ಎಪಿಎಂಸಿ ಕಾಯ್ದೆ ಶೀಘ್ರ ಜಾರಿ

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಎಪಿಎಂಸಿ ಕಾಯ್ದೆ ರೂಪಿಸುತ್ತಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಕೃಷಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅಶೋಕ್ ದಳವಾಯಿ ತಿಳಿಸಿದ್ದಾರೆ.

ಅಸೋಚಾಮ್ ಸೋಮವಾರ ಆಯೋಜಿಸಿದ್ದ ‘ಆಹಾರ ಸಂಸ್ಕರಣಾ ವಿಭಾಗದ ಹಿಂದುಳಿದ ಕೈಗಾರಿಕೆಗಳ ಸಂಪರ್ಕ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅವರು, ಪ್ರಸ್ತುತ ದಲ್ಲಾಳಿಗಳ ಕಪಿಮುಷ್ಠಿಯಲ್ಲಿರುವ ಎಪಿಎಂಸಿಗಳಿಂದ ರೈತರಿಗೆ ನ್ಯಾಯಯುತವಾದ ಮಾರುಕಟ್ಟೆ ಬೆಲೆ ಸಿಗುತ್ತಿಲ್ಲ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಎಪಿಎಂಸಿಗಳು ಪರಸ್ಪರ ಸಂಪರ್ಕ ಸಾಧಿಸುವಂತೆ ಮಾಡಲಾಗುತ್ತಿದೆ. ಅಲ್ಲದೆ, ತಂತ್ರಜ್ಞಾ ನಾಧಾರಿತ ಇಲೆಕ್ಟ್ರಾನಿಕ್ ಮಾರುಕಟ್ಟೆ ವ್ಯವಸ್ಥೆ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿದ್ದು, ದೇಶದ ಎಲ್ಲ ಎಪಿಎಂಸಿಗಳನ್ನು ಒಂದು ತಂತ್ರಾಂಶದಡಿ ತರಲಾಗುತ್ತದೆ ಎಂದರು.

ದೇಶದಲ್ಲಿನ ಕೃಷಿಕರ ಆದಾಯದ ಬಗ್ಗೆ ನಿಖರ ಅಂಕಿ ಅಂಶಗಳಿಲ್ಲ. 2012-13ರಲ್ಲಿ ನಡೆದ ಸರ್ವೆ ಪ್ರಕಾರ ಒಬ್ಬ ರೈತನ ಸರಾಸರಿ ಮಾಸಿಕ ಆದಾಯ 6,400 ರೂ., ಖರ್ಚು ಸರಾಸರಿ 6,200 ರೂ. ಇದೆ. ಇನ್ನುಳಿದ 200 ರೂ.ನಲ್ಲಿ ರೈತ ತನ್ನ ತಿಂಗಳ ಜೀವನ ನಡೆಸಬೇಕು. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ, ರೈತರ ಆರ್ಥಿಕ ಜೀವನ ಮಟ್ಟ ಸುಧಾರಿಸಲು ಸುಧಾರಣಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದರು.

ಆಹಾರ ಸಂಸ್ಕರಣೆಗೆ ಸಂಪದ

ಬೆಂಗಳೂರು: ದೇಶದಲ್ಲಿ ರೈತರೇ ಶೀತಲಗೃಹ ನಿರ್ವಿುಸಲು ಅನುಕೂಲವಾಗುವಂತೆ ಸಂಪದ ಯೋಜನೆ ಜಾರಿಯಾಗಲಿದ್ದು, ಈಗಾಗಲೇ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರೈತರಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ರಾಜ್ಯ ಖಾತೆ ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದರು.

ಅಸೋಚಾಮ್ ಕರ್ನಾಟಕ ಘಟಕದಿಂದ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಆಯೋಜಿಸಿದ್ದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹಿಂದುಳಿದವರ ಸಂಪರ್ಕ ವಿಚಾರ ಸಂಕಿರಣ ಉದ್ಘಾಟಿಸಿ, ಆಹಾರ ಸಂಸ್ಕರಣೆ ಹಾಗೂ ಸಂರಕ್ಷಣೆಯಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದುವ ಅಗತ್ಯವಿದೆ ಎಂದರು.

ಏನಿದು ಸಂಪದ?: ರೈತ ತಾನು ಬೆಳೆದ ಉತ್ಪನ್ನಗಳನ್ನು ಸಂರಕ್ಷಿಸಿಡಲು ಅನುಕೂಲವಾಗಲು ಈ ‘ಸಂಪದ’ ಯೋಜನೆಯನ್ನು ಕೇಂದ್ರ ಜಾರಿಗೆ ತರಲಿದೆ. ಈ ಮೊದಲು ಶೀತಲಗೃಹ ನಿರ್ವಿುಸಲು ದೊಡ್ಡ ಪ್ರಮಾಣದ ಜಮೀನು ಇರಬೇಕೆಂಬ ನಿಯಮ ಇತ್ತು. ಈಗ ಸಣ್ಣ ರೈತರಿಗೂ ಅನುಕೂಲ ಮಾಡಿಕೊಟ್ಟಿದ್ದು, ಅಲ್ಪ ಜಾಗದಲ್ಲೇ ನಿರ್ಮಾಣ ಮಾಡಬಹುದು. ಇದಕ್ಕೆ ಕೇಂದ್ರ ಸಹಾಯಧನ ನೀಡಲಿದೆ ಎಂದರು.

ನ. 3ಕ್ಕೆ ವಿಶ್ವ ಆಹಾರ ಸಮ್ಮೇಳನ

2017ನೇ ಸಾಲಿನ ವಿಶ್ವ ಆಹಾರ ಸಮ್ಮೇಳನವು ನ.3ರಿಂದ 5ರ ವರೆಗೆ ಭಾರತದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಸಚಿವೆ ಸಾಧಿ್ವ ನಿರಂಜನ್ ಜ್ಯೋತಿ ತಿಳಿಸಿದರು.

ಪ್ರಚಲಿತ ವಿದ್ಯಮಾನ : ಮೇ 2017 : ಒಂದು ಸೊಳ್ಳೆ ಮೂರು ವೈರಸ್

ಝಿಕಾ ವೈರಸ್ ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆ ಒಂದೇ ಕಡಿತದಲ್ಲಿ ಚಿಕೂನ್​ಗುನ್ಯಾ ಹಾಗೂ ಡೆಂಘೆ ವೈರಸ್ ಕೂಡ ಹರಡಬಹುದು ಎಂದು ಅಮೆರಿಕ ತಜ್ಞರು ನಡೆಸಿದ ಹೊಸ ಅಧ್ಯಯನವೊಂದು ಎಚ್ಚರಿಸಿದೆ. ಈ ಮೊದಲು ಈಜಿಪ್ಟಿ ಸೊಳ್ಳೆ ಕೇವಲ ಝಿಕಾ ವೈರಸ್ ಮಾತ್ರ ಹರಡುತ್ತದೆ ಎಂದು ನಂಬಲಾಗಿತ್ತು. ಆದರೆ ಈ ಸೊಳ್ಳೆ ಒಂದೇ ಬಾರಿಗೆ ಡೆಂಘೆ ಸೇರಿ ಇತರ ರೋಗಗಳನ್ನು ಪಸರಿಸುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ಕೊಲರ್ಯಾಡೋ ಸ್ಟೇಟ್ ವಿವಿಯ ತಜ್ಞರು ತಿಳಿಸಿದ್ದಾರೆ.

ಒಂದು ಸೊಳ್ಳೆ ಹಲವು ವೈರಸ್​ಗಳನ್ನು ಹರಡುತ್ತದೆಯೇ ಎಂಬುದನ್ನು ಅರಿಯಲು ನಾವು ಈಜಿಪ್ಟಿ ಸೊಳ್ಳೆಗೆ ಹಲವು ವೈರಸ್​ಗಳನ್ನು ಸೋಕಿಸಿದ್ದೆವು. ಈ ವೇಳೆ ಈ ಸೊಳ್ಳೆಯನ್ನು ಪ್ರಾಣಿಗಳಿಗೆ ಕಚ್ಚಿಸಲಾಗಿತ್ತು. ಈ ವೇಳೆ ಸೊಳ್ಳೆಯಿಂದ ಮೂರು ವೈರಸ್​ಗಳು ಹರಡಿದ್ದವು. ಸೊಳ್ಳೆಗಳು ಈ ರೀತಿ ಸ್ವಭಾವ ಹೊಂದಿರುವುದು ತೀರ ಅಪರೂಪ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಝಿಕಾ ವೈರಸ್ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಇದರ ಔಷಧದ ಬಗ್ಗೆ ಸಂಶೋಧನೆ ನಡೆಯುತ್ತಿದೆ.



ಪ್ರಚಲಿತ ವಿದ್ಯಮಾನ : ಮೇ 2017 : ಕ್ಯಾನ್ಸರ್ ತಡೆಗೆ ಹೊಸ ವೈರಸ್

ಕ್ಯಾನ್ಸರ್ ರೋಗ ತಡೆಗೆ ಅನೇಕ ಬಗೆಯ ಸಂಶೋಧನೆಗಳು ನಡೆಯುತ್ತಿವೆ. ಈ ಮಧ್ಯೆ ಕ್ಯಾನ್ಸರ್ ತಡೆಗೆ ಜಿನೇವಾ ವಿಜ್ಞಾನಿಗಳು ಹೊಸ ಸಂಶೋಧನೆ ನಡೆಸಿ, ಯಶಸ್ವಿಯಾಗಿದ್ದಾರೆ. ಈ ವಿಜ್ಞಾನಿಗಳು ಕೃತಕ ವಿನ್ಯಾಸದ ವೈರಸ್ ಅಭಿವೃದ್ಧಿ ಪಡಿಸಿದ್ದು, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

ಕೃತಕ ವಿನ್ಯಾಸದ ವೈರಸ್ ದೇಹದ ರೋಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದೆ. ಕ್ಯಾನ್ಸರ್​ಕಾರಕಗಳು ದೇಹ ಪ್ರವೇಶಿಸಿದಾಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ಎಚ್ಚರಗೊಳಿಸಿ, ಇವುಗಳು ದೇಹ ಪ್ರವೇಶಿಸದಂತೆ ತಡೆಯುತ್ತವೆ. ಇದು ಮುಂದಿನ ದಿನಗಳಲ್ಲಿ ಕ್ಯಾನ್ಸರ್ ತಡೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಕ್ಯಾನ್ಸರ್ ಕಾರಕಗಳು ದೇಹ ಪ್ರವೇಶಿಸಿದ ಸಂದರ್ಭದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಇದರಿಂದ ಕ್ಯಾನ್ಸರ್ ಸುಲಭವಾಗಿ ದೇಹ ಪ್ರವೇಶಿಸುತ್ತವೆ. ಆದರೆ ವೈರಸ್ ಕಾರಕಗಳು ದೇಹ ಪ್ರವೇಶಿಸಿದಾಗ ಕೃತಕ ವಿನ್ಯಾಸದ ವೈರಸ್​ಗಳು ರಕ್ಷಣಾ ವ್ಯವಸ್ಥೆಯನ್ನು ಎಚ್ಚರಗೊಳಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಈ ವೈರಸ್​ಗಳನ್ನು ಇಲಿಗಳ ಮೆಲೆ ಪ್ರಯೋಗಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

– ಪಿಟಿಐ

ಪ್ರಚಲಿತ ವಿದ್ಯಮಾನ : ಮೇ 2017 : ಭಾರತ-ಜರ್ಮನಿ 8 ಮಹತ್ವದ ಒಪ್ಪಂದಗಳಿಗೆ ಸಹಿ

ಬರ್ಲಿನ್​: ವ್ಯಾಪಾರ ಒಪ್ಪಂದ, ರೈಲ್ವೇ ಆಧುನೀಕರಣ ಸೇರಿದಂತೆ 8 ಮಹತ್ವದ ಒಪ್ಪಂದಗಳಿಗೆ ಭಾರತ-ಜರ್ಮನಿ ಪರಸ್ಪರ ಸಹಿ ಹಾಕಿದೆ.ಜರ್ಮನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್​ ಜೊತೆ ಎಂಟು ಒಪ್ಪಂದಗಳಿಗೆ ಸಹಿ ಹಾಕಿದರು.

ವ್ಯಾಪಾರ ಒಪ್ಪಂದ, ರೈಲ್ವೇ ಆಧುನೀಕರಣಕ್ಕೆ ಸಹಯೋಗ, ಸ್ಟಾರ್ಟ್​​ ಅಪ್​ ಯೋಜನೆಗೆ ಜರ್ಮನಿ ಕಂಪನಿಗಳ ಸಹಕಾರ, ಗಂಗಾ ಸ್ವಚ್ಛತೆಗೆ ಜರ್ಮನ್​ ಕಂಪನಿಗಳ ಭಾಗಿ, ಭಯೋತ್ಪಾದನೆ ವಿರುದ್ಧ ಹೋರಾಟ, ಸ್ಮಾರ್ಟ್​​ ಸಿಟಿ ಯೋಜನೆ ಸಹಕಾರಕ್ಕೆ ಸ್ವಾಗತ, ಮೇಕ್​ ಇನ್​ ಇಂಡಿಯಾ ಪಾಲುದಾರಿಕೆ ಹೀಗೆ ಎಂಟು ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದರು.

ಈ ವೇಳೆ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್​ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ – ಜರ್ಮನಿಯ ಸಂಬಂಧ ಐತಿಹಾಸಿಕವಾದದ್ದು, ಎರಡೂ ದೇಶಗಳು ಮೇಡ್​ ಫಾರ್​ ಈಚ್ ಅದರ್ ಎಂದು ಶ್ಲಾಘಿಸಿದರು.

ಭಾರತ ಜರ್ಮನಿಯ ವಿಶ್ವಾಸಾರ್ಹ ಪಾಲುದಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಜರ್ಮನಿ ಬಂಡವಾಳ ಹೂಡಿಕೆಯ ಪಾಲು ಹೆಚ್ಚಾಗಿದೆ. ಭಯೋತ್ಪಾದನೆ ಇಡೀ ವಿಶ್ವದ ದೊಡ್ಡ ಪಿಡುಗಾಗಿದ್ದು, ಇದನ್ನು ತಡೆಯಲು ಜಂಟಿಯಾಗಿ ಹೋರಾಡಬೇಕಿದೆ ಎಂದು ಪ್ರತಿಪಾದಿಸಿದರು.

ಈ ಮಧ್ಯೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆ, ಭಾರತ ಹಸಿರು ಇಂಧನಕ್ಕೆ ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Monday, May 29, 2017

ಪ್ರಚಲಿತ ವಿದ್ಯಮಾನ : ಮೇ 2017 : ಸೂರ್ಯನ ಸಮೀಪಕ್ಕೆ ನಾಸಾ ನೌಕೆ

ವಾಷಿಂಗ್ಟನ್: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮುಂಚೂಣಿ ಯಲ್ಲಿರುವ ಅಮೆರಿಕದ ನಾಸಾ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. 2018ರಲ್ಲಿ ಸೋಲಾರ್ ಪ್ರೋಬ್ ಪ್ಲಸ್ ಹೆಸರಿನ ಅಂತರಿಕ್ಷನೌಕೆಯನ್ನು ಸೂರ್ಯನ ಸಮೀಪಕ್ಕೆ ಕಳುಹಿಸಲಿದೆ. ಈ ಯೋಜನೆ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನಾಸಾ ಮೇ 31ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಸೂರ್ಯನ ಹೊರ ವಾತಾವರಣ ಕರೋನಾ, ಸೂರ್ಯನ ಮೇಲ್ಮೈ (ಫೋಟೋಸ್ಪಿಯರ್)ಗಿಂತ ನೂರು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಈ ವೈಚಿತ್ರ್ಯ ಹಿಂದಿನ ಕಾರಣ ಹುಡುಕುವುದು ಈ ಯೋಜನೆಯ ಪ್ರಮುಖ ಉದ್ದೇಶ ಗಳಲ್ಲೊಂದಾಗಿದೆ. ಸೋಲಾರ್ ಪ್ರೋಬ್ ಪ್ಲಸ್ ಸೂರ್ಯನಿಗೆ 64 ಲಕ್ಷ ಕಿ.ಮೀ ಅಂತರದಲ್ಲಿ ಸಂಚರಿಸಲಿದೆ. ಈ ಮೂಲಕ ಸೂರ್ಯನಿಗೆ ಸಮೀಪದಲ್ಲಿರುವ ಬುಧಗ್ರಹಕ್ಕಿಂತಲೂ ನೌಕೆ 8 ಪಟ್ಟು ಹೆಚ್ಚು ಹತ್ತಿರ ತೆರಳಿದಂತಾಗಲಿದೆ. ಇದರಿಂದ ಸೂರ್ಯನ ಬಗ್ಗೆ ಈವರೆಗೆ ಬಹಿರಂಗಗೊಳ್ಳದ ಮಾಹಿತಿಗಳು ಲಭ್ಯವಾಗಲಿದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಆಸ್ಟ್ರೋ ಫಿಸಿಕ್ಸ್ ಮತ್ತು ಪ್ಲಾನೆಟರಿ ಸೈನ್ಸ್ ಕೇಂದ್ರದ ನಿರ್ದೇಶಕ ಜೋನಾಥನ್ ಲೂನಿನ್ ಹೇಳಿದ್ದಾರೆ. -ಏಜೆನ್ಸೀಸ್
ಯಾವ ಮಾಹಿತಿಗಳು ಲಭ್ಯ?
ವಿಶ್ವದ ಸಕಲ ಜೀವಿಗಳಿಗೆ ಆಧಾರವಾಗಿರುವ ಸೂರ್ಯನ ಬಗ್ಗೆ ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ಅಧ್ಯಯನ ಸಹಕಾರಿಯಾಗಲಿದೆ. ಸೂರ್ಯನಿಂದ ಬಿಸಿಕಣಗಳು ಗಂಟೆಗೆ 10 ಲಕ್ಷ ಮೈಲು ವೇಗದಲ್ಲಿ ಎಲ್ಲ ದಿಕ್ಕುಗಳಿಗೂ ಚಲಿಸುತ್ತವೆ. ಆದರೆ ಇದು ತನ್ನ ವೇಗವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತದೆ ಎಂಬುದು ಪ್ರಶ್ನೆಯಾಗೇ ಉಳಿದಿದ್ದು ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ. ಸೂರ್ಯನಿಂದ ಹೊರ ಚಿಮ್ಮುವ ಇಲೆಕ್ಟ್ರಾನ್ ಹಾಗೂ ಪ್ರೋಟಾನುಗಳ ಧಾರೆ ಭೂಮಿಯ ಮೇಲೆ ಭೂಕಾಂತೀಯ ಮಾರುತ ಹಾಗೂ ಅರೋರಾದಂಥ ಘಟನೆಗೆ ಕಾರಣವಾಗುತ್ತದೆ. ಧೂಮಕೇತುಗಳ ಬಾಲ ಸದಾಕಾಲ ಸೂರ್ಯನ ವಿರುದ್ಧ ದಿಕ್ಕಿಗೇ ತೋರುವುದಕ್ಕೂ ಸೌರಮಾರುತಗಳೇ ಕಾರಣ. ಸೂರ್ಯ ಹಾಗೂ ಭೂಮಿ ನಡುವಣ ಸಂಬಂಧ, ಜೀವ ವೈವಿಧ್ಯದ ಮೇಲೆ ಸೂರ್ಯನ ಪ್ರಭಾವದ ಬಗೆಗಿನ ಮಾಹಿತಿ ಈ ನೌಕೆಯಿಂದ ಲಭ್ಯವಾಗಲಿದೆ.
ನೌಕೆಗೆ ವಿಶೇಷ ರಕ್ಷಣೆ
ಸೂರ್ಯನ ವಾತಾವರಣ ವಿಪರೀತ ಬಿಸಿ ಇರುವುದರಿಂದ ಅಂತರಿಕ್ಷ ವಾಹನ ಅದನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಶಾಖ ತಾಳಲಾರದೆ ಸುಟ್ಟು ಹೋಗುತ್ತದೆ. ಆದರೆ ಈ ಅಂತರಿಕ್ಷ ನೌಕೆಗೆ ಹಿಂದೆಂದೂ ಬಳಕೆ ಮಾಡಿರದ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಈ ನೌಕೆಯನ್ನು ಶಾಖದಿಂದ ರಕ್ಷಿಸಲು 11.4 ಸೆಂಟಿ ಮೀಟರ್​ನ ಕಾರ್ಬನ್ ಕಾಂಪೋಸಿಟ್ ಹೀಟ್ ಶೀಲ್ಡ್ ಸುರಕ್ಷತಾ ಕವಚ ಸಿದ್ಧಪಡಿಸಲಾಗಿದೆ. ಇದು 1,370 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಡೆದುಕೊಳ್ಳಲಿದೆ. ಜತೆಗೆ ವಿಕಿರಣಗಳನ್ನು ಸಹಿಸಬಲ್ಲದಾಗಿದೆ.
ಉಡಾವಣೆ ದಿನಾಂಕ 2018ರ ಜುಲೈ 31- ಆಗಸ್ಟ್ 19 ನಡುವೆ
ಸೂರ್ಯನ ಸಮೀಪಕ್ಕೆ ತಲುಪುವ ನಿರೀಕ್ಷಿತ ದಿನಾಂಕ 2024 ಡಿಸೆಂಬರ್ 19
24 ಸುತ್ತು ಈ ನೌಕೆ ಸೂರ್ಯ ಸುತ್ತ 24 ಬಾರಿ ಸುತ್ತಲಿದೆ. ಪ್ರತಿ ಸುತ್ತಿನ ನಂತರವೂ ನೌಕೆ ಸೂರ್ಯನಿಗೆ ಹತ್ತಿರವಾಗುತ್ತಾ ಹೋಗುತ್ತದೆ.

ಪ್ರಚಲಿತ ವಿದ್ಯಮಾನ : ಮೇ 2017 : ಜಿಪಿಎಸ್​ಗೆ ಟಾಟಾ ಇನ್ನು ಭಾರತದಲ್ಲಿ ಶುರು ನಾವಿಕ ಯುಗ

ಅರಬ್ಬಿ ಸಮುದ್ರ ಹಾಗೂ ನಮ್ಮ ದೇಶದೊಳಗೆ ಎಲ್ಲೇ ಹೋಗುವುದಾದರೂ ಇನ್ನು ಮುಂದೆ ದಾರಿ ತಪ್ಪೀತೆಂಬ ಆತಂಕ ಬೇಕಿಲ್ಲ. ಹೌದು, ಸ್ವದೇಶಿ ನಿರ್ವಿುತ ಜಾಗತಿಕ ಸ್ಥಳಗುರುತಿಸುವಿಕೆ ವ್ಯವಸ್ಥೆ(ಜಿಪಿಎಸ್) ‘ನಾವಿಕ್’ನ ನೆರವು ಬರುವ ವರ್ಷವೇ ಭಾರತೀಯರಿಗೆ ಸಿಗಲಿದೆ. ಈಗಾಗಲೇ ಅಸ್ವದೇಶಿ ಜಿಪಿಎಸ್ ಕಾರ್ಯಾರಂಭಿಸಿದ್ದು, 2018ರ ಆರಂಭದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.

ಏನಿದು ಯೋಜನೆ?
ಐಆರ್​ಎನ್​ಎಸ್​ಎಸ್​ನ ಮಹತ್ವದ ಘಟ್ಟ ಕಳೆದ ವರ್ಷ ಏ.28ರಂದು ಪೂರ್ಣಗೊಂಡಿದ್ದು, ಏಳು ಉಪಗ್ರಹಗಳನ್ನು ಹಂತ ಹಂತವಾಗಿ ನಿಗದಿತ ಕಕ್ಷೆ ಸೇರಿಸುವ ಗುರಿಯೂ ಯಶಸ್ವಿಯಾಗಿದೆ. ಇಸ್ರೋ ಈ ಕೆಲಸವನ್ನು ಐಆರ್​ಎನ್​ಎಸ್​ಎಸ್-1ಜಿ ಮೂಲಕ ಯಶಸ್ವಿಯಾಗಿ ನೆರವೇರಿಸಿದೆ. ಆ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನಾವಿಕ್(ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್​ಸ್ಟೆಲೇಷನ್) ಹೆಸರನ್ನು ಇಟ್ಟಿದ್ದರು.

ತಪ್ಪಲಿದೆ ಅವಲಂಬನೆ
ಅಮೆರಿಕ ಜಿಪಿಎಸ್ ಪ್ರಾಜೆಕ್ಟನ್ನು 1973ರಲ್ಲಿ ಅಭಿವೃದ್ಧಿ ಪಡಿಸಿದ ಬಳಿಕ ದಶಕಗಳಿಂದ ಭಾರತ ಜಿಪಿಎಸ್​ಗಾಗಿ ಅಮೆರಿಕವನ್ನೇ ಅವಲಂಬಿಸಿದೆ. ಆದಾಗ್ಯೂ, 1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಅಮೆರಿಕ ಜಿಪಿಎಸ್ ನೆರವನ್ನು ನೀಡಲು ನಿರಾಕರಿಸಿತ್ತು. ಈ ನಿರಾಕರಣೆಯೇ ಸ್ವದೇಶಿ ಜಿಪಿಎಸ್ ಅಗತ್ಯವನ್ನು ಮನಗಾಣಿಸಿತು. ಇದರ ಪರಿಣಾಮವೇ ನಾವಿಕ್ ಉದಯವಾಗಿದೆ.

ಅಮೆರಿಕ ಡ/ಠ ಭಾರತ
ಅಮೆರಿಕದ ಜಿಪಿಎಸ್ ವ್ಯವಸ್ಥೆಯಲ್ಲಿ 24 ಉಪಗ್ರಹಗಳಿವೆ. ಇದು ಇಡೀ ಜಗತ್ತನ್ನೇ ವ್ಯಾಪಿಸುತ್ತದೆ. ಆದರೆ, ಭಾರತದ ನಾವಿಕ್ ಎಂಬ ಜಿಪಿಎಸ್ ವ್ಯವಸ್ಥೆ ಭಾರತ ಹಾಗೂ ಅರಬ್ಬಿ ಸಮುದ್ರದ ವ್ಯಾಪ್ತಿಗಷ್ಟೇ ಸೀಮಿತವಾಗಿದ್ದರೂ ಅಮೆರಿಕದ ವ್ಯವಸ್ಥೆಗಿಂತಲೂ ಹೆಚ್ಚು ನಿಖರವಾದುದಾಗಿದೆ. ನಾವಿಕ್ ಸ್ಥಳ ಸ್ಥಿರೀಕರಿಸುವಲ್ಲಿ 5 ಮೀಟರ್​ನ ನಿಖರತೆ ತೋರಿದರೆ, ಜಿಪಿಎಸ್ 20-30 ಮೀಟರ್ ನಿಖರತೆ ತೋರುತ್ತದೆ.

ಜಿಪಿಎಸ್ ಅಗತ್ಯ/ವ್ಯಾಪ್ತಿ
ರಸ್ತೆ, ವಾಯು ಮತ್ತು ನೌಕಾಯಾನದ ಸಂದರ್ಭದಲ್ಲಿ ಮಾರ್ಗದರ್ಶನ ಪಡೆಯಲು ಸದ್ಯ ಅಮೆರಿಕದ ಜಿಪಿಎಸ್ ಸೌಲಭ್ಯವನ್ನು ಬಳಸಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಇಸ್ರೊ ಯೋಜನೆ ಕೈಗೆತ್ತಿಕೊಂಡಿದೆ. ಉಪಗ್ರಹಗಳ ಸಂಕೇತಗಳು ಭಾರತಕ್ಕೆ ಮಾತ್ರವಲ್ಲ, ಸುತ್ತಲಿನ 1,500 ಕಿ.ಮೀ. ಪರಿಧಿಯಲ್ಲಿರುವ ಸಮೀಪದ ದೇಶಗಳಿಗೂ ಲಭ್ಯವಾಗಲಿವೆ.
ಯಾವ ದೇಶದ್ದು ಯಾವ ವ್ಯವಸ್ಥೆ
  •  ಅಮೆರಿಕ-ಜಿಪಿಎಸ್
  •  ರಷ್ಯಾ -ಜಿಎಲ್​ಒಎನ್​ಎಎಸ್​ಎಸ್
  •  ಐರೋಪ್ಯ ಒಕ್ಕೂಟ – ಗೆಲಿಲಿಯೋ
  •  ಚೀನಾ – ಬೈಡೋ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್​ಅಭಿವೃದ್ಧಿ ಹಂತದಲ್ಲಿದೆ)
ಎರಡು ಸೇವೆ ಲಭ್ಯ
ಜಿಪಿಎಸ್ ಕಾರ್ಯಾರಂಭ ಮಾಡಿದ ಬಳಿಕ ಎರಡು ರೀತಿಯ- ಎಸ್​ಪಿಎಸ್ ( ಸ್ಟ್ಯಾಂಡರ್ಡ್ ಪೊಜಿಷನಿಂಗ್ ಸರ್ವೀಸ್) ಹಾಗೂ ನಿರ್ಬಂಧಿತ ಸೇವೆ (ಆರ್​ಎಸ್) ಸೇವೆ ಲಭ್ಯವಾಗಲಿದೆ. ಮೊದಲ ಸೇವೆಯು ಎಲ್ಲರಿಗೂ ಸಿಕ್ಕರೆ, ಎರಡನೆಯದು ಸರ್ಕಾರಕ್ಕೆ ಮಾತ್ರ.

ಪ್ರಚಲಿತ ವಿದ್ಯಮಾನ : ಮೇ 2017 : ಮಾರಿಷಸ್​ಗೆ 32 ಸಾವಿರ ಕೋಟಿ ರೂಪಾಯಿ ನೆರವು

ನವದೆಹಲಿ: ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಅವರು ಮೂರು ದಿನಗಳ ಭಾರತ ಭೇಟಿ ಆರಂಭಿಸಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಮಾರಿಷಸ್​ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾರತ 32 ಸಾವಿರ ಕೋಟಿ ರೂ. ನೆರವು ನೀಡುವುದಾಗಿ ಈ ವೇಳೆ ಘೊಷಿಸಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ತೀರದ ಭದ್ರತೆ ವಿಚಾರದಲ್ಲಿ ಪರಸ್ಪರ ಸಹಕಾರ ಭದ್ರ ಪಡಿಸಲೂ ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸದಸ್ಯತ್ವ ಸಿಗಲು ಮಾರಿಷಸ್ ಬೆಂಬಲ ಘೊಷಿಸಿತು. ಹಿಂದೂ ಮಹಾಸಾಗರದಲ್ಲಿನ ಚಾಗೋಸ್ ಆರ್ಕಿಪೆಲಾಗೊ ದ್ವೀಪದ ಮೇಲಿನ ಮಾರಿಷಸ್ ಹಕ್ಕನ್ನು ಭಾರತ ಬೆಂಬಲಿಸಿತು. ವ್ಯಾಪಾರ ಮತ್ತು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುವ ಕಡಲ್ಗಳ್ಳತನ, ಮಾದಕ ದ್ರವ್ಯ ಮತ್ತು ಮಾನವ ಕಳ್ಳಸಾಗಣೆ, ಅಕ್ರಮ ಮೀನುಗಾರಿಕೆ , ಸಾಗರ ಸಂಪನ್ಮೂಲಗಳ ಅಕ್ರಮ ಬಳಕೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನಿ ಮೋದಿ ಚರ್ಚೆಯ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಮಾರಿಷಸ್​ನಲ್ಲಿ ಸಿವಿಲ್ ಸರ್ವೀಸಸ್ ಕಾಲೇಜ್ ಸ್ಥಾಪನೆ, ಸಾಗರ ಸಂಶೋಧನೆ ಸಹಕಾರಕ್ಕೂ ಒಪ್ಪಂದ ಏರ್ಪಟ್ಟಿದೆ. ಶನಿವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಜಗನ್ನಾಥ್ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

–ಏಜೆನ್ಸೀಸ್

ಪ್ರಚಲಿತ ವಿದ್ಯಮಾನ : ಮೇ 2017 : ಜಿಎಸ್​ಎಲ್​ವಿಎಂಕೆ 3 ಪರೀಕ್ಷಾ ಉಡಾವಣೆ ಜೂನ್ 5ಕ್ಕೆ

ನವದೆಹಲಿ: ಭಾರತೀಯರನ್ನು ಬಾಹ್ಯಾಕಾಶಕ್ಕೆ ಭಾರತ ದಿಂದಲೇ ಕಳುಹಿಸುವ ಸಾಮರ್ಥ್ಯದ ಇನ್ನೂರು ಆನೆ ತೂಕದ ಸ್ವದೇಶ ನಿರ್ವಿುತ ಜಿಎಸ್​ಎಲ್​ವಿಎಂಕೆ 3ರ ಪರೀಕ್ಷಾರ್ಥ ಉಡಾವಣೆ ಜೂನ್ 5ಕ್ಕೆ ನಿಗದಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಈಗಾಗಲೇ ಈ ರಾಕೆಟನ್ನು ಉಡಾವಣೆಗೆ ಸಜ್ಜುಗೊಳಿಸ ಲಾಗಿದೆ. ಭಾರತದಲ್ಲೇ ತಯಾರಿಸಲಾದ ಇದುವರೆಗಿನ ಅತಿತೂಕದ ರಾಕೆಟ್ ಇದಾಗಿದೆ. ಇದುವರೆಗಿನ ಅತಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದೆ. ಈ ಉಡಾವಣೆ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಹೊಸದೊಂದು ದಾಖಲೆ ಬರೆಯಲಿದ್ದು, ಭವಿಷ್ಯದಲ್ಲಿ 2-3 ಗಗನಯಾನಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಕೊಂಡೊಯ್ಯಬಲ್ಲದು. ‘300 ಕೋಟಿ ರೂ. ವೆಚ್ಚದ ಸಂಪೂರ್ಣ ಸ್ವದೇಶಿ ನಿರ್ವಿುತ ಜಿಎಸ್​ಎಲ್​ವಿಎಂಕೆ3 ಯಶಸ್ವಿಯಾಗಿ ಉಡಾವಣೆ ಮಾಡುವುದಕ್ಕೆ ನಾವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೇವೆ’ ಎಂದು ಇಸ್ರೋ ಮುಖ್ಯಸ್ಥ ಎ.ಎಸ್.ಕಿರಣ್​ಕುಮಾರ್ ಹೇಳಿದ್ದಾರೆ.

-ಏಜೆನ್ಸೀಸ್

ಪ್ರಚಲಿತ ವಿದ್ಯಮಾನ : ಮೇ 2017 : ಜನರಿಂದ ಸರ್ಕಾರದ ಮೌಲ್ಯಮಾಪನಕ್ಕೆ ಮೋದಿ ಸಂತಸ

‘ಜನ್ ಕಿ ಬಾತ್’ ಮೂಲಕ ಜನತೆ ತಮ್ಮ ಸರ್ಕಾರದ ಬಗ್ಗೆ ಫೀಡ್​ಬ್ಯಾಕ್ ನೀಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ಜತೆಗೆ ‘ರಚನಾತ್ಮಕ ಟೀಕೆ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ’ ಎಂದಿದ್ದಾರೆ.

ಮೂರು ವರ್ಷದ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುತ್ತಿರುವ 20 ದಿನಗಳ ‘ಮೋದಿ’ ಉತ್ಸವಗಳ ಸಂದರ್ಭದಲ್ಲಿ ‘ಜನ್ ಕಿ ಬಾತ್’ ಮೂಲಕ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ಜನರಿಂದ ಮಾಹಿತಿ ಪಡೆಯಲಾಗುತ್ತಿದೆ. ಜನರು ನಮ್ಮ ಕೆಲಸವನ್ನು ವಿಸ್ತಾರವಾಗಿ ಮೌಲ್ಯಮಾಪನ ಮಾಡುತ್ತಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ. ನಾನು ಇದನ್ನು ಸ್ವಾಗತಿಸುತ್ತೇನೆ. ‘ಮನ್ ಕಿ ಬಾತ್’ಗೆ(ಮನದಾಳದ ಮಾತು) ನಾನು ಒಂದು ಆಯಾಮವನ್ನು ನೀಡಿದ್ದೇನೆ. ನನ್ನ ಕೆಲ ಮಿತ್ರರು, ಈ ಮನದಾಳದ ಮಾತು ಪುಸ್ತಕ ರೂಪದಲ್ಲಿ ತರುವ ಪ್ರಸ್ತಾಪ ಇರಿಸಿದಾಗ ನಾನು ಚಕಿತನಾದೆ. ಅಬುದಾಬಿಯಲ್ಲಿರುವ ಅಕ್ಬರ್ ಸಾಹಬ್ ಎಂಬ ಕಲಾವಿದರು ಒಂದು ಪ್ರಸ್ತಾವನೆ ಇಟ್ಟರು. ‘ಮನ್ ಕಿ ಬಾತ್’ನಲ್ಲಿ ರ್ಚಚಿಸಲಾದ ವಿಷಯಗಳ ಬಗ್ಗೆ ಅವರು ಸುಂದರವಾದ ರೇಖಾಚಿತ್ರಗಳನ್ನು ತಯಾರಿಸಿಕೊಟ್ಟಿದ್ದಾರೆ ಅದೂ ಪುಡಿಗಾಸೂ ಪಡೆಯದೇ. ಮನದಾಳದ ಮಾತಿಗೆ ಕಲೆಯ ರೂಪವನ್ನು ನೀಡಿದ ಅಕ್ಬರ್ ಅವರಿಗೆ ನಾನು ಋಣಿ.

ಮೂರು ತಲೆಮಾರುಗಳು ಒಟ್ಟಿಗೆ ಯೋಗ ಮಾಡಬೇಕು
ಜೂನ್ 21 ಈಗ ವಿಶ್ವಕ್ಕೆ ಅತ್ಯಂತ ಚಿರಪರಿಚಿತ ದಿನ. ವಿಶ್ವ ಯೋಗ ದಿನವನ್ನು ಸಂಪೂರ್ಣ ವಿಶ್ವವೇ ಆಚರಿಸುತ್ತಿದೆ. ಯೋಗವು ಜಗತ್ತಿನ ಜನರನ್ನು ಪರಸ್ಪರ ಸಂರ್ಪಸುತ್ತಿದೆ. ಜನರನ್ನು ಒಗ್ಗೂಡಿಸುತ್ತಿದೆ. ವಿಶ್ವ ಯೋಗ ದಿನದಂದು ಕುಟುಂಬದ ಮೂರು ತಲೆಮಾರುಗಳು ಒಟ್ಟಾಗಿ ಯೋಗ ಮಾಡಬೇಕು.
ಸಾವರ್ಕರ್ ಸ್ಮರಣೆ
ನಮಗೆ ಸ್ವಾತಂತ್ರ್ಯ ಕೊಡಿಸಲು ಅಂದಿನ ಜನರು ಎಷ್ಟೆಲ್ಲ ಯಾತನೆ ಅನುಭವಿಸಿದರು, ಎಷ್ಟೆಲ್ಲ ಕಷ್ಟಗಳನ್ನು ಅನುಭವಿಸಿದ್ದರು ಎಂಬುದನ್ನು ತಿಳಿಯಲು ಸಾವರ್ಕರ್ ಇದ್ದ ಸೆಲ್ಯುಲಾರ್ ಜೈಲಿಗೆ ಹೋಗಿಬನ್ನಿ. ಅಲ್ಲಿಗೆ ಹೋದರೆ ಕಾಲಾಪಾನಿ ಎಂದರೇನು? ಆ ಶಿಕ್ಷೆ ಎಷ್ಟು ಘೊರವಾಗಿತ್ತು? ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ಪ್ರಧಾನಿ ಯುವಕರಿಗೆ ಸಲಹೆ ನೀಡಿದರು.

ರಂಜಾನ್ ಶುಭಾಶಯ…
ರಂಜಾನ್ ಹಬ್ಬದ ನಿಮಿತ್ತ ರಾಷ್ಟ್ರದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ, ಭಾರತದ ಎಲ್ಲ ಪ್ರಮುಖ ಧರ್ಮಗಳ ಜನರೂ ಸೌಹಾರ್ದದೊಂದಿಗೆ ಬಾಳುತ್ತಿರುವುದು ಸಂತಸದ ಸಂಗತಿ. ವೈವಿಧ್ಯತೆ ನಮ್ಮ ದೇಶದ ಶಕ್ತಿಯಾಗಿದೆ. ನಮ್ಮ ಹಿರಿಯರು ಇಂತಹ ಸಂಸ್ಕೃತಿಯನ್ನು ನಮಗೆ ಬಿಟ್ಟು ಹೋಗಿರುವುದಕ್ಕಾಗಿ ನಮಗೆ ಹೆಮ್ಮೆ ಇದೆ. ಎಲ್ಲ ಮತಧರ್ಮಗಳ ಜನರು ಭಾರತದಲ್ಲಿ ಸಾಮರಸ್ಯದೊಂದಿಗೆ ಬದುಕುತ್ತಿದ್ದಾರೆ ಎಂದರಲ್ಲದೆ, ‘ಮನ್ ಕಿ ಬಾತ್’ ಕಾರ್ಯಕ್ರಮವು ತಮಗೆ ಜನರನ್ನು ಸಂರ್ಪಸಲು ಅಪಾರವಾಗಿ ನೆರವಾಗಿದೆ ಎಂದರು. -ಏಜೆನ್ಸೀಸ್

ಪ್ರಚಲಿತ ವಿದ್ಯಮಾನ : ಮೇ 2017 : ಸೇನಾ ಮುಖ್ಯಸ್ಥರ ಮಾನವ ಗುರಾಣಿ ಹೇಳಿಕೆಗೆ ಕೇಂದ್ರ ಸಚಿವ ನಾಯ್ಡು ಬೆಂಬಲ

ನವದೆಹಲಿ: ಕಲ್ಲು ತೂರಾಟಗಾರರಿಂದ ತಪ್ಪಿಸಿಕೊಳ್ಳಲು ಸೇನಾ ಅಧಿಕಾರಿಯೊಬ್ಬರು ಮಾನವ ಗುರಾಣಿ ಬಳಸಿದ್ದರ ಕುರಿತಾದ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅನುಮೋದಿಸಿದ್ದಾರೆ.

ಕಾಶ್ಮೀರದಲ್ಲಿ ಕೆಟ್ಟ ಪರಿಸ್ಥಿತಿ ಎದುರಾಗಿದ್ದು, ಸೇನಾ ಮುಖ್ಯಸ್ಥ ಬಿಪಿನ್​​ ರಾವತ್​ ಹೇಳಿಕೆಗೆ ಸಂಪೂರ್ಣ ಬೆಂಬಲವಿದೆ ಎಂದು ವೆಂಕಯ್ಯನಾಯ್ಡು ಟ್ವೀಟ್​​ ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಚಾಸಾರ ನಿಯಂತ್ರಣಕ್ಕೆ ಸೇನೆ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ಈ ಮಧ್ಯೆ ಕಲ್ಲು ತೂರಾಟಗಾರರನ್ನು ಹಿಮ್ಮೆಟ್ಟಿಸಲು ಸೇನಾ ಮೇಜರ್​ ಲೀತುಲ್​ ಗೊಗೊಯಿ ತಮ್ಮ ವಾಹನಕ್ಕೆ ಕಲ್ಲು ತೂರಾಟಗಾರನೊಬ್ಬನನ್ನು ಮಾನವ ಗುರಾಣಿಯನ್ನಾಗಿಸಿ, ಸಿಕ್ಕಿಸಿ, ರೌಂಡ್ಸ್ ಹೊಡೆಸಿದ್ದರು. ಅವರ ಈ ಮೇಜರ್ ಕಾರ್ಯಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತಾದರೂ, ಕೆಲವರು ವಿರೋಧಿಸಿದ್ದರು.

ಈ ಸಂಬಂಧ ಭೂಸೇನಾ ಮುಖ್ಯಸ್ಥ ಜ. ಬಿಪಿನ್​ ರಾವತ್​​ ಅವರು ತಮ್ಮ ಯೋಧರ ಮೇಲೆ ದಾಳಿ ನಡೆಯುವಾಗ ”ನೀವು ಕೈಕಟ್ಟಿಕೊಂಡು ಸುಮ್ಮನಿರಿ. ಮುಂದೆ ಅನಾಹುತ ನಡೆದು, ನಿಮ್ಮ ಮೃತದೇಹವನ್ನು ಸಕಲ ಗೌರವಗಳೊಂದಿಗೆ ನಿಮ್ಮ ಮನೆಗೆ ಕಳುಹಿಸಿಕೊಡುತ್ತೇನೆ” ಎಂದು ಹೇಳಲು ಸಾಧ್ಯವೇ? ಅವರ ಆತ್ಮರಕ್ಷಣೆಯನ್ನು ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ಖಡಕ್​ ಪ್ರತಿಕ್ರಿಯೆ ನೀಡಿದ್ದರು.

-ಏಜೆನ್ಸೀಸ್​​

Tuesday, May 23, 2017

ಪ್ರಚಲಿತ ವಿದ್ಯಮಾನ : 23 ಮೇ 2017 : ವಿಶ್ವಕಪ್​ನಲ್ಲಿ ಭಾರತಕ್ಕೆ ಸ್ವರ್ಣ

ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಮೊದಲ ಚಿನ್ನ

ಶಾಂಘೈ: ಆರ್ಚರಿ ವಿಶ್ವಕಪ್ ಚರಣವನ್ನು ಭಾರತ ತಂಡ ಸ್ವರ್ಣ ಪದಕ ಗೆಲ್ಲುವ ಮೂಲಕ ಆರಂಭಿಸಿದೆ. ಪುರುಷರ ಕಾಂಪೌಂಡ್ ಆರ್ಚರಿ ತಂಡ ಶನಿವಾರ ನಡೆದ ವಿಶ್ವಕಪ್ ಮೊದಲ ಚರಣದ ಫೈನಲ್​ನಲ್ಲಿ ಕೊಲಂಬಿಯಾ ತಂಡವನ್ನು ಸೋಲಿಸಿ ಚಿನ್ನದ ಪದಕ ಜಯಿಸಿತು.

ಇದು ವಿಶ್ವಕಪ್​ನ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವಾಗಿದೆ. ವಿಜೇತ ತಂಡದ ಅಭಿಷೇಕ್ ವರ್ಮ, ಚಿನ್ನ ರಾಜು ಶ್ರೀಧರ್ ಹಾಗೂ ಅಮನ್​ಜೀತ್ ಸಿಂಗ್ 226-221ರಿಂದ ಕೊಲಂಬಿಯಾದ ಕ್ಯಾಮಿಲೊ ಆಂಡ್ರೆಸ್ ಕಾರ್ಡೆನಾ, ಜೋಸ್ ಕಾಲೋಸ್ ಒಸ್ಪಿನಾ ಹಾಗೂ ಡೇನಿಯಲ್ ಮುನೊಜ್​ರನ್ನು ಸೋಲಿಸಿದರು. ಭಾರತೀಯರು ಮೊದಲ ಸೆಟ್​ನಲ್ಲಿ 58-57ರ ಭರ್ಜರಿ ಮುನ್ನಡೆಯೊಂದಿಗೆ ಮೇಲುಗೈ ಕಂಡರು. ವರ್ಮ ಎರಡು ಬಾರಿ ಪೂರ್ಣ 10 ಅಂಕ ಸಂಪಾದಿಸುವ ಮೂಲಕ ಭಾರತಕ್ಕೆ 116-113ರ ಮುನ್ನಡೆ ಒದಗಿಸಿದರು. 3ನೇ ಸೆಟ್​ನಲ್ಲಿ ಕೊಲಂಬಿಯಾ 52-52ರ ಸಮಬಲದ ಹೋರಾಟದೊಂದಿಗೆ ಪ್ರತಿರೋಧ ನೀಡಿದರೂ 4 ಹಾಗೂ ನಿರ್ಣಾಯಕ ಸೆಟ್​ನಲ್ಲಿ ಭಾರತ 58-56 ಮುನ್ನಡೆಯೊಂದಿಗೆ ಗೆಲುವಿನ ಸಂಭ್ರಮಾಚರಿಸಿತು. ಅಭಿಷೇಕ್ ವರ್ಮ 2015ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವಕಪ್​ನ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ಪೋಲೆಂಡ್​ನಲ್ಲಿ ನಡೆದ ವಿಶ್ವಕಪ್​ನ ಅದೇ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಮಿಶ್ರ ತಂಡ ವಿಭಾಗದಲ್ಲಿ ವರ್ಮ ಕಂಚು ಪದಕ ಗೆಲ್ಲುವಲ್ಲಿ ವಿಫಲಗೊಂಡರು. ಪ್ಲೇ ಆಫ್ ಪಂದ್ಯದಲ್ಲಿ ವರ್ಮ ಮತ್ತು ಜ್ಯೋತಿ ಸುರೇಖಾ ಜೋಡಿ 151-153ರಿಂದ ಅಮೆರಿಕದ ಜೋಡಿಗೆ ಶರಣಾಯಿತು.

ಪ್ರಚಲಿತ ವಿದ್ಯಮಾನ : 23 ಮೇ 2017 : ಲಂಡನ್​ನಲ್ಲಿ ಕನ್ನಡಿಗ ನೀರಜ್ ಚುನಾವಣಾ ಪ್ರಚಾರ ಆರಂಭ

ಲಂಡನ್: ಇಂಗ್ಲೆಂಡಿನ ಸಂಸದೀಯ ಚುನಾವಣೆಯಲ್ಲಿ ಲೇಬರ್ ಪಾರ್ಟಿಯಿಂದ ಲಂಡನ್​ನ ಪುಟ್ನೀ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕರ್ನಾಟಕ ಮೂಲದ ಎನ್​ಆರ್​ಐ ಡಾ. ನೀರಜ್ ಪಾಟೀಲ್ ಅವರ ಚುನಾವಣಾ ಪ್ರಚಾರಕ್ಕೆ ಕ್ರಿಯೊಡಾನ್ ಉತ್ತರ ಕ್ಷೇತ್ರದ ಸಂಸದ ಮತ್ತು ಶ್ಯಾಡೋ ಸ್ಥಳೀಯ ಸರ್ಕಾರದ ಸಚಿವ ಸ್ಟೀವ್ ರೀಡ್ ಅಲ್ಲಿನ ಬೆಂಗಳೂರು ಸ್ಟ್ರೀಟ್ ಪ್ರದೇಶದಿಂದ ಚಾಲನೆ ನೀಡಿದ್ದಾರೆ.

ಡಾ. ನೀರಜ್ ಪಾಟೀಲ್ ಅವರು ಅಪಘಾತ ಮತ್ತು ತುರ್ತು ಚಿಕಿತ್ಸಾ ವೈದ್ಯರಾಗಿದ್ದು, ಲ್ಯಾಂಬೆತ್​ನ ಮಾಜಿ ಮೇಯರ್ ಕೂಡ ಆಗಿದ್ದಾರೆ. ಜೂನ್ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕನ್ಸರ್ವೆಟಿವ್ ಪಕ್ಷದ ಅಭ್ಯರ್ಥಿ, ಬ್ರಿಟನ್ ಶಿಕ್ಷಣ ಸಚಿವ ಜಸ್ಟಿನ್ ಗ್ರೀನಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.

ಪುಟ್ನೀ, ಬಟ್ಟರ್​ಸೀ ಮತ್ತು ಟೂಟಿಂಗ್ ಎಂಬ ಮೂರು ಸಂಸದೀಯ ಕ್ಷೇತ್ರಗಳಿರುವ ಲಂಡನ್ ಬೋರೋಗ್ ಆಫ್ ವಾಂಡ್ಸ್​ವರ್ತ್​ನಲ್ಲಿ ಬೆಂಗಳೂರು ಸ್ಟ್ರೀಟ್ ಪ್ರದೇಶವಿದೆ. 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತು ಆಡಳಿತದ ಸಮಯದಲ್ಲಿ ಬೆಂಗಳೂರು ರೆಜಿಮೆಂಟ್​ಗೆ ಅಲ್ಲಿನ ಕೇಂದ್ರದಲ್ಲಿ ನೇಮಕಾತಿ ನಡೆಸುತ್ತಿದ್ದರಿಂದ ಆ ಪ್ರದೇಶಕ್ಕೆ ಬೆಂಗಳೂರು ಸ್ಟ್ರೀಟ್ ಎಂಬ ಹೆಸರು ಬಂದಿದೆ. -ಏಜೆನ್ಸೀಸ್

ಪ್ರಚಲಿತ ವಿದ್ಯಮಾನ : 23 ಮೇ 2017 : ಷರಿಯತ್ ಪ್ರಕಾರ ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿ


ಪ್ರಚಲಿತ ವಿದ್ಯಮಾನ : 23 ಮೇ 2017 : ಷರಿಯತ್ ಪ್ರಕಾರ ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನಕ್ಕಾಗಿ ಒಂದೇ ಸಲ ತ್ರಿವಳಿ ತಲಾಕ್ ಮೊರೆ ಹೋಗದಂತೆ ಪುರುಷರಿಗೆ ಬುದ್ಧಿವಾದ ಹೇಳಲು ಮೌಲ್ವಿಗಳಿಗೆ ಸೂಚಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ಮಂಡಳಿ, ತ್ರಿವಳಿ ತಲಾಕ್ ವಿಚಾರದಲ್ಲಿ ಮೌಲ್ವಿಗಳಿಗೆ ಮಾರ್ಗದರ್ಶಿ ಸೂತ್ರಗಳ ಸುತ್ತೋಲೆಯನ್ನು ಕಳುಹಿಸಲಾಗುವುದು. ಇದರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಪತ್ನಿಗೆ ಯಾವುದೇ ಕಾರಣಕ್ಕೂ ಒಂದೇ ಬಾರಿಗೆ ತ್ರಿವಳಿ ತಲಾಕ್ ನೀಡಬಾರದು ಹಾಗೂ ವೈವಾಹಿಕ ಜೀವನ ಅಂತ್ಯಗೊಳಿಸಲು ಈ ಪದ್ಧತಿಯ ಮೊರೆ ಹೋಗಬಾರದು. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾನೂನು ಬದ್ಧವಾಗಷ್ಟೇ ವಿಚ್ಛೇದನ ಪಡೆಯಬೇಕೆಂದು ಪುರುಷರಿಗೆ ಮೌಲ್ವಿಗಳು ಬುದ್ಧಿವಾದ ಹೇಳಬೇಕು.

ವೈವಾಹಿಕ ಪದ್ಧತಿಯಲ್ಲಿ ಪತಿ-ಪತ್ನಿಯರಿಬ್ಬರಿಗೂ ವಿಚ್ಛೇದನ ಕೋರುವುದಕ್ಕೆ ಅವಕಾಶ ಕಲ್ಪಿಸುವಂತೆ ಮೌಲಿಗಳಿಗೆ ಸೂಚಿಸಲಾಗುವುದು ಎಂದಿರುವ ಮಂಡಳಿ, ಪದ್ಧತಿಯನ್ನು ನಿಷೇಧಿಸುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ಷರಿಯತ್ ಪ್ರಕಾರ, ತ್ರಿವಳಿ ತಲಾಕ್ ಅನಪೇಕ್ಷಿತ ಪದ್ಧತಿಯಾಗಿದ್ದು, ಅದರಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಆಗ ಮುಖ್ಯ ನ್ಯಾ. ಜೆ.ಎಸ್. ಖೆಹರ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ದೇವರಿಗೆ ಅನಪೇಕ್ಷಿತವಾದ ಪದ್ಧತಿ, ವೈಯಕ್ತಿಕ ಕಾನೂನಿನಲ್ಲಿ ಮಾತ್ರ ಹೇಗೆ ಸಿಂಧುವಾಗುತ್ತದೆ ಎಂದು ಪ್ರಶ್ನಿಸಿತು. ಆಗ ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್ ಅವರು, ತಲಾಕ್ ಪದ್ಧತಿ ಕುರಾನ್​ನಲ್ಲಿ ಮೊದಲೇ ಉಲ್ಲೇಖವಾಗಿರಲಿಲ್ಲ. ಅದನ್ನು ನಂತರ ಸೇರಿಸಲಾಗಿದೆ ಎಂದರು.

ತ್ರಿವಳಿ ತಲಾಕ್ ಪದ್ಧತಿಯ ಔಚಿತ್ಯದ ಕುರಿತು ಹಲವು ಸಂಘಟನೆಗಳು ಹಾಗೂ ಮುಸ್ಲಿಂ ಮಹಿಳೆಯರು ವೈಯಕ್ತಿಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಸಾಂವಿದಾನಿಕ ಪೀಠ, ಮೇ 18ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ರಾಜಿ ಸಂಧಾನ ಅಗತ್ಯ: ಮುಸ್ಲಿಂ ಧರ್ಮದ ಪ್ರಕಾರ, ತ್ರಿವಳಿ ತಲಾಕ್​ಗೆ ಅವಕಾಶವಿಲ್ಲ. ಪತಿ- ಪತ್ನಿ ತಮ್ಮ ವೈಮನಸ್ಯವನ್ನು ಪರಸ್ಪರ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಷರಿಯತ್ ಪ್ರಕಾರ, ಅಕಾರಣವಾಗಿ ವಿಚ್ಛೇದನ ಇಲ್ಲವೇ ಒಂದೇ ಬಾರಿಗೆ ಮೌಖಿಕ ವಿಚ್ಛೇದನ ನೀಡುವುದು ಸರಿಯಾದ ಕ್ರಮವಲ್ಲ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ ಎಂದು ಮಂಡಳಿ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಸಾಮುದಾಯಿಕ ಜಾಗೃತಿಗೆ ಕ್ರಮ: ತ್ರಿವಳಿ ತಲಾಕ್ ಪದ್ಧತಿ ವಿರುದ್ಧ ಬೃಹತ್ ಪ್ರಮಾಣದ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಕೈಗೊಂಡು ಜನರು ತೀರಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ವಿಚ್ಛೇದನದ ಮೊರೆ ಹೋಗಬೇಕು. ಆದರೆ, ಅದಕ್ಕಾಗಿ ಸಾಮಾಜಿಕ ಜಾಲತಾಣಗಳು, ವೆಬ್​ಸೈಟ್​ಗಳು, ಇಮಾಮ್ ಹಾಗೂ ಮಸೀದಿಯಲ್ಲಿನ ಭಾಷಣಕಾರರ ನೆರವು ಪಡೆದು ಎಲ್ಲ ವರ್ಗದ ಮುಸ್ಲಿಂ ಸಮುದಾಯಕ್ಕೆ ಈ ಸಂದೇಶ ತಲುಪಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಪ್ರಚಲಿತ ವಿದ್ಯಮಾನ : 23 ಮೇ 2017 : ಹಳಿ ಮೇಲಿನ ವಿಮಾನ!

ಮುಂಬೈ: ದೇಶದ ಮೊದಲ ಐಷಾರಾಮಿ ರೈಲು ತೇಜಸ್ ಎಕ್ಸ್​ಪ್ರೆಸ್​ಗೆ ಮುಂಬೈನಲ್ಲಿ ಸೋಮವಾರ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದರು. ಈ ರೈಲು ಮುಂಬೈ-ಗೋವಾ ನಡುವೆ ತ್ವರಿತ ಸಂಪರ್ಕ ಸಾಧನವಾಗಿ ಕಾರ್ಯನಿರ್ವಹಿಸಲಿದೆ.
ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ತೇಜಸ್ ಎಕ್ಸ್​ಪ್ರೆಸ್ ಪ್ರಥಮ ಐಷಾರಾಮಿ ರೈಲಾಗಿದೆ. ಇದರಲ್ಲಿ ಮಾಹಿತಿ, ಮನರಂಜನೆಯ ಜತೆಗೆ ವೈಫೈ, ಸಿಸಿ ಕ್ಯಾಮರಾ, ಅಗ್ನಿ ಹಾಗೂ ಹೊಗೆ ಪತ್ತೆ ವ್ಯವಸ್ಥೆ, ಟೀ, ಕಾಫಿ ಪೂರೈಸುವ ಯಂತ್ರಗಳು ಸೇರಿ ಹಲವು ಆಧುನಿಕ ಸೌಲಭ್ಯ ಲಭ್ಯವಿವೆ.
ಸಾಮರ್ಥ್ಯವೇನು?
ತೇಜಸ್ ಎಕ್ಸ್​ಪ್ರೆಸ್​ನಲ್ಲಿ 56 ಸೀಟುಗಳ ಒಂದು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಹಾಗೂ ತಲಾ 78 ಸೀಟು ಸಾಮರ್ಥ್ಯವುಳ್ಳ 12 ಎಸಿ ಬೋಗಿಗಳಿವೆ. ಎಕ್ಸಿಕ್ಯೂಟಿವ್ ಕ್ಲಾಸ್​ಗೆ ಆಹಾರ ಸಹಿತ 2,680 ರೂ. ಹಾಗೂ ಆಹಾರರಹಿತ 2,525 ರೂ. ದರ ನಿಗದಿಪಡಿಸಲಾಗಿದೆ. ಎಸಿ ಬೋಗಿಗೆ ಆಹಾರ ಸಮೇತ 1,280 ರೂ. ಹಾಗೂ ಆಹಾರರಹಿತ ಟಿಕೆಟ್​ಗೆ 1,155 ರೂ. ದರ ನಿಗದಿಯಾಗಿದೆ. ಟಿಕೆಟ್ ಪಡೆಯುವ ಸಂದರ್ಭದಲ್ಲಿ ಆಹಾರ ನಿರಾಕರಿಸಿದವರೂ ನಂತರ, ರೈಲಿನಲ್ಲಿ 50 ರೂ. ಪಾವತಿಸಿ ಆಹಾರ ಸೇವೆ ಪಡೆಯಬಹುದಾಗಿದೆ.

ಪ್ರಚಲಿತ ವಿದ್ಯಮಾನ : 23 ಮೇ 2017 : ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ಪರ ಮೋದಿ ಬ್ಯಾಟಿಂಗ್

ಅಹಮದಾಬಾದ್: ಏಷ್ಯಾದಲ್ಲಿ ಚೀನಾದ ಪ್ರಭುತ್ವಕ್ಕೆ ಸೆಡ್ಡು ಹೊಡೆಯಲು ಮಾಸ್ಟರ್ ಪ್ಲಾನ್ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ಸಂಬಂಧ ಬೆಸೆಯಲು ‘ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್’ ಯೋಜನೆಯನ್ನು ಅನುಷ್ಠಾನಗೊಸಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್​ನ 52ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ‘ಒನ್ ಬೆಲ್ಟ್, ಒನ್ ರೋಡ್’ ಆರ್ಥಿಕ ಕಾರಿಡಾರ್ ರೂಪಿಸಲು ಚೀನಾ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ನಾನು ಜಪಾನ್​ಗೆ ತೆರಳಿದ್ದ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಶೀಂಜೋ ಅಬೆ ಅವರೊಂದಿಗೆ ಏಷ್ಯಾ ಮತ್ತು ಆಫ್ರಿಕಾ ನಡುವೆ ಅಭಿವೃದ್ಧಿ ಕಾರಿಡಾರ್ ರೂಪಿಸುವ ಮಹತ್ವದ ಕುರಿತು ಚರ್ಚೆ ನಡೆಸಿದ್ದೆ. ಭಾರತ ಮತ್ತು ಜಪಾನ್ ಸಂಶೋಧನಾ ಸಂಸ್ಥೆಗಳು ಈಗಾಗಲೇ ಏಷ್ಯಾ-ಆಫ್ರಿಕಾ ಅಭಿವೃದ್ಧಿ ಕಾರಿಡಾರ್ ರೂಪಿಸುವ ಸಂಬಂಧ ವರದಿ ಸಿದ್ದಪಡಿಸಿದ್ದು, ಶೀಘ್ರ ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಪ್ರಾರಂಭಿಸಲಾಗುವುದು. ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ರಾಷ್ಟ್ರಗಳು ಕೌಶಲ್ಯ ವೃದ್ಧಿ, ಮೂಲ ಸೌಕರ್ಯ ಅಭಿವೃದ್ಧಿ, ಉತ್ಪಾದನೆ ಮತ್ತು ಸಂಪರ್ಕ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಆಫ್ರಿಕಾ ರಾಷ್ಟ್ರಗಳಿಗೆ ನೆರವು ನೀಡಲಿದೆ ಎಂದು ಮೋದಿ ತಿಳಿಸಿದರು.

ಕಳೆದ 20 ವರ್ಷಗಳಲ್ಲಿ ಆಫ್ರಿಕಾ ರಾಷ್ಟ್ರಗಳಲ್ಲಿ ಭಾರತ ಸುಮಾರು 54 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. 2014ರಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಫ್ರಿಕಾ ದೇಶಗಳೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಆರ್ಥಿಕ ಸಂಬಂಧವನ್ನು ವೃದ್ಧಿಗೊಳಿಸಲು ಒತ್ತು ನೀಡಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.

Monday, May 22, 2017

ಪ್ರಚಲಿತ ವಿದ್ಯಮಾನ : 22 ಮೇ 2017 : ಭದ್ರತೆಗೆ ಖಾಸಗಿ ಪಾಲುದಾರಿಕೆ

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ನಿರ್ಮಾಣ ವಾಗಿರುವ ಉದ್ವಿಗ್ನ ಸ್ಥಿತಿ ಬೆನ್ನಲ್ಲೇ, ಸೇನೆಗೆ ಅಗತ್ಯವಾಗಿರುವ ರಕ್ಷಣಾ ಸಾಮಗ್ರಿಗಳನ್ನು ದೇಶದಲ್ಲೇ ತಯಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಖಾಸಗಿ ಕಂಪನಿಗಳು ಜಾಗತಿಕ ಕಂಪನಿಗಳ ಪಾಲುದಾರಿಕೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ವ್ಯೂಹಾತ್ಮಕ ಪಾಲುದಾರಿಕೆ (ಎಸ್​ಪಿ) ಪ್ರಸ್ತಾವನೆಗೆ ಹಣಕಾಸು ಹಾಗೂ ರಕ್ಷಣಾ ಸಚಿವ ಅರುಣ್ ಜೇಟ್ಲಿ ನೇತೃತ್ವದ ರಕ್ಷಣಾ ಸಾಧನ ಸಂಗ್ರಹ ಮಂಡಳಿ(ಡಿಎಸಿ) ಒಪ್ಪಿಗೆ ನೀಡಿದೆ. ಈ ಹಿಂದೆ ರಕ್ಷಣಾ ರಂಗದಲ್ಲಿ ವಿದೇಶಿ ನೇರ ಹೂಡಿಕೆಗೆ (ಎಫ್​ಡಿಐ) ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಪ್ರಮುಖ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲೂ ಖಾಸಗಿ ವಲಯಕ್ಕೆ ಬಾಗಿಲು ತೆರೆದಂತಾಗಿದೆ. ಮೊದಲ ಹಂತವಾಗಿ ಸೇನೆಗೆ ಅತಿ ಅಗತ್ಯವಿರುವ ಯುದ್ಧವಿಮಾನಗಳು, ಹೆಲಿಕಾಪ್ಟರ್​ಗಳು, ಜಲಾಂತರ್ಗಾಮಿ ಹಾಗೂ ಯುದ್ಧ ಟ್ಯಾಂಕ್​ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದಿಸಲು ಸಮಿತಿ ಅನುಮೋದನೆ ನೀಡಿದೆ. ವಾಯುಪಡೆಯ ಹಲವು ವರ್ಷಗಳ ಬೇಡಿಕೆಯಾಗಿರುವ 39 ಹೆಲಿಕಾಪ್ಟರ್​ಗಳ ತಯಾರಿಕೆಗೂ ಒಪ್ಪಿಗೆ ನೀಡಲಾಗಿದೆ. ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಪರಿಶೀಲನೆಯ ಬಳಿಕ ಈ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಡಿಆರ್​ಡಿಒಗೆ ಎಚ್ಚರಿಕೆ ಗಂಟೆ: ಭದ್ರತಾ ಸಾಮಗ್ರಿಗಳ ಉತ್ಪಾದನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ಸಹಿತ ಕೇಂದ್ರ ಸರ್ಕಾರದ ನಾಲ್ಕು ಸಂಸ್ಥೆಗಳಿವೆ. 50 ಪ್ರಯೋಗಾಲಯಗಳು, 41 ಫ್ಯಾಕ್ಟರಿಗಳು, 4 ಶಿಪ್​ಯಾರ್ಡ್
ಗಳಿವೆ. ಹಲವು ದಶಕಗಳಿಂದ ಇವು ಕಾರ್ಯನಿರ್ವಹಿಸುತ್ತಿದ್ದರೂ ಭಾರತದ ಭದ್ರತಾ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಲು ವಿಫಲವಾಗಿವೆ. ಕೇಂದ್ರ ಸರ್ಕಾರದ ಹೊಸ ನೀತಿ ಇವುಗಳಿಗೆ ಎಚ್ಚರಿಕೆ ಗಂಟೆಯೆಂದೇ ವಿಶ್ಲೇಷಿಸಲಾಗುತ್ತಿದೆ. ಡಿಆರ್​ಡಿಒ ಮತ್ತಿತರ ಸಂಸ್ಥೆಗಳು ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಿ ಉತ್ತಮ ರಕ್ಷಣಾ ಸಾಮಗ್ರಿ ತಯಾರಿಸಲು ವಿಫಲವಾದಲ್ಲಿ ಇವುಗಳಿಗೆ ನೀಡಲಾಗುವ ಸಾವಿರಾರು ಕೋಟಿ ರೂ. ಅನುದಾನದಲ್ಲಿ ಕಡಿತವಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಅರ್ಹತೆ ಆಧಾರದಲ್ಲಿ ಕಂಪನಿ ಆಯ್ಕೆ
ಪ್ರಸ್ತುತ ನಾಲ್ಕು ಪ್ರಮುಖ ರಕ್ಷಣಾ ಸಾಧನ ಉತ್ಪಾದನೆಗೆ ಖಾಸಗಿ ಸಹಭಾಗಿತ್ವ ಹೊಂದಲು ಸಮಿತಿ ಒಪ್ಪಿಗೆ ನೀಡಿದೆ. ಒಂದು ಸಾಮಗ್ರಿ ಉತ್ಪಾದನೆಗೆ ಒಂದು ಸಂಸ್ಥೆಯನ್ನು ಮಾತ್ರ ಪಾಲುದಾರನನ್ನಾಗಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪಾರದರ್ಶಕತೆ ಹಾಗೂ ಸ್ಪರ್ಧಾತ್ಮಕತೆ ಆಧಾರದಲ್ಲಿ ಪಾಲುದಾರ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಂಪನಿಯ ಆರ್ಥಿಕತೆ, ವಾರ್ಷಿಕ ಉತ್ಪಾದನೆ, ತಂತ್ರಜ್ಞಾನ, ಅನುಭವ, ಈಗ ಲಭ್ಯವಿರುವ ಮೂಲಸೌಕರ್ಯ ಮತ್ತಿತರ ಅಂಶಗಳ ಮೇಲೆ ಈ ಆಯ್ಕೆ ನಡೆಯಲಿದೆ.

ಭಾರತಕ್ಕೇನು ಲಾಭ?
  • ಜಾಗತಿಕ ಕಂಪನಿಗಳ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಯುದ್ಧೋಪಕರಣಗಳನ್ನು ದೇಶದಲ್ಲೇ ತಯಾರಿಸಬಹುದು
  • ಹತ್ತಾರು ಸಾವಿರ ಕೋಟಿ ರೂ. ನೀಡಿ ವಿದೇಶದಿಂದ ಆಮದು ಮಾಡಿಕೊಳ್ಳುವುದು ತಪ್ಪಲಿದೆ
  • ಮೇಕ್ ಇನ್ ಇಂಡಿಯಾ ಅಡಿ ಭಾರತದಲ್ಲೇ ಶಸ್ತ್ರಾಸ್ತ್ರ ತಯಾರಿಕೆ ಘಟಕ ಸ್ಥಾಪನೆಯಾಗುವ ಕಾರಣ ಅಪಾರ ಉದ್ಯೋಗ ಸೃಷ್ಟಿ
  • ತ್ವರಿತಗತಿಯಲ್ಲಿ ಶಸ್ತ್ರಾಸ್ತ್ರ ತಯಾರಿಸಬಹುದು. ಯುದ್ಧ ಸಂದರ್ಭದಲ್ಲಿ ಇದು ಅನುಕೂಲ
  • ತುರ್ತ ಸಂದರ್ಭಗಳಲ್ಲಿ ವಿದೇಶದಿಂದ ಶಸ್ತ್ರಾಸ್ತ್ರ ಆಮದು ಅಸಾಧ್ಯವಾಗಬಹುದು ಅಥವಾ ವಿಳಂಬ ಆಗಬಹುದು. ದೇಶದಲ್ಲೇ ಉತ್ಪಾದನೆಯಾದರೆ ಈ ಸಮಸ್ಯೆ ಇರುವುದಿಲ್ಲ
  •  
ಅಪಾಯವೇನು?
  • ಭಾರತದ ರಕ್ಷಣಾ ರಹಸ್ಯಗಳು ಸೋರಿಕೆ ಆಗುವ ಆತಂಕ
  • ದೇಶದಲ್ಲಿನ ಶಸ್ತ್ರಾಸ್ತ್ರ ಸಂಗ್ರಹ, ತಂತ್ರಜ್ಞಾನಗಳ ಮಾಹಿತಿ ಯನ್ನು ಶತ್ರುರಾಷ್ಟ್ರಕ್ಕೆ ರವಾನಿಸಿದರೆ ಅನಾಹುತ ಸಾಧ್ಯತೆ
  • ಯುದ್ಧ ಸಂದರ್ಭದಲ್ಲಿ ರಕ್ಷಣಾ ವಿವರ ಎದುರಾಳಿಗಳಿಗೆ ಸಿಕ್ಕರೆ ಪ್ರತಿತಂತ್ರ ರೂಪಿಸುವುದು ಅವರಿಗೆ ಸುಲಭ
  • ಅತ್ಯಂತ ರಹಸ್ಯವಾಗಿರಬೇಕಾದ ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಪ್ರವೇಶ ಸರಿಯೇ ಎಂಬ ಜಿಜ್ಞಾಸೆ

ಭಾರತೀಯ ಸೇನೆಯ ಅಗತ್ಯತೆಗಳು ಯುದ್ಧ ಟ್ಯಾಂಕ್
4 ಎರಡು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಯುದ್ಧ ಟ್ಯಾಂಕ್ ತಯಾರಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿ
ಇಸ್ರೇಲ್, ಅಮೆರಿಕ, ಭಾರತ ಜಂಟಿಯಾಗಿ ಟ್ಯಾಂಕ್​ಗಳನ್ನು ತಯಾರಿಸುವ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ

ಹೆಲಿಕಾಪ್ಟರ್
ಜಲಾಂತರ್ಗಾಮಿ ಹೊಡೆದುರುಳಿಸುವ 147 ಬಹೂಪಯೋಗಿ ಹೆಲಿಕಾಪ್ಟರ್​ಗಳು (ಎಂಆರ್​ಎಚ್) ನೌಕಾಪಡೆಗೆ ಬೇಕು
ಆಧುನಿಕ ತಂತ್ರಜ್ಞಾನ ಹೊಂದಿರದ 4-5 ಯುದ್ಧ ನೌಕೆಗಳನ್ನು ನೌಕಾಪಡೆ ಪ್ರತಿವರ್ಷ ಸೇರಿಸಿಕೊಳ್ಳುತ್ತಿದೆ
ದ್ವಿ ಎಂಜಿನ್​ನ 110 ಲಘು ಹೆಲಿಕಾಫ್ಟರ್ ಖರೀದಿಗೆ ನಿರ್ಧಾರ

ಯುದ್ಧ ವಿಮಾನ
ಅಮೆರಿಕದ ಎಫ್ 16, ಸ್ವೀಡನ್ ಗ್ರೖೆಪೆನ್-ಇ ಜೆಟ್ ಖರೀದಿಗೆ ಕೇಂದ್ರ ಸರ್ಕಾರದಿಂದ ಚಿಂತನೆ
ನೌಕಾಪಡೆ 33 ಯುದ್ಧ ಸ್ಕಾ್ವಡ್ರನ್ ಹೊಂದಿದ್ದು, 44 ಸ್ಕಾ್ವಡ್ರನ್​ಗಳ ಅಗತ್ಯವಿದೆ
2020-2026ರ ವೇಳೆಗೆ 100 ಸುಧಾರಿತ ತೇಜಸ್ ಮಾರ್ಕ್-1ಎ ವಿಮಾನ ಸೇರ್ಪಡೆ ನಿರೀಕ್ಷೆ
ಜಲಾಂತರ್ಗಾಮಿಗಳು
ನೌಕಾಪಡೆ ಬಳಿ 13 ಸಾಂಪ್ರದಾಯಿಕ ಜಲಾಂತರ್ಗಾಮಿಗಳಿವೆ
2017-2021ರ ವೇಳೆಗೆ ಆರು ಸ್ಕಾರ್ಪೀನ್
ಜಲಾಂತರ್ಗಾಮಿ ಸೇರ್ಪಡೆ ನಿರೀಕ್ಷೆ
2007ರ ನವೆಂಬರ್​ನಲ್ಲಿ 70 ಸಾವಿರ ಕೋಟಿ ರೂ. ವೆಚ್ಚದ ಸಬ್​ವುರಿನ್ ನಿರ್ಮಾಣ ಯೋಜನೆಗೆ ಒಪ್ಪಿಗೆ
ಇದುವರೆಗೂ ಪಾಲುದಾರರ ಆಯ್ಕೆ ಆಗಿಲ್ಲ

Friday, May 19, 2017

ಪ್ರಚಲಿತ ವಿದ್ಯಮಾನ : 19 ಮೇ 2017 : ಸೇವೆಗಳಿಗೆ 4 ಹಂತದ ತೆರಿಗೆ: ಶಿಕ್ಷಣ, ಆರೋಗ್ಯ ಸೇವೆಗಳು ಜಿಎಸ್‌ಟಿಯಿಂದ ಹೊರಗೆ

ಶ್ರೀನಗರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಶುಕ್ರವಾರದ ಸಭೆಯಲ್ಲಿ ಸೇವೆಗಳ ಮೇಲಿನ ತೆರಿಗೆ ದರವನ್ನು ಅಂತಿಮಗೊಳಿಸಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ತೆರಿಗೆಯಿಂದ ಹೊರಗಿಡಲಾಗಿದೆ.

ಓಲಾ, ಉಬರ್‌ನಂತಹ ಆ್ಯಪ್‌ ಆಧಾರಿತ ಸಾರಿಗೆ ಸೇವೆಗಳಿಗೆ ಶೇಕಡ 5ರಷ್ಟು ಸೇವಾ ತೆರಿಗೆಯನ್ನು ನಿಗದಿಗೊಳಿಸಲಾಗಿದೆ. ಜಿಎಸ್‌ಟಿ ಜಾರಿಯಾದರೆ ವಿಮಾನ ಪ್ರಯಾಣದ ಟಿಕೆಟ್‌ಗಳು ಅಗ್ಗವಾಗಲಿವೆ.

ಸೇವೆಗಳಿಗೆ 4 ಹಂತದ (5%, 12%, 18% ಮತ್ತು 28%) ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ಐಷಾರಾಮಿ ಸೇವೆಗಳಿಗೆ ಶೇಕಡ 28ರಷ್ಟು ತೆರಿಗೆ ದರ ನಿಗದಿಗೊಳಿಸಲಾಗಿದೆ.

ರೈಲು, ವಿಮಾನ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳಿಗೆ ಶೇಕಡ 5ರಷ್ಟು ತೆರಿಗೆ ದರ ನಿಗದಿಪಡಿಸಲಾಗಿದೆ.

ಪಂಚತಾರಾ ಹೋಟೆಲ್‌ಗಳು, ರೇಸ್ ಕ್ಲಬ್‌‌, ಸಿನಿಮಾ ವಲಯಕ್ಕೆ ಶೇಕಡ 28 ಹಾಗೂ ದೂರಸಂಪರ್ಕ, ಹಣಕಾಸು ಸೇವೆಗಳಿಗೆ ಶೇಕಡ 18ರಷ್ಟು ತೆರಿಗೆ ದರ ನಿಗದಿಯಾಗಿದೆ.

ಚಿನ್ನದ ಮೇಲಿನ ಜಿಎಸ್‌ಟಿ ದರವನ್ನು ಮಂಡಳಿಯು ಇನ್ನೂ ನಿರ್ಧರಿಸಿಲ್ಲ. ಜೂನ್‌ 3ರಂದು ನಡೆಯುವ ಮಂಡಳಿಯ ಮುಂದಿನ ಸಭೆಯಲ್ಲಿ ಚಿನ್ನದ ಮೇಲಿನ ತೆರಿಗೆ ದರ ನಿಗದಿಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರಲಿದೆ.

Tuesday, May 16, 2017

ಪ್ರಚಲಿತ ವಿದ್ಯಮಾನ : 16 ಮೇ 2017 : ‘ತ್ರಿವಳಿ ತಲಾಖ್ ಕುರಿತ ನಂಬಿಕೆ ರಾಮನ ಹುಟ್ಟಿನ ಬಗೆಗಿನ ಹಿಂದೂಗಳ ನಂಬಿಕೆಗೆ ಸಮ’

ತ್ರಿವಳಿ ತಲಾಖ್‌ ನಂಬಿಕೆಗೆ ಸಂಬಂಧಿಸಿದ ವಿಷಯ. ಭಗವಾನ್ ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎಂಬ ಹಿಂದೂಗಳ ನಂಬಿಕೆಗೆ ಸಮನಾದದ್ದು ಎಂದು ಸುಪ್ರೀಂ ಕೋರ್ಟ್‌ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

ನವದೆಹಲಿ: ತ್ರಿವಳಿ ತಲಾಖ್‌ ನಂಬಿಕೆಗೆ ಸಂಬಂಧಿಸಿದ ವಿಷಯ. ಭಗವಾನ್ ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎಂಬ ಹಿಂದೂಗಳ ನಂಬಿಕೆಗೆ ಸಮನಾದದ್ದು ಎಂದು ಸುಪ್ರೀಂ ಕೋರ್ಟ್‌ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಿಳಿಸಿದೆ.

ತ್ರಿವಳಿ ತಲಾಖ್ ಅನ್ನು ಮುಸ್ಲಿಂ ಸಮುದಾಯವು ಕಳೆದ 1,400 ವರ್ಷಗಳಿಂದಲೂ ಆಚರಿಸುತ್ತಾ ಬಂದಿದೆ. ಇದು ನಂಬಿಕೆಗೆ ಸಂಬಂಧಿಸಿದ ವಿಷಯ. ಹೀಗಾಗಿ ಸಾಂವಿಧಾನಿಕ ನೈತಿಕತೆ ಮತ್ತು ಸಮಾನತೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಮಂಡಳಿ ಹೇಳಿದೆ.

‘ತ್ರಿವಳಿ ತಲಾಖ್ ಅನ್ನು ಸಾವಿರಾರು ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದೆ. ಅದು ಇಸ್ಲಾಮಿಕ್‌ಗೆ ವಿರುದ್ಧವಾದದ್ದು ಎನ್ನಲು ನಾವು ಯಾರು?’ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ.

ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದಲ್ಲಿ ಮುಸ್ಲಿಮರ ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿ ಹೊಸ ಕಾನೂನು ರಚಿಸಲು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ತಿಳಿಸಿತ್ತು.

ಪ್ರಚಲಿತ ವಿದ್ಯಮಾನ : 16 ಮೇ 2017 : ಪ್ಯಾಲೆಸ್ಟೀನ್‌ ಅಧ್ಯಕ್ಷರ ಜತೆ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ

ಈ ಮಾತುಕತೆಯು ಪರಸ್ಪರ ಸ್ನೇಹತ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಒಕ್ಕೂಟದ ಪ್ರತೀಕವಾಗಿರಲಿದೆ. ನರೇಂದ್ರ ಮೋದಿಯವರು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ರನ್ನು ನವದೆಹಲಿಯಲ್ಲಿರುವ ಹೈದರಾಬಾದ್‌ ಹೊಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ.

ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಸಂಬಂಧ, ಪ್ರಾದೇಶಿಕ ವಿಚಾರ ಮತ್ತು ಅಂತರರಾಷ್ಟ್ರೀಯ ಶಾಂತಿ ಕುರಿತು ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ ಮಾತುಕತೆ ನಡೆಸಿದ್ದಾರೆ.

ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವುದು ಮಾತುಕತೆಯ ಪ್ರಮುಖ ಉದ್ದೇಶವಾಗಿತ್ತು ಎನ್ನಲಾಗಿದೆ.

‘ಈ ಮಾತುಕತೆಯು ಪರಸ್ಪರ ಸ್ನೇಹದ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಒಕ್ಕೂಟದ ಪ್ರತೀಕವಾಗಿರಲಿದೆ. ನರೇಂದ್ರ ಮೋದಿಯವರು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್‌ ಅಬ್ಬಾಸ್‌ರನ್ನು ನವದೆಹಲಿಯಲ್ಲಿರುವ ಹೈದರಾಬಾದ್‌ ಹೊಟೆಲ್‌ನಲ್ಲಿ ಭೇಟಿ ಮಾಡಿದ್ದಾರೆ’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಗೋಪಾಲ್‌ ಬಗ್ಲೇ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮೊದಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅಬ್ಬಾಸ್‌ ಅವರನ್ನು ಉದ್ದೇಶಿಸಿ, ‘ಪ್ಯಾಲೆಸ್ಟೀನ್‌ ವಿಚಾರಗಳಲ್ಲಿ ಭಾರತದ ಸಹಕಾರ ಯಾವಾಗಲು ಇರಲಿದೆ’ ಎಂದು ಹೇಳಿದ್ದರು.

ನಾಲ್ಕುದಿನದ ಭಾರತ ಭೇಟಿಗಾಗಿ ಭಾನುವಾರವೇ ಭಾರತಕ್ಕೆ ಆಗಮಿಸಿರುವ ಅಬ್ಬಾಸ್‌ರನ್ನು ಮಂಗಳವಾರ ಬೆಳಿಗ್ಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹಾಗೂ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದರು.

ಜುಲೈನಲ್ಲಿ ಮೋದಿ ಅವರು ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೂ ಮುನ್ನ ಅಬ್ಬಾಸ್‌ ಭಾರತಕ್ಕೆ ಬಂದಿದ್ದಾರೆ. ಹೀಗಾಗಿ ಭಾರತ ತನ್ನ ರಾಜಕೀಯ ಬೆಂಬಲ ಸದಾ ಪ್ಯಾಲೆಸ್ಟೀನ್‌ ಗೆ ಇರಲಿದೆ ಎಂದು ಹೇಳಿದೆ.

ಪ್ರಚಲಿತ ವಿದ್ಯಮಾನ : 16 ಮೇ 2017 : ಬ್ರಿಟನ್​ನ ಸಿರಿವಂತರ ಪಟ್ಟಿಯಲ್ಲಿ ಭಾರತೀಯರದ್ದೇ ಪ್ರಾಬಲ್ಯ!

ಲಂಡನ್: ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದಿದ್ದರೂ ಸಹ ಬ್ರಿಟನ್​ನಲ್ಲಿ ಶ್ರೀಮಂತರ ಸಂಪತ್ತು ಮತ್ತಷ್ಟು ಹೆಚ್ಚುತ್ತಿದೆ. 2017ನೇ ಸಾಲಿನ ಬ್ರಿಟನ್​ನ ಸಿರಿವಂತರ ಪಟ್ಟಿ ಬಿಡುಗಡೆಯಾಗಿದ್ದು, ಭಾರತೀಯ ಮೂಲದ ಉದ್ಯಮಿಗಳಾದ ಸಿರಿಚಂದ್ ಮತ್ತು ಗೋಪಿಚಂದ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.

ಸಂಡೆ ಟೈಮ್್ಸ ಪತ್ರಿಕೆ 1000 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಸಂಜಾತ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಪಟ್ಟಿಯಲ್ಲಿ 134 ಬಿಲೇನಿಯರ್​ಗಳಿದ್ದು, 16.2 ಬಿಲಿಯನ್ ಪೌಂಡ್ ಸಂಪತ್ತು ಹೊಂದಿರುವ ಹಿಂದೂಜಾ ಗ್ರೂಪ್​ನ ಸಿರಿಚಂದ್ ಮತ್ತು ಗೋಪಿಚಂದ್ ಅಗ್ರ ಸ್ಥಾನ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಉಕ್ರೇನ್ ಮೂಲದ ಉದ್ಯಮಿ ಲೆನ್ ಬ್ಲಾವತಿಂಕ್ ಇದ್ದರೆ, ಮುಂಬೈನಲ್ಲಿ ಜನಿಸಿದ ಡೇವಿಡ್ ಮತ್ತು ಸೀಮನ್ 14 ಬಿಲಿಯನ್ ಸಂಪತ್ತಿನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 13.2 ಬಿಲಿಯನ್ ಪೌಂಡ್ ಸಂಪತ್ತು ಹೊಂದಿರುವ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಕುಟುಂಬ 4ನೇ ಸ್ಥಾನ ಪಡೆದಿದೆ. ಮಿತ್ತಲ್ ಕುಟುಂಬ ಕಳೆದ ಒಂದು ವರ್ಷದಲ್ಲಿ 6.1 ಬಿಲಿನ್ ಪೌಂಡ್ ಸಂಪತ್ತನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ಲಕ್ಷ್ಮೀ ಮಿತ್ತಲ್ 66ನೇ ಸ್ಥಾನ ಪಡೆದಿದ್ದಾರೆ. ಅಗ್ರ 4 ಸ್ಥಾನಗಳಲ್ಲಿ ಬ್ರಿಟನ್​ನ ಓರ್ವ ಉದ್ಯಮಿ ಸಹ ಸ್ಥಾನ ಪಡೆದಿಲ್ಲ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.



ಬ್ರಿಟನ್ ಯೂರೋಪಿನ್ ಒಕ್ಕೂಟದಿಂದ ಹೊರಬಂದಿದ್ದರೂ ಸಹ ದೇಶದ ಶ್ರೀಮಂತರ ಗಳಿಕೆಗೆ ಯಾವುದೇ ಧಕ್ಕೆಯಾಗಿಲ್ಲ. ಕಳೆದ ವರ್ಷ ದೇಶದ ಅಗ್ರ 1000 ಸಿರಿವಂತರ ಒಟ್ಟು ಸಂಪತ್ತಿನ ಮೌಲ್ಯ ಸುಮಾರು 575 ಬಿಲಿಯನ್ ಪೌಂಡ್ ಇದ್ದರೆ, ಈ ವರ್ಷ ಅಗ್ರ 1000 ಶ್ರೀಮಂತರ ಒಟ್ಟು ಸಂಪತ್ತಿನ ಮೌಲ್ಯ ಶೇ. 14 ರಷ್ಟು ಏರಿಕೆಯಾಗಿ 658 ಬಿಲಿಯನ್ ಪೌಂಡ್ಸ್​ಗೆ ತಲುಪಿದೆ ಎಂದು ಪತ್ರಿಕೆ ತಿಳಿಸಿದೆ.

Monday, May 15, 2017

ಪ್ರಚಲಿತ ವಿದ್ಯಮಾನ : 16 ಮೇ 2017 : ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್: ಭಾರತಕ್ಕೆ 3 ಬೆಳ್ಳಿ, 1 ಕಂಚು

ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನ ಮಹಿಳೆಯರ ವಿಭಾಗದಲ್ಲಿ ಶುಕ್ರವಾರ ಭಾರತದ ಸಾಕ್ಷಿ ಮಲಿಕ್, ವಿನೇಶ್ ಪೋಗತ್ ಮತ್ತು ದಿವ್ಯಾ ಕಕ್ರನ್ ಬೆಳ್ಳಿ ಪದಕ ಜಯಿಸಿದರೆ, ರೀತು ಪೋಗತ್ ಕಂಚಿನ ಪದಕ ಜಯಿಸಿದ್ದಾರೆ.

ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು 60 ಕೆ.ಜಿ. ವಿಭಾಗದ ಫೈನಲ್​ನಲ್ಲಿ ಜಪಾನ್​ನ ರಿಸಾಕೋ ಕವಾಯಿ ಅವರ ವಿರುದ್ಧ 0-10 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ರಿಯೋ ಒಲಿಂಪಿಕ್ಸ್​ನಲ್ಲಿ ಕಾಲಿಗಾಗಿದ್ದ ಗಾಯದಿಂದ ಚೇತರಿಸಿಕೊಂಡು ಮತ್ತೆ ಕುಸ್ತಿ ಅಖಾಡಕ್ಕಿಳಿದಿರುವ ವಿನೇಶ್ ಪೋಗತ್ ಅವರು 55 ಕೆ.ಜಿ. ವಿಭಾಗದ ಫೈನಲ್​ನಲ್ಲಿ ಜಪಾನ್​ನ ಸೇ ನಂಜೋ ಅವರ ವಿರುದ್ಧ 4-8 ಅಂಕಗಳ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.

69 ಕೆ.ಜಿ. ವಿಭಾಗದಲ್ಲಿ ಭಾರತದ ದಿವ್ಯ ಕಕ್ರನ್ ಅವರು ಜಪಾನ್​ನ ಸಾರಾ ದೋಶೋ ಅವರ ವಿರುದ್ಧ 0-8 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ರೀತು ಪೋಗತ್ 48 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಯಾವುದೇ ಸ್ಪರ್ಧೆಯಲ್ಲಿದೆ ಕಂಚಿನ ಪದಕ ಜಯಿಸಿದರು. ರೀತು ಪೋಗತ್ ಎದುರಾಳಿ ಚೀನಾ ಸುನ್ ಯನಾನ್ ಅವರು ಗಾಯಗೊಂಡು ನಿವೃತ್ತಿ ಘೊಷಿಸಿದ್ದರಿಂದ ರೀತುಗೆ ಕಂಚಿನ ಪದಕ ಒಲಿಯಿತು.

ಪ್ರಚಲಿತ ವಿದ್ಯಮಾನ : 16 ಮೇ 2017 : ‘ಒಬೋರ್’ ಶೃಂಗಕ್ಕೆ ಬಹಿಷ್ಕಾರ, ಭಾರತದ ಪ್ರಬಲ ಸಂದೇಶ

ನವದೆಹಲಿ/ಬೀಜಿಂಗ್: ಚೀನಾವು ಭಾನುವಾರ ಸಂಘಟಿಸಿರುವ ಮಹತ್ವಾಕಾಂಕ್ಷೆಯ ‘ಒಂದು ವಲಯ, ಒಂದು ರಸ್ತೆ’ (ಒಬೋರ್) ಶೃಂಗಸಭೆಯನ್ನು ಬಹಿಷ್ಕರಿಸುವ ಮೂಲಕ ತನ್ನ ಸಾರ್ವಭೌಮತ್ವದ ಮೇಲಿನ ಹಸ್ತಕ್ಷೇಪವನ್ನು ಸಹಿಸಲು ಸಾಧ್ಯವಿಲ್ಲ ಎಂಬ ಪ್ರಬಲ ಸಂದೇಶವನ್ನು ಚೀನಾಕ್ಕೆ ನೀಡಲು ಭಾರತ ಸನ್ನದ್ಧವಾಗಿದೆ.
ಬಂದರು, ರೈಲುಮಾರ್ಗ ಮತ್ತು ರಸ್ತೆಗಳನ್ನು ಸಂರ್ಪಸುವ ಚೀನಾದ ಬೃಹತ್ ಯೋಜನೆಗೆ ಸಂಬಂಧಿಸಿದ ಶೃಂಗಸಭೆಯಲ್ಲಿ 29 ರಾಷ್ಟ್ರಗಳ ನಾಯಕರು ಹಾಗೂ ಇತರ ರಾಷ್ಟ್ರಗಳ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದರೂ, ತಾನು ಭಾಗವಹಿಸುವ ಅಥವಾ ಭಾಗವಹಿಸದ ಬಗ್ಗೆ ಭಾರತ ಅಧಿಕೃತ ಸಂದೇಶವನ್ನು ಚೀನಾಕ್ಕೆ ಕಳುಹಿಸಿಲ್ಲ.
ಅಮೆರಿಕ, ಜಪಾನ್, ದಕ್ಷಿಣ ಕೊರಿಯ, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳು ಶೃಂಗದಲ್ಲಿ ಪಾಲ್ಗೊಳ್ಳಲಿವೆ. ಪಾಕಿಸ್ತಾನದಿಂದ ಸ್ವತಃ ಪ್ರಧಾನಿ ನವಾಜ್ ಷರೀಫ್ ಅವರೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಶುಕ್ರವಾರವೇ ಬೀಜಿಂಗ್​ಗೆ ತೆರಳಿದ್ದಾರೆ. –ಏಜೆನ್ಸೀಸ್
 ಭಾರತದ ವಿರೋಧವೇಕೆ?
ಚೀನಾದ ಒಂದು ವಲಯ, ಒಂದು ರಸ್ತೆ ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿರ್ವಿುಸಲು ಉದ್ದೇಶಿಸಲಾಗಿದೆ. 46 ಶತಕೋಟಿ ಡಾಲರ್ ವೆಚ್ಚದ ಈ ಆರ್ಥಿಕ ಕಾರಿಡಾರ್, ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುತ್ತದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನದ ಭಾಗವಲ್ಲ ಎಂಬುದಾಗಿ ಸ್ಪಷ್ಟವಾಗಿ ಸಾರಿರುವ ಭಾರತ, ಇದೇ ಹಿನ್ನೆಲೆಯಲ್ಲಿ ಈ ಯೋಜನೆಗೆ ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇದಲ್ಲದೆ ಪರಮಾಣು ಪೂರೈಕೆದಾರರ ಸಮೂಹಕ್ಕೆ (ಎನ್​ಎಸ್​ಜಿ) ಸೇರುವ ಯತ್ನ, ಪಾಕಿಸ್ತಾನಿ ಭಯೋತ್ಪಾದಕ ಗುಂಪು ಜೈಷ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್​ಗೆ ವಿಶ್ವಸಂಸ್ಥೆಯಲ್ಲಿ ನಿಷೇಧ ವಿಧಿಸುವ ಪ್ರಸ್ತಾಪ, ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸೇರುವ ಯತ್ನಗಳಿಗೆ ವಿರೋಧ ವ್ಯಕ್ತ ಪಡಿಸಿರುವ ಚೀನಾದ ನಿಲುವು ಕೂಡಾ ಭಾರತಕ್ಕೆ ತೀವ್ರ ಕಿರಿಕಿರಿ ಉಂಟು ಮಾಡಿದೆ.
 ಚೀನಾ ಏನು ಹೇಳುತ್ತದೆ?
ಚೀನಾ, ಭಾರತ, ಪಾಕಿಸ್ತಾನ ಸೇರಿದಂತೆ ಪ್ರದೇಶದ ಎಲ್ಲ ರಾಷ್ಟ್ರಗಳಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ. ಯಾವುದೇ ರಾಷ್ಟ್ರದ ಸಾರ್ವಭೌಮತ್ವದ ವಿಚಾರದಲ್ಲಿ ಕೈಹಾಕುವುದಿಲ್ಲ. ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್ ಹೆಸರು ಬದಲಿಸಲೂ ಚೀನಾ ಸಿದ್ಧವಿದೆ ಎಂದು ಲುವೊ ಹೇಳಿದ್ದಾರೆ.
 ಏನಿದು ಯೋಜನೆ?
ಚೀನಾದಿಂದ ಯುರೋಪಿನವರೆಗಿನ ಎಲ್ಲ ರಸ್ತೆಗಳು, ರೈಲು ಮಾರ್ಗಗಳು ಬಂದರುಗಳನ್ನು ಸಂರ್ಪಸುವ ಮೂಲಕ ಮೂಲ ಸವಲತ್ತು ಕಲ್ಪಿಸುವ ಯೋಜನೆ ಇದು. ಶತಕೋಟಿ ಡಾಲರ್ ವೆಚ್ಚದ ಈ ಯೋಜನೆ ಮೂಲಕ ಭಾರತದ ನೆರೆಹೊರೆ ದೇಶಗಳೂ ಸೇರಿದಂತೆ ಏಷ್ಯಾದಲ್ಲಿ ತನ್ನ ಪ್ರಭಾವವನ್ನು ಗಟ್ಟಿಗೊಳಿಸಲು ಚೀನಾಕ್ಕೆ ಸಾಧ್ಯವಾಗಲಿದೆ. ಈ ಯೋಜನೆ ಮೂಲಕ ಏಷ್ಯಾ ಮತ್ತು ಆಫ್ರಿಕಾ ಮಧ್ಯೆ ಪ್ರಾದೇಶಿಕ ಸಂಪರ್ಕ ಕಲ್ಪಿಸುವ ಉದ್ದೇಶವನ್ನೂ ಚೀನಾ ಹೊಂದಿದೆ.
ಅಮೆರಿಕವನ್ನು ಸೆಳೆದ ಚೀನಾ
ತನ್ನ ‘ಸಿಲ್ಕ್ ರೋಡ್ ಶೃಂಗ’ಕ್ಕೆ ಅಮೆರಿಕವನ್ನು ಎಳೆದುಕೊಳ್ಳುವಲ್ಲಿ ಚೀನಾ ಕಡೆಗಳಿಗೆಯಲ್ಲಿ ಸಫಲವಾಗಿದೆ. ಅದೇ ರೀತಿ ದಕ್ಷಿಣ ಕೊರಿಯ, ಯುರೋಪಿಯನ್ ಯೂನಿಯನ್ (ಇಯು) ಮತ್ತು ಜಪಾನನ್ನೂ ಶೃಂಗದಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸಿದೆ. ಅಮೆರಿಕದ ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಪೂರ್ವ ಏಷ್ಯಾ ಹಿರಿಯ ನಿರ್ದೇಶಕ ಮ್ಯಾಟ್ ಪೊಟಿಂಗರ್ ಅವರು ಶೃಂಗಸಭೆಯಲ್ಲಿ ಭಾಗವಹಿಸುವ ನಿಯೋಗದ ನೇತೃತ್ವ ವಹಿಸುವರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಪ್ರಕಟಿಸಿದೆ. ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ, ನೇಪಾಳದ ಉಪಪ್ರಧಾನಿ ಮತ್ತು ವಿತ್ತ ಸಚಿವ ಕೃಷ್ಣ ಬಹಾದುರ್ ಮಹರಾ ಅವರೂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಚಲಿತ ವಿದ್ಯಮಾನ : 16 ಮೇ 2017 : ಚೀನಾ ಗಡಿಯಲ್ಲಿ ದೇಶದ ಅತೀ ಉದ್ದದ ಸೇತುವೆ

ನವದೆಹಲಿ: ಅಸ್ಸಾಂನ ಧೊಲಾ-ಸದಿಯಾ ನಡುವೆ ಸಂಪರ್ಕ ಕಲ್ಪಿಸುವ ದೇಶದಲ್ಲಿಯೇ ಅತಿ ಉದ್ದದ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸೇತುವೆ ಚೀನಾ ಗಡಿಯ ಅತಿ ಸಮೀಪದಲ್ಲಿರುವ ಕಾರಣ ರಕ್ಷಣಾ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. 60 ಟನ್ ತೂಕದ ಯುದ್ಧ ಟ್ಯಾಂಕ್​ಗಳು ಈ ಸೇತುವೆ ಮೇಲೆ ಸಾಗಬಹುದು. ಗಡಿ ಭಾಗಕ್ಕೆ ರಕ್ಷಣಾ ಸಾಮಗ್ರಿಗಳನ್ನು ಸಾಗಿಸಲು ಈ ಸೇತುವೆ ಅತ್ಯಂತ ಮಹತ್ವದ್ದಾಗಿದೆ. ನಿರಂತರವಾಗಿ ಗಡಿಯಲ್ಲಿ ತಂಟೆ ನಡೆಸುತ್ತಿರುವ ಚೀನಾಕ್ಕೂ ಇದು ಸೂಕ್ಷ್ಮ ಎಚ್ಚರಿಕೆಯಾಗಿದೆ.
ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ 26ಕ್ಕೆ ಮೂರು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೇ ದಿನ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಳ್ಳುತ್ತದೆ. ಸಂಭ್ರಮಾಚರಣೆ ಅಂಗವಾಗಿ ಪ್ರಧಾನಿ ಮೋದಿ ಅಂದು ಸೇತುವೆ ಉದ್ಘಾಟಿಸಲಿದ್ದಾರೆ. – ಏಜೆನ್ಸೀಸ್
ಏನೇನು ಪ್ರಯೋಜನ?
  • ಅಸ್ಸಾಂನ ತೇಜ್​ಪುರ ಬಿಟ್ಟರೆ ಬ್ರಹ್ಮಪುತ್ರ ನದಿಗೆ ಯಾವುದೇ ಸೇತುವೆ ಇಲ್ಲ. ಜನರು ಒಂದು ದಡದಿಂದ ಮತ್ತೊಂದು ದಡಕ್ಕೆ ತೆರಳಲು ಜಲಮಾರ್ಗವನ್ನೇ ಅವಲಂಬಿಸಿದ್ದಾರೆ. ಈ ಸೇತುವೆ ನಿರ್ವಣದಿಂದ ಸಂಪರ್ಕ ಅತ್ಯಂತ ಸುಲಭವಾಗುತ್ತದೆ
  • ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ನಡುವೆ ಸಂಪರ್ಕ ಬೆಸೆಯುವಲ್ಲಿ ಸೇತುವೆ ಮಹತ್ವದ ಪಾತ್ರ ವಹಿಸಿದೆ. ಅಸ್ಸಾಂ-ಅರುಣಾಚಲ ರಸ್ತೆ ಮಾರ್ಗದ ಪ್ರಯಾಣ ಅವಧಿಯಲ್ಲಿ ಸುಮಾರು ನಾಲ್ಕು ತಾಸು ಕಡಿಮೆಯಾಗಲಿದೆ.
  • ಅರುಣಾಚಲ ಪ್ರದೇಶಕ್ಕೆ ರೈಲ್ವೆ ಸಂಪರ್ಕವಿಲ್ಲ. ಈ ಸೇತುವೆ ಮೂಲಕ ಅಸ್ಸಾಂನ ತಿನ್​ಸುಖಿಯಾ ರೈಲ್ವೆ ನಿಲ್ದಾಣ ತಲುಪಬಹುದು. ದಿಬ್ರುಗಢ ವಿಮಾನ ನಿಲ್ದಾಣಕ್ಕೂ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
  • ಅರುಣಾಚಲ ಪ್ರದೇಶದ ಗಡಿಗೆ ತ್ವರಿತವಾಗಿ ಸಾಮಗ್ರಿ, ಯುದ್ಧ ಟ್ಯಾಂಕ್​ಗಳನ್ನು ರವಾನಿಸಲು ಸಹಕಾರಿ
ಸೇತುವೆ ಉದ್ಘಾಟನೆ 2 ವರ್ಷ ವಿಳಂಬ
ಹಿಂದಿನ ಯುಪಿಎ ಆಡಳಿತದಲ್ಲೇ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ನಿಗದಿಯಂತೆ 2015ರಲ್ಲಿ ಸೇತುವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕಿತ್ತು. ಆದರೆ ಕಾಮಗಾರಿ ವಿಳಂಬವಾಗಿತ್ತು. ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿಗೆ ಚುರುಕು ನೀಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮಾಹಿತಿ ನೀಡಿದ್ದಾರೆ. -ಏಜೆನ್ಸೀಸ್
ಸೇತುವೆ ವಿಶೇಷತೆ
  • ಬ್ರಹ್ಮಪುತ್ರ ಉಪನದಿ ಲೋಹಿತ್ ನದಿಯಲ್ಲಿ ಈ ಸೇತುವೆ ನಿರ್ವಿುಸಲಾಗಿದೆ
  • ಒಟ್ಟು ಉದ್ದ:  19.15 ಕಿ.ಮೀ.
  • 2011 ರಲ್ಲಿ ಆರಂಭ
  • 2017 ಮೇನಲ್ಲಿ ಪೂರ್ಣ
  • ಕಾಮಗಾರಿ ಒಟ್ಟು ವೆಚ್ಚ 950 ಕೋಟಿ ರೂ.
  • 60 ಟನ್ ತೂಕ ಯುದ್ಧ ಟ್ಯಾಂಕ್​ಗಳ ಸಂಚಾರದ ಸಾಮರ್ಥ್ಯ
  • 3.35 ಕಿ.ಮೀ. ಬಾಂದ್ರಾ-ವರ್ಲಿ ಸೇತುವೆ ಗಿಂತ ಉದ್ದದ ಬ್ರಿಡ್ಜ್

ಪ್ರಚಲಿತ ವಿದ್ಯಮಾನ : 16 ಮೇ 2017 : ಪಿಯುಗೆ ಆಧಾರ್ ಕಡ್ಡಾಯ

ಬೆಂಗಳೂರು: ಎಸ್​ಎಸ್​ಎಲ್​ಸಿಯಲ್ಲಿ ತೇರ್ಗಡೆ ಹೊಂದಿ ಪಿಯುಸಿ ಪ್ರವೇಶಕ್ಕೆ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಪಡೆಯುವುದಿನ್ನು ಕಡ್ಡಾಯ. ಕಾರ್ಡ್ ಇಲ್ಲದಿದ್ದರೆ ಅರ್ಜಿ ಸಲ್ಲಿಸಿ ರಶೀದಿ ಸಂಖ್ಯೆಯನ್ನಾದರೂ ಹೊಂದಬೇಕು.

ಈ ಕುರಿತು ಬಹುತೇಕ ಪಿಯು ಕಾಲೇಜುಗಳು ಸೂಚನಾ ಫಲಕಗಳಲ್ಲಿ ‘ಆಧಾರ್ ಕಡ್ಡಾಯ’ ಎಂದು ಪ್ರಕಟಿಸಿವೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಈ ಕ್ರಮಕ್ಕೆ ಕೈಗೊಳ್ಳಲಾಗಿದೆ.

ಪ್ರವೇಶಾತಿ ನಮೂನೆಯಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸುವಂತೆ ಸೂಚಿಸಲಾಗಿದ್ದು, ಅದಕ್ಕಾಗಿ ಹೊಸ ಕಾಲಂ ಕೂಡ ಸೇರ್ಪಡೆ ಮಾಡಲಾಗಿದೆ. ಅರ್ಜಿ ನಮೂನೆ ಜತೆಗೆ ಆಧಾರ್ ಕಾರ್ಡ್ ಸಲ್ಲಿಸದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆಧಾರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚಿಸಿವೆ. ಸಲ್ಲಿಸಿದ ಅರ್ಜಿಯ ರಶೀದಿ ಸಂಖ್ಯೆ ನೀಡಿದರೆ ಪ್ರವೇಶಾತಿಗೆ ಅವಕಾಶ ನೀಡುವುದಾಗಿ ತಿಳಿಸಿವೆ. ಆದರೆ, ಕೆಲವು ಕಾಲೇಜುಗಳಲ್ಲಿ ಜನ್ಮದಿನಾಂಕ, ವಿಳಾಸ ಸೇರಿ ಇತರ ವಿವರ ದೃಢೀಕರಿಸುವ ಯಾವುದಾದರೂ ದಾಖಲೆಗಳನ್ನು ಸಲ್ಲಿಸಬಹುದು ಎಂದು ಹೇಳುತ್ತಿವೆ.

ವಿದ್ಯಾರ್ಥಿಯ ಸಮಗ್ರ ಶೈಕ್ಷಣಿಕ ಸಾಧನೆ ಒಂದೆಡೆಗೆ ತರುವ ಉದ್ದೇಶದಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಆಧಾರ್ ಸಲ್ಲಿಸಲು ತಿಳಿಸಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : 16 ಮೇ 2017 : ಹ್ಯಾಕರ್ಸ್​​​​​​​​​​​​​​​ ಕೆಂಗಣ್ಣು: ಸಾಫ್ಟ್​​​ವೇರ್​​​ ಅಪ್​​​ಡೇಟ್​​​​​​ಗಾಗಿ ಆರ್​​​ಬಿಐ ಸೂಚನೆ

ಬೆಂಗಳೂರು: ಕಳೆದ ವಾರಾಂತ್ಯದಿಂದ ಕಂಪ್ಯೂಟರ್​ಗಳಿಗೆ ಅಂತಾರಾಷ್ಟ್ರೀಯ ವೈರಸ್ ದಾಳಿ ಭೀತಿ ಕಾಡತೊಡಗಿದೆ. ಇದು ಎಟಿಎಂಗಳ ಮೇಲೆ ತೀವ್ರತರ ಪರಿಣಾಮ ಬೀರುತ್ತಿದೆ. ಇದು ಭಾರತವನ್ನೂ ಕಾಡತೊಡಗಿದೆ. ಇದರಿಂದ ಪಾರಾಗಲು ಎಟಿಎಂ ಸಿಸ್ಟಮ್​ ಅಪ್​ಡೇಟ್​ ಕಾರ್ಯಕ್ಕೆ ಆರ್​ಬಿಐ ಸೋಮವಾರ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ನಗರದ ಎಟಿಎಂಗಳಲ್ಲಿ ಮತ್ತೆ ನೋ ಕ್ಯಾಶ್​​ ಬೋರ್ಡ್​​​​​ ರಾರಾಜಿಸತೊಡಗಿವೆ. ಸದ್ಯಕ್ಕೆ ಬಳಸಲಾಗ್ತಿರೋ ಎಟಿಎಂಗಳು ಔಟ್ ಡೇಟೆಡ್ ಆಗಿದ್ದು, ಅಪಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅಳವಡಿಸುವವರೆಗೆ ಎಟಿಎಂಗಳಿಗೆ ಹಣ ತುಂಬಬಾರದು ಎಂದು ಆರ್​ಬಿಐ ತನ್ನ ಅಧೀನ ಬ್ಯಾಂಕ್​ಗಳಿಗೆ ತಾಕೀತು ಮಾಡಿದೆ.

ಸದ್ಯ ದೇಶದಲ್ಲಿರೋ ಶೇಕಡಾ 60% ಎಟಿಎಂಗಳಲ್ಲಿ ಔಟ್ ಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅನ್ನು ಬಳಸಲಾಗುತ್ತಿದೆ. ಈ ಎಲ್ಲಾ ಎಟಿಎಂಗಳು ಅಪ್​ಡೇಟ್ ಆಗೋವರೆಗೆ ಇದೇ ಸ್ಥಿತಿ ಮುಂದುವರೆಯಲಿದೆ.

ಪ್ರಚಲಿತ ವಿದ್ಯಮಾನ : 16 ಮೇ 2017 : ಕುಲಭೂಷಣ್​ ಗಲ್ಲು ಶಿಕ್ಷೆ- ಪಾಕ್​ ಗೆ ಆರಂಭಿಕ ಹಿನ್ನಡೆ

ಹೇಗ್​: ಭಾರತೀಯ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌ ಗಲ್ಲು ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನ ವಾದ ಪ್ರತಿವಾದ ಮಂಡಿಸಿದ್ದು, ಆರಂಭದಲ್ಲೇ ಪಾಕ್​ ಗೆ ಹಿನ್ನಡೆಯಾಗಿದೆ.

18 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದ್ದವು. ಈ ವೇಳೆ ಪಾಕಿಸ್ತಾನದ ನಿಜ ಬಣ್ಣವನ್ನು ಭಾರತ ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಪರ ವಕೀಲರು 90 ನಿಮಿಷಗಳ ಕಾಲ ವಾದ ಮಂಡಿಸಿದರು.

ಭಾರತ ಪರ ವಕೀಲ ಹರೀಶ್​ ಸಾಳ್ವೆ, ನ್ಯಾಯಾಧೀಶ ಜಸ್ಟಿನ್​ ರೋನಿ ಅಬ್ರಾಹಾಂ ಎದುರು ಹಲವು ಸಾಕ್ಷ್ಯಗಳನ್ನ ಸಲ್ಲಿಸಿದರು. 2016ರ ಮಾರ್ಚ್​ನಲ್ಲಿ ಇರಾನ್​ನಿಂದ ಕುಲಭೂಷಣ್​ರನ್ನ ಅಪಹರಿಸಿದ್ದ ಪಾಕಿಸ್ತಾನ, ಅವರನ್ನು ಗುಪ್ತಚರ ಇಲಾಖೆ ಅಧಿಕಾರಿ ಎಂದು ಬಿಂಬಿಸಿತ್ತು. ಈ ಕುರಿತು ಸಾಕ್ಷ್ಯ ನೀಡಲು ಮನವಿ ಮಾಡಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ಭಾರತದ ವಾದ ಮುಗಿಯುತ್ತಿದ್ದಂತೆ ಪಾಕಿಸ್ತಾನ ತನ್ನ ಪ್ರತಿವಾದ ಮಂಡಿಸಿತು. ಕೇವಲ ಕುಲಭೂಷಣ್​ ತಪ್ಪೊಪ್ಪಿಕೊಂಡಿದ್ದ ವಿಡಿಯೋವನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪಾಕ್‌ ಸಲ್ಲಿಸಿದೆ. ಆದರೆ ಈ ವಿಡಿಯೋ ಪ್ರಸಾರ ಮಾಡೋಕೆ ನ್ಯಾಯಾಧೀಶರು ಅವಕಾಶ ನೀಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಅಲ್ಲದೇ ತನ್ನ ವಾದದಲ್ಲಿ ಬರಿ ಸುಳ್ಳು, ಕಪೋಲಕಲ್ಪಿತ ವಿಚಾರಗಳು, ಸಾಕ್ಷ್ಯಗಳನ್ನ ತಿರುಚಿ, ಅದನ್ನೇ ಸತ್ಯ ಎಂದು ಬಿಂಬಿಸಲು ಪಾಕಿಸ್ತಾನ ಪರ ವಕೀಲರು ನಡೆಸಿದ ಕಸರತ್ತು ವಿಫಲಗೊಂಡಿದೆ.

ಇದರಿಂದ ಮುಜುಗರಕ್ಕೊಳಗಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯವನ್ನ ದಿಕ್ಕು ತಪ್ಪಿಸೋ ಕೆಲಸವನ್ನಾಗಿ ಭಾರತ ಮಾಡುತ್ತಿದೆ ಅಂತಾ ಇಲ್ಲ ಸಲ್ಲದ ಆರೋಪಿಸಿದೆ.

ಪಾಕಿಸ್ತಾನದ ಸುಳ್ಳು ವಾದ..!
ಶಾಂತಿಯುತವಾಗಿ ಪರಸ್ಪರ ಸಮಸ್ಯೆಗೆ ಪರಿಹಾರ
ನೆರೆ ರಾಷ್ಟ್ರಗಳ ಜೊತೆಗೆ ಶಾಂತಿ ಬಯಸುವ ಪಾಕಿಸ್ತಾನ
ಕುಲಭೂಷಣ್​​ ಜಾಧವ್​​ ಭಯೋತ್ಪಾದಕ ಕೃತ್ಯದಲ್ಲಿ ಭಾಗಿ
ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ದುರ್ಬಳಕೆ
ಜಾಧವ್​ ಬಳಿ ಮುಸ್ಲಿಂ ಹೆಸರಿನ ಭಾರತದ ಪಾಸ್​ಪೋರ್ಟ್​ ಲಭ್ಯ
ತಾನು ಗುಪ್ತಚರ ಇಲಾಖೆ ಅಧಿಕಾರಿ ಅಂತ ತಪ್ಪೊಪ್ಪಿಗೆ ಹೇಳಿಕೆ
ಜಾಧವ್​ ತಪ್ಪೊಪ್ಪಿಕೊಂಡಿರೋ ವಿಡಿಯೋ ಹಸ್ತಾಂತರಿಸಿದ ಪಾಕ್​
ಬಲೂಚಿಸ್ತಾನದಲ್ಲಿ ಇರಾನ್​ನಿಂದ ಬಂದಿದ್ದ ಜಾಧವ್​ ಬಂಧನ
ಗುಪ್ತಚರ ಅಧಿಕಾರಿಗಳಿಗೆ ಶಿಕ್ಷೆ ನೀಡಿದರೆ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಲ್ಲ

–ಏಜೆನ್ಸೀಸ್​

Tuesday, May 2, 2017

ಪ್ರಚಲಿತ ವಿದ್ಯಮಾನ : 03 ಮೇ 2017 : ಭಾರತದ ವಿಭಜನೆಗೆ ಚೀನೀ ಸಂಚು, ಪಾಕ್ ಹೊಂಚು

ಒಮ್ಮೆ ನಾನೂ ನನ್ನಕ್ಕನೂ 1965ರ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಮಾತಾಡುತ್ತಿದ್ದಾಗ, ಯುದ್ಧದ ದಿನಗಳಲ್ಲಿ ದೆಹಲಿಯಲ್ಲಿ ಸೀಮೆಎಣ್ಣೆಯೂ ಸಿಗದೇ ಪರದಾಡಿದ್ದನ್ನು ಅಕ್ಕ ನೆನಪಿಸಿಕೊಂಡು ಹೇಳಿದಳು. ಮಾತು ಹಾಗೇ ಭಾರತ-ಚೀನಾ ವೈಮನಸ್ಯದ ಕಡೆ ತಿರುಗಿ, ‘…ಹಿಮಾಲಯ ಪರ್ವತಗಳು ಇಲ್ಲದಿದ್ದರೆ ನಮಗೆ ಕಷ್ಟವಾಗಿಬಿಡುತ್ತಿತ್ತು ಅಲ್ಲವಾ?’ ಅಂದೆ ನಾನು. ‘ಕಷ್ಟ ಆಗ್ತಿತ್ತು ಅನಿಸುತ್ತೆ, ನಮ್ಮ ಹೆಸರುಗಳೆಲ್ಲಾ ಚಿಂಗ್ ಪಿಂಗ್ ತೆಂಗ್ ಡೆಂಗ್ ಅಂತಾಗಿಬಿಡುತ್ತಿದ್ದವೇನೋ’ ಅಂದಳು ಅಕ್ಕ ನಗುತ್ತಾ.

ಈ ಮಾತುಗಳಾಗಿ ನಲವತ್ತು ವರ್ಷಗಳೇ ಆಗುತ್ತಿವೆ. ಈ ನಾಲ್ಕು ದಶಕಗಳಲ್ಲಿ ಹಿಮಾಲಯ ಪರ್ವತ ಹಿಂದಿನಂತೆಯೇ ಜಗ್ಗದೇ, ಕುಗ್ಗದೇ ನಿಂತೇ ಇದೆ. ಇನ್ನು ಮುಂದೆಯೂ ಇರುತ್ತದೆ. ಹೀಗಾಗಿ ನಮ್ಮ ಹೆಸರುಗಳು ಚಿಂಗ್, ಪಿಂಗ್… ಅಂತೆಲ್ಲಾ ಕುಲಗೆಟ್ಟುಹೋಗದೇ ನಮ್ಮವೇ ಆಗುಳಿಯುತ್ತವೆ. ಭೂವಿಜ್ಞಾನಿಗಳ ಪ್ರಕಾರ ಹಿಮಾಲಯ ಪರ್ವತ ವರ್ಷಕ್ಕೆ ಆರರಿಂದ ಎಂಟು ಸೆಂಟಿಮೀಟರುಗಳಷ್ಟು ಎತ್ತರಕ್ಕೆ ಬೆಳೆಯುತ್ತಿದೆಯಂತೆ. ಹೀಗಾಗಿ ನಮ್ಮ ಹೆಸರುಗಳ ಸುರಕ್ಷತೆ ವರ್ಷವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ!

ಚೀನಿಯರ ವಿಸ್ತರಣವಾದಿ ಮನೋಭಾವ: ಹೌದು, ಹ್ವಾಂಗ್​ಹೋ ಹಾಗೂ ಯಾಂಗ್ಟ್​ಝೆ ನದಿಗಳ ನಡುವೆ ನಾಲ್ಕು ಸಾವಿರ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ‘ಝಾಂಗ್​ಗ್ವೋ’ (Chinese Middle Kingdom) ಅನತಿಕಾಲದಲ್ಲೇ ಚೀನೀ ಸಾಮ್ರಾಜ್ಯವಾದವಾಗಿ ಮಾರ್ಪಟ್ಟು ಮುಂದಿನ ಮೂರು ಸಹಸ್ರಮಾನಗಳಲ್ಲಿ ದಿಕ್ಕುದಿಕ್ಕುಗಳಿಗೆ ವಿಸ್ತರಿಸಿತು. ಪೂರ್ವದಲ್ಲಿ ಪೆಸಿಫಿಕ್ ಸಾಗರ, ಪಶ್ಚಿಮದಲ್ಲಿ ತಕ್ಲ ಮಕಾನ್ ಮರುಭೂಮಿ, ಉತ್ತರದಲ್ಲಿ ಗೋಬಿ ಮರುಭೂಮಿ ಹಾಗೂ ದಕ್ಷಿಣದಲ್ಲಿ ಹಿಮಾಲಯ ಪರ್ವತಗಳ ತಡೆ ಇಲ್ಲದಿದ್ದಲ್ಲಿ ವಿಸ್ತರಣವಾದಿ ಮನೋಭಾವದ ಚೀನೀ ಹ್ಯಾನ್ ಜನಾಂಗ ತಮ್ಮ ದೇಶವನ್ನು ಅದೆಷ್ಟು ವಿಸ್ತರಿಸುತ್ತಿದ್ದರೆಂದು ಊಹಿಸುವುದು ಕಷ್ಟ. ಹಿಮಾಲಯದ ಬಗ್ಗೇ ಪ್ರತ್ಯೇಕವಾಗಿ ಹೇಳುವುದಾದರೆ ಹತ್ತನೆಯ ಶತಮಾನದಲ್ಲೊಮ್ಮೆ ಚೀನೀ ಸೇನೆ ಹಿಮಾಚಲ ಪ್ರದೇಶಕ್ಕೆ ಬಂದದ್ದನ್ನೂ, ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಸಿಖ್ ಸೇನೆ ಒಮ್ಮೆ ಟಿಬೆಟ್​ಗೆ ನುಗ್ಗಿದ್ದನ್ನೂ ಹೊರತುಪಡಿಸಿದರೆ ಉಲ್ಲೇಖಿಸಬಹುದಾದಂತಹ ಪರ್ವತದ ಉಲ್ಲಂಘನೆ ಎರಡೂ ಕಡೆಗಳಿಂದಲೂ ಇತಿಹಾಸದಲ್ಲಿ ಮತ್ತೆಂದೂ ಆಗಲಿಲ್ಲ. ಜಗತ್ತಿನ ಅತಿ ಎತ್ತರದ ಈ ಪರ್ವತಗಳನ್ನು ದಾಟಿ ಸಿಂಧೂ ಗಂಗಾ ಬಯಲಿಗೆ ಕಾಲಿಡುವ ಯೋಚನೆಯನ್ನು ಚೀನಿಯರು ಎಂದೂ ಮಾಡಲಿಲ್ಲ.

ಹಿಮಾಲಯದ ಅಭೇದ್ಯತೆಯನ್ನು ಚೀನೀಯರು ಅರಿತಂತೆಯೇ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಬ್ರಿಟಿಷರೂ ಆ ಮಹೋನ್ನತ ಪರ್ವತಶ್ರೇಣಿಗಳ ಅಭೇದ್ಯತೆಯನ್ನು ಮಾನ್ಯ ಮಾಡಿ ತಮ್ಮ ಅಧಿಕಾರವನ್ನು ಭಾರತದ ಭೌಗೋಳಿಕ ಎಲ್ಲೆಯೊಳಗಷ್ಟೇ ಸೀಮಿತಗೊಳಿಸಿದರು. ನಂತರದ ಕಾಲದಲ್ಲಿ ಹಿಮಾಲಯದ ಅಗಾಧತೆ ಹಾಗೂ ಅಭೇದ್ಯತೆಯನ್ನು ಚೀನೀ ಕಮ್ಯೂನಿಸ್ಟರೂ ಅರ್ಥಮಾಡಿಕೊಂಡರು. ಹೀಗಾಗಿಯೇ ಅವರು ಹಿಮಾಲಯದ ದಕ್ಷಿಣಕ್ಕಿರುವ ಅರುಣಾಚಲ ಪ್ರದೇಶವನ್ನು ಭಾರತದ ಭಾಗವೆಂದು ಒಪ್ಪಿಕೊಳ್ಳಲು ಹಿಂದೆಮುಂದೆ ನೋಡದೇ ತಯಾರಾದದ್ದು. ಅರುಣಾಚಲವನ್ನು ಟಿಬೆಟ್​ನಿಂದ ಪ್ರತ್ಯೇಕಿಸುವ ಉನ್ನತ ಹಿಮಾಲಯ ಪರ್ವತಗಳು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗಿ ಎರಡೂ ಪ್ರದೇಶಗಳ ನಡುವೆ ಸಂಪರ್ಕವನ್ನು ಕತ್ತರಿಸುತ್ತವೆ. ಈ ಕಾರಣದಿಂದಾಗಿಯೇ ಚಳಿಗಾಲದಲ್ಲಿ ಅರುಣಾಚಲದ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸುವುದು ಸಾಧ್ಯವಿಲ್ಲ ಎಂದು ಚಾಣಾಕ್ಷ ಚೀನೀ ಕಮ್ಯೂನಿಸ್ಟ್ ನೇತಾರರು ಸ್ಪಷ್ಟವಾಗಿ ಅರಿತುಕೊಂಡದ್ದು. ಹೀಗಾಗಿಯೇ ಅರುಣಾಚಲದ ಮೇಲೆ ಚೀನಾಗೆ ಐತಿಹಾಸಿಕ ಹಕ್ಕಿದ್ದರೂ ಭೌಗೋಳಿಕ ವಾಸ್ತವವನ್ನು ಒಪ್ಪಿಕೊಂಡು ಆ ಪ್ರದೇಶವನ್ನು ಭಾರತದಲ್ಲೇ ಬಿಡಲು ಅವರು ಮನಸ್ಸು ಮಾಡಿದರು. 1962ರ ಯುದ್ಧದಲ್ಲಿ ಚೀನೀ ಸೇನೆ ಹಿಮಾಲಯವನ್ನು ದಾಟಿ ಅರುಣಾಚಲದಲ್ಲಿ ದಕ್ಷಿಣಕ್ಕೆ ಬಹುದೂರ ಸಾಗಿ ಬಂದು ಬ್ರಹ್ಮಪುತ್ರಾ ನದಿಗೆ ಕೇವಲ ಎಂಬತ್ತು ಕಿಲೋಮೀಟರ್​ಗಳಷ್ಟು ಹತ್ತಿರದ, ಬೊಂಡಿಲಾವನ್ನು ಆಕ್ರಮಿಸಿಕೊಂಡಿತ್ತು. ಆದರೆ ಚೀನೀಯರು ಏಕಾಏಕಿ ಕದನವಿರಾಮ ಘೊಷಿಸಿ ಆಕ್ರಮಿಸಿಕೊಂಡಿದ್ದ ಎಲ್ಲ ಪ್ರದೇಶಗಳನ್ನೂ ಭಾರತಕ್ಕೇ ಬಿಟ್ಟುಕೊಟ್ಟು ಹಿಂದಕ್ಕೆ ಹೊರಟುಹೋದರು. ಮೇಲೆ ಹೇಳಿದಂತೆ ಚಳಿಗಾಲದಲ್ಲಿ ಹಿಮಾಲಯದ ದಕ್ಷಿಣದ ಪ್ರದೇಶಗಳ ಮೇಲೆ ಹತೋಟಿ ಮುಂದುವರಿಸುವುದು ಸಾಧ್ಯವಿಲ್ಲವೆಂಬ ವಾಸ್ತವವನ್ನು ಚೆನ್ನಾಗಿ ಅರಿತಿದ್ದ ಚೀನೀಯರು ಚಳಿಗಾಲ ಆರಂಭವಾಗುವ ಮುನ್ನವೇ ನವೆಂಬರ್ 20ರಂದು ಯುದ್ಧ ಮುಗಿಸಿ ಹಿಮಾಲಯವನ್ನು ದಾಟಿ ತಮ್ಮ ನೆಲಕ್ಕೆ ಹಿಂತಿರುಗಿಬಿಡುವುದು ಕ್ಷೇಮವೆಂದು ರ್ತಸಿದರು. ನವೆಂಬರ್ ಕೊನೆಯವಾರದ ನಂತರವೂ ಚೀನೀ ಸೈನಿಕರು ಅರುಣಾಚಲದಲ್ಲೇ ಉಳಿದಿದ್ದರೆ ಹಿಮಾಲಯದ ಕಣಿವೆಗಳು ಹಿಮದಿಂದ ಮುಚ್ಚಿಹೋಗುತ್ತಿದ್ದಂತೇ ಚೀನಾ ಜತೆ ಅವರ ಸಂಪರ್ಕ ಕತ್ತರಿಸಿಹೋಗಿಬಿಡುತ್ತಿತ್ತು. ಆಹಾರ, ಮದ್ದುಗುಂಡುಗಳ ಪೂರೈಕೆ ನಿಂತುಹೋಗಿ ಕಂಗೆಟ್ಟ ಅವರನ್ನು ಭಾರತೀಯ ಸೇನೆ ನಿರಾಯಾಸವಾಗಿ ಹೊಸಕಿಹಾಕಿಬಿಡಬಹುದಾಗಿತ್ತು. ಅಂದರೆ, ತಮ್ಮ ವಿಜಯ ಶೀಘ್ರದಲ್ಲೇ ಹೀನಾಯ ಸೋಲಾಗಿ ಪರಿವರ್ತಿತವಾಗುವ ಅಪಾಯವನ್ನು ಮನಗಂಡಿದ್ದ ಚೀನೀಯರು ಪಶ್ಚಿಮ ವಲಯದ ಅಕ್ಸಾಯ್ ಚಿನ್​ನಲ್ಲಿ ತಮಗೆ ಬೇಕಾದಷ್ಟು ಪ್ರದೇಶ ಸಿಕ್ಕಿದೊಡನೇ ಪೂರ್ವ ವಲಯದ ಅರುಣಾಚಲವನ್ನು ಇಡಿಯಾಗಿ ಭಾರತಕ್ಕೆ ಬಿಟ್ಟುಕೊಟ್ಟು ಹೊರಟುಹೋದರು. ಅಂದರೆ ಅವರು ತಮಗೆ ಬೇಕಾದೆಡೆ, ಬೇಕಾದ ಸಮಯದಲ್ಲಿ, ಬೇಕಾದಷ್ಟು ಮಾತ್ರ ಯುದ್ಧ ಮಾಡುವ ರಣತಂತ್ರ ರೂಪಿಸಿಕೊಂಡಿದ್ದರು. ದುರದೃಷ್ಟವಶಾತ್ ಅಂತಹ ಚಾಣಾಕ್ಷತೆ, ವಾಸ್ತವಪ್ರಜ್ಞೆ ಭಾರತೀಯ ಪ್ರಧಾನಿ ನೆಹರೂ ಅವರಲ್ಲಿ ಕಂಡುಬರಲಿಲ್ಲ. ಭೌಗೋಳಿಕವಾಗಿ ಅಕ್ಸಾಯ್ ಚಿನ್ ಪ್ರದೇಶ ಅರುಣಾಚಲದ ಪ್ರತಿಬಿಂಬ. ಭಾರತ ಮತ್ತು ಅಕ್ಸಾಯ್ ಚಿನ್ ಪ್ರಸ್ಥಭೂಮಿಯನ್ನು ವಿಶ್ವದಲ್ಲೇ ಎರಡನೆಯ ಅತಿ ಎತ್ತರದ ಪರ್ವತಶ್ರೇಣಿಯಾದ ಕಾರಾಕೊರಂ ಪರ್ವತಗಳು ಪ್ರತ್ಯೇಕಿಸುತ್ತವೆ. ಈ ಪರ್ವತಶ್ರೇಣಿಗಳು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗುತ್ತವೆ. ಒಂದುವೇಳೆ ಅಕ್ಸಾಯ್ ಚಿನ್ ಭಾರತದ ಭಾಗವಾದರೂ ಚಳಿಗಾಲದಲ್ಲಿ ಆದರ ಜತೆ ನಮಗೆ ಸಂಪರ್ಕವಿರುವುದಿಲ್ಲ. ಇದರ ಅರ್ಥವೇನೆಂದರೆ ಹಿಂದೆಂದೂ ನಮ್ಮದಾಗಿಲ್ಲದ, ನಮ್ಮದಾದರೂ ಚಳಿಗಾಲದಲ್ಲಿ ನಾವು ಆಡಳಿತ ನಡೆಸಲಾಗದ ಅಕ್ಸಾಯ್ ಚಿನ್ ನಮಗೆ ಬೇಕು ಎಂದು ನೆಹರೂ ಹಠ ಹಿಡಿದರು ಮತ್ತು ಅದನ್ನು ಒಪ್ಪಿಕೊಳ್ಳಿರೆಂದು ಚೀನೀಯರ ಮೇಲೆ ಒತ್ತಡ ಹೇರಿದರು.

ಅನಾಹುತವೇ ಹೆಚ್ಚು: ಅಂತಿಮವಾಗಿ, 1962ರ ಯುದ್ಧವನ್ನು ಚೀನಾ ನಿರ್ವಹಿಸಿದ ಬಗೆಯಿಂದ ಆದದ್ದೇನೆಂದರೆ ಹಿಮಾಲಯದಲ್ಲಿ ಎರಡೂ ದೇಶಗಳ ನಡುವೆ ಅಸ್ತಿತ್ವಕ್ಕೆ ಬಂದ ವಾಸ್ತವ ಹತೋಟಿ ರೇಖೆ ಮೊಂಡು ಅಲುಗಿನ ಗಡಿಯಾಯಿತು. ಅಂದರೆ ಇದು ಎರಡು ದೇಶಗಳಲ್ಲಿ ಯಾವೊಂದಕ್ಕೂ ಸಾಮರಿಕ ಅನುಕೂಲ ಒದಗಿಸುವುದಿಲ್ಲ. ಹೀಗಾಗಿ ಇದನ್ನು ಹೇಗಿದೆಯೋ ಹಾಗೆ ಇಟ್ಟುಕೊಳ್ಳುವುದು ಅಥವಾ ಅಲ್ಲಲ್ಲಿ ಅತಿಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಹೊರತಾಗಿ ಬೇರೆ ಸೂಕ್ತ ಮಾರ್ಗವಿಲ್ಲ. ಎರಡೂ ದೇಶಗಳಿಗೆ ರಕ್ಷಣೆಯ ದೃಷ್ಟಿಯಿಂದ ವೈಜ್ಞಾನಿಕ ಗಡಿರೇಖೆಯಂತಿರುವ ಈಗಿನ ಹತೋಟಿ ರೇಖೆಯನ್ನು ಅತಿಯಾಗಿ ಬದಲಾಯಿಸಿದರೆ ಅದರಿಂದ ಅನಾಹುತವೇ ಹೆಚ್ಚು. ಇದನ್ನು ಎರಡೂ ದೇಶಗಳು, ಮುಖ್ಯವಾಗಿ ಚೀನಾ, ಅರಿತಿರುವುದರಿಂದಲೇ ಆ ಪ್ರದೇಶದಲ್ಲಿ ಎರಡೂ ದೇಶಗಳ ನಡುವೆ ಕಳೆದ ಐವತ್ತೈದು ವರ್ಷಗಳಲ್ಲಿ ಮತ್ತೊಂದು ಯುದ್ಧವಾಗಿಲ್ಲ, ಮುಂದೆ ಆಗುವುದೂ ಇಲ್ಲ. ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಭಾರತದ ಇನ್ನಾವುದೇ ಭೂಭಾಗವನ್ನು ಆಕ್ರಮಿಸಿಕೊಳ್ಳುವ ಇರಾದೆ ಚೀನಾಗೆ ಇಲ್ಲವೇ ಇಲ್ಲ.

ಹಾಗಿದ್ದರೆ ಹಿಂದೂ ಮಹಾಸಾಗರದಲ್ಲಿ ತನ್ನ ನೆಲೆಗಳನ್ನು ಚೀನಾ ಸ್ಥಾಪಿಸಿಕೊಂಡಿರುವುದೇಕೆ? ಸುಸಜ್ಜಿತ ವಿಮಾನವಾಹಕ ನೌಕಾಪಡೆಯನ್ನು ಇಲ್ಲಿ ನೆಲೆಗೊಳಿಸುವ ಉದ್ದೇಶವೇನು? ಚೀನಾ ತನ್ನ ಮೊಟ್ಟಮೊದಲ ವಿಮಾನವಾಹಕ ನೌಕೆಯನ್ನು 2012ರಲ್ಲಿ ಗಳಿಸಿಕೊಂಡಿತಷ್ಟೇ. ಚೀನೀ ಸರ್ಕಾರೀ ಸ್ವಾಮ್ಯದ ‘ಗ್ಲೋಬಲ್ ಟೈಮ್್ಸ’ ಪತ್ರಿಕೆ ಇದೇ ಮಾರ್ಚ್​ನಲ್ಲಿ ವರದಿ ಮಾಡಿದಂತೆ ಟೈಪ್ ‘001ಎ’ ಎಂಬ ಹೆಸರಿನ ಎರಡನೆಯ ವಿಮಾನವಾಹಕ ನೌಕೆಯ ನಿರ್ಮಾಣ ಅಂತಿಮ ಹಂತದಲ್ಲಿದೆ ಹಾಗೂ ‘ಟೈಪ್ 002’ ಎಂಬ ಹೆಸರಿನ ಮತ್ತೊಂದು ವಿಮಾನವಾಹಕ ನೌಕೆಯ ನಿರ್ವಣವೂ ಜಾರಿಯಲ್ಲಿದೆ. ‘ಟೈಪ್ 002’ ನೌಕೆ ಬೃಹತ್ತಾಗಿರುವುದಷ್ಟೇ ಅಲ್ಲ, ಅತ್ಯಾಧುನಿಕ ಸಮರ ಸೌಲಭ್ಯಗಳನ್ನೂ ಹೊಂದಿರುತ್ತದೆ. ಇಲ್ಲಿ, ಪತ್ರಿಕಾವರದಿಯಲ್ಲಿನ ಮತ್ತೊಂದು ಅಂಶ ಗಮನ ಸೆಳೆಯುತ್ತದೆ. ಅದರ ಪ್ರಕಾರ ಉಚ್ಚಸ್ತರೀಯ ಚೀನಿ ರಕ್ಷಣಾ ಅಧಿಕಾರಿಯೊಬ್ಬರು ಹೀಗೆ ಹೇಳಿದ್ದಾರೆ: ‘ಚೀನಾಗೆ ಎರಡು ವಿಮಾನವಾಹಕ ನೌಕಾಪಡೆಗಳ ಅಗತ್ಯವಿದೆ, ಒಂದು ಪೆಸಿಫಿಕ್ ವಲಯದಲ್ಲಿ, ಮತ್ತೊಂದು ಹಿಂದೂ ಮಹಾಸಾಗರ ವಲಯದಲ್ಲಿ. ಆದ್ದರಿಂದ ನಮಗೆ ಐದು ಅಥವಾ ಆರು ವಿಮಾನವಾಹಕ ನೌಕೆಗಳು ಬೇಕಾಗಿವೆ.’

ಹತೋಟಿ ಸ್ಥಾಪನೆಗೆ ಅವಕಾಶವಿಲ್ಲ: ಇದೆಲ್ಲವೂ ಹೇಳುವುದು ಪ್ರಪಂಚದ ಎರಡನೆಯ ಅತಿ ದೊಡ್ಡ ನೌಕಾಸೇನೆಯಾಗುವ ಹಾದಿಯಲ್ಲಿ ಚೀನೀ ನೌಕಾಸೇನೆ ದಾಪುಗಾಲಿಡುತ್ತಿದೆ ಎನ್ನುವುದನ್ನು. ಈ ನೌಕಾಸೇನೆಯ ಅರ್ಧ ಭಾಗ ಹಿಂದೂ ಮಹಾಸಾಗರ ವಲಯದಲ್ಲಿ ಕಾರ್ಯನಿರತವಾಗಲಿದೆ ಎನ್ನುವುದು ನಮಗಿಲ್ಲಿ ಮುಖ್ಯವಾಗುತ್ತದೆ. ಭಾರತದ ಸಾಗರ ತೀರದ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಉದ್ದೇಶ ಚೀನಾಗಿದೆಯೇ? ಹಾಗೇನೂ ಇಲ್ಲ. ಯಾಕೆಂದರೆ, ಸಾಗರ ಯುದ್ಧದಲ್ಲೂ ಭಾರತವನ್ನು ಚೀನಾ ಮಣಿಸಿದರೂ ಭಾರತದ ಸಾಗರ ತೀರದ ಪ್ರದೇಶಗಳ ಮೇಲೆ ತನ್ನ ಹತೋಟಿ ಸ್ಥಾಪಿಸಲು ಅಂತಾರಾಷ್ಟ್ರೀಯ ವ್ಯವಸ್ಥೆ ಅವಕಾಶ ಮಾಡಿಕೊಡುವುದಿಲ್ಲ. ಅಷ್ಟೇ, ಅಲ್ಲ, ತಮ್ಮ ನೆಲಕ್ಕೆ ನೇರ, ಸರಾಗ ಭೂಸಂಪರ್ಕ ಇಲ್ಲದ ಭಾರತೀಯ ಪ್ರದೇಶಗಳಲ್ಲಿ ಆಡಳಿತ ನಡೆಸುವುದು ತಮ್ಮಿಂದಾಗದು ಎಂದು ಚೀನೀಯರಿಗೆ ಗೊತ್ತು. ಅಂತಹ ವಿವೇಕವನ್ನು ಅವರು ಅರುಣಾಚಲ ಪ್ರದೇಶವನ್ನು ಭಾರತಕ್ಕೇ ಬಿಟ್ಟುಕೊಟ್ಟು ಪ್ರದರ್ಶಿಸಿದ್ದಾರೆ.

ನಾವು ಚೀನಾವನ್ನು ನಮ್ಮ ಪ್ರತಿಸ್ಪರ್ಧಿ ಎಂದು ಭಾವಿಸಿದ್ದರೆ ಚೀನೀ ನಾಯಕರು ಭಾರತವನ್ನು ಹಾಗೇನೂ ತೆಗೆದುಕೊಳ್ಳುತ್ತಿಲ್ಲ. ಉದ್ಧಟತನದಂತೆ ಕಂಡರೂ ಚೀನೀ ಸಾಮರಿಕ ತಜ್ಞರು ಹೇಳುವುದು ಸೇನೆ ಮತ್ತು ಅರ್ಥವ್ಯವಸ್ಥೆಯ ಮಾನದಂಡದಲ್ಲಿ ಭಾರತ ಚೀನಾಗೆ ಎಂದೂ ಸರಿಸಮ ಆಗಲಾರದು, ಭಾರತ ಈ ವಾಸ್ತವವನ್ನು ಅರ್ಥಮಾಡಿಕೊಂಡು, ಚೀನಾಗಿಂತ ಒಂದು ಹಂತ ಕೆಳಗಿನ ಸ್ಥಾನವನ್ನು ಒಪ್ಪಿಕೊಂಡು ‘ಬಡವಾ ನೀ ಮಡಗಿದ ಹಾಗಿರು’ ಎನ್ನುವಂತಿರಬೇಕು! ಇಷ್ಟಾಗಿಯೂ, ಸೂಪರ್​ಪವರ್ ಸ್ಥಾನಕ್ಕಾಗಿ ಮುಂದೊಂದು ದಿನ ತಾನು ಅಮೆರಿಕಾ ಜತೆ ಸೆಣಸಬೇಕಾಗುತ್ತದೆಂದೂ, ಹಾಗೂ ಅದಕ್ಕಾಗಿ ತಕ್ಕ ತಯಾರಿಯನ್ನು ಭರದಿಂದ ಮಾಡಿಕೊಳ್ಳುತ್ತಿರುವ ಚೀನಾ ತನ್ನ ಹಾದಿಯಲ್ಲಿ ಮೊದಲು ಪಕ್ಕಕ್ಕೆ ಸರಿಸಬೇಕಾದ ಮುಳ್ಳು ಭಾರತ ಎಂದು ಭಾವಿಸಿದೆ. ಒಂದರ್ಥದಲ್ಲಿ, 1866-1914ರ ಅವಧಿಯಲ್ಲಿ ಫ್ರಾನ್ಸ್ ವಿರುದ್ಧ ಏಕೀಕೃತ ಜರ್ಮನಿ ಅನುಸರಿಸಿದ ನೀತಿಯಂತಿದೆ ಇದು. ಯೂರೋಪಿನಾಚೆ ಹಾರಬೇಕಾದರೆ ಮೊದಲು ಯೂರೋಪಿನ ಮುಖ್ಯ ಭೂಭಾಗದಲ್ಲಿ ಫ್ರಾನ್ಸನ್ನು ನಿರ್ವೀರ್ಯಗೊಳಿಸಬೇಕು ಎಂದು ಭಾವಿಸಿ ಅದರಂತೇ ತನ್ನ ನೀತಿಗಳನ್ನು ಜರ್ಮನಿ ರೂಪಿಸಿಕೊಂಡದ್ದಕ್ಕೆ ಭಾರತದ ಬಗ್ಗೆ ಚೀನಾ ತೋರುತ್ತಿರುವ ನಿಲುವನ್ನು ಹೋಲಿಸಬಹುದು. ಏಷ್ಯಾದಲ್ಲಿ ಮೊದಲು ಭಾರತವನ್ನು ನಿರ್ವೀರ್ಯಗೊಳಿಸಿ ನಂತರ ವಿಶ್ವರಂಗಕ್ಕೆ ಜಿಗಿದು ಅಮೆರಿಕಾಗೆ ಸೆಡ್ಡು ಹೊಡೆಯಬೇಕು ಎನ್ನುವುದು ಚೀನಾದ ದೂರಗಾಮಿ ಹಂಚಿಕೆ. ತನ್ನ ಈ ಯೋಜನೆಯ ಅನುಷ್ಠಾನದಲ್ಲಿ ಪಾಕಿಸ್ತಾನ ಸೂಕ್ತ ಹಾಗೂ ವಿಶ್ವಾಸಾರ್ಹ ಸಹಭಾಗಿ ಎಂದು ಚೀನಾ ಎಂದೋ ಅರಿತಿದೆ. ಭಾರತವನ್ನು ಬಲಹೀನಗೊಳಿಸಿ ದಕ್ಷಿಣ ಏಷ್ಯಾದಲ್ಲಿ ತನ್ನ ನಂಬಿಗಸ್ತ ಮಿತ್ರ ಪಾಕಿಸ್ತಾನವನ್ನು ಬಲಿಷ್ಠ ದೇಶವಾಗಿ ಬೆಳೆಸುವುದು ಚೀನಾದ ಹಿಡನ್ ಅಜೆಂಡಾ. ಟಿಬೆಟ್​ನಲ್ಲಿ ಗಡಿಗೆ ಹತ್ತಿರದಲ್ಲೇ ಚೀನೀ ಸೇನೆ ಸುವ್ಯವಸ್ಥಿತ ಸೇನಾ ಠಿಕಾಣೆಗಳು, ವಾಯುನೆಲೆಗಳು ಹಾಗೂ ಕ್ಷಿಪಣಿ ಉಡಾವಣಾ ಸೌಲಭ್ಯಗಳನ್ನು ಸ್ಥಾಪಿಸಿ ಅವೆಲ್ಲಕ್ಕೂ ರೈಲು, ರಸ್ತೆ ಸಂಪರ್ಕ ಕಲ್ಪಿಸಿಕೊಂಡಿದೆ. ಇನ್ನು ಮ್ಯಾನ್ಮಾರ್ ಮೂಲಕ ಬಂಗಾಳ ಕೊಲ್ಲಿಗೂ, ಪಾಕಿಸ್ತಾನದ ಮೂಲಕ ಅರಬ್ಬೀ ಸಮುದ್ರಕ್ಕೂ ಸಂಪರ್ಕ ಕಲ್ಪಿಸಿಕೊಂಡ ನಂತರ ಭಾರತವನ್ನು ಕಟ್ಟಿಹಾಕಿ ಈ ವಲಯದಲ್ಲಿ ತನಗೆ ಬೇಕಾದ್ದನ್ನು ಮಾಡಲು ಪಾಕಿಸ್ತಾನಕ್ಕೆ ಚೀನಾ ಅವಕಾಶ ಮಾಡಿಕೊಡುತ್ತದೆ. ಆಗ ಕಾಶ್ಮೀರವನ್ನು ತನ್ನ ವಶ ಮಾಡಿಕೊಳ್ಳಲು, ಪಂಜಾಬ್​ನಲ್ಲಿ ಖಲಿಸ್ತಾನ್ ಸ್ಥಾಪಿಸಲು ಪಾಕಿಸ್ತಾನಕ್ಕೆ ಸುಲಭವಾಗುತ್ತದೆ. ಯಾವುದೇ ಪ್ರತಿಕಾರ್ಯಾಚರಣೆ ಕೈಗೊಳ್ಳಲು ಭಾರತ ಮುಂದಾದರೆ ಚೀನಾ ನಾಲ್ಕೂ ದಿಕ್ಕುಗಳಿಂದ ಬೆದರಿಕೆ ಒಡ್ಡುತ್ತದೆ. ಜತೆಗೆ ಪೂವೋತ್ತರ ರಾಜ್ಯಗಳು ಸ್ವತಂತ್ರವಾಗುವಂತೆ, ಅವು ತನ್ನ ಪ್ರಭಾವವಲ ಯದೊಳಗೆ ಇರುವಂತೆ ತಂತ್ರ ಹೂಡುತ್ತದೆ. ಇದು ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ತಾನ ಜತೆಗೂಡಿ ಹೆಣೆದಿರುವ ಹೂಟ. ಇದನ್ನು ನಿಷ್ಪಲಗೊಳಿಸಲು ಭಾರತಕ್ಕಿರಬಹುದಾದ ಮಾಗೋಪಾಯಗಳ ಪರಿಚಯ ಮುಂದಿನ ವಾರ.

ಪ್ರಚಲಿತ ವಿದ್ಯಮಾನ : 03 ಮೇ 2017 : ಅರ್ಜುನಕ್ಕೆ ಅದಿತಿ ಹೆಸರು ಶಿಫಾರಸು

ನವದೆಹಲಿ: ಉದಯೋನ್ಮುಖ ಗಾಲ್ಪರ್, ಕರ್ನಾಟಕದ ಅದಿತಿ ಅಶೋಕ್ ಹೆಸರನ್ನು ಅರ್ಜುನ ಪ್ರಶಸ್ತಿಗೆ ಭಾರತೀಯ ಗಾಲ್ಫ್ ಯೂನಿಯನ್ ಶಿಫಾರಸು ಮಾಡಿದೆ. ಹೀರೋ ಇಂಡಿಯಾ ಓಪನ್ ಚಾಂಪಿಯನ್ಸ್​ನ ಮಹಿಳಾ ವಿಭಾಗದ ಚಾಂಪಿಯನ್ ಆಗಿರುವ ಅದಿತಿ ರಿಯೋ ಒಲಿಂಪಿಕ್ಸ್​ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದರು. ಹೀರೋ ಇಂಡಿಯಾ ಓಪನ್ ಚಾಂಪಿಯನ್ಸ್​ನ ಪುರುಷರ ವಿಭಾಗದ ಚಾಂಪಿಯನ್ ಎಸ್​ಎಸ್​ಪಿ ಚೌರಾಸಿಯಾ ಹೆಸರನ್ನೂ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಗಾಲ್ಫ್ ಕೋಚ್ ವಿಜಯ್ ಡಿವೇಚಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಹಾಗೂ ಮುಖೇಶ್ ಕುಮಾರ್ ಹೆಸರನ್ನು ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಗಾಲ್ಫ್ ಯೂನಿಯನ್ ಶಿಫಾರಸು ಮಾಡಿದೆ.
ಬೆಮ್ ಬೆಮ್, ಜೆಜೆ ಹೆಸರು ಶಿಫಾರಸು: ಹಿರಿಯ ಆಟಗಾರರಾದ ಓಯಿನಾಮ್ ಬೆಮ್ ಬೆಮ್ ದೇವಿ, ಜೆಜೆ ಲಾಲ್ಪೆಕ್ಲೂವಾ ಮತ್ತು ಗುರ್​ಪ್ರೀತ್ ಸಾಂಧು ಹೆಸರುಗಳನ್ನು ಅಖಿಲ ಭಾರತ ಫುಟ್​ಬಾಲ್ ಫೆಡರೇಷನ್ (ಎಐಎಫ್​ಎಫ್) ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. 36 ವರ್ಷದ ಬೆಮ್ ಬೆಮ್ ದೇವಿ ಕಳೆದ ವರ್ಷದ ದಕ್ಷಿಣ-ಏಷ್ಯಾ ಗೇಮ್ಸ್ ಬಳಿಕ ವೃತ್ತಿಜೀವನಕ್ಕೆ ವಿದಾಯ ಘೊಷಿಸಿದ್ದರು. 26 ವರ್ಷದ ಗೋಲ್ಕೀಪರ್ ಗುರ್​ಪ್ರೀತ್ ಸಂಧು ಯುರೋಪ್​ನಲ್ಲಿ ಆಡಿದ ಮೊದಲ ಭಾರತೀಯ ಎನಿಸಿದ್ದಾರೆ.
-ಪಿಟಿಐ

ಪ್ರಚಲಿತ ವಿದ್ಯಮಾನ : 03 ಮೇ 2017 : ಜೋಶ್ನಾಗೆ ಏಷ್ಯನ್ ಸ್ಕ್ವಾಷ್ ಗರಿ

ಚೆನ್ನೈ: ಕನ್ನಡತಿ ಜೋಶ್ನಾ ಚಿನ್ನಪ್ಪ ಏಷ್ಯನ್ ಸ್ಕ್ವಾಷ್ ಚಾಂಪಿಯನ್​ಷಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಕೂಟದ ಇತಿಹಾಸದಲ್ಲಿ ಚಾಂಪಿಯನ್ ಪಟ್ಟವೇರಿದ ಮೊದಲ ಭಾರತೀಯರೆಂಬ ದಾಖಲೆ ಬರೆದರು.
ಭಾನುವಾರ ನಡೆದ ‘ಆಲ್ ಇಂಡಿಯನ್ ಫೈನಲ್’ ಪಂದ್ಯದಲ್ಲಿ ಜೋಶ್ನಾ ತಮ್ಮ ಗೆಳತಿ ದೀಪಿಕಾ ಪಲ್ಲಿಕಲ್ ವಿರುದ್ಧ 13-15, 12-10, 11-13, 11-4, 11-4 ರಿಂದ ಜಯ ಸಾಧಿಸಿದರು. ಜೋಶ್ನಾ 78 ನಿಮಿಷಗಳ ಹೋರಾಟದಲ್ಲಿ ಯಶ ಸಾಧಿಸಿದರು. ಟೂರ್ನಿಯ ಪಂದ್ಯಗಳು ನಡೆದ ಇಂಡಿಯನ್ ಸ್ಕಾ್ವಷ್ ಅಕಾಡೆಮಿಯಲ್ಲೇ ಈ ಆಟಗಾರ್ತಿಯರು ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದು, ಚೊಚ್ಚಲ ಬಾರಿಗೆ ಭಾರತೀಯ ಆಟಗಾರ್ತಿಯರೇ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಫೈನಲ್ ಪ್ರವೇಶಿಸಿದ ಇತಿಹಾಸವನ್ನು ಇಲ್ಲೇ ನಿರ್ವಿುಸಿದ್ದು ವಿಶೇಷ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೌರವ್ ಘೋಷಾಲ್ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸೌರವ್ ಘೊಷಾಲ್ 11-5, 4-11, 8-11, 7-11 ರಿಂದ 81 ನಿಮಿಷಗಳ ಹೋರಾಟದಲ್ಲಿ ಹಾಂಕಾಂಗ್​ನ ಅಗ್ರ ಶ್ರೇಯಾಂಕದ ಆಟಗಾರ, ವಿಶ್ವ ನಂ.17 ಮ್ಯಾಕ್ಸ್ ಲೀಗೆ ಶರಣಾದರು.
-ಪಿಟಿಐ

ಪ್ರಚಲಿತ ವಿದ್ಯಮಾನ : 03 ಮೇ 2017 : ಮುಂದಿನ 2 ವರ್ಷದಲ್ಲಿ ಇನ್ಫೋಸಿಸ್​ಗೆ 10 ಸಾವಿರ ಅಮೆರಿಕನ್ನರ ನೇಮಕ

ವಾಷಿಂಗ್ಟನ್​/ನವದೆಹಲಿ: ಹೆಚ್​1 ಬಿ ವೀಸಾ ಎಫೆಕ್ಟ್​ನಿಂದಾಗಿ ಭಾರತೀಯ ಕಂಪನಿಗಳಿಗೆ ಹೊಡೆತ ಬಿದ್ದಿದೆ. ಭಾರತೀಯ ಉದ್ಯೋಗಿಗಳು ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಇನ್ಫೋಸಿಸ್ ಮುಂದಿನ 2 ವರ್ಷದಲ್ಲಿ 10 ಸಾವಿರ ಅಮೆರಿಕನ್ನರನ್ನು ನೇಮಕ ಮಾಡಿಕೊಳ್ಳಲಿದೆ. ಮೊದಲನೇ ಹಂತವಾಗಿ ಇಂಡಿಯಾನದಿಂದ ಆಗಸ್ಟ್​ನಿಂದ ನೇಮಕ ಪ್ರಕ್ರಿಯೆ ಪ್ರಾರಂಭಿಸಲಿದೆ.
ಈ ಬಗ್ಗೆ ಇನ್ಫೋಸಿಸ್​​ ಟ್ವಿಟ್​ ಮಾಡಿದ್ದು, ​ 10 ಸಾವಿರ ಅಮೇರಿಕದ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಲಾಗುವುದು ಹಾಗೂ ಐಟಿ ಹಬ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ. (ಏಜೆನ್ಸೀಸ್)

ಪ್ರಚಲಿತ ವಿದ್ಯಮಾನ : 03 ಮೇ 2017 : ಭಾರತದ ಜಿಡಿಪಿ ಈ ವರ್ಷ 7.1 % ಎಂದ ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ: ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಈ ವರ್ಷ ಶೇ. 7.1ರಷ್ಟಾಗುವ ನಿರೀಕ್ಷೆಯಿದ್ದು, 2018ರಲ್ಲಿ ಶೇ. 7.5ರ ಗಡಿ ಸಮೀಪಿಸಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಇದೇ ವೇಳೆಗೆ, ಸರ್ಕಾರಿ ರಂಗದ ಬ್ಯಾಂಕ್​ಗಳಲ್ಲಿ ‘ಕೆಟ್ಟ ಸಾಲ’ಗಳ ಪ್ರಮಾಣ ಹೆಚ್ಚುವುದರಿಂದ ಆಗುವ ತೊಂದರೆಗಳು ಅಧಿಕಗೊಳ್ಳುವ ಅಪಾಯವೂ ಇದೆ ಎಂದು ವರದಿ ಎಚ್ಚರಿಸಿದೆ.
ಏಷ್ಯಾ ಮತ್ತು ಪೆಸಿಫಿಕ್​ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗವು ‘ದಿ ಇಕನಾಮಿಕ್ ಅಂಡ್ ಸೋಷಿಯಲ್ ಸರ್ವೆ ಆಫ್ ಏಷ್ಯಾ ಆಂಡ್ ಪೆಸಿಫಿಕ್ 2017’ ವಾರ್ಷಿಕ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ನೋಟು ಅಮಾನ್ಯೀಕರಣದ ಬಳಿಕ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಯಾಗಿರುವುದು ಮತ್ತು ಸಾರ್ವಜನಿಕ ಬಳಕೆ ಹಾಗೂ ಮೂಲಸೌಕರ್ಯ ವೆಚ್ಚ ಹೆಚ್ಚಿರುವ ಪರಿಣಾಮ ಭಾರತದಲ್ಲಿ ಆರ್ಥಿಕ ಪ್ರಗತಿ ಶೇ. 7.1ರಲ್ಲಿ ಸ್ಥಿರಗೊಳ್ಳಲಿದೆ ಎಂದು ವರದಿ ಹೇಳಿದೆ. ಹಣದುಬ್ಬರ 2017 ಮತ್ತು 2018ರಲ್ಲಿ ಶೇ. 5.3ರಿಂದ ಶೇ. 5.5ಕ್ಕೆ ತಲುಪಲಿದೆ. ಇದು ಅಧಿಕೃತ ಗುರಿ ಶೇ. 4.5ರಿಂದ ಶೇ. 5ಕ್ಕಿಂತ ಸ್ವಲ್ಪ ಹೆಚ್ಚು.
-ಏಜೆನ್ಸೀಸ್

ಪ್ರಚಲಿತ ವಿದ್ಯಮಾನ : 03 ಮೇ 2017 : ಕಾಶ್ಮೀರ ಸಮಸ್ಯೆ, ಭಾರತ-ಪಾಕ್ ನಡುವೆ ಮಧ್ಯಸ್ಥಿಕೆಗೆ ಚೀನಾ ಆಸಕ್ತಿ

ಬೀಜಿಂಗ್: ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಲ್ಲಿ ಚೀನಾಕ್ಕೆ ‘ಸ್ವ ಹಿತಾಸಕ್ತಿ’ ಇದೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ಪತ್ರಿಕೆ ‘ಗ್ಲೋಬಲ್ ಟೈಮ್್ಸ’ ತನ್ನ ಲೇಖನದಲ್ಲಿ ತಿಳಿಸಿದೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE
ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್​ಗೆ ಚೀನಾ ಸುಮಾರು 50 ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹೂಡುತ್ತಿದೆ. ಹಾಗಾಗಿ ಆ ಪ್ರದೇಶದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಚೀನಾಕ್ಕೆ ‘ಸ್ವ ಹಿತಾಸಕ್ತಿ’ ಇದೆ ಎಂದು ಪತ್ರಿಕೆ ಪ್ರತಿಪಾದಿಸಿದೆ. ಈ ಮೂಲಕ ಚೀನಾ ಕಾಶ್ಮೀರ ಸಮಸ್ಯೆಯಲ್ಲಿ ಹಸ್ತಕ್ಷೇಪ ನಡೆಸುವ ಬಗ್ಗೆ ಇದೇ ಮೊದಲ ಬಾರಿಗೆ ಸುಳಿವು ನೀಡಿದೆ.
ಚೀನಾ ತನ್ನ ನೆರೆ ರಾಷ್ಟ್ರಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಚೀನಾದ ಉದ್ದಿಮೆದಾರರು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದು, ಅವರ ಹಿತಾಸಕ್ತಿಗಳನ್ನು ಕಾಪಾಡಲು ಚೀನಾ ಸರ್ಕಾರ ಬದ್ಧವಾಗಿದೆ. ಹಾಗಾಗಿ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಡುವೆ ಚೀನಾ ಮಧ್ಯಸ್ಥಿಕೆ ವಹಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಭಾರೀ ಹೂಡಿಕೆ ಮಾಡಿದೆ. ಹಾಗಾಗಿ ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಸ್ವಂತ ಹಿತಾಸಕ್ತಿ ಈಗ ಚೀನಾಕ್ಕೆ ಇದೆ ಎಂದು ಪತ್ರಿಕೆ ಪ್ರತಿಪಾದನೆ ಮಾಡಿದೆ.
ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕ್ ಮಧ್ಯೆ ಮಧ್ಯಸ್ಥಿಕೆ ವಹಿಸುವುದು ಚೀನಾಗೆ ಸವಾಲಿನ ಕೆಲಸ. ಆದರೆ ಚೀನಾ ತನ್ನ ಹೂಡಿಕೆದಾರರ ಹಿತ ಕಾಯುವ ಸಲುವಾಗಿ ಕಠಿಣ ಸವಾಲನ್ನೂ ಸಹ ಎದುರಿಸಲು ಸಿದ್ಧವಿದೆ ಎಂದು ಪತ್ರಿಕೆ ತಿಳಿಸಿದೆ.
– ಪಿಟಿಐ

ಪ್ರಚಲಿತ ವಿದ್ಯಮಾನ : 03 ಮೇ 2017 : ವಿಶ್ವದ ಹಿರಿಯಜ್ಜ ಇನ್ನಿಲ್ಲ

ಜಕಾರ್ತಾ: 146 ವರ್ಷದ ವ್ಯಕ್ತಿ ಎಂದೇ ಹೇಳಲಾಗುತ್ತಿದ್ದ ಇಂಡೋನೇಷ್ಯಾದ ಸೊಡಿಮೆಡ್ಜೋ ಕೇಂದ್ರ ಜಾವಾ ಹಳ್ಳಿಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಈತ 1870 ಡಿಸೆಂಬರ್​ನಲ್ಲಿ ಜನಿಸಿದ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಇಂಡೋನೇಷ್ಯಾದಲ್ಲಿ 1900ರ ನಂತರ ಜನಿಸಿದವರ ಹೆಸರು ಜನ್ಮ ದಾಖಲೆಗಳಲ್ಲಿ ನಮೂದಾಗಿದೆ. ಸೊಡಿಮೆಡ್ಜೋ ಜನ್ಮ ದಿನಾಂಕದ ಬಗ್ಗೆ ನಿಖರ ಮಾಹಿತಿ ನೀಡುವ ಅಧಿಕೃತ ದಾಖಲೆಗಳು ದೇಶದಲ್ಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 12ರಂದು ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ನಂತರ ಮನೆಗೆ ಕರೆತರಲಾಗಿತ್ತು. ಕಳೆದ ಭಾನುವಾರ ಅವರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಎರಡು ವಿಶ್ವಯುದ್ಧ ನೋಡಿದ್ದರು!: ಎರಡು ವಿಶ್ವಯುದ್ಧಗಳನ್ನು ನೋಡಿ, ಜೀವಂತ ಇರುವ ಬೆರಳಣಿಕೆ ವ್ಯಕ್ತಿಗಳಲ್ಲಿ ಸೊಡಿಮೆಡ್ಜೋ ಕೂಡ ಒಬ್ಬರಾಗಿದ್ದರು. ಒಂದನೇ ವಿಶ್ವಯುದ್ಧ ಸಂದರ್ಭದಲ್ಲಿ ಇವರಿಗೆ 43 ವರ್ಷ, 2ನೇ ವಿಶ್ವಯುದ್ಧ ಮುಗಿಯುವ ವೇಳೆ ಇವರ ವಯಸ್ಸು 70 ಆಗಿತ್ತು.
ಪ್ರೀತಿ-ವಿಶ್ವಾಸ ಕಾರಣ: ಸೊಡಿಮೆಡ್ಜೋ ಈ ಹಿಂದೆ ಮಾಧ್ಯಮಗಳಿಗೆ ಹಲವು ಸಂದರ್ಶನಗಳನ್ನು ನೀಡಿದ್ದರು. ಅವರ ದೀರ್ಘಾಯುಷ್ಯದ ರಹಸ್ಯ ಕೇಳಿದಾಗ ‘ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳುವವರು, ಹೆಚ್ಚು ತಾಳ್ಮೆ ಹಾಗೂ ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ. ಇದು ನನ್ನನ್ನು ಇಷ್ಟು ವರ್ಷ ಬದುಕುವಂತೆ ಮಾಡಿದೆ ಎಂದಿದ್ದರು.
-ಏಜೆನ್ಸೀಸ್ 

ಪ್ರಚಲಿತ ವಿದ್ಯಮಾನ : 03 ಮೇ 2017 : 8ರಿಂದ ಇಂದ್ರಧನುಷ್ 4ನೇ ಹಂತದ ಅಭಿಯಾನ

ಬೆಂಗಳೂರು: ಮಕ್ಕಳು ಮತ್ತು ಗರ್ಭಿಣಿಯರನ್ನು ಹತ್ತು ಮಾರಕ ರೋಗಗಳಿಂದ ದೂರವಿಡುವ ಇಂದ್ರಧನುಷ್ ನಾಲ್ಕನೇ ಹಂತದ ಲಸಿಕಾ ಅಭಿಯಾನ ಮೇ 8ರಂದು ಆರಂಭಗೊಳ್ಳಲಿದೆ.
ಬೆಂಗಳೂರು ನಗರ(ಬಿಬಿಎಂಪಿ ಒಳಗೊಂಡು), ಬೆಳಗಾವಿ, ಕಲಬುರಗಿ, ವಿಜಯಪುರ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮೇ ತಿಂಗಳ ಮೊದಲ ಸುತ್ತಿನ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಲಸಿಕೆ ಬಿಟ್ಟು ಹೋಗಿರುವ 11,332 ಗರ್ಭಿಣಿಯರು ಸೇರಿ 82,880 ಮಂದಿಗೆ ಈ ಲಸಿಕೆ ಹಾಕಲಾಗುತ್ತದೆ. ಗರ್ಭಿಣಿಯರು, 0-2 ವರ್ಷದೊಳಗಿನ ಹಾಗೂ 5 ರಿಂದ 6 ವರ್ಷದ ಅಪೂರ್ಣ ಲಸಿಕೆ ಪಡೆದಿರುವ ಮತ್ತು ಯಾವುದೇ ಲಸಿಕೆ ಪಡೆಯದೆ ಇರುವ ಮಕ್ಕಳಿಗೆ ಅಭಿಯಾನದಡಿ ಲಸಿಕೆ ಹಾಕಲಾಗುತ್ತದೆ. ಪೋಲಿಯೋ, ಹೆಪಟೈಟಿಸ್-ಬಿ, ಬಾಲಕ್ಷಯ, ಡಿಫ್ತೀರಿಯಾ(ಗಂಟಲು ಮಾರಿ), ಪೆರ್ಟುಸಿಸ್(ನಾಯಿ ಕೆಮ್ಮು), ಧನುರ್ವಾಯು, ಹಿಬ್, ದಡಾರ, ರುಬೆಲ್ಲಾ, ಜಪಾನಿಸ್ ಎನ್​ಸಫಲೈಸಿಸ್ಟ್​ನಂಥ 10 ಮಾರಕ ಕಾಯಿಲೆಗಳಿಗೆ 9 ಲಸಿಕೆ ಹಾಕಲಾಗುತ್ತದೆ. ಮೇ 8ರಿಂದ 19ರ ವರೆಗೆ ಅಭಿಯಾನ ನಡೆಯಲಿದೆ ಎಂದರು.

ಪ್ರಚಲಿತ ವಿದ್ಯಮಾನ : 03 ಮೇ 2017 : 7ನೇ ವೇತನ ಆಯೋಗಕ್ಕೆ ಜೈರಾಜ್ ಅಧ್ಯಕ್ಷ?

ಬೆಂಗಳೂರು: ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್ ಆಯ್ಕೆ ಬಹುತೇಕ ಖಚಿತವಾಗಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಹಾಗೂ ಕೇಂದ್ರ ಸರ್ಕಾರಿ ನೌಕರರ ತತ್ಸಮಾನ ವೇತನ ನೀಡುವಂತೆ ನೌಕರರ ಸಂಘಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ 2017-18ನೇ ಸಾಲಿನ ಬಜೆಟ್​ನಲ್ಲಿ 7ನೇ ವೇತನ ಆಯೋಗ ರಚಿಸುವುದಾಗಿ ಭರವಸೆ ನೀಡಿತ್ತು.
ಈಗ ಸರ್ಕಾರದ ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ. ಜೈರಾಜ್ ಹಾಗೂ ಮದನ್​ಗೋಪಾಲ್ ಹೆಸರನ್ನು ಶಿಫಾರಸು ಮಾಡಿ ಮುಖ್ಯಮಂತ್ರಿಗಳಿಗೆ ಹಣಕಾಸು ಇಲಾಖೆ ಕಡತ ರವಾನಿಸಿದೆ. ಕೆ. ಜೈರಾಜ್ ಹೆಸರು ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ನೌಕರರ ಮುಷ್ಕರ ಇಲ್ಲ: ಬೆಂಗಳೂರು: ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವ ಕುರಿತು ಮುಖ್ಯಮಂತ್ರಿಗಳು ಪ್ರಸ್ತಾವನೆಗೆ ಅನುಮೋದನೆ ಸಲ್ಲಿಸಿದ್ದರೂ ಕೆಲವರು ಪ್ರಚಾರಕ್ಕಾಗಿ ಮುಷ್ಕರಕ್ಕೆ ಕರೆ ನೀಡಿರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ತಿಳಿಸಿದ್ದಾರೆ.
ನಿವೃತ್ತ ನೌಕರರ ಮುಷ್ಕರಕ್ಕೆ ಬೆಂಬಲವಿಲ್ಲ: 7ನೇ ವೇತನ ಆಯೋಗಕ್ಕೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಮೇ 4ರಂದು ನಿವೃತ್ತ ನೌಕರರು ನಡೆಸುವ ನಿರಶನಕ್ಕೆ ಬೆಂಬಲವಿಲ್ಲ ಎಂದು ಸಚಿವಾಲಯ ನೌಕರರ ಸಂಘದ ಉಪಾಧ್ಯಕ್ಷ ರಮೇಶ್ ಸಂಗಂ, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಯು.ಡಿ. ನರಸಿಂಹಯ್ಯ ತಿಳಿಸಿದ್ದಾರೆ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...