ಪಾಂಡವಪುರ: ಧಾರ್ಮಿಕ ಮತ್ತು ಸಮಾಜ ಸುಧಾರಕ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ 36 ಅಡಿ ಎತ್ತರದ ಪ್ರತಿಮೆಯನ್ನು ಐತಿಹಾಸಿಕ ಪ್ರವಾಸಿ ತಾಣವಾದ ತಾಲ್ಲೂಕಿನ ಕೆರೆತೊಣ್ಣೂರಿನಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು.
ಬೆಂಗಳೂರಿನ ಯದುಗಿರಿ ಯತಿರಾಜ ಮಠದಿಂದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮಠದ ಪೀಠಾಧಿಪತಿ ಯತಿರಾಜ ಜೀಯರ್ ಸ್ವಾಮೀಜಿ, ಸಂಸದ ಸಿ.ಎಸ್.ಪುಟ್ಟರಾಜು ಪುಷ್ಪಾರ್ಚನೆ ಮಾಡುವುದರ ಮೂಲಕ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಯತಿರಾಜ ಜೀಯರ್ ಸ್ವಾಮೀಜಿ, ‘ರಾಮಾನುಜಾಚಾರ್ಯರು 950 ವರ್ಷಗಳ ಹಿಂದೆ ತಮಿಳುನಾಡಿನಿಂದ ಅಂದಿನ ತೊಂಡನೂರು ಗ್ರಾಮಕ್ಕೆ (ಈಗ ತೊಣ್ಣೂರು) ಬಂದು 13 ವರ್ಷಗಳ ಕಾಲ ನೆಲೆಸಿದ್ದರು. ಸಾಮಾಜಿಕ, ಧಾರ್ಮಿಕ ಸುಧಾರಣೆಗಳನ್ನು ಮಾಡಿದರು’ ಎಂದು ಹೇಳಿದರು.
ಜಾತಿ ಪದ್ಧತಿ ಮತ್ತು ಅಸ್ಪ್ಯಶ್ಯತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಶ್ರಮಿಸಿದ್ದರು. ಕೆರೆ ಹಾಗೂ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿ ಜೀರ್ಣೋದ್ಧಾರಗೊಳಿಸಿದ್ದರು. ಅವರ ನೆನಪಿಗಾಗಿ ರಾಮಾನುಜಾಚಾರ್ಯರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ ಎಂದರು.
ಕೆರೆತೊಣ್ಣೂರು ರಾಮಾನುಜಾಚಾರ್ಯರ ಕರ್ಮಭೂಮಿ, ಪುಣ್ಯಭೂಮಿ, ತಪೋಭೂಮಿಯಾಗಿತ್ತು. ಸರ್ಕಾರ ಈ ಸ್ಥಳವನ್ನು ಅಭಿವೃದ್ಧಿಗೊಳಿಸಬೇಕು. ಪ್ರತಿಮೆಯ ಸ್ಥಳದಲ್ಲಿ ಉದ್ಯಾನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ‘ರಾಮಾನುಜಾಚಾರ್ಯರು ಬಂದು ನೆಲೆಸಿದ ಮೇಲೆ ಕೆರೆತೊಣ್ಣೂರು ಐತಿಹಾಸಿಕ ಸ್ಥಳವಾಗಿ ಪರಿವರ್ತನೆಯಾಯಿತು. ಅದನ್ನು ಅಭಿವೃದ್ಧಿಗೊಳಿಸಲಾಗುವುದು’ ಎಂದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ‘ಪ್ರತಿಮೆ ಪ್ರತಿಷ್ಠಾಪನೆಯಿಂದಾಗಿ ಇದು ಪ್ರವಾಸಿ ತಾಣವಾಗಲಿದೆ. ಗ್ರಾಮವನ್ನು ಆದರ್ಶ ಗ್ರಾಮದಡಿ ಆಯ್ಕೆ ಮಾಡಿಕೊಂಡಿದ್ದು, ಅಭಿವೃದ್ಧಿ ಮಾಡಲಾಗುವುದು’ ಎಂದು ತಿಳಿಸಿದರು.
ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಜಿ.ಪಂ. ಸಿಇಒ ಶರತ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ತ್ಯಾಗರಾಜು, ಶಾಂತಲಾ ರಾಮಕೃಷ್ಣ ಇದ್ದರು.
No comments:
Post a Comment