Thursday, April 27, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಮಲ್ಟಿಪ್ಲೆಕ್ಸ್​ಗಳಲ್ಲಿನ್ನು ಗರಿಷ್ಠ 200 ರೂ. ಟಿಕೆಟ್ ದರ

ಬೆಂಗಳೂರು: ಏಕಪರದೆ ಚಿತ್ರಮಂದಿರ ಸೇರಿ ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್ ಗಳಲ್ಲಿನ ಸಿನಿಮಾ ಪ್ರದರ್ಶನಕ್ಕೆ ಸರ್ಕಾರ ಏಕರೂಪದ ದರ ನಿಗದಿಪಡಿಸಿದ್ದು, ಗುರುವಾರದಿಂದಲೇ (ಏ.27) ಜಾರಿಯಾಗಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ತಿಳಿಸಿದ್ದಾರೆ. ಈ ಮೂಲಕ ‘ಬಾಹುಬಲಿ 2’ ಹಾಗೂ ಇತರೆ ಚಿತ್ರಗಳಿಗೆ ಅಧಿಕ ಮೊತ್ತ ನೀಡಿ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿದವರು 200 ರೂ. ಹೊರತುಪಡಿಸಿ ಮೇಲ್ಪಟ್ಟ ಹಣವನ್ನು ತಾವೇ ಚಿತ್ರಮಂದಿರಗಳ ಕಡೆಯಿಂದ ಪಡೆಯಬೇಕೆಂದು ತಿಳಿಸಿದ್ದಾರೆ.
ಸರ್ಕಾರದ ಆದೇಶ ಜಾರಿ ಮುನ್ಸೂಚನೆ ಇದ್ದರೂ ನಗರದ ತಾವರೆಕೆರೆಯ ಬಾಲಾಜಿ, ಲಾಲ್​ಬಾಗ್ ರಸ್ತೆಯ ಊರ್ವಶಿ ಸೇರಿ ಹಲವು ಚಿತ್ರಮಂದಿರಗಳು ‘ಬಾಹುಬಲಿ 2’ ಪ್ರದರ್ಶನಕ್ಕೆ ಹೆಚ್ಚಿನ ದರದಲ್ಲಿ ಮುಂಗಡ ಟಿಕೆಟ್ ವಿತರಿಸಿವೆ. ಚಿತ್ರಮಂದಿರಗಳ ಈ ನಡೆ ವಾಣಿಜ್ಯ ಮಂಡಳಿ ಗಮನಕ್ಕೂ ಬಂದಿದ್ದು, ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ನೀತಿಗೆ ಚಿತ್ರಮಂದಿರಗಳ ಮಾಲೀಕರು ಸಹಕರಿಸಬೇಕು. ಆದೇಶವನ್ನು ನಿರ್ಲಕ್ಷಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ರಾಮಮೂರ್ತಿ, ಉಮೇಶ್ ಬಣಕಾರ್, ಎನ್. ಎಂ. ಸುರೇಶ್ ಮತ್ತಿತರರಿದ್ದರು.
ಮೂಲಗಳ ಪ್ರಕಾರ, ಸರ್ಕಾರದ ಏಕರೂಪ ಟಿಕೆಟ್ ದರದ ಆದೇಶ ಬುಧವಾರ ಹೊರಬೀಳಬೇಕಿತ್ತು. ಮಂಗಳವಾರವೇ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದರು. ಗುರುವಾರ ಬೆಳಗ್ಗೆ 11ಕ್ಕೆ ಈ ಆದೇಶ ಅಧಿಕೃತವಾಗಿ ಹೊರಬೀಳಲಿದೆ.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...