Monday, July 17, 2017

ಪ್ರಚಲಿತ ವಿದ್ಯಮಾನ : ಜುಲೈ 2017: ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ?: ರಾಹುಲ್‌ ಗಾಂಧಿಗೆ ನಿರ್ದೇಶಕ ಭಂಡಾರ್ಕರ್‌ ಪ್ರಶ್ನೆ

ಮಂಬೈ: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಧುರ್‌ ಭಂಡಾರ್ಕರ್‌ ಅವರು ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಉದ್ದೇಶಿಸಿ, ‘ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಭಂಡಾರ್ಕರ್‌ ನಿರ್ದೇಶನದ ‘ಇಂದು ಸರ್ಕಾರ್‌’ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಆದರೆ, ಚಿತ್ರದಲ್ಲಿ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಸಂದರ್ಭದ ಕುರಿತು ಋಣಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮವಾರ ನಾಗ್ಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ ಪಕ್ಷದ ಕಾರ್ಯಕರ್ತರು ಅಡ್ಡಿ ಪಡಿಸಿದ್ದು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ಇದರಿಂದ ಬೇಸರಗೊಂಡಿರುವ ನಿರ್ದೇಶಕ, ರಾಹುಲ್‌ ಗಾಂಧಿಯವರ ಕಚೇರಿ ಟ್ವಿಟರ್‌ ಖಾತೆಯನ್ನು ಟ್ಯಾಗ್‌ ಮಾಡಿ, ‘ಪುಣೆ ಘಟನೆ ಬಳಿಕ ಇದೀಗ ನಾಗ್ಪುರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನೂ ರದ್ದು ಪಡಿಸಲಾಗಿದೆ. ನೀವು ಈ ಗೂಂಡಾಗಿರಿಯನ್ನು ಒಪ್ಪುತ್ತೀರಾ? ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ?’ ಎಂದು ಟ್ವೀಟ್‌ ಮಾಡುವ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಹಿಂದೆ ಮುಂಬೈ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ನಿರೂಪಮ್‌ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಮುಖ್ಯಸ್ಥ ಪಹ್ಲಾಜ್‌ ನಿಹಲಾನಿ ಅವರಿಗೆ, ‘ಬಿಡುಗಡೆಗೂ ಮುನ್ನ ಚಿತ್ರವನ್ನು ಸೆನ್ಸಾರ್‌ಗೆ ಒಳಪಡಿಸಿಬೇಕು’ ಎಂದು ಕೋರಿ ಪತ್ರ ಬರೆದಿದ್ದರು.

ಬಳಿಕ ಸಿಬಿಎಫ್‌ಸಿ ಸಿನಿಮಾದಲ್ಲಿನ 12 ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಜತೆಗೆ ಚಿತ್ರದಲ್ಲಿ ‘ಆರ್‌ಎಸ್‌ಎಸ್‌’ ಮತ್ತು ‘ಅಕಾಲಿ ದಳ’ ಪದಗಳನ್ನು ಬಳಸದಂತೆಯೂ ಸೂಚಿಸಿತ್ತು.

ನೀಲ್‌ ನಿತಿನ್‌ ಮುಕೇಶ್‌, ಕೀರ್ತಿ ಕುಲ್ಹಾರಿ, ಅನುಪಮ್‌ ಖೇರ್‌, ಟೋಟಾ ರಾಯ್‌ ಅವರು ಕಾಣಿಸಿಕೊಂಡಿರುವ ಈ ಸಿನಿಮಾವನ್ನು ಜುಲೈ 28ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

ಇದೇ ರೀತಿಯ ಪ್ರತಿಭಟನೆಯಿಂದಾಗಿ ಶನಿವಾರ ಪುಣೆಯಲ್ಲಿ ಆಯೋಜನೆಗೊಂಡಿದ್ದ ಚಿತ್ರದ ಪ್ರಚಾರ ಕಾರ್ಯಕ್ರಮವೂ ರದ್ದಾಗಿತ್ತು.

No comments:

Post a Comment

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...