ನವದೆಹಲಿ: ಅಧಿಕಾರಕ್ಕೇರಿದಾಗಿನಿಂದ ಹಲವು ಜನಪ್ರಿಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೆಚ್ಚುಗೆ ಗಳಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 15 ಸಾರ್ವಜನಿಕ ರಜೆಗಳನ್ನು ರದ್ದುಗೊಳಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಈ ಕ್ರಮಕ್ಕೆ ಸಹಜವಾಗಿಯೇ ಪರ-ವಿರೋಧದ ಟೀಕೆಗಳು ವ್ಯಕ್ತವಾಗಿವೆ.
ಪ್ರಮುಖವಾಗಿ ಮಿಲಾದ್-ಉನ್-ನಬಿ, ಛತ್ ಮತ್ತು ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಗೂ ಕತ್ತರಿ ಹಾಕಲಾಗಿದೆ. ಬಿಜೆಪಿ ಸರ್ಕಾರ ಸ್ಥಾಪಿಸಿರುವ ಹಲವು ರಾಜ್ಯಗಳಲ್ಲಿ ಮಿಲಾದ್ ಉನ್ ನಬಿ (ಪ್ರೊಫೆಟ್ ಮೊಹಮ್ಮದ್ ಜನ್ಮದಿನ) ಅಂಗವಾಗಿ ಸರ್ಕಾರಿ ರಜೆ ನೀಡಲಾಗುತ್ತಿದೆ. ಮಿಲಾದ್ ಉನ್ ನಬಿ ಹಾಗೂ ಅಲ್ವಿದಾ (ಈದ್ಗೂ ಮುನ್ನ ರಮ್ಜಾನ್ ಕೊನೆಯ ದಿನ) ಅಂಗವಾಗಿ ನೀಡಲಾಗುತ್ತಿರುವ ರಜೆಯನ್ನೂ ಸರ್ಕಾರ ರದ್ದು ಮಾಡಿರುವುದು ಮುಸ್ಲಿಂ ಮುಖಂಡರು ಹುಬ್ಬೇರಿಸುವಂತೆ ಮಾಡಿದೆ.
‘ವಿಶೇಷ ದಿನಗಳಂದು ನೀಡುವ ರಜೆಗಳನ್ನು ರದ್ದುಮಾಡುವ ಉತ್ತರಪ್ರದೇಶದ ಕ್ರಮ ದುರದೃಷ್ಟಕರ. ಕೆಲವು ಹಬ್ಬಗಳನ್ನು ಮುಸ್ಲಿಂ ಸಮುದಾಯದವರೇ ಆಚರಿಸಿದರೂ ಹಿಂದೂಗಳು ಪಾಲ್ಗೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಿಲಾದ್ ಉನ್ ನಬಿ ಅಂಗವಾಗಿ ನೀಡುವ ರಜೆಯು ಕೇಂದ್ರದಲ್ಲಿ ಯು.ಪಿ. ಸಿಂಗ್ ನೇತೃತ್ವದ ಸರ್ಕಾರ ಇದ್ದಾಗಿನಿಂದಲೂ ನೀಡಲಾಗುತ್ತಿದೆ’ ಎಂದು ಮುಸ್ಲಿಂ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಬೇರೆ ಸಮುದಾಯಗಳ ಪ್ರಮುಖರ ಜಯಂತಿ ಅಂಗವಾಗಿ ನೀಡಲಾಗುತ್ತಿದ್ದ ರಜೆಯನ್ನು ಸರ್ಕಾರ ರದ್ದು ಮಾಡಿರುವುದರಿಂದ ಇದು ಉದ್ದೇಶಪೂರ್ವಕವಾಗಿ ಕೈಗೊಂಡ ನಿರ್ಧಾರ ಎನಿಸುವುದಿಲ್ಲ’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಕಲ್ಬೆ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಚಲಿತ ವಿದ್ಯಮಾನ : 26 ಏಪ್ರಿಲ್ 2017 : ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ: ಸಿಎಂ
ಗುಂಡ್ಲುಪೇಟೆ: ‘ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅಳವಡಿಸುವ ಸಂಬಂಧ ಸುತ್ತೋಲೆ ಹೊರಡಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಲ್ಲಿನ ಮಹದೇವ ಪ್ರಸಾದ್ ನಗರದಲ್ಲಿ ಬುಧವಾರ ನಡೆದ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಲ್ಲಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.
ನಿನ್ನೆಯಷ್ಟೆ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವ ಸಂಬಂಧ ಆದೇಶ ಹೊರಡಿಸಿತ್ತು. ಇದರಿಂದ ಬಸವಣ್ಣನ ತವರು ರಾಜ್ಯವಾದ ಕರ್ನಾಟಕದಲ್ಲೂ ಇಂಥ ಕ್ರಮಕೈಗೊಳ್ಳಬೇಕು ಎಂಬ ಕೂಗು ವಿವಿಧ ಸ್ತರಗಳಿಂದ ಕೇಳಿ ಬಂದಿತ್ತು.
12ನೇ ಶತಮಾನದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದ್ದ ಬಸವಣ್ಣ, ಅನುಭವ ಮಂಟದ ಮೂಲಕ ಎಲ್ಲ ಸಮುದಾಯವರಿಗೂ ಸಮಾನ ಅವಕಾಶ ನೀಡುವ ನಿಯಮ ಜಾರಿಗೆ ತಂದಿದ್ದರು. ತಮ್ಮ ಕ್ರಾಂತಿಕಾರಿ ನಡೆಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತಿ ಪದ್ಧತಿ, ಮೌಢ್ಯದ ವಿರುದ್ಧ ಹೋರಾಟ ನಡೆಸಿದ್ದರು.
No comments:
Post a Comment