Thursday, April 27, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ರೂಪಾಯಿ ಆಯ್ತು ಬಡಪಾಯಿ

ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ನಿರಂತರವಾಗಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಕುಸಿತ ಕಂಡಿದ್ದು, ಆರು ವರ್ಷಗಳಲ್ಲಿ ಕನಿಷ್ಠ ಹಂತಕ್ಕೆ ತಲುಪಿದೆ. ಗುರುವಾರದ ವಹಿವಾಟಿನಲ್ಲಿ 30 ಪೈಸೆ ಇಳಿಕೆ ಕಂಡ ರೂಪಾಯಿ, 68.86ಕ್ಕೆ ಕುಸಿದಿತ್ತು. 2013ರ ಆಗಸ್ಟ್ 28ರಂದು ರೂಪಾಯಿ ಮೌಲ್ಯ 68.84ಕ್ಕೆ ಕುಸಿದಿತ್ತು. ಮುಂದಿನ ದಿನಗಳಲ್ಲಿ ಇದು 70 ರೂ.ಗಳಿಗೂ ಇಳಿಕೆ ಕಾಣುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.
2016ರ ಮಾರ್ಚ್ನಿಂದ 66 ಹಾಗೂ 68.2 ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ರೂಪಾಯಿ ಮೌಲ್ಯ, ಅಮೆರಿಕ ಚುನಾವಣೆಯ ನಂತರ ಗಣನೀಯ ಕುಸಿತ ಕಾಣುತ್ತಿದೆ. ನವೆಂಬರ್ 8ರಂದು 66.6 ಇದ್ದ ರೂಪಾಯಿ 15 ದಿನಗಳ ಅವಧಿಯಲ್ಲಿ ಶೇ.3.3ರಷ್ಟು ಕುಸಿತ ಕಂಡಿದೆ. ವಿದೇಶಿ ಹೂಡಿಕೆದಾರರು ಡಾಲರ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ಬಂಡವಾಳ ವಾಪಸು ಪಡೆದುಕೊಳ್ಳುತ್ತಿದ್ದಾರೆ. ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶಿಸಲು ಮುಂದಾಗಿದೆ.
ಇತರ ಕರೆನ್ಸಿಗೂ ಪೆಟ್ಟು: ಟ್ರಂಪ್ ಆಯ್ಕೆಯಿಂದ ಭಾರತೀಯ ಕರೆನ್ಸಿ ಮಾತ್ರವಲ್ಲ, ಮೆಕ್ಸಿಕನ್ ಪೆಕ್ಸೋ(ಶೇ.11), ಟರ್ಕಿಯ ಲೀರಾ(ಶೇ.7), ಕೊಲಂಬಿಯಾದ ಪೆಸ್ಕೋ(ಶೇ.6.9), ಬ್ರೆಜಿಲ್ನ ರಿಯಲ್(ಶೇ.6.5)ನಲ್ಲೂ ಗಣನೀಯ ಕುಸಿತ ಕಂಡುಬಂದಿದೆ. -ಏಜೆನ್ಸೀಸ್
ಕುಸಿತಕ್ಕೆ ಕಾರಣಗಳೇನು?
ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆ ಡಾಲರ್ ಮೌಲ್ಯ 14 ವರ್ಷಗಳ ಗರಿಷ್ಠಕ್ಕೆ ತಲುಪಿದೆ. ಟ್ರಂಪ್ ಅವರು ಮೂಲ ಸೌಕರ್ಯಗಳ ಮೇಲೆ ಹೂಡಿಕೆ ಹೆಚ್ಚು ಮಾಡಿ ತೆರಿಗೆಗಳನ್ನು ಕಡಿತಗೊಳಿಸಿದಲ್ಲಿ ಹಣದುಬ್ಬರ ಹೆಚ್ಚಾಗಲಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಮುಂದಿನ ತಿಂಗಳಿಂದ ಬಡ್ಡಿಯ ದರ ಹೆಚ್ಚಿಸುವ ಸೂಚನೆ ನೀಡಿದೆ. ಜತೆಗೆ ಹೂಡಿಕೆದಾರರು ಅಮೆರಿಕದ ಷೇರುಪೇಟೆಯಲ್ಲಿ ಅಪಾರ ಪ್ರಮಾಣದ ಹೂಡಿಕೆ ಮಾಡುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ನವೆಂಬರ್ 8ರಿಂದ ವಿದೇಶಿ ಹೂಡಿಕೆದಾರರು ಭಾರತದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ರೂಪಾಯಿ ಮೌಲ್ಯದ ಮೇಲೆ ಒತ್ತಡ ಉಂಟಾಗಿದೆ. ಭಾರತದಲ್ಲಿನ ನೋಟು ನಿಷೇಧ ನೀತಿ ನಂತರ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಭಾರತ ನಿಗದಿತ ಜಿಡಿಪಿ ದಾಖಲಿಸುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ದೊಡ್ಡ ಹೂಡಿಕೆದಾರರು ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ.
70ಕ್ಕೆ ಇಳಿಕೆ
ತಜ್ಞರ ಪ್ರಕಾರ, ಮುಂಬರುವ ದಿನಗಳಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಟ್ರಂಪ್ ತೆರಿಗೆ ಕಡಿತ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದರಿಂದ ಅಮೆರಿಕದ ಷೇರುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಮುಂದಿನ ಒಂದೆರಡು ತಿಂಗಳಲ್ಲಿ ರೂಪಾಯಿ ಮೌಲ್ಯ 69.30ಕ್ಕೆ ಇಳಿಯಲಿದೆ. ಮುಂಬರುವ 7-8 ತಿಂಗಳಲ್ಲಿ ಅದು 70.51 ಇಲ್ಲವೇ 71ಕ್ಕೆ ಇಳಿಯುವ ಸಾಧ್ಯತೆಗಳಿವೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...