ನವದೆಹಲಿ: ಕಪ್ಪು ಹಣವನ್ನು ಪತ್ತೆ ಹಚ್ಚಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ ಇದುವರೆಗೆ ಭಾರತೀಯರು ವಿದೇಶಗಳಲ್ಲಿ ಕೂಡಿಟ್ಟಿದ್ದ 16 ಸಾವಿರ ಕೋಟಿ ರೂ. ಸೇರಿದಂತೆ ಒಟ್ಟು 70 ಸಾವಿರ ಕೋಟಿ ರೂ. ಕಪ್ಪು ಹಣವನ್ನು ಪತ್ತೆ ಹಚ್ಚಿದೆ ಎಂದು ಎಸ್ಐಟಿಯ ಉಪಾಧ್ಯಕ್ಷ ಜಸ್ಟೀಸ್ (ನಿವೃತ್ತ) ಅರ್ಜಿತ್ ಪಸಾಯತ್ ತಿಳಿಸಿದ್ದಾರೆ.
ಕಳೆದ 2 ವರ್ಷಗಳಿಂದ ಎಸ್ಐಟಿ ಕಪ್ಪುಹಣವನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತವಾಗಿದೆ. ಎಸ್ಐಟಿ ಏಪ್ರಿಲ್ ಮೊದಲ ವಾರದಲ್ಲಿ 6ನೇ ಮಧ್ಯಂತರ ವರದಿ ಸಲ್ಲಿಕೆ ಮಾಡಲಿದೆ. ಈ ಮೊದಲು ಸಲ್ಲಿಸಿರುವ 5 ಮಧ್ಯಂತರ ವರದಿಗಳಲ್ಲಿ ಕಪ್ಪು ಹಣ ಸಂಗ್ರಹಣೆ ತಡೆಯಲು ಮತ್ತು ಕಪ್ಪು ಹಣ ಪತ್ತೆ ಹಚ್ಚುವ ಸಂಬಂಧ ಹಲವಾರು ಶಿಫಾರಸುಗಳನ್ನು ಮಾಡಿದೆ. ಎಸ್ಐಟಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಅವರನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಅರ್ಜಿತ್ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ 15 ಲಕ್ಷಕ್ಕಿಂತಲೂ ಹೆಚ್ಚಿನ ನಗದನ್ನು ಹೊಂದಿದ್ದರೆ, ಆ ಮೊತ್ತವನ್ನು ಘೊಷಣೆ ಮಾಡದಿರುವ ಮೊತ್ತ ಎಂದು ಪರಿಗಣಿಸಲು ಎಸ್ಐಟಿ ಶಿಫಾರಸು ಮಾಡಿದೆ. ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. 3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡಬಾರದು ಎಂಬ ಶಿಫಾರಸು ಈಗಾಗಲೇ ಅನುಷ್ಠಾನಕ್ಕೆ ಬಂದಿದೆ ಎಂದು ಅರ್ಜಿತ್ ಮಾಹಿತಿ ನೀಡಿದ್ದಾರೆ.
No comments:
Post a Comment