Thursday, April 27, 2017

ಪ್ರಚಲಿತ ವಿದ್ಯಮಾನ : 27 ಏಪ್ರಿಲ್ 2017 : ಗಂಗೂಲಿ ಕನಸಿನ ತಂಡದಲ್ಲಿ ‘ಧೋನಿ’ಗೆ ಸ್ಥಾನವಿಲ್ಲ

ಮುಂಬೈ: ಭಾರತೀಯ ಕ್ರಿಕೆಟ್​ನ ಸುವರ್ಣಯುಗದಲ್ಲಿ ತಂಡವನ್ನು ಮುನ್ನಡೆಸಿದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಮತ್ತೊಬ್ಬ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ಅವರ ಐಪಿಎಲ್ ಕನಸಿನ ತಂಡದಲ್ಲಿ ಸ್ಥಾನ ದೊರೆತಿಲ್ಲ. ಟಿ20 ಕ್ರಿಕೆಟ್ ಮಾದರಿಯಲ್ಲಿ ‘ಕೂಲ್ ಕ್ಯಾಪ್ಟನ್’ ಕಳಪೆ ನಿರ್ವಹಣೆಯೇ ಇದಕ್ಕೆ ಕಾರಣವಾಗಿದ್ದು, ಧೋನಿ ಬದಲಿಗೆ ಡೆಲ್ಲಿ ಡೇರ್​ಡೆವಿಲ್ಸ್​ನ ರಿಷಬ್ ಪಂತ್​ಗೆ ಗಂಗೂಲಿ ಮಣೆ ಹಾಕಿದ್ದಾರೆ.
ಟಿ20 ಆಟಗಾರನಾಗಿ ಧೋನಿ ಅರ್ಹತೆಯ ಬಗ್ಗೆ ಈಚೆಗಷ್ಟೆ ಸಂಶಯ ವ್ಯಕ್ತಪಡಿಸಿದ್ದ ಬಂಗಾಳದ ಹುಲಿ ಎಂದೇ ಪ್ರಸಿದ್ಧರಾದ ಗಂಗೂಲಿ, ‘ಧೋನಿ ಉತ್ತಮ ಟಿ20 ಆಟಗಾರ ಎನ್ನುವುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ, ಏಕದಿನ ಮಾದರಿಯಲ್ಲಿ ಅವರೊಬ್ಬ ಚಾಂಪಿಯನ್. ಟಿ20 ಮಾದರಿಯಲ್ಲಿ ಕಳೆದ 10 ವರ್ಷಗಳಲ್ಲಿ ಏಕೈಕ ಅರ್ಧಶತಕ ಗಳಿಸಿರುವ ಧೋನಿ ಸಾಧನೆ ಹೇಳಿಕೊಳ್ಳುವಂತಹದ್ದೇನಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಂಗೂಲಿ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದ್ದು, ಇದನ್ನೂ ಗಂಗೂಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ‘ಧೋನಿಗೆ ದೊಡ್ಡ ಅಭಿಮಾನಿ ಬಳಗ ಇದ್ದು, ಅವರನ್ನು ಟೀಕಿಸಿದರೆ ಅಭಿಮಾನಿಗಳು ಮುಗಿಬೀಳುತ್ತಾರೆ. 2006ರಲ್ಲಿ ನನ್ನನ್ನು ತಂಡದಿಂದ ಕೈಬಿಟ್ಟಾಗಲೂ ಇದೇ ಸ್ಥಿತಿ ಇತ್ತು’ ಎಂದಿದ್ದಾರೆ.
ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ ಧೋನಿ ಒಂದು ಅರ್ಧಶತಕ ಸೇರಿದಂತೆ 152 ರನ್​ಗಳಿಸಿದ್ದಾರೆ. ಸನ್ ರೈಸರ್ ಹೈದರಾಬಾದ್ ವಿರುದ್ಧ ಅತ್ಯುತ್ತಮ ಆಟವಾಡುವ ಮೂಲಕ ತಂಡಕ್ಕೆ ಜಯತಂದುಕೊಟ್ಟಿದ್ದು ಇದುವರೆಗಿನ ಅವರ ಉತ್ತಮ ನಿರ್ವಹಣೆಯಾಗಿದೆ.
ಇನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಸಹ ತಮ್ಮ ಐಪಿಎಲ್ ಕನಸಿನ ತಂಡದಲ್ಲಿ ಧೋನಿಗೆ ಸ್ಥಾನ ಕಲ್ಪಿಸಿರಲಿಲ್ಲ. ಈಚೆಗಷ್ಟೆ ತಮ್ಮ ತಂದೆಯನ್ನು ಕಳೆದುಕೊಂಡ 19 ವರ್ಷದ ರಿಷಬ್ ಪಂತ್ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಐಪಿಎಲ್​ನಲ್ಲಿ ಗಮನಾರ್ಹ ಪ್ರದರ್ಶನ ಮುಂದುವರಿಸಿದ್ದಾರೆ.
ಗಂಗೂಲಿ ಕನಸಿನ ಐಪಿಎಲ್ ತಂಡ: ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸ್ಟೀವನ್ ಸ್ಮಿತ್, ಎಬಿಡಿ ವಿಲಿಯರ್ಸ್, ನಿತಿಶ್ ರಾಣಾ, ಮನೀಷ್ ಪಾಂಡೆ, ರಿಷಬ್ ಪಂತ್, ಸುನಿಲ್ ನಾರಾಯಣ್, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಕ್ರಿಸ್ ಮೋರಿಸ್.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...