Tuesday, October 24, 2017

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel

ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್ಯೂಬ್ *_"ಕನ್ನಡ ಜ್ಞಾನ ಭಂಡಾರ"_* ಚ್ಯಾನೆಲ್ಗೆ ಸಬ್‌ಸ್ಕ್ರೈಬ್ ಆಗಿ.

ನಿಮ್ಮ ಬಂದುಮಿತ್ರರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

Click below link to subscribe.

https://www.youtube.com/channel/UCGP3KldB4_YHB2YrqxKjcJA?sub_confirmation=1

Monday, August 28, 2017

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: 400 ಶಾಲಾ ಮಕ್ಕಳ ಜೀವ ಉಳಿಸಿದ ಪೊಲೀಸ್ ಕಾನ್‌ಸ್ಟೇಬಲ್

ಭೋಪಾಲ್: ಶಾಲೆ ಆವರಣದಲ್ಲಿ ಪತ್ತೆಯಾದ ಬಾಂಬ್ ಅನ್ನು ಕಾನ್‌ಸ್ಟೇಬಲ್ ಒಂದು ಕಿ.ಮೀವರೆಗೆ ಹೆಗಲ ಮೇಲೆ ಹೊತ್ತೊಯ್ದ 400 ಮಕ್ಕಳ ಜೀವ ಉಳಿಸಿದ ಘಟನೆ ಮಧ್ಯಪ್ರದೇಶದ ಚಿತೋರಾ ಎಂಬ ಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಮಕ್ಕಳ ಜೀವ ಉಳಿಸಿದ ಕಾನ್‌ಸ್ಟೇಬಲ್ ಹೆಸರು ಅಭಿಷೇಕ್ ಪಟೇಲ್. 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಪಡೆ ನಿಷ್ಕ್ರಿಯಗೊಳಿಸಲು ಹಿಂದೇಟು ಹಾಕಿದೆ. ಆಗ ಪಟೇಲ್ ಈ ಸಾಹಸ ಮೆರೆದಿದ್ದಾರೆ.
ಚಿತೋರಾ ಎಂಬ ಹಳ್ಳಿಯ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿದೆ. ಆಗ ಶಾಲಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಪಟೇಲ್ ಸಿಬ್ಬಂದಿ ಜತೆ ಬಂದಿದ್ದರು. 
‘100 ಸಂಖ್ಯೆಗೆ ಕರೆ ಬಂದಾಗ ಶಾಲೆ ಬಳಿ ಬಂದೆವು. ನಮ್ಮ ಉದ್ದೇಶ ಬಾಂಬ್ ಅನ್ನು ಶಾಲೆಯಿಂದ ದೂರ ತೆಗೆದುಕೊಂಡು ಹೋಗುವುದಾಗಿತ್ತು. ಬಾಂಬ್ ಸಿಡಿದರೆ ಸುಮಾರು 500 ಮೀಟರ್‌ನಷ್ಟು ಪ್ರದೇಶ ಹಾನಿಗೊಳಗಾಗುತ್ತದೆ ಎಂದು ತರಬೇತಿ ಸಮಯದಲ್ಲಿ ತಿಳಿಸಿದ್ದರು. ಹಾಗಾಗಿ ನಾನು ಬಾಂಬ್‌ ಅನ್ನು ಒಂದು ಕಿ.ಮೀ ದೂರದವರೆಗೆ ತೆಗೆದುಕೊಂಡು ಹೋದೆ’ ಎಂದು ಪಟೇಲ್ ಘಟನೆ ಬಗ್ಗೆ ವಿವರಿಸಿದ್ದಾರೆ. 
ಸಮಯಪ್ರಜ್ಞೆ ಮೆರೆದು 400 ಶಾಲೆ ಮಕ್ಕಳ ಪ್ರಾಣ ಉಳಿಸಿದ ಪಟೇಲ್ ಅವರನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.
ಶಾಲೆಯ ಬಳಿ ಬಾಂಬ್ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ಸತೀಶ್ ಸಕ್ಸೇನಾ ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: ಸರಸ್ವತಿ ನದಿಯ ಮೂಲ ಹಿಮಾಲಯವೇ?

,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿ ಇತ್ತು ಎಂದು ಭಾವಿಸಲಾಗಿರುವ ಸರಸ್ವತಿ ನದಿಯ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲ. ಹೊಸ ಅಧ್ಯಯನವೊಂದು ಸತ್ಯ ಸಂಗತಿ ಮೇಲೆ ಬೆಳಕು ಚೆಲ್ಲಲಿದೆ. ಈ ಅಧ್ಯಯನಕ್ಕೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹೆಚ್ಚಿನ ಅನುದಾನ ನೀಡಿದೆ.

ಥಾರ್ ಮರುಭೂಮಿಯಲ್ಲಿನ ’ಗ್ರೇಟ್ ರನ್ ಆಫ್ ಕಚ್’ನ ಏಕತಾನವಾದ ವಿಸ್ತಾರವು, ಉಪ್ಪಿನ ಜೌಗಿನ ನಡುವೆ ಅಲ್ಲಲ್ಲಿ ಮಣ್ಣಿನ ಸಮತಳವನ್ನುಳ್ಳ ಸುಂದರ ಪ್ರದೇಶ. ಬೇಸಿಗೆಯಲ್ಲಿ ಹೀಗೆ ಒಣಗಿದ್ದ ಈ ಸ್ಥಳ,  ಮಳೆ ಸಮಯದಲ್ಲಿ ಮತ್ತು ಚಳಿಗಾಲದಲ್ಲಿ ಸಂಪೂರ್ಣ ಜೌಗುಮಯ. ಈ ಕಠಿಣವಾದ, ಅಷ್ಟೇನೂ ಆಳವಿಲ್ಲದ, ಸಮುದ್ರದ ಜಲಾನಯನ ಪ್ರದೇಶವು ಕಂಚಿನ ಯುಗದ ಹರಪ್ಪ ನಾಗರಿಕತೆ ಮತ್ತು ಎಂದೋ ಕಾಣೆಯಾದ ಸರಸ್ವತಿ ನದಿಯ ನಿಗೂಢತೆಯ ಬಗ್ಗೆ ಮಾಹಿತಿಯ ನಿಧಿಯನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿದೆ.
ಸರಸ್ವತಿ ನದಿಯ ಕುತೂಹಲಕಾರಿ ಪ್ರಕರಣವು ಅನೇಕ ತತ್ವಜ್ಞಾನಿಗಳು, ಕವಿಗಳು, ವಿದ್ವಾಂಸರು ಮತ್ತು ಭೂವಿಜ್ಞಾನಿಗಳ ಗಮನ ಸೆಳೆದಿದೆ.
ಈ ಪ್ರಬಲ ನದಿಯು ಹಿಮಾಲಯದಲ್ಲಿ ಹುಟ್ಟಿ, ಸಿಂಧೂನದಿಗೆ ಸಮಾನಾಂತರವಾಗಿ ಹರಿದು, ಸುಮಾರು 2,000 ವರ್ಷಗಳ ಹಿಂದೆ ಇಂದಿನ 'ರನ್ ಆಫ್ ಕಚ್'ನ ಸಮೀಪ ಅರಬ್ಬೀ ಸಮುದ್ರಪಾತ್ರಕ್ಕೆ ಸೇರುತ್ತಿತ್ತು ಎಂದು ಭಾವಿಸಲಾಗಿದೆ. ಆದರೆ, ಇಂದು ಈ ನದಿ ಅಸ್ತಿತ್ವದಲ್ಲಿಲ್ಲ ಅಥವಾ ಅದರ ಅಸ್ತಿತ್ವದ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಾಧಾರಗಳಿಲ್ಲ.
ಈಗ ಉಳಿದಿರುವುದು, ಋಗ್ವೇದದಲ್ಲಿ ಸ್ತುತಿಗೀತೆಗಳ ಮೂಲಕ ಈ ಮಹಾನ್ ನದಿಯನ್ನು ಹಾಡಿ ಹೊಗಳಿರುವುದಷ್ಟೇ. 'ರನ್ ಆಫ್ ಕಚ್' ಪ್ರದೇಶವು ತನ್ನ ತೀವ್ರ ಹವಾಮಾನದಿಂದಾಗಿ, 'ಅತ್ಯಂತ ಕಡಿಮೆ ಸಂಶೋಧನೆಗೆ ಒಳಗಾಗಿರುವ ಪ್ರದೇಶ'ಗಳಲ್ಲಿ ಒಂದಾಗಿದೆಯಾದರೂ, ಈಗ ನಡೆಯುತ್ತಿರುವ ಹೊಸ ಅಧ್ಯಯನವೊಂದು, ಒಮ್ಮೆ ವೈಭವೋಪೇತವಾಗಿ ಹರಿದು ಕಾಣೆಯಾದ ಪ್ರಬಲ ನದಿ 'ಸರಸ್ವತಿ'ಯ ಹಿಂದಿರುವ ಸತ್ಯದ ಬಗ್ಗೆ ಹಲವು ವಿಷಯಗಳ‌ನ್ನು ಬಹಿರಂಗ
ಪಡಿಸಲಿದೆ.
ಈ ಹೊಸ ಸಹಯೋಗದ ಅಧ್ಯಯನದಲ್ಲಿ, ಬರೋಡದ 'ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯ'ದ ಭೂವಿಜ್ಞಾನ ಇಲಾಖೆ, ಅಹಮದಾಬಾದ್‌ನ 'ಭೌತಿಕ ಸಂಶೋಧನಾ ಪ್ರಯೋಗಾಲಯ' ಮತ್ತು ಅಮೆರಿಕದ 'ವುಡ್ಸ್ ಹೋಲ್ ಸಮುದ್ರವಿಜ್ಞಾನ ಸಂಸ್ಥೆ'ಯ ಸಂಶೋಧಕರು, 'ಗ್ರೇಟ್ ರನ್ ಆಫ್ ಕಚ್'ನ ಮಣ್ಣಿನ ಸಂಚಯಗಳನ್ನು ಪರಿಶೀಲಿಸುವ ಮೂಲಕ, ಸರಸ್ವತಿ ನದಿಯ ಅಸ್ತಿತ್ವಕ್ಕೆ ಕೆಲವು ಆಸಕ್ತಿದಾಯಕ ಪುರಾವೆಗಳನ್ನು ನೀಡಲು ಪ್ರಯತ್ನಿಸಿದ್ದಾರೆ. 'ನೇಚರ್'ನ ವೈಜ್ಞಾನಿಕ ವರದಿಗಳ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನಕ್ಕೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಹೆಚ್ಚಿನ ಅನುದಾನ ನೀಡಿದೆ.
'ರನ್ ಆಫ್ ಕಚ್'ನಲ್ಲಿ ತುಂಬಿದ ದೊಡ್ಡ ಪ್ರಮಾಣದ ಮಣ್ಣಿನ ಸಂಚಯದ ಮೂಲವನ್ನು ಕಂಡುಕೊಳ್ಳಲು ನಮ್ಮ ಪ್ರಯತ್ನನಡೆದಿದೆ’ ಎನ್ನುತ್ತಾರೆ ಅಧ್ಯಯನದ ಸಹಲೇಖಕ ಪ್ರೊಫೆಸರ್ ಡಿ.ಎಂ. ಮೌರ್ಯ.
ಈ ಅಧ್ಯಯನಕ್ಕಾಗಿ ಸಂಶೋಧಕರು ಎರಡು ವಿಭಿನ್ನ ತಂತ್ರವನ್ನು ಬಳಸಿ, ಫಲಿತಾಂಶಗಳನ್ನು ಎರಡು ಪ್ರತ್ಯೇಕ ಅಧ್ಯಯನಗಳಲ್ಲಿ ವರದಿ ಮಾಡಿದರು. ಮೊದಲ ಅಧ್ಯಯನವು 'ರನ್ ಆಫ್ ಕಚ್' ಜಲಾನಯನದಲ್ಲಿ ಮಣ್ಣಿನ ಖನಿಜ ಜೋಡಣೆಯ ಮೇಲೆ ಕೇಂದ್ರೀಕರಿಸಿತ್ತು ಮತ್ತು ಎರಡನೆಯದು ಸ್ಟ್ರಾಂಷಿಯಂ-ನಿಯೋಡೈಮಿಯಮ್
(Sಡಿ-ಓಜ) ಸಮಸ್ಥಾನಿ ಸಾಕ್ಷ್ಯವನ್ನು ವಿಶ್ಲೇಷಿಸಿತು.
ಜೇಡಿಮಣ್ಣಿನ ಖನಿಜಗಳ ಅಧ್ಯಯನವು ಅವುಗಳ ಗುಣಲಕ್ಷಣಗಳು, ಸಂಯೋಜನೆ, ವರ್ಗೀಕರಣ, ಸ್ಫಟಿಕ ರಚನೆ, ಪ್ರಕೃತಿಯಲ್ಲಿ ಸಂಭವಿಸುವಿಕೆ ಮತ್ತು ವಿತರಣೆ ಸೇರಿದಂತೆ ಮಣ್ಣಿನ ಖನಿಜಗಳ ಎಲ್ಲಾ ಅಂಶಗಳನ್ನು ಒಳಗೊಂಡಿದೆ.
'ರನ್ ಆಫ್ ಕಚ್' ಜಲಾನಯನದಲ್ಲಿ ಮಣ್ಣಿನ ಖನಿಜ ಸಂಯೋಜನೆಯ ಕುರಿತು ಅಧ್ಯಯನ ಮಾಡಿದ ಸಂಶೋಧಕರಿಗೆ, ಸ್ಥಳೀಯ ದಕ್ಷಿಣ ಕಚ್ ಭೂಪ್ರದೇಶದ ಬೆಟ್ಟಗಳಿಂದ ಕೊಡುಗೆಯಾಗಿ ಬಂದಿರುವ 'ಕಲೋಲಿನೈಟ್'ನ ಜೊತೆಗೆ 'ಇಲ್ಲೈಟ್', 'ಕ್ಲೋರೈಟ್'ನಂತಹ ಖನಿಜಗಳೂ ಕಂಡುಬಂದಿದ್ದು, ಹಿಮಾಲಯವೇ ಇವಕ್ಕೆ ಮೂಲ ಎಂಬುದನ್ನು ಖಾತ್ರಿ ಪಡಿಸಿದೆ. 'ಸ್ಮೆಕ್ತೈತ್ಸ್' ಎಂಬ ಖನಿಜವೂ ಕಂಡುಬಂದಿದ್ದು, ಸ್ಥಳೀಯ ಅಗ್ನಿಶಿಲೆಗಳು ಮತ್ತು/ಅಥವಾ 'ನರ'ನದಿಯ ಮೂಲಕ ಪೂರ್ವ ಪಾಕಿಸ್ತಾನದಿಂದ 'ರನ್ ಆಫ್ ಕಚ್'ಗೆ ಹರಿದಿರುವ ಪುರಾವೆ ಸಿಕ್ಕಿದೆ.
ಸಂಶೋಧಕರು ತಮ್ಮ ಎರಡನೆಯ ಅಧ್ಯಯನದಲ್ಲಿ, 'ಕಚ್'ನ ಮಧ್ಯಪ್ರಾಂತ್ಯದ 'ಧೋರೊ' ಗ್ರಾಮದ ಬಳಿ ದೊರೆತ ಕೆಸರಿನ ಮಾದರಿಗಳನ್ನು ಪಡೆದು, ಅವುಗಳಲ್ಲಿ Sಡಿ-ಓಜ ಐಸೋಟೋಪ್‌ಗಳ ಸಂಯೋಜನೆಯನ್ನು ವಿಶ್ಲೇಷಿಸಿದರು.
ಈ ಎರಡೂ ಸಮಸ್ಥಾನಿಗಳ ವಿಶ್ಲೇಷಣೆಯು, ಯಾವ ಬಗೆಯ ಬಂಡೆಗಳು ಯಾವ ಸಮಯದಲ್ಲಿ ರೂಪುಗೊಂಡವು ಎಂಬುದನ್ನು ತಿಳಿಸುತ್ತದೆ. ಏಕೆಂದರೆ, ವಿಭಿನ್ನ ಸಮಯದ ಅವಧಿಗಳಲ್ಲಿ ರೂಪುಗೊಂಡ ವಿಭಿನ್ನ ರೀತಿಯ ಬಂಡೆಗಳು, ತಮ್ಮೊಳಗೆ ಈ ಅಂಶಗಳ ವಿಭಿನ್ನ ಘಟಕಗಳು ಮತ್ತು ಬೇರೆ ಬೇರೆ ಸಮಸ್ಥಾನಿ ಅನುಪಾತಗಳನ್ನು ಹೊಂದಿರುವ ಕಾರಣದಿಂದಾಗಿ, ಸಂಚಯಗಳು ಮತ್ತು ಅವುಗಳ ಘಟಕಗಳ ರಚನೆಯ ಸಮಯವನ್ನು ನಿರ್ಧರಿಸಲು ನಮಗೆ ಸಹಾಯ ಮಾಡುತ್ತವೆ. ಸಂಚಯಗಳ ಮೂಲವನ್ನು ಪತ್ತೆಹಚ್ಚಲು ಇದು ಅತ್ಯಂತ ವಿಶ್ವಾಸಾರ್ಹ ವಿಧಾನ.
ಇದಲ್ಲದೆ, 'ಗ್ರೇಟ್ ರನ್ ಆಫ್ ಕಚ್'ನ ಜಲಾನಯನ ಪ್ರದೇಶಕ್ಕೆ ಸ್ಥಳೀಯ ಕೊಡುಗೆಯಾಗಿ ಬಂದ ಸಂಚಯವನ್ನು ಪರಿಶೀಲಿಸುವ ಸಲುವಾಗಿ, ಸಂಶೋಧಕರು ಅಲ್ಲಿಗೆ ಸಮೀಪವಿರುವ 'ರುಪೆನ್' ಮತ್ತು 'ಲೂನಿ'ಯಂತಹ ಸ್ಥಳೀಯ ಸಕ್ರಿಯ ನದಿಗಳ ಮಾದರಿಗಳನ್ನು, 'ಧೋರೊ' ಸಂಚಯಗಳ ಐಸೋಟೋಪ್ ಅನುಪಾತಗಳಿಗೆ ಹೋಲಿಸಿದ್ದಾರೆ. ಇದರ ಪ್ರಕಾರವೂ, 'ಧೋರೊ' ಪ್ರದೇಶದ ಸಂಚಯಗಳು ಇಲ್ಲೈಟ್ ಮತ್ತು ಕ್ಲೋರೈಟ್‌ಗಳಂತಹ ಖನಿಜಗಳಲ್ಲಿ ಸಮೃದ್ಧವಾಗಿವೆ. ಈ ಸಂಚಯಗಳ ಮೂಲವು ಹಿಮಾಲಯ ಮತ್ತು /ಅಥವಾ ಕಾರಾಕೋರಮ್ ಪರ್ವತಶ್ರೇಣಿಗಳಾಗಿದ್ದು, ಹತ್ತುಸಾವಿರ ವರ್ಷಗಳ ಹಿಂದೆ 'ಹೊಲೊಸೀನ್'ನ ಸಂದರ್ಭದಲ್ಲಿ ಇಲ್ಲಿ ಬಂದು ಸೇರಿರುವ ಸಾಧ್ಯತೆಯಿದೆ.
‘ಎರಡೂ ಅಧ್ಯಯನಗಳು ಈ ನದಿಯ ಮೂಲ ಹಿಮಾಲಯ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯವನ್ನು ಒದಗಿಸುತ್ತವೆ’ ಎನ್ನುತ್ತಾರೆ ಪ್ರೊಫೆಸರ್ ಮೌರ್ಯ.
ಸರಸ್ವತಿ ನದಿಯಿಂದ ಬರುವ ಮಣ್ಣಿನ ಸಂಚಯಗಳ ಅಂತಿಮ ವಿಶ್ರಾಂತಿಯ ಸ್ಥಳವು 'ಗ್ರೇಟ್ ರನ್ ಆಫ್ ಕಚ್'ನ ಜಲಾನಯನವೇ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯವನ್ನು ಒದಗಿಸುವಲ್ಲಿ ಈ ಅಧ್ಯಯನಗಳು ಗಮನಾರ್ಹ ಕಾರ್ಯವೆಸಗಿವೆ. ಹಾಗಾದರೆ, ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆಯಿದ್ದ ಚರ್ಚೆಗೆ ಇದು ಮಂಗಳ ಹಾಡುತ್ತದೆಯೇ. ಇನ್ನೂ ಇಲ್ಲವೆನ್ನುತ್ತಾರೆ ಅವರು. ಅವರ ಪ್ರಕಾರ, ಅಂತಿಮ ಉತ್ತರವು ಭವಿಷ್ಯದ ಸಂಶೋಧನೆಯ ಮೇಲೆ ಅವಲಂಬಿತವಾಗಿರುತ್ತದೆ. ಹಿಮಾಲಯದಿಂದ 'ಗ್ರೇಟ್ ರನ್ ಆಫ್ ಕಚ್'ನವರೆಗೆ ಸರಸ್ವತಿ ನದಿಯ ಸಂಪೂರ್ಣ ಜಾಡನ್ನು ನಿಖರವಾಗಿ ಪುನರ್‌ನಿರ್ಮಿಸಲು ಗಮನಹರಿಸಬೇಕು. ವಿವರವಾದ ಭೂಗರ್ಭಶಾಸ್ತ್ರ, ಭೂಭೌತಿಕ ಮತ್ತು ಭೂರಾಸಾಯನಿಕ ಅಧ್ಯಯನಗಳ ಮೂಲಕ ಇದನ್ನು ಸಾಧಿಸಬಹುದು.
–ಗುಬ್ಬಿ ಲ್ಯಾಬ್ಸ್‌ (ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: ನೂತನ ಸಿಜೆಐ ಆಗಿ ದೀಪಕ್‌ ಮಿಶ್ರಾ ಪ್ರಮಾಣವಚನ ಸ್ವೀಕಾರ

ನವದೆಹಲಿ (ಪಿಟಿಐ): ದೀಪಕ್‌ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನ  ನೂತನ ಮುಖ್ಯ ನ್ಯಾಯ­ಮೂರ್ತಿಯಾಗಿ (ಸಿಜೆಐ) ಸೋಮವಾರ  ಪ್ರಮಾಣವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ನಡೆದ ಸರಳ ಸಮಾರಂಭ­ದಲ್ಲಿ 63 ವರ್ಷದ ದೀಪಕ್‌ ಮಿಶ್ರಾ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಪ್ರಮಾಣವಚನ ಬೋಧಿಸಿದರು.
2018ರ ಆಕ್ಟೋಬರ್ ತಿಂಗಳವರೆಗೆ ದೀಪಕ್‌ ಮಿಶ್ರಾ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಪ್ರಚಲಿತ ವಿದ್ಯಮಾನ : ಆಗಸ್ಟ್ 2017: ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ 10 ವರ್ಷ ಜೈಲು: ಸಿಬಿಐ ವಿಶೇಷ ನ್ಯಾಯಾಲಯ

ರೋಹ್ಟಕ್‌: ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ(50 ವರ್ಷ) ಸಿಬಿಐನ ವಿಶೇಷ ನ್ಯಾಯಾಲಯ ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಿಬಿಐ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಅವರು ಹೆಲಿಕಾಪ್ಟರ್‌ ಮೂಲಕ ರೋಹ್ಟಕ್‌ ತಲುಪಿ ಸುನಾರಿಯಾದಲ್ಲಿರುವ ಜೈಲಿನಲ್ಲೇ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ದೋಷಿಯಾಗಿರುವ ಗುರ್ಮೀತ್‌ಗೆ 10 ವರ್ಷ ಕಾರಾಗೃಹ ಶಿಕ್ಷೆ ಪ್ರಕಟಿಸಲಾಗಿದೆ. ಕಾರಾಗೃಹದಲ್ಲಿ ಇವರಿಗೆ ನೀಡಲಾಗಿರುವ ಸಂಖ್ಯೆ1997.
ಸಿಬಿಐ ಪರ ವಕೀಲರು ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದರು. ಸಮಾಜ ಸೇವಕರಾಗಿರುವ ಗುರ್ಮೀತ್‌ ಅವರ ಸೇವೆ ಪರಿಗಣಿಸಿ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸುವಂತೆ ಗುರ್ಮೀತ್‌ ಪರ ವಕೀಲ ಮನವಿ ಮಾಡಿದರು. 
ಶಿಕ್ಷೆ ಪ್ರಮಾಣ ಪ್ರಕಟಣೆಗೂ ಮುನ್ನ ಸಿರ್ಸಾದ ಫುಲ್‌ಕನ್‌ ಗ್ರಾಮದಲ್ಲಿ ಡೇರಾ ಸಚ್ಚಾ ಸೌದಾದ ಬೆಂಬಲಿಗರು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿರುವುದು ವರದಿಯಾಗಿದೆ.
ಗುರ್ಮೀತ್‌ ದೋಷಿ ಎಂದು ಆದೇಶ ಪ್ರಕಟವಾದ ಬಳಿಕ ಶುಕ್ರವಾರ ಸಿರ್ಸಾದಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನ ಸಾವಿಗೀಡಾದರು. ಈ ಸಂಬಂಧ 52 ಪ್ರಕರಣಗಳನ್ನು ದಾಖಲಿಸಲಾಗಿದ್ದು, 926 ಜನರನ್ನು ಬಂಧಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರೋಹ್ಟಕ್‌ನಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗಾಗಿ ಪೊಲೀಸರು ಹಾಗೂ ಸೇನೆ  ನಿಯೋಜನೆಯಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. 
* ಈ ವಲಯದಲ್ಲಿ ಆಕ್ಷೇಪಾರ್ಹ ವಸ್ತುಗಳನ್ನು ಮುಚ್ಚಿಡಲಾಗಿದ್ದು, ವಿಚಾರಣೆ ಮುಂದುವರಿದೆ. ದೊಣ್ಣೆಗಳು ಸೇರಿದಂತೆ ದಾಳಿಗೆ ಬಳಕೆಯಾಗುವ 100ಕ್ಕೂ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
–ನವ್‌ದೀಪ್‌ ಸಿಂಗ್‌ ವಿರ್ಕ್‌, ಐಜಿಪಿ, ರೋಹ್ಟಕ್‌ ವಲಯ

ಪ್ರಚಲಿತ ವಿದ್ಯಮಾನ : ಜುಲೈ 2017: ಆರ್ಥಿಕ ಸುಧಾರಣಾ ಕ್ರಮ: ಭಾರತವನ್ನು ಹೊಗಳಿದ ಜಿ20 ರಾಷ್ಟ್ರಗಳು

ಹ್ಯಾಂಬರ್ಗ್‌: ಸುಸ್ಥಿರ ಆರ್ಥಿಕ ಬೆಳವಣಿಗೆ, ನವೋದ್ಯಮ ನಿಧಿ (ಸ್ಟಾರ್ಟಪ್ ಫಂಡಿಂಗ್) ಒದಗಿಸುವಿಕೆ, ಉದ್ಯಮಕ್ಕೆ ಉತ್ತೇಜನ ಹಾಗೂ ಕಾರ್ಮಿಕ ಸುಧಾರಣೆಗೆ ಭಾರತ ಕೈಗೊಂಡಿರುವ ಕ್ರಮಗಳನ್ನು ಜಿ20 ರಾಷ್ಟ್ರಗಳು ಶ್ಲಾಘಿಸಿವೆ.

‘ಹಣಕಾಸು ಕ್ಷೇತ್ರದಲ್ಲಿ, ವಿದ್ಯುನ್ಮಾನ ಅಥವಾ ವಿನಿಮಯ ಮಾರುಕಟ್ಟೆಯ ಮೂಲಕ ಭಾರತವು ಸರ್ಕಾರಿ ಬಾಂಡ್‌ಗಳ ವಾಯಿದಾ ವಹಿವಾಟು ಜನಪ್ರಿಯಗೊಳಿಸುತ್ತಿದೆ’ ಎಂದು ಹ್ಯಾಂಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಸಿದ್ಧಪಡಿಸಲಾದ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ನವೋದ್ಯಮದ (ಸ್ಟಾರ್ಟಪ್) ಮೂಲಕ ಭಾರತವು ಬಾಹ್ಯ ವಾಣಿಜ್ಯ ಸಾಲ (ಇಸಿಬಿ) ಒದಗಿಸುತ್ತಿದೆ. ತನ್ಮೂಲಕ ಉದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಜಿ20 ಸದಸ್ಯ ರಾಷ್ಟ್ರಗಳು ಈ ವರ್ಷ ಕೈಗೊಂಡಿರುವ ಕ್ರಮಗಳಲ್ಲಿ ಇವುಗಳೂ ಸೇರಿವೆ. ಕಾರ್ಮಿಕರಿಗೆ ಭದ್ರತೆ, ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ಮತ್ತಿತರ ಕ್ರಮಗಳ ಮೂಲಕ ಭಾರತವು ಕಾರ್ಮಿಕ ಸುಧಾರಣೆ ಜಾರಿಗೆ ತರುತ್ತಿದೆ ಎಂದು ಎಂದು ಕಾರ್ಯಸೂಚಿಯಲ್ಲಿ ಹೇಳಲಾಗಿದೆ.

ಉದ್ಯಮಕ್ಕೆ ಉತ್ತೇಜನ ನೀಡುವ ರಾಷ್ಟ್ರಗಳ ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಕಳೆದ ವರ್ಷ ಭಾರತವು 130ನೇ ಸ್ಥಾನದಲ್ಲಿತ್ತು. ಇದನ್ನು 50ರ ಒಳಗಿರುವಂತೆ ಮಾಡುವುದೇ ನಮ್ಮ ಗುರಿ ಎಂದು ಎನ್‌ಡಿಎ ಸರ್ಕಾರ ಕಳೆದ ವರ್ಷ ಹೇಳಿತ್ತು.

ಪ್ರಚಲಿತ ವಿದ್ಯಮಾನ : ಜುಲೈ 2017: ವಿಶ್ವ ಕೊಂಕಣಿ ಕೇಂದ್ರದಿಂದ ಎರಡು ಪ್ರಶಸ್ತಿ

ಮಂಗಳೂರು: ಬಸ್ತಿ ವಾಮನ ಶೆಣೈಯವರು 80 ವರ್ಷಪೂರೈಸಿದ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರವು ಶೆಣೈಯವರ ಹೆಸರಿನಲ್ಲಿ ತಲಾ ₹ 1 ಲಕ್ಷ ನಗದು ಒಳಗೊಂಡ 2 ಪ್ರಶಸ್ತಿಗಳನ್ನು ನೀಡಲಿದೆ.
ಕೊಂಕಣಿ ಭಾಷಿಕರಾಗಿ, ಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಸಾಧನೆ ಮಾಡಿದ ವ್ಯಕ್ತಿ ಮಾತ್ರವಲ್ಲದೇ ಕೊಂಕಣಿ ಭಾಷಿಕರಿಂದ ಸ್ಥಾಪಿಸಲಾದ ಶಿಕ್ಷಣ ಸಂಸ್ಥೆ, ಕೊಂಕಣಿ ಭಾಷಿಕರ ಆಡಳಿತವಿರುವ ಸಂಸ್ಥೆಗಳು, ಸಮಾಜ ಸೇವೆ, ಆರೋಗ್ಯ, ವಿಜ್ಞಾನ, ಪತ್ರಿಕಾರಂಗ, ಕಲೆ, ವಾಣಿಜ್ಯೋದ್ಯಮ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಪ್ರಶಸ್ತಿಗೆ ಅರ್ಹರು.
ಅರ್ಜಿಗಳನ್ನು www.vishwakonkani.org ವೆಬ್‌ಸೈಟ್‌ನಿಂದ ಪಡೆಯಬಹುದು. ಸೆ.20ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ಅಧ್ಯಕ್ಷರು, ಬಿ.ವಿ.ಎಸ್ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಆಯ್ಕೆ ಸಮಿತಿ, ವಿಶ್ವ ಕೊಂಕಣಿ ಕೇಂದ್ರ, ಲೋಬೊ ಪ್ರಭು ನಗರ, ಕೊಂಕಣಿ ಗಾಂವ, ಶಕ್ತಿನಗರ, ಮಂಗಳೂರು-575 016’.

Friday, July 21, 2017

ಪ್ರಚಲಿತ ವಿದ್ಯಮಾನ : ಜುಲೈ 2017: ಜಿ.ಎಸ್‌.ಎಸ್‌ ಪತ್ನಿ ರುದ್ರಾಣಿ ನಿಧನ

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ಪತ್ನಿ ರುದ್ರಾಣಿ (83) ಅವರು ಹೃದಯಾಘಾತದಿಂದಾಗಿ ಬನಶಂಕರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಅವರಿಗೆ ಪುತ್ರಿ, ಇಬ್ಬರು ಪುತ್ರರು ಇದ್ದಾರೆ.  ಶಿವರುದ್ರಪ್ಪ ಅವರನ್ನು 1950ರಲ್ಲಿ ಮದುವೆಯಾಗಿದ್ದರು. ಶಿವರುದ್ರಪ್ಪ ಅವರು 2013ರಲ್ಲಿ ನಿಧನರಾಗಿದ್ದರು.
ತರೀಕೆರೆಯ ರುದ್ರಾಣಿ ಅವರು ಎಂಟನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಬನಶಂಕರಿಯ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜುಲೈ 2017: ಖಾಸಗಿತನ ಪರಿಪೂರ್ಣ ಹಕ್ಕಲ್ಲ

ನವದೆಹಲಿ: ಖಾಸಗಿತನದ ಹಕ್ಕು ಪರಿಪೂರ್ಣ ಅಲ್ಲ, ಈ ಹಕ್ಕಿನ ಮೇಲೆ ಸರ್ಕಾರ ನ್ಯಾಯಯುತ ನಿರ್ಬಂಧ ಹೇರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ಹೇಳಿದೆ.
ಖಾಸಗಿತನ ಮೂಲಭೂತ ಹಕ್ಕೇ ಎಂಬ ಐತಿಹಾಸಿಕ ವಿಚಾರಣೆಯನ್ನು ಪೀಠ ಆರಂಭಿಸಿತು.
ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿದರೆ ಈ ಹಕ್ಕಿನ ಎಲ್ಲೆಗಳು ಯಾವುವು ಮತ್ತು ಅದರ ಮೇಲೆ ಹೇರಬಹುದಾದ ನ್ಯಾಯಯುತ ನಿರ್ಬಂಧಗಳು ಯಾವುವು ಎಂಬುದನ್ನು ತಿಳಿಯಲು ಪೀಠವು ಬಯಸಿತು.
‘ಖಾಸಗಿತನದ ಹಕ್ಕಿನ ಮೇಲೆ ಹೇರಬಹುದಾದ ನ್ಯಾಯಯುತ ನಿರ್ಬಂಧಗಳ ಮಾನದಂಡ ಏನು ಎಂಬುದನ್ನು ನಿರ್ಧರಿಸುವ ಮೊದಲು ಖಾಸಗಿತನ ಏನು ಎಂಬುದನ್ನು ವ್ಯಾಖ್ಯಾನಿಸಬೇಕು. ಖಾಸಗಿತನದ ಎಲ್ಲೆಗಳು ಯಾವುವು... ಇವು ಸರ್ಕಾರ ನೀತಿ ರೂಪಿಸುವುದನ್ನು ತಡೆಯುವಷ್ಟು ವಿಸ್ತೃತವಾಗಿವೆಯೇ’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠ ಪ್ರಶ್ನಿಸಿತು.
ಮಾಹಿತಿಯ ರಕ್ಷಣೆಯನ್ನು ಶಾಸನಬದ್ಧವಾಗಿ ಖಾತರಿಪಡಿಸಬಹುದು. ಆದರೆ ಜನರು ಬ್ಯಾಂಕುಗಳಿಗೆ ಸಲ್ಲಿಸಿದ ಮಾಹಿತಿ ಖಾಸಗಿತನದ ವ್ಯಾಪ್ತಿಯಲ್ಲಿ ಬರಲಿಕ್ಕಿಲ್ಲ ಎಂದು ಪೀಠ ಹೇಳಿತು.
ಸಂವಿಧಾನವು ನೀಡಿರುವ ಸಮಾನತೆ, ವಾಕ್‌ ಸ್ವಾತಂತ್ರ್ಯ, ಜೀವಿಸುವ ಹಕ್ಕುಗಳನ್ನು ಕಾನೂನು ಮೂಲಕ ಜಾರಿಗೊಳಿಸುವುದಕ್ಕೆ ಸಾಧ್ಯ. ಆದರೆ ಇವುಗಳ ಮೇಲೆ ನ್ಯಾಯಬದ್ಧವಾದ ನಿರ್ಬಂಧ ಹೇರುವುದಕ್ಕೆ ಅವಕಾಶ ಇದೆ. ಹಾಗಾಗಿ ಈ ಯಾವ ಹಕ್ಕುಗಳೂ ಪರಿಪೂರ್ಣ ಅಲ್ಲ ಎಂದು ವಿವರಿಸಿತು.
ಆಧಾರ್‌ ನೋಂದಣಿಗಾಗಿ ದೇಹಕ್ಕೆ ಸಂಬಂಧಿಸಿದ ಮಾಹಿತಿಗಳನ್ನೂ ನೀಡಬೇಕಾಗುತ್ತದೆ. ಇದು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿಯ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಎಲ್ಲ ದೇಶಗಳಲ್ಲಿಯೂ ಸಂವಿಧಾನ ಅಥವಾ ಶಾಸನದ ಮೂಲಕ  ಖಾಸಗಿತನದ ಹಕ್ಕು ರಕ್ಷಿಸಲಾಗಿದೆ ಎಂದು ವಕೀಲರಾದ ಗೋಪಾಲ ಸುಬ್ರಮಣ್ಯಂ, ಸೋಲಿ ಸೊರಾಬ್ಜಿ, ಶ್ಯಾಮ್‌ ದಿವಾನ್‌, ಅರವಿಂದ ದಾತಾರ್‌ ವಾದಿಸಿದರು.
ಖಾಸಗಿತನದ ಹಕ್ಕನ್ನು ಅಪರಿಮಿತ ಎಂದು ಪರಿಗಣಿಸಿದರೆ ಅದು ಭಾರಿ ಅಪಾಯಕ್ಕೆ ಕಾರಣವಾದೀತು ಎಂದು ಪೀಠ ಅಭಿಪ್ರಾಯಪಟ್ಟಿತು. ವಿಚಾರಣೆ ಗುರುವಾರವೂ ಮುಂದುವರಿಯಲಿದೆ.

ಪ್ರಚಲಿತ ವಿದ್ಯಮಾನ : ಜುಲೈ 2017: ‘ನೀರಾವರಿ ಆಯೋಗದ ವರದಿಗೂ ನಿರ್ಲಕ್ಷ್ಯ’

ನವದೆಹಲಿ: ಸ್ವಾತಂತ್ರ್ಯಪೂರ್ವ ಅವಧಿಯಲ್ಲಿ ನೀರಾವರಿ ಆಯೋಗವು ಬರಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿ ಸಲ್ಲಿಸಲಾದ ವರದಿಯನ್ವಯ ರಾಜ್ಯದ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.
ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ರಾಜ್ಯಗಳು ಸಲ್ಲಿಸಿರುವ ಸಿವಿಲ್‌ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದೆದುರು ಬುಧವಾರ ರಾಜ್ಯದ ಪರ ವಕೀಲರಾದ ಮೋಹನ್‌ ಕಾತರಕಿ ಹಾಗೂ ಶ್ಯಾಂ ದಿವಾನ್‌ ವಾದ ಮಂಡಿಸಿ ಈ ವಿಷಯ ಪ್ರಸ್ತಾಪಿಸಿದರು.
1924ರಲ್ಲಿ ಮದ್ರಾಸ್‌ ಹಾಗೂ ಮೈಸೂರು ಸರ್ಕಾರಗಳ ನಡುವೆ ಕಾವೇರಿ ಒಪ್ಪಂದ ಮಾಡಿಕೊಂಡ ಸಂದರ್ಭ ನೀರಾವರಿ ಆಯೋಗ ರಚಿಸಿ ಬರಪೀಡಿತ ಪ್ರದೇಶಗಳ ವಿವರ ನೀಡುವಂತೆ ಕೋರಲಾಗಿತ್ತು. ಆದರೆ ಆಯೋಗ ಶಿಫಾರಸು ಮಾಡಿದಂತೆ ರಾಜ್ಯದ ಭೂಪ್ರದೇಶವನ್ನು ನೀರಾವರಿಗೆ ಒಳಪಡಿಸಲಾಗಿಲ್ಲ.
ಕಾವೇರಿ ಹಾಗೂ ಅದರ ಉಪ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಕಬಿನಿ, ಅರ್ಕಾವತಿ, ಸುವರ್ಣವತಿ ನದಿಗಳಿದ್ದರೂ ಒಣ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಿರಲಿಲ್ಲ ಎಂದು ಮೋಹನ್‌ ಕಾತರಕಿ ವಿವರಿಸಿದರು.
ಒಪ್ಪಂದ ಮಾಡಿಕೊಳ್ಳಲಾದ ಕಾಲದಲ್ಲಿದ್ದ ಸ್ಥಿತಿಗೂ, ಪ್ರಸ್ತುತ ಸ್ಥಿತಿಗತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಹಿರಿಯ ವಕೀಲ ಫಾಲಿ ನಾರಿಮನ್‌ ವಿವರಿಸಿದರು.
ಜೂನ್‌ನಿಂದ ಏಪ್ರಿಲ್‌ವರೆಗೆ ಸತತವಾಗಿ ತಮಿಳುನಾಡಿಗೆ ಒಟ್ಟು 192 ಟಿಎಂಸಿ ಅಡಿ ನೀರನ್ನು ಹರಿಸಬೇಕೆಂಬ ನ್ಯಾಯಮಂಡಳಿಯ ತೀರ್ಪು ಅವೈಜ್ಞಾನಿಕ ಎಂದು ಶ್ಯಾಂ ದಿವಾನ್‌ ಹೇಳಿದರು. ಸಿವಿಲ್‌ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕದ ವಾದ ಮಂಡನೆಯು ಅಂತಿಮ ಹಂತಕ್ಕೆ ಬಂದಿದ್ದು, ಗುರುವಾರವೂ ರಾಜ್ಯದ ವಾದ ಮುಂದುವರಿಯಲಿದೆ.

ಪ್ರಚಲಿತ ವಿದ್ಯಮಾನ : ಜುಲೈ 2017: ರಾಮನಾಥ ಕೋವಿಂದ್‌ ಭಾರತದ 14ನೇ ರಾಷ್ಟ್ರಪತಿ

ನವದೆಹಲಿ: ಭಾರತದ 14ನೇ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಆಯ್ಕೆಯಾಗಿದ್ದಾರೆ.
ಶೇಕಡ 65.65 ಮತಗಳೊಂದಿಗೆ ಕೋವಿಂದ್ ತಮ್ಮ ಪ್ರತಿಸ್ಪರ್ಧಿ ಮೀರಾ ಕುಮಾರ್‌ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಪಡೆದ ಮತ
ರಾಮನಾಥ ಕೋವಿಂದ್‌ 7,02,044

ಮೀರಾ ಕುಮಾರ್‌ 3,67,314

ಪ್ರಚಲಿತ ವಿದ್ಯಮಾನ : ಜುಲೈ 2017: ‘ಋತುಸ್ರಾವದ ಮೊದಲ ದಿನ ರಜೆ’ ನಿಯಮ ಜಾರಿಗೆ ತಂದ ಮಲಯಾಳಂ ಚಾನೆಲ್

ನವದೆಹಲಿ: ಕೇರಳ ಮೂಲದ ಮಲಯಾಳಂ ಭಾಷೆಯ ಮಾತೃಭೂಮಿ ದೃಶ್ಯ ಮಾಧ್ಯಮವು ಅಲ್ಲಿನ ಮಹಿಳಾ ಸಿಬ್ಬಂದಿಗೆ ವೇತನ ಸಹಿತ ಋತುಸ್ರಾವದ ಮೊದಲ ದಿನ ರಜೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ
ಮಾತೃಭೂಮಿ ಚಾನೆಲ್‌ನಲ್ಲಿ ಪ್ರಸ್ತುತ ಒಟ್ಟು 300 ಉದ್ಯೋಗಿಗಳಿದ್ದು, ಅದರಲ್ಲಿ 75 ಮಂದಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರಿಗೆ ವರ್ಷದಲ್ಲಿ ಒಟ್ಟು 12 ದಿನ ವೇತನ ಸಹಿತ ರಜೆ ನೀಡಲು ಚಾನೆಲ್ ನಿರ್ಧರಿಸಿದೆ.
‘ಪತ್ರಿಕೋದ್ಯಮ ತುಂಬಾ ಒತ್ತಡದ ಉದ್ಯೋಗ. ಋತುಸ್ರಾವದ ವೇಳೆ ನಮ್ಮ ಮಹಿಳೆಯರು ಅನುಭವಿಸುವ ಕಷ್ಟವನ್ನು ನಾವು ಅರ್ಥಮಾಡಿಕೊಳ್ಳಬೇಕು.   ಈ ಹಿಂದೆ ಮಹಿಳೆಯರಿಗೆ ಋತುಸ್ರಾವದ ರಜೆ ತೆಗೆದುಕೊಳ್ಳುವುದು ಕೇವಲ ಆಯ್ಕೆಯಾಗಿತ್ತು. ಆದರೆ ಈ ನಿಯಮವನ್ನು ಕೊನೆಗೊಳಿಸಲಾಗಿದೆ.
ಮಹಿಳೆಯರಿಗೆ ವರ್ಷದಲ್ಲಿ ನೀಡುವ ರಜೆಗಳನ್ನು ಹೊರತುಪಡಿಸಿ ಈ 12 ದಿನಗಳ ಯಥೇಚ್ಛ ರಜೆ ನೀಡಲಾಗುವುದು ಎಂದು ಮಾತೃಭೂಮಿ ಚಾನೆಲ್‌ನ ಜಂಟಿ ನಿರ್ವಹಣಾ ಮುಖ್ಯಸ್ಥ  ಶ್ರೇಯಂಸಾ ಕುಮಾರ್ ಹೇಳಿದ್ದಾರೆ.
ಕೆಲವು ವಾರಗಳ ಹಿಂದೆಯಷ್ಟೇ ಮುಂಬೈ ಮೂಲದ ಎರಡು ಡಿಜಿಟಲ್ ಕಂಪೆನಿಗಳು  ಋತುಸ್ರಾವದ ಮೊದಲ ದಿನ ರಜೆ ನಿಯಮವನ್ನು ಘೋಷಿಸಿತ್ತು. ಇದರ ಬೆನ್ನಲ್ಲೇ ಮಾತೃಭೂಮಿ ಸಂಸ್ಥೆ ಈ ನಿರ್ಣಯ ತೆಗೆದುಕೊಂಡಿದೆ.
ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಎನ್‌ಡಿಎ ಸರ್ಕಾರ 12% ಜಿಎಸ್‌ಟಿ ತೆರಿಗೆ ವಿಧಿಸಿದ್ದನ್ನು ಖಂಡಿಸಿ ಮಹಿಳೆಯರಿಂದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅದೇ ವೇಳೆ ಈ ಎರಡು ಕಂಪೆನಿಗಳು ಮಹಿಳೆಯರ ನೋವಿಗೆ ಸ್ಪಂದಿಸಿದ್ದು, ಈ ಸಂಬಂಧ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು.
ಬಿಹಾರ ಸರ್ಕಾರವು ಸಹ ಮಹಿಳೆಯರಿಗೆ ಋತುಸ್ರಾವದ ವೇಳೆ ಎರಡು ದಿನಗಳ ರಜೆ ನೀಡಬೇಕೆಂದು ಮನವಿ ಮಾಡಿತ್ತು.

ಪ್ರಚಲಿತ ವಿದ್ಯಮಾನ : ಜುಲೈ 2017: ‘ಮನ್‌ ಕಿ ಬಾತ್‌’ನಿಂದ ಆಕಾಶವಾಣಿಗೆ ₹10ಕೋಟಿ ಆದಾಯ ಹೆಚ್ಚಳ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘ಮನ್‌ ಕಿ ಬಾತ್‌’ ಕಾರ್ಯಕ್ರಮದ ಪರಿಣಾಮ ಕಳೆದ ಎರಡು ವರ್ಷಗಳಲ್ಲಿ ಆಕಾಶವಾಣಿಯು ₹10ಕೋಟಿ ಆದಾಯ ಗಳಿಸಿದೆ.
ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಖಾತೆ ಸಚಿವ ರಾಜ್ಯವರ್ಧನ್‌ ರಾಥೋರ್‌ ಅವರು, 2015–16ನೇ ಸಾಲಿನಲ್ಲಿ ₹4,78 ಕೋಟಿ ಹಾಗೂ 2016–17ನೇ ಸಾಲಿನಲ್ಲಿ ₹5.19ಕೋಟಿ ಆದಾಯ ಆಕಾಶವಾಣಿಗೆ ಹರಿದು ಬಂದಿದೆ ಎಂದು ತಿಳಿಸಿದರು.
ಇಂಗ್ಲಿಷ್‌ ಹಾಗೂ ಸಂಸ್ಕೃತ ಭಾಷೆಯಲ್ಲಿಯೂ ಕಾರ್ಯಕ್ರಮ ಪ್ರಸಾರಮಾಡಲಾಗುವುದು ಎಂದು ಸಹ ಅವರು ಹೇಳಿದ್ದಾರೆ. ಜತೆಗೆ ದೇಶದಾದ್ಯಂತ ಮತ್ತು ಜಗತ್ತಿನಾದ್ಯಂತ ಇರುವ ಕೇಳುಗರಿಗಾಗಿ, ಭಾಷಣದ ಮೂಲ ಆವೃತ್ತಿ ಮುಗಿದ ಬಳಿಕ ಅದನ್ನು ದೇಶದ 18 ಪ್ರಾದೇಶಿಕ ಮತ್ತು 33 ಉಪ ಭಾಷೆಗಳಲ್ಲಿಯೂ ಪ್ರಸಾರ ಮಾಡಲಾಗುತ್ತಿದೆ ಎಂದಿದ್ದಾರೆ.
ದೇಶದಾದ್ಯಂತ ಜನಪ್ರಿಯವಾಗಿರುವ ಈ ಕಾರ್ಯಕ್ರಮವನ್ನು ಮೋದಿ ಅವರು 2014ರ ಅಕ್ಟೋಬರ್‌ 3ರಂದು ಪ್ರಾರಂಭಿಸಿದ್ದರು. ಜತೆಗೆ ಪ್ರತಿ ತಿಂಗಳು ದೇಶದ ಜನರನ್ನು ಉದ್ದೇಶಿಸಿ ದೇಶದ ಪ್ರಮುಖ ಸಮಸ್ಯೆಗಳು ಮತ್ತು ಯೋಜನೆಗಳ ಕುರಿತು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ.

Monday, July 17, 2017

ಪ್ರಚಲಿತ ವಿದ್ಯಮಾನ : ಜುಲೈ 2017: ಗೆಜೆಟೆಡ್‌ ಪ್ರೊಬೇಷನರಿ : ಹುದ್ದೆಗಳ ಸಂಖ್ಯೆ 428ಕ್ಕೆ ಏರಿಕೆ

ಬೆಂಗಳೂರು: 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಗೆ ಒಟ್ಟು ಹುದ್ದೆಗಳ ಸಂಖ್ಯೆ 428ಕ್ಕೆ ಏರಿದೆ.
401 ಹುದ್ದೆಗಳಿಗೆ ನೇಮಕಾತಿಗೆ ಮೇ 12ರಂದು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿತ್ತು.
ಕೆಎಎಸ್‌ (ಕಿರಿಯ ಶ್ರೇಣಿ) ಸಹಾಯಕ ಆಯುಕ್ತರ 10 ಮತ್ತು ಮುಖ್ಯಾಧಿಕಾರಿ (ಶ್ರೇಣಿ–1) 12 ಹೆಚ್ಚುವರಿ ಹುದ್ದೆಗಳನ್ನು ಸೇರಿಸಿ ಜೂನ್‌ 12ರಂದು ಕೆಪಿಎಸ್‌ಸಿ ತಿದ್ದುಪಡಿ ಅಧಿಸೂಚನೆ ಹೊರಡಿಸಿತ್ತು.
ಶನಿವಾರ ಮತ್ತೆ 5 ಸಹಾಯಕ ಆಯುಕ್ತರ  ಹುದ್ದೆಗಳನ್ನು ಈ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ಒಟ್ಟು ಹುದ್ದೆಗಳ ಸಂಖ್ಯೆ ಇದೀಗ 428 ಆಗಿದೆ.

ಪ್ರಚಲಿತ ವಿದ್ಯಮಾನ : ಜುಲೈ 2017: ‘ಜೀನ್‌ ಎಡಿಟಿಂಗ್‌’ ಭಾರತಕ್ಕೆ ಅಮೆರಿಕ ನೆರವು

ಬೆಂಗಳೂರು: ಆರೋಗ್ಯ ಮತ್ತು ಕೃಷಿಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಬಹುದಾದ ‘ವಂಶವಾಹಿ ಮಾರ್ಪಾಟು’ (ಜೀನ್‌ ಎಡಿಟಿಂಗ್‌) ತಂತ್ರಜ್ಞಾನದಲ್ಲಿ ಭಾರತೀಯ ವಿಜ್ಞಾನಿಗಳಿಗೆ ತರಬೇತಿ ನೀಡಲು ಭಾರತ ಸರ್ಕಾರ ಅಮೆರಿಕದ ಜತೆ ಕೈಜೋಡಿಸಿದೆ.
ಮನುಕುಲವನ್ನು ಕಾಡುತ್ತಿರುವ ಹಲವು ಮಾರಣಾಂತಿಕ ಕಾಯಿಲೆಗಳಿಗೆ ವಂಶವಾಹಿ ಮಾರ್ಪಾಟು ಪರಿಹಾರ ಒದಗಿಸಲಿದೆ. ಕೃಷಿ ಕ್ಷೇತ್ರದಲ್ಲೂ ಈ ತಂತ್ರಜ್ಞಾನದ ಬಳಕೆಯಿಂದ ರೈತರಿಗೆ ವರವಾಗಬಹುದಾದ ತಳಿಗಳನ್ನು ಅಭಿವೃದ್ಧಿಪಡಿಸಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿಜ್ಞಾನಿಗಳನ್ನು ಈ ಕ್ಷೇತ್ರದಲ್ಲಿ ಸಶಕ್ತಗೊಳಿಸಲು ಮುಂದಾಗಿದೆ.
ವಂಶವಾಹಿಗೆ ಸಂಬಂಧಿಸಿದ ಕಾಯಿಲೆಗಳು ಮಾತ್ರವಲ್ಲದೆ, ತಂದೆ–ತಾಯಿಯ ಕನಸಿಗನುಗುಣವಾಗಿ ಬುದ್ಧಿ ಮತ್ತೆ, ಅಂದ- ಚೆಂದ, ಶಕ್ತಿ, ಸಾಮರ್ಥ್ಯ, ರೋಗ ಮುಕ್ತ ಮಗುವನ್ನು ಪಡೆಯಬಹುದಾದ ಪ್ರಯೋಗವೂ ಅಮೆರಿಕ ಮತ್ತು ಚೀನಾದಲ್ಲಿ ನಡೆದಿದೆ.  ಇಂತಹ ಪ್ರಯತ್ನಗಳು ನಿಸರ್ಗಕ್ಕೆ ವಿರುದ್ಧ ಎಂದು ಸಾಕಷ್ಟು ಟೀಕೆಗಳೂ ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿವೆ.
ಭಾರತದಲ್ಲೂ ಸಣ್ಣ  ಪ್ರಮಾಣದಲ್ಲಿ ಈ ಪ್ರಯತ್ನಗಳು ನಡೆದಿವೆ. ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಜೀವ ವಿಜ್ಞಾನ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳಲ್ಲಿಯೇ ತರಬೇತಿ ಪಡೆಯಲು ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಅಮೆರಿಕದ ‘ಯುಎಸ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ’ ಜತೆ ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಒಪ್ಪಂದ ಮಾಡಿಕೊಂಡಿದೆ.
‘ಭಾರತ ಆರೋಗ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಸೀಮಿತವಾಗಿ ವಂಶವಾಹಿ ಮಾರ್ಪಾಟು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಅಪೇಕ್ಷೆ ಹೊಂದಿದೆ’ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ದೇಶದಲ್ಲಿ ಈಗಾಗಲೇ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳಿಗೆ ಅಮೆರಿಕ ಸಂಸ್ಥೆಗಳಲ್ಲಿ ಮೂರು ತಿಂಗಳಿಂದ ಒಂದು ವರ್ಷದವರೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ.
ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕೃಷಿ, ಆರೋಗ್ಯ ವಿಜ್ಞಾನ, ಬಯೊ ಎಂಜಿನಿಯರಿಂಗ್‌, ‘ಫಂಡಮೆಂಟಲ್‌ ಬಯಾಲಜಿ’ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಮೂಲಗಳು ಹೇಳಿವೆ.
ಜೀನ್‌ ಎಡಿಟಿಂಗ್‌ ಎಂದರೇನು?
ಯಾವುದೇ ಜೀವಿಯಲ್ಲಿರುವ ವಂಶವಾಹಿಯ ಡಿಎನ್‌ಎಯನ್ನು ತಮಗೆ ಬೇಕಾದಂತೆ ಮಾರ್ಪಡಿಸುವುದು ಅಥವಾ ತಿದ್ದುವುದನ್ನು ‘ಜೀನ್‌ ಎಡಿಟಿಂಗ್’ ಎನ್ನಲಾಗುತ್ತದೆ. ಈ ಕ್ರಿಯೆಯನ್ನು ಸರಳವಾಗಿ ಹೇಳಬಹುದಾದರೆ, ಒಂದು ಲೇಖನ ಅಥವಾ ಸುದ್ದಿ ಬರೆದಾಗ ಮೊದಲ ಬರಹದ ಕರಡು ಪ್ರತಿಯಲ್ಲಿ ಸಾಕಷ್ಟು ತಪ್ಪುಗಳಿರುತ್ತವೆ.  ಆ ತಪ್ಪುಗಳನ್ನು ತಿದ್ದಿ  ಸರಿಪಡಿಸುವುದಕ್ಕೆ ‘ಎಡಿಟಿಂಗ್’ ಎಂದು ಕರೆಯಲಾಗುತ್ತದೆ. ಅದೇ ರೀತಿ ಜೀನ್‌ನಲ್ಲಿ ಇರಬಹುದಾದ ದೋಷಗಳನ್ನು  ಸರಿಪಡಿಸುವ ಅಥವಾ ಅಲ್ಲಿ ದೋಷ ಮುಕ್ತ ಜೀನ್ ಸೇರಿಸುವ ಕ್ರಿಯೆ ಇದಾಗಿದೆ.
ಒಂದು ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಮಧುಮೇಹ, ಕ್ಯಾನ್ಸರ್, ಅಂಧತ್ವದಂತಹ ಕಾಯಿಲೆಗಳು ಹರಿದು ಬರುತ್ತವೆ. ಇದನ್ನು ತಡೆಯಲು ಆ ಕುಟುಂಬದ ಮಹಿಳೆಯ ಅಂಡಾಣುವಿನಲ್ಲಿರುವ ಜೀನ್ ತೆಗೆದು ಬದಲಿ ಆರೋಗ್ಯವಂತ ಜೀನ್ ಅಳವಡಿಸಬಹುದು ಇಲ್ಲವೆ, ಜೀನ್‌ನಲ್ಲಿ ರೋಗ ತರುವ ಅಂಶವನ್ನು ತೆಗೆದು ಹಾಕಬಹುದು ಎಂಬುದು ವಿಜ್ಞಾನಿಗಳ ವಾದ.
ಉದ್ದೇಶಗಳೇನು?
* ವಂಶವಾಹಿ ಮಾರ್ಪಾಟು ಸಂಶೋಧನೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು
* ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ, ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ
* ಅಮೆರಿಕ ಮತ್ತು ಇತರ ದೇಶಗಳ ಸಂಶೋಧಕರನ್ನು ಭಾರತಕ್ಕೆ ಆಹ್ವಾನಿಸಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ

ಪ್ರಚಲಿತ ವಿದ್ಯಮಾನ : ಜುಲೈ 2017: ಅರಣ್ಯ ಭೂಮಿ ಬಳಕೆಯ ಅನುಮತಿ ನವೀಕರಣಕ್ಕೆ ಶಿಫಾರಸು

ಬೆಂಗಳೂರು: ಸೀಬರ್ಡ್ ನೌಕಾ ನೆಲೆ ಯೋಜನೆಯ ಹಂತ– 2ಎ ನಿರ್ಮಾಣ ಚಟುವಟಿಕೆಗೆ ಅಗತ್ಯವಿರುವ    ಕಲ್ಲುಗಳನ್ನು ಒದಗಿಸಲು  ಉತ್ತರ ಕನ್ನಡ ಜಿಲ್ಲೆಯ ಕೋಡಾರ್‌ ಗ್ರಾಮದ ಅಲಿಗದ್ದಾ ಗುಡ್ಡದ ಅರಣ್ಯ ಭೂಮಿಯಲ್ಲಿಗಣಿಗಾರಿಕೆಗೆ ನೀಡಿದ್ದ ಅನುಮತಿ ನವೀಕರಣಕ್ಕೆ  ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ಶಿಫಾರಸು ಮಾಡಿದೆ. 
ಗಣಿಗಾರಿಕೆಗೆ ನೀಡಿರುವ ಅನುಮತಿ ತಾತ್ಕಾಲಿಕ. ನೌಕಾನೆಲೆಯ 2ಎ ಹಂತ ಅನುಷ್ಠಾನ ಪೂರ್ಣಗೊಳ್ಳುವವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಕರಾವಳಿ ನಿಯಂತ್ರಣಾ ವಲಯಕ್ಕೆ ಸಂಬಂಧಿಸಿದ ಅನುಮತಿ, ಪರಿಸರ ಇಲಾಖೆ ಅನುಮತಿ ಪಡೆದ ಬಳಿಕವಷ್ಟೇ ಗಣಿಗಾರಿಕೆ  ಆರಂಭಿಸಬೇಕು ಎಂಬ ಷರತ್ತುಗಳನ್ನೂ ವಿಧಿಸುವಂತೆಯೂ  ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಆರ್‌ಇಸಿ ಹೇಳಿದೆ.
ನೌಕಾನೆಲೆ ಸ್ಥಾಪನೆಗೆ 1986ರಲ್ಲಿ ಅನುಮತಿ ನೀಡುವಾಗ 2,259 ಹೆಕ್ಟೇರ್‌ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡಿತ್ತು. ಇಲ್ಲಿ 200 ಹೆಕ್ಟೇರ್‌ಗಿಂತ ಹೆಚ್ಚು ಜಾಗದಲ್ಲಿ ಮರಗಳನ್ನು ಕಡಿಯಬಾರದು ಎಂಬ ಷರತ್ತು ವಿಧಿಸಿತ್ತು. ಮರ ಕಡಿಯಲು ಅನುಮತಿ ನೀಡಿದ 200 ಹೆಕ್ಟೇರ್‌ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ  ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು.
ಆದರೆ, 81.75 ಹೆಕ್ಟೇರ್‌ ಅರಣ್ಯ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು 1999ರಲ್ಲಿ ಅನುಮತಿ ನೀಡಲಾಗಿತ್ತು. ಇದರ ಅವಧಿ 2003ರಲ್ಲಿ  ಕೊನೆಗೊಂಡಿತ್ತು.
ಅಲಿಗದ್ದಾ ಗುಡ್ಡದ 24.50 ಹೆಕ್ಟೇರ್‌ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನವೀಕರಿಸುವಂತೆ   ರಾಜ್ಯ ಸರ್ಕಾರ 2017ರ ಮೇ 26ರಂದು ಸಚಿವಾಲಯವನ್ನು ಕೋರಿತ್ತು.

ಪ್ರಚಲಿತ ವಿದ್ಯಮಾನ : ಜುಲೈ 2017:ಅಪಾಯಕಾರಿ ಅನಿಲಗಳ ಪತ್ತೆಗೆ ‘ವಿದ್ಯುನ್ಮಾನ ಮೂಗು’

ನಾವು ಚಿಕ್ಕಮಕ್ಕಳು ಇದ್ದಾಗಿನಿಂದಲೂ, ವಿವಿಧ ವಾಯು ಮಾಲಿನ್ಯಕಾರಕಗಳು ಮತ್ತು ಅವುಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಕಲಿತಿದ್ದೇವೆ. ನಾವು ಬೆಳೆಯುತ್ತಿದ್ದಂತೆಯೇ ಈ ಮಾಲಿನ್ಯಕಾರಕಗಳ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಅವುಗಳನ್ನು ಉಗುಳುವ ಕೈಗಾರಿಕೆಗಳ ಸಂಖ್ಯೆಯಲ್ಲೂ ಅಪಾರ ಏರಿಕೆಯಾಗಿದೆ. ಈ ವಿಷಕಾರಿ ಮಾಲಿನ್ಯಕಾರಕಗಳಲ್ಲಿ ಕೆಲವು ಆಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಸಾವಿಗೆ ಕೂಡಾ ಕಾರಣವಾಗುತ್ತವೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ವಿನೂತನ ‘ಅನಿಲ ಸಂವೇದಕ’ವೊಂದನ್ನು ತಯಾರಿಸಿದ್ದಾರೆ. ವಿವಿಧ ಅನಿಲ ಮಾಲಿನ್ಯಕಾರಕಗಳ ಪ್ರಮಾಣೀಕರಣದ ಮೂಲಕ, ಇದನ್ನು ವಾಯುಮಾಲಿನ್ಯದ ಮೇಲ್ವಿಚಾರಣೆಗಾಗಿ ಬಳಸಬಹುದು. ಈ ಅನಿಲ ಸಂವೇದಕವು  ಬಹಳ ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಇದನ್ನು ಪ್ರಮುಖ ವಾಯು ಮಾಲಿನ್ಯಕಾರಕಗಳಾದ  ‘ಇಂಗಾಲದ ಮೊನೊಕ್ಸೈಡ್’(CO), ಇಂಗಾಲದ ಡೈಆಕ್ಸೈಡ್ (CO2), ಸಾರಜನಕ ಡೈಆಕ್ಸೈಡ್ (NO2) ಮತ್ತು ಗಂಧಕ ಡೈಆಕ್ಸೈಡ್(SO2) ಅನ್ನು ಪತ್ತೆ ಮಾಡಿ ಅಳತೆ ಮಾಡಲು ಉಪಯೋಗಿಸಬಹುದು.
ಇಲ್ಲಿ ಸಂಶೋಧಕರು, ಹಲವು ಅನಿಲ ಸಂವೇದಕಗಳ ಶ್ರೇಣಿಯನ್ನೇ ‘ಸೂಕ್ಷ್ಮ ವಿದ್ಯುನ್ಮಾನ ಯಾಂತ್ರಿಕ ವ್ಯವಸ್ಥೆ’ಯ ರೂಪದಲ್ಲಿ ಒಂದು ‘ಚಿಪ್’ನಲ್ಲಿ ಒಟ್ಟುಗೂಡಿಸಿದ್ದಾರೆ. ಈ ‘ಸೂಕ್ಷ್ಮ ವಿದ್ಯುನ್ಮಾನ ಯಾಂತ್ರಿಕ ವ್ಯವಸ್ಥೆ’ಯು ಹೆಸರೇ ಸೂಚಿಸುವಂತೆ ಗಾತ್ರದಲ್ಲಿ ಇಳಿಕೆ ಕಂಡ ಪುಟ್ಟ ಯಾಂತ್ರಿಕ ಮತ್ತು ವಿದ್ಯುನ್ಮಾನ ಸಾಧನಗಳ ಸಂಗಮ. ಇವುಗಳ ಗಾತ್ರ ಎಷ್ಟು ಕುಗ್ಗಿದೆ ಎಂದರೆ, ಒಂದು  ಮೀಟರ್‌ಗಿಂತ ಒಂದು ನೂರು ಕೋಟಿ ಪಟ್ಟು ಚಿಕ್ಕದಾದ ಅಂದರೆ ಒಂದು ‘ಮೈಕ್ರಾನ್’ಗಿಂತಲೂ ಚಿಕ್ಕದಾದ ಸಾಧನದಿಂದ ಮೊದಲ್ಗೊಂಡು ಕೆಲವು  ಮಿಲಿಮೀಟರ್‌ಗಳಷ್ಟು ಅಳತೆಯ ಚಿಕ್ಕ ಸಾಧನಗಳೂ ತಮ್ಮದೇ ಆಯಾಮಗಳಲ್ಲಿ ಲಭ್ಯವಿದೆ.
‘ಕಾರ್ಯಾಚರಣೆಗಾಗಿ ಈ ಪುಟ್ಟ ಸಾಧನಗಳು ಬೇಡುವುದು ಕೆಲವು ಮಿಲಿವಾಟ್‌ನಷ್ಟು ಶಕ್ತಿ ಮಾತ್ರ. ಹೀಗಾಗಿ, ಬ್ಯಾಟರಿ ಚಾಲಿತ ಪೋರ್ಟಬಲ್ ಸಾಧನಗಳಲ್ಲಿ ಕೂಡ ಇವುಗಳನ್ನು ಸುಲಭವಾಗಿ ಅಳವಡಿಸಬಹುದು. ಮ್ಯಾಕ್ರೊ ಘಟಕಗಳನ್ನು ಅಂದರೆ  ದೊಡ್ಡ ದೊಡ್ಡ ಘಟಕಗಳನ್ನು ಬಳಸಿ  ಈ ರೀತಿಯ ಪುಟ್ಟ ಸಾಧನಗಳನ್ನು ನಿರ್ಮಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಪ್ರಾಧ್ಯಾಪಕ ನವಕಾಂತ ಭಟ್. ಇವರು ಭಾರತೀಯ ವಿಜ್ಞಾನ ಸಂಸ್ಥೆಯ ‘ನ್ಯಾನೊ ವಿಜ್ಞಾನ ಮತ್ತು ಎಂಜಿನಿಯರಿಂಗ್’ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅಧ್ಯಯನದ ನೇತೃತ್ವ ವಹಿಸಿದ್ದಾರೆ.
ಈ ಸಂವೇದಕ ಸರಣಿಯು, ನಾಲ್ಕು ಸೂಕ್ಷ್ಮ ಶಾಖೋತ್ಪಾದಕಗಳು ಮತ್ತು ನಾಲ್ಕು ಸಂವೇದಕ ಅಂಶಗಳ ಒಟ್ಟು ಮೊತ್ತವಾಗಿದ್ದು, ಇಲ್ಲಿನ ಪ್ರತಿ ಸಂವೇದಕವೂ ಒಂದು ನಿರ್ದಿಷ್ಟ ಅನಿಲವನ್ನು ಪತ್ತೆ ಮಾಡುವಂತೆ ವಿಶೇಷ ಎಚ್ಚರಿಕೆಯಿಂದ ಬಳಸಲಾಗಿದೆ. ‘ಇಂಗಾಲದ ಮೊನೊಕ್ಸೈಡ್’ಅನ್ನು ಪತ್ತೆ ಮಾಡಲು ‘ಜಿಂಕ್ ಆಕ್ಸೈಡ್’(ZnO), ‘ಇಂಗಾಲದ ಡೈಆಕ್ಸೈಡ್’ಅನ್ನು ಗುರುತಿಸಲು ಶೇ 1ಬೆಳ್ಳಿ ಲೇಪಿತ ‘ಬೇರಿಯಮ್ ಟೈಟಾನೇಟ್-ಕ್ಯುಪ್ರಿಕ್ ಆಕ್ಸೈಡ್’ (BaTiO3-CuO), ‘ಸಾರಜನಕ ಡೈಆಕ್ಸೈಡ್’ಗಾಗಿ ‘ಟಂಗ್‌ಸ್ಟನ್‌ ಟ್ರೈಆಕ್ಸೈಡ್’ (WO3) ಮತ್ತು ‘ಗಂಧಕ ಡೈಆಕ್ಸೈಡ್’ಗಾಗಿ ‘ವನಾಡಿಯಮ್ ಪೆಂಟಾಕ್ಸೈಡ್’(V2O5)ಅನ್ನು ಬಳಸಲಾಗಿದೆ.
ಅನಿಲ ಸಂವೇದಕಗಳು ಸಾಮಾನ್ಯವಾಗಿ ಸಂವೇದನೆಯ ಕೊರತೆ,  ಪುನರುತ್ಪಾದನಾ ಗುಣದ ಕೊರತೆ, ತಾತ್ಕಾಲಿಕವಾಗಿ ಯೋಜನೆಗೆ ವ್ಯತಿರಿಕ್ತವಾಗಿ ದಾರಿತಪ್ಪುವುದು  ಮತ್ತು ಅಸ್ಥಿರತೆಯಂತಹ ಸಮಸ್ಯೆಗಳಿಂದ ಬಳಲುತ್ತವೆ. ಇದಕ್ಕೆ ಪರಿಹಾರ ಎಂಬಂತೆ, ಈಗ ಹೊಸದಾಗಿ ಅಭಿವೃದ್ಧಿಯಾಗಿರುವ ಸಂವೇದಕ ಸಾಧನವು ಒಂದು ‘ವಿದ್ಯುನ್ಮಾನ ಮೂಗಿ’ನಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಪ್ರತಿ ಅನಿಲಕ್ಕೆ ವಿಭಿನ್ನ ಸಂವೇದಕ ಘಟಕ ಇರುವ ಕಾರಣದಿಂದ, ಆಯ್ಕೆ ಮತ್ತು ಸಂವೇದನೆಯಲ್ಲಿ ವರ್ಧನೆ ಕಂಡುಬಂದಿದೆ. ಈ ವಿವಿಧ ಘಟಕಗಳನ್ನುಳ್ಳ ಶ್ರೇಣಿಯ ಸಹಾಯದಿಂದ, ಅನಿಲಗಳ ಮಿಶ್ರಣದಲ್ಲಿರುವ ವಿವಿಧ ಅನಿಲಗಳನ್ನು ಗುರುತಿಸುವ ಸಾಮರ್ಥ್ಯ ದಕ್ಕಿದ್ದು, ಇದರಿಂದ ದೊರೆಯುವ ದತ್ತಾಂಶದ ಆಧಾರದ ಮೇಲೆ, ವಾಯು ಮಾಲಿನ್ಯದ ಮೇಲ್ವಿಚಾರಣೆಯನ್ನು ಸುಲಭವಾಗಿ ಮಾಡಬಹುದು.
ಹೊಸ ಸಂವೇದಕವು ಬಹಳ ಕಡಿಮೆ ಶಕ್ತಿಯನ್ನು (ಉದಾಹರಣೆಗೆ, ಸೂಕ್ಷ್ಮ ಶಾಖೋತ್ಪಾದಕಗಳು 300 ಡಿಗ್ರಿ ಸೆಲ್ಸಿಯಸ್ ತಾಪಮಾನ ಉತ್ಪಾದಿಸಲು ಕೇವಲ 10 ಮಿಲಿವಾಟ್) ಬಳಸುತ್ತದೆ. ಪ್ರತಿಯೊಂದು ಸಂವೇದನಾ ಘಟಕದ ತಾಪಮಾನವನ್ನು ಪ್ರತ್ಯೇಕವಾಗಿ ನಿಯಂತ್ರಿಸಲು ಅವಕಾಶ ಮಾಡಿಕೊಡುವ  ಹೆಚ್ಚೆಚ್ಚು ಆಯ್ಕೆಗಳನ್ನು ಕೊಡುವ, ಪುಟ್ಟ ಗಾತ್ರದ ಸಾಧನವಾಗಿ ವಿನ್ಯಾಸಗೊಂಡಿದೆ. ಇಂತಹ ವೈಶಿಷ್ಟ್ಯವನ್ನು ಸಾಧ್ಯವಾಗಿಸಿದ್ದು ಇಲ್ಲಿ ಬಳಸಲಾದ ವಿಶೇಷ ಫಲಕ.
‘ಪ್ಲಾಸ್ಮಾ ವರ್ಧಿತ ರಾಸಾಯನಿಕ ಆವಿ ಶೇಖರಣೆ’ ತಂತ್ರವನ್ನು ಬಳಸಿ, ಒತ್ತಡದ ವಿನ್ಯಾಸದ ಅಡಿಯಲ್ಲಿ ಪಕ್ವವಾದ ‘ಸಿಲಿಕಾನ್ ಡಯಾಕ್ಸೈಡ್’ನಿಂದ, ಈ ವಿಶೇಷ ಫಲಕವು ತಯಾರಾಗಿದೆ.
ಸಾಮಾನ್ಯವಾಗಿ, ಇಂತಹ ಸಾಧನಗಳಲ್ಲಿ ಬಳಸಲಾಗುವ ಫಲಕವು, ಸಾಧನದ ಎಲ್ಲಾ ಅಂಶಗಳನ್ನು ತನ್ನ ಮೇಲೆ ಇರಿಸಿಕೊಳ್ಳುವ ಒಂದು ವೇದಿಕೆಯಾಗಿರುತ್ತದೆ. ಇದು ರಾಸಾಯನಿಕವಾಗಿ ನಿಷ್ಕ್ರಿಯವಾದ ವಸ್ತುವಿನಿಂದ ತಯಾರಿಸಲಾಗಿರುತ್ತದೆ ಮತ್ತು ಇದೇ ಕಾರಣದಿಂದ ವಿವಿಧ ರಾಸಾಯನಿಕ ಮಾಧ್ಯಮಗಳನ್ನು ಒಂದೆಡೆ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ಬಳಸಲಾದ ‘ಸಿಲಿಕಾನ್ ಡಯಾಕ್ಸೈಡ್’ನ ಫಲಕವು, ಸಂವೇದಕದ ಗಾತ್ರ ಮತ್ತು ವೆಚ್ಚ ಎರಡನ್ನೂ ಕಡಿತಗೊಳಿಸುತ್ತದೆ. ಈ ವಿಶಿಷ್ಟ ಫಲಕವನ್ನು ತಯಾರಿಸಲು ಇರುವ ಹಲವು ಮಾರ್ಗಗಳನ್ನು ಸಂಶೋಧಕರು ವಿಶ್ಲೇಷಿಸಿದರು.
ಪ್ರಯೋಗಗಳ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ, ಸರ್ವರೀತಿಯಲ್ಲೂ ಸೂಕ್ತ ‘ರಾಸಾಯನಿಕ ಆವಿ ಶೇಖರಣೆ’ ವಿಧಾನವನ್ನು ಬಳಸಿದರು.
‘ಸಾಮಾನ್ಯವಾಗಿ ಬಳಸಲಾಗುವ ಲೋಹದ ಆಕ್ಸೈಡ್ ಆಧಾರಿತ ಸಂವೇದಕಗಳ ನ್ಯೂನತೆ ಎಂದರೆ, ಮಧ್ಯಸ್ಥಿಕೆ ಅನಿಲ ಸಂವೇದನೆ. ಅಂದರೆ, ಅನಿಲಗಳ ಸಂವೇದನೆಯಲ್ಲಿ ಒಂದು ಅನಿಲಕ್ಕೊಂದು ಸಂವೇದಕ ಎಂಬ ನಿಯಮವನ್ನು ಮುರಿಯುವ ಸಾಧನಗಳೇ ಅಧಿಕ. ಈ ಸಮಸ್ಯೆಯನ್ನು ಈ ವಿನೂತನ ಸಂವೇದಕ ಸಾಧನವು ನಿವಾರಿಸಿದ್ದು, ಒಂದು ಲೋಹದ ಆಕ್ಸೈಡ್ ಒಂದು ನಿರ್ದಿಷ್ಟ ಅನಿಲವನ್ನು ಮಾತ್ರ ಪತ್ತೆ ಮಾಡುತ್ತದೆ. ಇತರ ಅನಿಲಗಳ ಇರುವಿನಿಂದ ಇವು ತಮ್ಮ ಗುರಿ ತಪ್ಪುವುದಿಲ್ಲ’ ಎನ್ನುತ್ತಾರೆ ಈ ಅಧ್ಯಯನದ ಭಾಗವಾಗಿದ್ದ ಡಾ. ಪ್ರಜಾಪತಿ.
‘ಮುಂದಿನ ದಿನಗಳಲ್ಲಿ ಈ ಸಾಧನವನ್ನು, ಉಸಿರು ವಿಶ್ಲೇಷಣೆಯ ಮೂಲಕ ರೋಗನಿರ್ಣಯ, ಆಹಾರದ ಗುಣಮಟ್ಟದ ಮೇಲ್ವಿಚಾರಣೆಯಂತಹ ಹಲವಾರು ಅನ್ವಯಿಕೆಗಳಲ್ಲಿ ಬಳಸಬಹುದಾದ ಸಾಧ್ಯತೆ ಕಂಡುಬಂದಿದೆ’ ಎಂದು ಪ್ರಾಧ್ಯಾಪಕ ಭಟ್ ಹೇಳುತ್ತಾರೆ. ವಿಶ್ವಾಸಾರ್ಹ ಮತ್ತು ಕಡಿಮೆ ವೆಚ್ಚದ ಸಂವೇದಕಗಳ ಅಗತ್ಯ ಜಾಗತಿಕ ಮಟ್ಟದಲ್ಲಿದ್ದು, ಈ ವಿನೂತನ ಸಾಧನವು ಈ ಅಗತ್ಯಕ್ಕೆ ಪೂರಕವಾಗಿದೆ.

ಪ್ರಚಲಿತ ವಿದ್ಯಮಾನ : ಜುಲೈ 2017: ಮಹದಾಯಿ, ಕಳಸಾ–ಬಂಡೂರಿ ಹೋರಾಟಕ್ಕೆ 2 ವರ್ಷ: ‘ಮಾಡು ಇಲ್ಲವೇ ಮಡಿ’ ನಿರ್ಣಯ

ನರಗುಂದ (ಗದಗ ಜಿಲ್ಲೆ): ‘ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಅವರ ಮೇಲೆ ಒತ್ತಡ ಹೇರಬೇಕು’ ಎಂಬ ನಿರ್ಣಯವನ್ನು ಭಾನುವಾರ ಇಲ್ಲಿ ನಡೆದ ರೈತರ ಬೃಹತ್‌ ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು.
ಮಹದಾಯಿ, ಕಳಸಾ–ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಇಲ್ಲಿ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಎರಡು ವರ್ಷ ಪೂರೈಸಿದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಈ ಸಮಾವೇಶದಲ್ಲಿ, ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಅವರು ‘ಮಾಡು ಇಲ್ಲವೇ ಮಡಿ’ ಧ್ಯೇಯದೊಂದಿಗೆ ಈ ನಿರ್ಣಯ ಪ್ರಕಟಿಸಿದರು.
‘ಪ್ರಧಾನಿ ಮಧ್ಯಸ್ಥಿಕೆ ಮೂಲಕ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸುವ ಗುರುತರ ಜವಾಬ್ದಾರಿಯನ್ನು ಈ ಭಾಗದ ಸಂಸದರು, ಶಾಸಕರು ಮತ್ತು ರಾಜ್ಯದ ಮುಖ್ಯಮಂತ್ರಿಯ ಹೆಗಲಿಗೆ ವರ್ಗಾಯಿಸಿದ್ದೇವೆ. ಇದು ಅಂತಿಮ ನಿರ್ಣಯ. ಈ  ನಿರ್ಣಯ ಜಾರಿಗೆ ಬರುವ ತನಕ, ಇದೇ ಧರಣಿ ವೇದಿಕೆಯಲ್ಲಿ ಇಂದಿನಿಂದಲೇ ನಿರಂತರ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತಿದ್ದೇನೆ’ ಎಂದು ಸೊಬರದಮಠ ಪ್ರಕಟಿಸಿದರು. ಸಮಾವೇಶದಲ್ಲಿ ಭಾಗವಹಿಸಿದ್ದ ಐದು ಸಾವಿರಕ್ಕೂ ಹೆಚ್ಚು ರೈತರು ಕೈಗಳನ್ನು ಮೇಲೆತ್ತಿ ಚಪ್ಪಾಳೆ ತಟ್ಟುವ ಮೂಲಕ ನಿರ್ಣಯ ಅಂಗೀಕರಿಸಿದರು.
‘ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಎರಡು ವರ್ಷ ಕಳೆದರೂ ಈ ಹೋರಾಟದ ಮೂಲ ಉದ್ದೇಶ ಈಡೇರಿಲ್ಲ. ಅಹಿಂಸಾತ್ಮಕವಾಗಿ ನಡೆಯುತ್ತಿರುವ ಹೋರಾಟವು ಹಿಂಸಾರೂಪ ಪಡೆಯುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದಲ್ಲಿ ಅಘೋಷಿತ ಬಂದ್‌ ವಾತಾವರಣ ಇತ್ತು.  ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ರೈತ ಸೇನೆ ಉಪಾಧ್ಯಕ್ಷ ಶಂಕರಪ್ಪ ಆರ್‌. ಅಂಬಲಿ, ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲೀ­ಪಾಟೀಲ ಇದ್ದರು.
ಮುಖ್ಯಾಂಶಗಳು
* ಉಪವಾಸ ಆರಂಭಿಸಿದ ಸೊಬರದಮಠ
* 5 ಸಾವಿರಕ್ಕೂ ಹೆಚ್ಚು ರೈತರು ಭಾಗಿ

ಪ್ರಚಲಿತ ವಿದ್ಯಮಾನ : ಜುಲೈ 2017: ಚಿತ್ರವೀಣೆ ವಿದ್ವಾನ್‌ ರವಿಕಿರಣ್‌ ‘ಸಂಗೀತ ಕಲಾನಿಧಿ’

ಬೆಂಗಳೂರು: ಮದ್ರಾಸ್‌ನ ದ ಮ್ಯೂಸಿಕ್‌ ಅಕಾಡೆಮಿ ನೀಡುವ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಚಿತ್ರವೀಣೆ ವಿದ್ವಾನ್‌ ಎನ್‌. ರವಿಕಿರಣ್‌ ಪಾತ್ರರಾಗಿದ್ದಾರೆ.
2017ರ ಡಿಸೆಂಬರ್‌ 17ರಿಂದ 2018ರ ಜನವರಿ 1ರವರೆಗೆ ನಡೆಯಲಿರುವ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯನ್ನೂ ಅವರು  ವಹಿಸಿಕೊಳ್ಳಲಿದ್ದಾರೆ.
2018ರ ಜನವರಿ 1ರಂದು ನಡೆಯುವ ಸಮಾರಂಭದಲ್ಲಿ ರವಿಕಿರಣ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ  ಎನ್‌. ಮುರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರ ಪ್ರಶಸ್ತಿಗಳು: ಮೃದಂಗ ವಿದ್ವಾನ್‌ ವಿ. ಕಮಲಾಕರ ರಾವ್‌ ಮತ್ತು ಗಾಯಕಿ ರಾಧಾ ನಂಬೂದಿರಿ ಅವರಿಗೆ ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ ನೀಡಲಾಗುವುದು. ಘಟಂ ವಾದಕರಾದ ಸುಕನ್ಯಾ ರಾಮಗೋಪಾಲ್‌ ಮತ್ತು ಓದುವರ್‌ ಪರಂಪರೆಯ ಪ್ರತಿನಿಧಿ ಮುತ್ತು ಕಂದಸ್ವಾಮಿ ದೇಸೀಕಾರ್‌ ಅವರು ‘ಟಿ.ಟಿ.ಕೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಸಂಗೀತ ಶಾಸ್ತ್ರಜ್ಞ ಪ್ರಶಸ್ತಿಗೆ ಡಾ. ಟಿ.ಎಸ್ ಸತ್ಯವತಿ ಆಯ್ಕೆಯಾಗಿದ್ದಾರೆ. ವಯಲಿನ್‌ ವಾದಕರಿಗೆ ನೀಡಲಾಗುವ ‘ಪಪ್ಪಾ ವೆಂಕಟರಾಮಯ್ಯ ಪ್ರಶಸ್ತಿ’ಗೆ ತಿರುವಳ್ಳೂರು ಶ್ರೀ ಪಾರ್ಥಸಾರಥಿ ಆಯ್ಕೆಯಾಗಿದ್ದಾರೆ. ಈ ಎಲ್ಲ ಪ್ರಶಸ್ತಿಗಳ ಪ್ರದಾನ 2018ರ ಜ.1ರಂದು ನಡೆಯಲಿದೆ.
ನಾಟ್ಯ ಪ್ರಶಸ್ತಿ: ನೃತ್ಯ ಕ್ಷೇತ್ರದಲ್ಲಿ ನೀಡಲಾಗುವ ‘ನೃತ್ಯ ಕಲಾನಿಧಿ ಪ್ರಶಸ್ತಿ’ಗೆ ಖ್ಯಾತ ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಮತ್ತು ಲೇಖಕಿ ಕುಮಾರಿ ಲಕ್ಷ್ಮಿ ವಿಶ್ವನಾಥನ್‌ ಆಯ್ಕೆಯಾಗಿದ್ದಾರೆ. 2018ರ ಜ.3ರಂದು ನಡೆಯಲಿರುವ ನೃತ್ಯ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಎನ್‌. ಮುರಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಚಲಿತ ವಿದ್ಯಮಾನ : ಜುಲೈ 2017: 55 ಸಂಸದರಿಂದ ವಿಧಾನಸಭೆಗಳಲ್ಲಿ ಮತದಾನ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಲಿದ್ದು ಭಾರಿ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ. ಚೀನಾ ಗಡಿ ಬಿಕ್ಕಟ್ಟು, ಕಾಶ್ಮೀರದ ವಿಷಮ ಪರಿಸ್ಥಿತಿ, ಗೋರಕ್ಷಣೆ ಹೆಸರಿನಲ್ಲಿ ಹೆಚ್ಚುತ್ತಿರುವ ಹಿಂಸೆ ಮುಂದಿಟ್ಟು ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.
ಆಗಸ್ಟ್‌ 11ರವರೆಗೆ 26 ದಿನ ನಡೆಯಲಿರುವ ಅಧಿವೇಶನದಲ್ಲಿ 16 ಹೊಸ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. 18 ಕರಡು ಶಾಸನಗಳಿಗೆ ಅಂಗೀಕಾರ ಪಡೆಯಲು ಉದ್ದೇಶಿಸಿದೆ. ಬಜೆಟ್‌ ಪೂರಕ ಅಂದಾಜಿಗೂ ಸರ್ಕಾರ ಅನುಮೋದನೆ ಪಡೆದುಕೊಳ್ಳಬೇಕಿದೆ.
ವಿವಿಧ ವಿಚಾರ ಚರ್ಚೆ: ಕಾಶ್ಮೀರಕ್ಕೆ ಸಂಬಂಧಿಸಿ ಚೀನಾದ ಜತೆಗೆ ಭಿನ್ನಾಭಿಪ್ರಾಯ ಹೊಸ ಸಮಸ್ಯೆಯಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ದೇಶದ ಸಮಗ್ರತೆ, ಭದ್ರತೆಗೆ ಸಂಬಂಧಿಸಿ ಸರ್ಕಾರಕ್ಕೆ ಬೆಂಬಲ ಇದೆ ಎಂದೂ ಕಾಂಗ್ರೆಸ್‌ ತಿಳಿಸಿದೆ.
ಕಾಶ್ಮೀರದಲ್ಲಿ ಮಾತುಕತೆಯ ಎಲ್ಲ ಬಾಗಿಲುಗಳನ್ನೂ ಸರ್ಕಾರ ಮುಚ್ಚಿದೆ. ಹಾಗಾಗಿ ಅಲ್ಲಿ ಈಗ ರಾಜಕೀಯವಾಗಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಆರೋಪಿಸಿದ್ದಾರೆ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಈಡೇರಿಕೆ ಆಗಿಲ್ಲ. ಈ ವಿಚಾರವನ್ನು ಅಧಿವೇಶನದಲ್ಲಿ ಎತ್ತಲಾಗುವುದು ಎಂದು ಜೆಡಿಯು ಮುಖಂಡ ಶರದ್‌ ಯಾದವ್‌ ಹೇಳಿದ್ದಾರೆ.
ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಹೆಚ್ಚುತ್ತಿರುವುದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಮಹಿಳಾ ಮೀಸಲು ಮಸೂದೆ ಅಂಗೀಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಸಿಪಿಎಂ ಮುಖ್ಯಸ್ಥ ಸೀತಾರಾಮ್‌ ಯೆಚೂರಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷವೂ ಸಜ್ಜಾಗಿದೆ. ಆರ್ಥಿಕ ಪ್ರಗತಿ ಮತ್ತು ಕೃಷಿ ಅಭಿವೃದ್ಧಿಯಲ್ಲಿ ಈ ಸರ್ಕಾರದ ಸಾಧನೆ ಹಿಂದಿನ ಯುಪಿಎ ಸರ್ಕಾರಕ್ಕಿಂತ ಉತ್ತಮವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಮುಂಗಾರು ಅಧಿವೇಶನ ಫಲಪ್ರದ ಮತ್ತು ರಚನಾತ್ಮಕವಾಗಬೇಕು ಎಂಬುದು ಸರ್ಕಾರದ ಇಚ್ಛೆ. ಅದಕ್ಕಾಗಿ ವಿರೋಧ ಪಕ್ಷಗಳ ಜತೆಗೆ ಉತ್ತಮ ಸಮನ್ವಯ ಮತ್ತು ಸಂವಹನ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದ್ದಾರೆ.
ತಿರುಗೇಟು ಅಸ್ತ್ರ
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ‘ಕೇಸರಿ ಭಯೋತ್ಪಾದನೆ’ ಹೆಸರಿನಲ್ಲಿ ಬಂಧಿಸಲು ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಯತ್ನಿಸಲಾಗಿತ್ತು ಎಂಬ ಮಾಧ್ಯಮ ವರದಿಗಳು ಇತ್ತೀಚೆಗೆ ಪ್ರಕಟವಾಗಿವೆ. ಅದನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.

Kannada GK You Tube Channel

🎞 *ಕನ್ನಡ ಜ್ಞಾನ ಭಂಡಾರ - Kannada Jnana Bhandara* 🎥📚 YouTube Channel ಕನ್ನಡ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನದ ವೀಡಿಯೋಗಳಿಗಾಗಿ ನಮ್ಮ ಯೂ ಟ್...